60 ನಿಮಿಷದ ಓದು
ಹಣಕಾಸು ವಿಭಾಗದ ವಿಶೇಷ ಆಯುಕ್ತ ಕೆ. ಹರೀಶ್ ಕುಮಾರ್ ಅವರು 2025–26ನೇ ಸಾಲಿನ ಬಜೆಟ್ ಭಾಷಣವನ್ನು 60 ನಿಮಿಷಗಳಲ್ಲಿ ಓದಿ ಮುಗಿಸಿದರು. ಅವರು ನೀರು ಕುಡಿಯಲೂ ಸಮಯ ವ್ಯರ್ಥ ಮಾಡಲಿಲ್ಲ. ಅಲ್ಲಲ್ಲಿ ತಡವರಿಕೆ, ಅಂಕಿಗಳನ್ನು ತಪ್ಪಾಗಿ ಓದಿದ್ದನ್ನು ಬಿಟ್ಟರೆ 71 ಪುಟಗಳ ಓದು ಸ್ಪಷ್ಟವಾಗಿತ್ತು. ಅಂತ್ಯದಲ್ಲಿ, ಬ್ರ್ಯಾಂಡ್ ಬೆಂಗಳೂರಿಗೆ ವರ್ಷವಾರು ಹಣ ನೀಡಿಕೆ, ಸಂಪನ್ಮೂಲ ಆದಾಯ, ಅನುದಾನಗಳನ್ನು ಉಲ್ಲೇಖಿಸುವಾಗ ಓದುವ ಓಘ ನಿಧಾನಗತಿಯಲ್ಲಿತ್ತು. ಭಾಷಣ ಮುಗಿದ ಮೇಲೆ ಡ್ರೈಫ್ರೂಟ್ಸ್ ಮತ್ತು ನೀರು ಕುಡಿದು ನಿಟ್ಟುಸಿರು ಬಿಟ್ಟರು.
5 ಬಾರಿ ಡಿಸಿಎಂ, 2 ಬಾರಿ ಸಿಎಂ
ಹರೀಶ್ ಅವರ ಬಜೆಟ್ ಭಾಷಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಐದು ಬಾರಿ ಪ್ರಸ್ತಾಪಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಎರಡು ಬಾರಿ ಮಾತ್ರ ಹೆಸರಿಸಿದರು.
ಅಡಿಗ, ಸರ್ವಜ್ಞರ ನೆನಪು...
ಹರೀಶ್ ಕುಮಾರ್ ಅವರು ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯನ್ನು ಹೇಳುವಾಗ ಎಂ. ಗೋಪಾಲಕೃಷ್ಣ ಅಡಿಗರ ‘ಕಟ್ಟುವೆವು ನಾವು ಹೊಸ ನಾಡೊಂದನು...’, ಕಲ್ಯಾಣ ಕ್ಷೇತ್ರದ ಅನುದಾನದ ಬಗ್ಗೆ ವಿವರಿಸುವಾಗ ಕೆ.ಎಸ್. ನಿಸಾರ್ ಅಹಮದ್ ಅವರ ‘ಒಂದೆದೆಯ ಹಾಲ ಕುಡಿದವರ ನಡುವೆ ಎಷ್ಟೊಂದು ಭೇದ ತಾಯಿ...’, ಶಿಕ್ಷಣ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಹೇಳುವಾಗ ಸರ್ವಜ್ಞನ ‘ವಿದ್ಯೆಯುಳ್ಳವನ ಮುಖ ಮುದ್ದು ಬರುವಂತಿಕ್ಕು..’, ತ್ಯಾಜ್ಯ ನಿರ್ವಹಣೆಯನ್ನು ಪ್ರಸ್ತಾಪಿಸುವಾಗ ಮಹಾತ್ಮಗಾಂಧಿಯವರ
‘ಸ್ವಾತಂತ್ರ್ಯಕ್ಕಿಂತಲೂ ಸ್ವಚ್ಛತೆಯು ಮುಖ್ಯ...’ ಎಂಬ ಮಾತುಗಳನ್ನು ಪ್ರಸ್ತಾಪಿಸಿದರು. ‘ಮಣಿಯದಿಹ ಮನವೊಂದು, ಸಾಧಿಸುವ ಹಠವೊಂದು ನಿಜದ ನೇರಕೆ ನಡೆವ ನಿಶ್ಚಲತೆಯೊಂದು’ ಎಂಬ ಕವಿವಾಣಿ ಹೇಳಿ ಬಜೆಟ್ ಓದನ್ನು ಮುಗಿಸಿದರು. ಆದರೆ, ಹರೀಶ್ ಅವರಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಲು ಮುಖ್ಯ ಆಯುಕ್ತರು ಅವಕಾಶವನ್ನೇ ನೀಡಲಿಲ್ಲ.
