ADVERTISEMENT

Bengaluru BBMP Budget | ಸಾಲ, ಖಾತರಿಗಳ ‘ಬೃಹತ್‌ ದಾರಿ’

ಹೊಸ ಯೋಜನೆಗಳ ಘೋಷಣೆ ಇಲ್ಲ l ರಸ್ತೆ, ಗುಂಡಿ, ಚರಂಡಿಗಿಲ್ಲ ಅನುದಾನ lಸಾಮಾನ್ಯರ ಬೇಡಿಕೆಗೆ ಮನ್ನಣೆಯೂ ಇಲ್ಲ

ಆರ್. ಮಂಜುನಾಥ್
Published 30 ಮಾರ್ಚ್ 2025, 0:30 IST
Last Updated 30 ಮಾರ್ಚ್ 2025, 0:30 IST
   

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಇತಿಹಾಸದಲ್ಲಿ ‘ಬೃಹತ್‌ ಬಜೆಟ್‌’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬಿಬಿಎಂಪಿಯ 2025–26ರ ಬಜೆಟ್‌ ಹಿಂದಿನ ವರ್ಷದ ಯೋಜನೆಗಳಿಗೇ ಸೀಮಿತವಾಗಿದೆ. ಸರ್ಕಾರದ ಅನುದಾನ, ಖಾತರಿ, ಸಾಲಗಳ ಮೇಲೇ ಅವಲಂಬಿತವಾಗಿದ್ದು, ಎರಡು ವರ್ಷಗಳಿಂದ ಪ್ರಕಟಿಸಲಾಗಿದ್ದ ಬೃಹತ್‌ ಯೋಜನೆಗಳಿಗೆ ಹಣ ಹೊಂದಿಸುವ ಸಾಧನೆ ಮಾಡಿದೆ.

‘ಬ್ರ್ಯಾಂಡ್‌ ಬೆಂಗಳೂರು’ ಪರಿಕಲ್ಪನೆಯ ಛಾಯೆ ಈ ಬಜೆಟ್‌ನಲ್ಲೂ ಮುಂದುವರಿದಿದ್ದು, ಅದರಡಿಯ ಎಂಟು ವಿಭಾಗಗಳಲ್ಲಿ ಯೋಜನೆಗಳಿಗೆ ಈ ಹಣ ಹೊಂದಿಸುವ ಸಾಹಸವನ್ನೂ ಮಾಡಲಾಗಿದೆ. ರಾಜ್ಯ ಸರ್ಕಾರದಿಂದ ಅತಿಹೆಚ್ಚು ಅನುದಾನ ಪಡೆದಿದ್ದ ಬಿಬಿಎಂಪಿ ಬಜೆಟ್‌ನತ್ತ ಜನರಿಗೆ ಅತ್ಯಂತ ನಿರೀಕ್ಷೆಯಿತ್ತು. ಗುಂಡಿ ಮುಕ್ತ ರಸ್ತೆ, ಹೂಳು ಮುಕ್ತ ಚರಂಡಿ, ತ್ಯಾಜ್ಯ ಮುಕ್ತ ಪ್ರದೇಶ, ದಟ್ಟಣೆ ಮುಕ್ತ ಸಂಚಾರದ ಭರವಸೆಯ ಯೋಜನೆಗಳು ಸಿಗಬಹುದೆಂಬ ಆಶಯ ಹೊಂದಿದ್ದರು. ಆದರೆ, ಇವುಗಳತ್ತ ಬಜೆಟ್‌ ಯಾವ ರೀತಿಯ ನೋಟವನ್ನೂ ಬೀರಿಲ್ಲ.

ಸುರಂಗ ರಸ್ತೆ, ಡಬಲ್‌ ಡೆಕರ್‌, ಎಲಿವೇಟೆಡ್‌ ಕಾರಿಡಾರ್‌, ಹೊಸ ರಸ್ತೆ, ವೈಟ್‌ಟಾಪಿಂಗ್‌ ಸೇರಿದಂತೆ ಬಜೆಟ್‌ ಒಟ್ಟಾರೆ ಮೊತ್ತದಲ್ಲಿ ಶೇ 65ರಷ್ಟು ಸಾರ್ವಜನಿಕ ಕಾಮಗಾರಿಗಳಿಗೆ ಅನುದಾನ ಮೀಸಲಿಡಲಾಗಿದೆ. ಇದರಲ್ಲಿ ಬಹುತೇಕ ಮೊತ್ತ ಬೃಹತ್ ಕಾಮಗಾರಿಗಳಿಗೆ ನೀಡಲಾಗಿದ್ದು, ವಾರ್ಡ್‌ ರಸ್ತೆ, ಚರಂಡಿಗಳನ್ನು ಕಡೆಗಣಿಸಲಾಗಿದೆ.

