ADVERTISEMENT

ಕುಂಬೇನ ಅಗ್ರಹಾರದಲ್ಲಿ ನಾಲೆ ಒತ್ತುವರಿ ಪ್ರಕರಣ: ಬಿಲ್ಡರ್‌ಗೆ ₹46 ಲಕ್ಷ ದಂಡ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2022, 21:01 IST
Last Updated 7 ನವೆಂಬರ್ 2022, 21:01 IST
ಬಿಬಿಎಂಪಿ
ಬಿಬಿಎಂಪಿ   

ನವದೆಹಲಿ: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಮಹದೇವಪುರ ವಲಯದ ಕುಂಬೇನ ಅಗ್ರಹಾರದಲ್ಲಿ ನಾಲೆ ಒತ್ತುವರಿ ಮಾಡಿ ಕಟ್ಟಡ ನಿರ್ಮಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಲ್ಡರ್‌ಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು (ಕೆಎಸ್‌ಪಿಸಿಬಿ) ₹46.12 ಲಕ್ಷ ಪರಿಸರ ದಂಡ ವಿಧಿಸಿದೆ.

ಈ ಸಂಬಂಧ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ದಕ್ಷಿಣ ವಲಯ ಪೀಠಕ್ಕೆ ಮಂಡಳಿಯು ಪ್ರಮಾಣ ಪತ್ರ ಸಲ್ಲಿಸಿದೆ.

ಕುಂಬೇನ ಅಗ್ರಹಾರದ ಸರ್ವೆ ಸಂಖ್ಯೆ 2/1 ಹಾಗೂ 2/7ರಲ್ಲಿ ವೆಂಕಟೇಶ್ವರ ಬಿಲ್ಡರ್‌ (ಎಸ್‌.ವಿ.ಎಲಿಗೆಂಟ್) ವಸತಿ ಸಮುಚ್ಚಯ ನಿರ್ಮಾಣ ಮಾಡುತ್ತಿದೆ. ಈ ಬಿಲ್ಡರ್‌ ನಾಲೆಯ ಮೀಸಲು ಪ್ರದೇಶ ದಲ್ಲಿ 203 ಚದರ ಮೀಟರ್‌ನಲ್ಲಿ ಈಜುಕೊಳ, 20.50 ಚದರ ಮೀಟರ್‌ನಲ್ಲಿ ಸ್ನಾನದ ಕೊಠಡಿಗಳನ್ನು ನಿರ್ಮಾಣ ಮಾಡಿದ್ದಾರೆ. ನಾಲೆಯ ಮೀಸಲು ಪ್ರದೇಶದಲ್ಲಿ ನಿಯಮಬಾಹಿರವಾಗಿ ವಸತಿ ಸಮುಚ್ಚಯ ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯ ನಿವಾಸಿ ಪರಮೇಶ್‌ ವಿ. ಎಂಬುವರು ಬಿಬಿಎಂಪಿಗೆ ದೂರು ಸಲ್ಲಿಸಿದ್ದರು. ಆದರೆ, ಬಿಬಿಎಂಪಿ ಅಧಿಕಾರಿಗಳು ಕ್ರಮ ಕೈಗೊಂಡಿರಲಿಲ್ಲ. ಬಳಿಕ ಪರಮೇಶ್, ಎನ್‌ಜಿಟಿಯಲ್ಲಿ ಪ್ರಕರಣ ದಾಖಲಿಸಿದ್ದರು.

ADVERTISEMENT

ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿ 2022ರ ಏಪ್ರಿಲ್‌ 27ರಂದು ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ್ದರು. ಮಹಾಯೋಜನೆಯ ನಿಯಮಗಳನ್ನು ಉಲ್ಲಂಘಿಸಿ ನಿರ್ಮಾಣ ಚಟುವಟಿಕೆ ನಡೆಸಲಾಗಿದೆ ಎಂದು ವರದಿ ಸಲ್ಲಿಸಿ ದ್ದರು. ಎನ್‌ಜಿಟಿಯಲ್ಲಿ ಜುಲೈ 18ರಂದು ನಡೆದ ವಿಚಾರಣೆಯ ವೇಳೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದರು. ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡಿದ್ದರೂ ಬಿಬಿಎಂಪಿ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದಕ್ಕೆ ಎನ್‌ಜಿಟಿ ಅಚ್ಚರಿ ವ್ಯಕ್ತಪಡಿಸಿತ್ತು.