ಲೆದರ್ ಬ್ಯಾಗ್ ಅಬ್ಬರ
ಅಧಿಕಾರಿಗಳಿಗೆ ಬಿಬಿಎಂಪಿ ಬಜೆಟ್ ಪುಸ್ತಕಗಳನ್ನು ಲೆದರ್ ಬ್ಯಾಗ್‌ನಲ್ಲಿ ನೀಡಲಾಯಿತು. ಅದು ಅಧಿಕಾರಿಗಳಿಗೆ ಸೀಮಿತವಾಗದೆ, ಉಪ ಮುಖ್ಯಮಂತ್ರಿಯವರ ಖಾಸಗಿ ಪಿಆರ್‌ಒ (ಬಿಬಿಎಂಪಿಯಲ್ಲಿ ಪ್ರತ್ಯೇಕ ಸಮನ್ವಯಾಧಿಕಾರಿಯಾಗಿ ನೇಮಿಸಲಾಗಿದೆ) ಅವರ ಆಣತಿಯಂತೆ, ಅವರಿಗೆ ಬೇಕಾದವರಿಗೂ ವಿತರಿಸಲಾಯಿತು. ಬಜೆಟ್ ಪುಸ್ತಕಗಳನ್ನು ವಿತರಿಸಲೂ ಖಾಸಗಿ ಪಿಆರ್‌ಒ ಅಪ್ಪಣೆಗಾಗಿ ಸಿಬ್ಬಂದಿ ಕಾಯಬೇಕಾಯಿತು. ಹೀಗಾಗಿ, ಪುಸ್ತಕ ಪಡೆಯಲು ಪತ್ರಕರ್ತರ ಗ್ಯಾಲರಿಯಲ್ಲಿ ಗೊಂದಲವಾಯಿತು.
ಅರಣ್ಯ ಪ್ರದೇಶ ವೃದ್ಧಿ
‘ಹಸಿರು ಬೆಂಗಳೂರು’ ಪರಿಕಲ್ಪನೆಯಡಿ ಜೀವವೈವಿಧ್ಯ ಭೂಪರಿಸರವನ್ನು ಕಾಪಾಡಿ, ಸಂರಕ್ಷಿಸಿ ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡುವ ಹೊಣೆಗಾರಿಕೆಯಂತೆ ನಗರದಲ್ಲಿ ಅರಣ್ಯ ಪ್ರದೇಶ ವೃದ್ಧಿ, ಪ್ರದೇಶಗಳ ಹಸಿರೀಕರಣ, ಮರಗಳ ಸಮಗ್ರ ನಿರ್ವಹಣೆ, ವನ್ಯಜೀವಿ ಸಂರಕ್ಷಣೆ, ಅರಣ್ಯ ಚಟುವಟಿಕೆಗಳನ್ನು ನಡೆಸಲು ಉದ್ದೇಶಿಸಲಾಗಿದೆ.
ಕಟ್ಟಡಗಳಿಂದ ಹಸಿರುಮನೆ ಅನಿಲಗಳ ಹೊರ ಸೂಸುವಿಕೆಯನ್ನು ಕಡಿಮೆ ಮಾಡಲು ಸಾರ್ವಜನಿಕ ಕಟ್ಟಡಗಳ ‘ಎನರ್ಜಿ ಆಡಿಟ್’ಗಾಗಿ ₹2 ಕೋಟಿ ಮೀಸಲಿರಿಸಲಾಗಿದೆ. ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ವನ್ಯಜೀವಿ ಪುನರ್ ವಸತಿ ಘಟಕ ಸ್ಥಾಪನೆ, ಪರಿಸರ ಪ್ರೇಮಿ ಯುವ ಪದವೀಧರರಿಗೆ ಪರಿಸರ ಚಟುವಟಿಕೆಯಲ್ಲಿ 2 ರಿಂದ 6 ತಿಂಗಳ ಇಂಟರ್ನ್‌ಶಿಪ್, ಮರ ಸಮೂಹಗಳ ವೈಜ್ಞಾನಿಕ ಹಸಿರೀಕರಣ ಮತ್ತು ವೈಜ್ಞಾನಿಕ ನಿರ್ವಹಣೆಗೆ ಅರಣ್ಯ ಕೈಪಿಡಿ ಹಾಗೂ ಬಹುನಿರೀಕ್ಷಿತ ಮರಗಳ ಗಣತಿಯನ್ನು ಈ ವರ್ಷ ಪೂರ್ಣಗೊಳಿಸಲಾಗುತ್ತದೆ ಎಂದು ಬಜೆಟ್‌ನಲ್ಲಿ ಹೇಳಲಾಗಿದೆ.
₹51.69 ಕೋಟಿ; 5 ಲಕ್ಷ ಸಸಿಗಳನ್ನು ನೆಡುವ ವಿಶೇಷ ಅಭಿಯಾನ ಆರಂಭ
20 ಎಕರೆ; ಸಿಂಗಾಪುರ ಕೆರೆ ಸಮೀಪದ ಸರ್ಕಾರಿ ಭೂಮಿಯಲ್ಲಿ ಸಾರ್ವಜನಿಕ ಸೌಲಭ್ಯ ಒಳಗೊಂಡ ಸುಸಜ್ಜಿತ ಉದ್ಯಾನ
125; ಉದ್ಯಾನಗಳಲ್ಲಿ ನೀರು ಸಂಗ್ರಹ ಟ್ಯಾಂಕ್ ಮತ್ತು ಎಲೆಗೊಬ್ಬರ ಘಟಕ
₹28 ಕೋಟಿ; ಪ್ರತಿ ವಿಧಾನಸಭಾ ಕ್ಷೇತ್ರದ ಒಂದು ವಾರ್ಡ್‌ನಲ್ಲಿ ಹವಾಮಾನಕ್ರಿಯಾ ಮತ್ತು ಸ್ಥಿತಿಸ್ಥಾಪಕತ್ವ ಯೋಜನೆ ಅನುಷ್ಠಾನ
₹ 92 ಕೋಟಿ; ಹಸಿರು ಸ್ಥಳ, ಮನರಂಜನಾ ಸೌಲಭ್ಯಗಳನ್ನು ಹೆಚ್ಚಿಸಲು ಉದ್ಯಾನ, ಮೈದಾನಗಳಲ್ಲಿ ಅಭಿವೃದ್ಧಿ ಕಾಮಗಾರಿ
₹118 ಕೋಟಿ; 1,280 ಉದ್ಯಾನಗಳ ನಿರ್ವಹಣೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.