ADVERTISEMENT

ಆಸ್ತಿ ತೆರಿಗೆಯಲ್ಲೇ ತ್ಯಾಜ್ಯ ನಿರ್ವಹಣೆ ಬಳಕೆದಾರರ ಶುಲ್ಕವನ್ನು ಸಂಗ್ರಹಿಸಲು ಯಾವುದೇ ರೀತಿಯ ಹಿಂದುಮುಂದು ನೋಡದೆ ಜಾರಿಗೆ ತರಲಾಗಿದ್ದು, ನಾಗರಿಕರಿಗೆ ಹೊರೆಯಾಗಿದೆ. ಘನತ್ಯಾಜ್ಯ ನಿರ್ವಹಣೆಗಾಗಿ ₹ 1,400 ಕೋಟಿ ವೆಚ್ಚ ಮಾಡಲಾಗುತ್ತಿದ್ದು, ಅದರ ಕಾಮಗಾರಿಗಳೆಲ್ಲವೂ ಮತ್ತೆ ‘ಸಮಗ್ರ ತ್ಯಾಜ್ಯ ನಿರ್ವಹಣೆ’ ಯೋಜನೆಯ ಸುತ್ತ ಸುತ್ತುತ್ತಿವೆ. ನಾಲ್ಕು ದಿಕ್ಕುಗಳಲ್ಲಿ 100 ಎಕರೆ ಜಾಗದಲ್ಲಿ ಘನತ್ಯಾಜ್ಯ ನಿರ್ವಹಣೆ ಎಂಬ ಹಳೆಯ ಹೇಳಿಕೆ ಈ ಬಜೆಟ್‌ನಲ್ಲೂ ಮುಂದುವರಿದಿದ್ದು, ಪಾರಂಪರಿಕ ತ್ಯಾಜ್ಯ, ಕಟ್ಟಡ ನಿರ್ಮಾಣ ತ್ಯಾಜ್ಯ, ಕಸ ಸಂಗ್ರಹದ ಹಳೆಯ ಯೋಜನೆಗಳಿಗೆ ಬಜೆಟ್‌ನಲ್ಲಿ ಹಣ ನಿಗದಿ ಮಾಡಲಾಗಿದೆ.

ನಗರವನ್ನು ಹಸಿರೀಕರಣ ಮಾಡುವುದಾಗಿ, ಲಕ್ಷಾಂತರ ಸಸಿಗಳನ್ನು ನೆಡುವುದಾಗಿ ಕಳೆದ ಎರಡು ಬಜೆಟ್‌ಗಳಲ್ಲೂ ಹೇಳಲಾಗಿತ್ತು. ಅದೇ ಮಾತು ಈ ಬಜೆಟ್‌ನಲ್ಲೂ ಮುಂದುವರಿದಿದೆ. ಆದರೆ ನಗರದಲ್ಲಿ ಹಸಿರು ಮಾತ್ರ ಕಾಣುತ್ತಿಲ್ಲ. ಆರೋಗ್ಯಕರ ಬೆಂಗಳೂರು ಯೋಜನೆಗಳು ಎರಡು ವರ್ಷದಿಂದ ಬಜೆಟ್‌ನಲ್ಲೇ ಉಳಿದಿದ್ದು, ಈ ವರ್ಷವೂ ಹಿಂದಿನದ್ದನ್ನೇ ಪ್ರಸ್ತಾಪಿಸಿ ಉನ್ನತೀಕರಿಸುವುದಾಗಿ ಹೇಳಲಾಗಿದೆ. ಸಿಬ್ಬಂದಿ ಕೊರತೆಯಿಂದ ನರಳುತ್ತಿರುವ ಆಸ್ಪತ್ರೆಗಳಿಗೆ ಚಿಕಿತ್ಸೆ ನೀಡಲಾಗಿಲ್ಲ.