ಎನ್‌ಜಿಟಿಯಲ್ಲಿ ಪ್ರಕರಣ ದಾಖಲಾದ ಬೆನ್ನಲ್ಲೇ ಪಾಲಿಕೆಯು, ಬಿಬಿಎಂಪಿ ಕಾಯ್ದೆ 2020ರ ಕಟ್ಟಡ ನಿಯಮಾವಳಿ ಹಾಗೂ ಬೈಲಾ ಉಲ್ಲಂಘಿಸಿ ಅನಧಿಕೃತ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ. ಅನಧಿಕೃತ ಕಟ್ಟಡ ನಿರ್ಮಾಣದ ತೆರವಿಗೆ ಕ್ರಮ ವನ್ನೂ ಕೈಗೊಳ್ಳಲಾಗಿದೆ ಎಂದು ಎನ್‌ಜಿಟಿಗೆ ವರದಿ ಸಲ್ಲಿಸಿತ್ತು.

ಸೆಪ್ಟೆಂಬರ್‌ 19ರಂದು ನಡೆದ ಪ್ರಕರಣದ ವಿಚಾರಣೆಯ ವೇಳೆ ಬಿಬಿ ಎಂಪಿ ಅಧಿಕಾರಿಗಳು, ಅಕ್ರಮ ನಿರ್ಮಾಣ ಗಳನ್ನು ತೆರವು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದರು. ಈ ಸಂಬಂಧ ಕೈಗೊಂಡ ಕ್ರಮಗಳ ವರದಿಯನ್ನು ಎನ್‌ಜಿಟಿಗೆ ಸಲ್ಲಿಸಿದ್ದರು.

ಅರ್ಜಿದಾರರ ವಕೀಲರು, ‘ನಾಲೆಯ ಮೀಸಲು ಪ್ರದೇಶ ಒತ್ತುವರಿ ಮಾಡಿ ಕಟ್ಟಡದ ಕಾಂಪೌಂಡ್‌ ನಿರ್ಮಾಣ ಮಾಡಲಾಗಿದೆ’ ಎಂದು ವಾದಿಸಿದ್ದರು. ಈ ಬಗ್ಗೆ ಅಧಿಕಾರಿಗಳು ಸರ್ವೆ ನಡೆಸಿ ವರದಿ ಸಲ್ಲಿಸಬೇಕು ಎಂದು ಎನ್‌ಜಿಟಿ ಆದೇಶ ಹೊರಡಿಸಿತ್ತು. ಬಳಿಕ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ್ದರು.

‘ಈಜುಕೊಳ, ಸ್ನಾನದ ಕೊಠಡಿ ತೆರವು ಮಾಡಲಾಗಿದೆ. ಆದರೆ, ನಾಲೆಯ ಮೀಸಲು ಪ್ರದೇಶದಲ್ಲಿ ನಿರ್ಮಾಣ ಮಾಡಿರುವ ಕಟ್ಟಡದ ಕಾಂಪೌಂಡ್‌ ಹಾಗೆಯೇ ಇದೆ. ಹೀಗಾಗಿ, ಪರಿಸರ ಪರಿಹಾರದ ರೂಪದಲ್ಲಿ ಬಿಲ್ಡರ್‌ಗೆ ₹46.12 ಲಕ್ಷ ದಂಡ ವಿಧಿಸಲಾಗಿದೆ. ಈ ಸಂಬಂಧ ನೋಟಿಸ್‌ ನೀಡಲಾಗಿದೆ’ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಪರಿಸರ ಅಧಿಕಾರಿ ಎಂ.ಜಿ.ಯತೀಶ್‌ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.