ಉದ್ಯಾನ ಮತ್ತು ಕೆರೆಗಳ ಅಭಿವೃದ್ಧಿಯಲ್ಲಿ ಬೊಮ್ಮನಹಳ್ಳಿ ವಲಯಕ್ಕೇ ಹೆಚ್ಚು ಆಸಕ್ತಿ ತೋರಲಾಗಿದೆ. ಕೆರೆಗಳ ಪುನಶ್ಚೇತನ ಎಂದು ಹೇಳಲಾಗಿದ್ದು, ಅಭಿವೃದ್ಧಿಯಾಗಿರುವ ಕೆರೆಗಳಿಗೆ ಅನುದಾನ ಹರಿಯುವಂತೆ ನೋಡಿಕೊಳ್ಳಲಾಗಿದೆ. ಸಾರ್ವಜನಿಕ ಸ್ಥಳ ಹಾಗೂ ಪಾಲಿಕೆ ಕಟ್ಟಡಗಳಲ್ಲಿ ಮಳೆನೀರು ಸಂಗ್ರಹ ವ್ಯವಸ್ಥೆ ಅನುಷ್ಠಾನಕ್ಕೆ ಸಮಯ ನಿಗದಿಪಡಿಸಿಲ್ಲ.

ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಳ್ಳಲು ದಿಟ್ಟ ಹೆಜ್ಜೆ ಇರಿಸಲಾಗಿದ್ದು, ಹೊರಗುತ್ತಿಗೆಗೆ ನೀಡದೆ ಪಾಲಿಕೆಯಿಂದಲೇ ಅಪ್ಲಿಕೇಷನ್‌ಗಳ ಅಭಿವೃದ್ಧಿ ಮಾಡಿ ಕೋಟ್ಯಂತರ ರೂಪಾಯಿ ಉಳಿಸುವ ಯೋಜನೆ ಉತ್ತಮವಾಗಿದೆ. ಈಗಾಗಲೇ ರಸ್ತೆ ಗುಂಡಿ ಆ್ಯಪ್‌ ಹೊದ್ದು ಮಲಗಿದ್ದು, ಅದನ್ನೂ ಚಿಕಿತ್ಸೆ ನೀಡಿ ‘ಬಿಬಿಎಂಪಿ–ಒನ್‌– ಆ್ಯಪ್‌’ ಮಾಡಿ ಸಮಸ್ಯೆಗಳಿಗೆ ಪರಿಹಾರ ನೀಡಲು ಒಂದೇ ವೇದಿಕೆಯಲ್ಲಿ ತರಲು ಯೋಜಿಸಿರುವುದು ಒಳ್ಳೆಯ ಬೆಳವಣಿಗೆ.

ಸರ್ಕಾರ ನೀಡಿರುವ ಅನುದಾನ, ಖಾತರಿ ಹಾಗೂ ವಿಶ್ವಬ್ಯಾಂಕ್ ನೆರವಿನ ಸಾಲವನ್ನು ಬೃಹತ್‌ ಯೋಜನೆಗಳಿಗೆ ಹೇಗೆ ಹರಿಸಬೇಕೆಂಬುದನ್ನು ಬೃಹತ್‌ ಬಜೆಟ್‌ನಲ್ಲಿ ತೋರಿಸಲಾಗಿದೆ. ಎಸ್‌ಪಿವಿ ಸಾಲ, ಸಾರ್ವಜನಿಕ– ಖಾಸಗಿ ಸಹಭಾಗಿತ್ವ, ನಿರ್ಮಾಣ–ನಿರ್ವಹಣೆ– ಹಸ್ತಾಂತರ ಮಾಡುವ ಯೋಜನೆಗಳನ್ನು ನಿರ್ವಹಿಸಲು ಅದಕ್ಕೆ ಸಾವಿರಾರು ಕೋಟಿಯನ್ನು ವರ್ಗಾಯಿಸಲಾಗುತ್ತದೆ. ಒಟ್ಟಾರೆ, ಹಳೆಯ ಸರಕಿಗೆ ಹೊಸ ಲೇಬಲ್‌ ಹಚ್ಚಿ ಮಾರಾಟ ಮಾಡುವಂತೆ, ಹಳೆಯ ಯೋಜನೆಗಳಿಗೇ ಬಜೆಟ್‌ನಲ್ಲಿ ರೂಪ ಕೊಟ್ಟು, ವೆಚ್ಚಕ್ಕೆ ಹಣ ನೀಡಲಾಗಿದೆ.

ತ್ಯಾಜ್ಯ ನಿರ್ವಹಣೆಗೆ ₹1,400 ಕೋಟಿ

ನಗರದ ಸ್ವಚ್ಛತೆ ಕೈಗೊಳ್ಳಲು ‘ಸ್ವಚ್ಛ ಬೆಂಗಳೂರು’ ಕಾರ್ಯಯೋಜನೆಯಡಿ ಮುಂದಿನ 30 ವರ್ಷಗಳವರೆಗೆ ಸಮಗ್ರ ತ್ಯಾಜ್ಯ ನಿರ್ವಹಣೆಗಾಗಿ ನಗರದ ನಾಲ್ಕು ದಿಕ್ಕುಗಳಲ್ಲಿ ಪ್ರತಿ ಪ್ಯಾಕೇಜ್‌ನಲ್ಲಿ ಸುಮಾರು 100 ಎಕರೆ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ ಮಾಡುವ ಯೋಜನೆಯನ್ನು ಈ ವರ್ಷ ಕಾರ್ಯರೂಪಕ್ಕೆ ತರಲಾಗುತ್ತದೆ.

ಕಟ್ಟಡ ನಿರ್ಮಾಣ ತ್ಯಾಜ್ಯ (ಡೆಬ್ರಿ) ಸಂಸ್ಕರಣೆಗೆ ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದಲ್ಲಿ ತಲಾ ಪ್ರತಿನಿತ್ಯ 750 ಟನ್‌ ಡೆಬ್ರಿ ಸಂಗ್ರಹ, ಸಾಗಣೆ, ಸಂಸ್ಕರಣೆಗೆ ನಾಲ್ಕು ಪ್ಯಾಕೇಜ್‌ಗಳನ್ನು ಈ ವರ್ಷದಿಂದಲೇ ಅನುಷ್ಠಾನಕ್ಕೆ ತಂದು, ನಿವೇಶನ– ಕಟ್ಟಡಗಳಿಂದಲೇ ಡೆಬ್ರಿ ಸಂಗ್ರಹಿಸಲಾಗುತ್ತದೆ. 27 ವಿಧಾನಸಭೆ ಕ್ಷೇತ್ರಗಳಲ್ಲೂ ತ್ಯಾಜ್ಯ ವರ್ಗಾವಣೆ ಕೇಂದ್ರಗಳನ್ನು 15ನೇ ಹಣಕಾಸು ಆಯೋಗ, ಸ್ವಚ್ಛಭಾರತ ನಗರ 2.0 ಅನುದಾನದಲ್ಲಿ ಸ್ಥಾಪಿಸಲಾಗುವುದು. ಪ್ರತಿದಿನ 50 ಟನ್‌ ಸಾಮರ್ಥ್ಯದ ಬಯೊ ಸಿಎನ್‌ಜಿ, ನಾಲ್ಕು ಬಯೊಮಿಥನೈಸೇಷನ್‌ ಘಟಕ, ಪ್ರಾಣಿ ತ್ಯಾಜ್ಯ ಸಂಸ್ಕರಣಾ ಘಟಕ, ಗೃಹ ಹಾನಿಕಾರಕ ನೈರ್ಮಲ್ಯ ತ್ಯಾಜ್ಯ ವಿಕೇಂದ್ರೀಕರಣ ಘಟಕಗಳನ್ನು ಈ ವರ್ಷ ಅನುಷ್ಠಾನಗೊಳಿಸಲಾಗುತ್ತದೆ. 300 ಟನ್‌ ಸಾಮರ್ಥ್ಯದ ಬಯೊ ಸಿಎನ್‌ಜಿ ಘಟಕವನ್ನು ಗೇಲ್‌ ಸಂಸ್ಥೆ ಸಹಯೋಗದಲ್ಲಿ ಪ್ರಾರಂಭಿಸಲಾಗುತ್ತದೆ.

ಸುಗಮ ಬೆಂಗಳೂರು

* ₹1,700 ಕೋಟಿ ಅನುದಾನದಲ್ಲಿ (ಸರ್ಕಾರ–  ಬಿಬಿಎಂಪಿ) 157 ಕಿ.ಮೀ. ಉದ್ದದ ರಸ್ತೆಗಳ ವೈಟ್‌ಟಾಪಿಂಗ್

* 694 ಕೋಟಿ; ಪ‌ರಿಷ್ಕೃತ ಮಾಸ್ಟರ್ ಪ್ಲಾನ್-2015 ನಂತೆ 118 ಕಿ.ಮೀ ರಸ್ತೆಗಳ ವಿಸ್ತರಣೆ, ಆಧುನೀಕರಣ

*1000 ಕಿ.ಮೀ; ‘ಪಾದಚಾರಿ ಮೊದಲು’ ತತ್ವದಡಿ ಮುಖ್ಯ, ಉಪಮುಖ್ಯ ಹಾಗೂ ರಸ್ತೆ ಅಭಿವೃದ್ಧಿ ಮಾಡುವಾಗ ಪಾದಚಾರಿ ಮಾರ್ಗ ನಿರ್ಮಾಣ

*₹440 ಕೋಟಿ; ಫಾರ್ಚೂನ್‌–500 ಖ್ಯಾತಿಯ ಐಟಿ–ಬಿಟಿ ಸಂಸ್ಥೆಗಳಿಗಾಗಿ ಸಿಲ್ಕ್‌ ಬೋರ್ಡ್‌– ಕೆ.ಆರ್‌.ಪುರ– ಲೌರಿ ಜಂಕ್ಷನ್‌ ಮೂಲಕ ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದವರೆಗೆ ಜಾಗತಿಕ ಗುಣಮಟ್ಟದೊಂದಿಗೆ 22.7 ಕಿ.ಮೀ ರಸ್ತೆ ಅಭಿವೃದ್ಧಿ

*₹675 ಕೋಟಿ; ನಗರದಲ್ಲಿರುವ 225 ವಾರ್ಡ್‌ಗಳ ಅಭಿವೃದ್ಧಿಗೆ ಪ್ರತಿ ವಾರ್ಡ್‌ಗೆ ₹2.50 ಕೋಟಿ ಹಾಗೂ ನಿರ್ವಹಣೆ ಕಾಮಗಾರಿಗಳಿಗೆ ತಲಾ ₹50 ಲಕ್ಷ ಅನುದಾನ

*ಟಿಡಿಆರ್ ಬಳಸಿ ಆರ್.ಟಿ ನಗರ ಪೊಲೀಸ್ ಠಾಣೆಯಿಂದ ಅಂಬೇಡ್ಕರ್ ಕಾಲೇಜು, ಲಿಂಗರಾಜಪುರ ಮೇಲ್ಸೇತುವೆಯಿಂದ ಪುಲಕೇಶಿನಗರ ಶ್ಯಾಂಪುರ ಮುಖ್ಯರಸ್ತೆ, ಯಶವಂತಪುರದ ಕೆಂಚನಹಳ್ಳಿ ಮುಖ್ಯರಸ್ತೆ ಮತ್ತು ಮಹದೇವಪುರ ರಸ್ತೆಗಳನ್ನು ವಿಸ್ತರಣೆ ಮಾಡಲು ಉದ್ದೇಶಿಸಲಾಗಿದೆ. ಕೆಂಗೇರಿ ಉಪನಗರ, ರಾಮೋಹಳ್ಳಿ ಗೇಟ್‌ ಬಳಿ ರೈಲ್ವೆ ಕೆಳಸೇತುವೆ ನಿರ್ಮಾಣ.

‘ಬ್ರ್ಯಾಂಡ್ ಬೆಂಗಳೂರು’ಗೆ ₹1,360 ಕೋಟಿ

‘ಬ್ರ್ಯಾಂಡ್ ಬೆಂಗಳೂರು’ ಪರಿಕಲ್ಪನೆಯಡಿಯಲ್ಲಿ 2024-25ನೇ ಸಾಲಿನಲ್ಲಿ ಮೂರು ವರ್ಷಗಳ ಅವಧಿಗೆ ಒಟ್ಟು ₹2,828 ಕೋಟಿಗಳ ಮೌಲ್ಯದ ಬೃಹತ್ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಯೋಜನೆಗಳನ್ನು ಕಾರ್ಯಗತಗೊಳಿಸಲು ಪ್ರತ್ಯೇಕ ಎಸ್ಕ್ರೋ ಖಾತೆ ತೆರೆದು, 2024-25ನೇ ಸಾಲಿನಲ್ಲಿ ಈಗಾಗಲೇ ₹660 ಕೋಟಿಯನ್ನು ವರ್ಗಾಯಿಸಲಾಗಿದೆ. 2025-26ನೇ ಸಾಲಿನಲ್ಲಿ ₹700 ಕೋಟಿಗಳ ಅನುದಾನವನ್ನು ಆಯವ್ಯಯದಲ್ಲಿ ಒದಗಿಸಲಾಗಿದ್ದು, ಈ ಮೊತ್ತವನ್ನು ಸಹ ಎಸ್ಕ್ರೋ ಖಾತೆಗೆ ವರ್ಗಾಯಿಸಲಾಗುವುದು. ಒಟ್ಟಾರೆ 2025-26ನೇ ಸಾಲಿನಲ್ಲಿ ಒಟ್ಟು ₹1,360 ಕೋಟಿಗಳ ಪಾವತಿಗೆ ಕ್ರಮವಹಿಸಲಾಗುವುದು. ಮುಂದಿನ ಸಾಲಿನಲ್ಲಿ ಉಳಿದ ಮೊತ್ತಕ್ಕೆ ಅನುದಾನವನ್ನು ಒದಗಿಸಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.