ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೇಂದ್ರ ಕಚೇರಿ ಸೇರಿದಂತೆ ಎಂಟೂ ವಲಯಗಳ ಕಚೇರಿಗಳು, ವಾರ್ಡ್ ಕಚೇರಿಗಳು, ಉಪ ವಿಭಾಗಗಳ ಕಚೇರಿಗಳು, ನಾಗರಿಕ ಸೇವಾ ಕೇಂದ್ರಗಳಲ್ಲಿ ಬಹುತೇಕ ಕಾರ್ಯಚಟುವಟಿಕೆಗಳು ಮಂಗಳವಾರ ಸ್ತಬ್ಧವಾಗಿದ್ದವು.
ಸದಾ ನಾಗರಿಕರಿಂದ ತುಂಬಿರುತ್ತಿದ್ದ ಪಾಲಿಕೆ ಕಚೇರಿಗಳು ಹಾಗೂ ಆವರಣದಲ್ಲಿ ಜನ ಸಂಖ್ಯೆ ವಿರಳವಾಗಿತ್ತು. ವಾಹನಗಳ ಸಂಖ್ಯೆಯೂ ಕಡಿಮೆ ಇತ್ತು. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಬಿಎಂಪಿ ನೌಕರರು ಸಾಮೂಹಿಕ ರಜೆ ಹಾಕಿ ಮಂಗಳವಾರ ಪ್ರತಿಭಟನೆ ನಡೆಸಿದ್ದರಿಂದ, ಬಿಬಿಎಂಪಿಯ ಕೆಲಸಗಳು ಬಹುತೇಕ ಸ್ಥಗಿತಗೊಂಡಿದ್ದವು. ತೆರಿಗೆ ಪಾವತಿ, ಜನನ ಪ್ರಮಾಣ ಪತ್ರ ಸೇರಿದಂತೆ ಹಲವು ಕೆಲಸಗಳಿಗಾಗಿ ಪಾಲಿಕೆ ಕಚೇರಿಗೆ ಬಂದ ನಾಗರಿಕರು ಕೆಲಸವಾಗದೆ ಹಿಂದಿರುಗಿದರು.
ಮುಖ್ಯ ಆಯುಕ್ತರು ಸೇರಿದಂತೆ ಕೆಲವೇ ಹಿರಿಯ ಅಧಿಕಾರಿಗಳ ಕಾರಿನ ಚಾಲಕರು ಮಾತ್ರ ಕರ್ತವ್ಯಕ್ಕೆ ಹಾಜರಾಗಿದ್ದರಿಂದ ಪಾಲಿಕೆ ಕಚೇರಿಗಳ ಆವರಣಗಳಲ್ಲಿ ವಾಹನಗಳು ವಿರಳವಾಗಿದ್ದವು. ರುದ್ರಭೂಮಿ ನೌಕರರು, ಮಾಹಿತಿ ತಂತ್ರಜ್ಞಾನ ಮತ್ತು ಹೊರಗುತ್ತಿಗೆ ನೌಕರರು, ಆಡಳಿತ ಕಚೇರಿ ಅಧಿಕಾರಿ, ಸಿಬ್ಬಂದಿಯೂ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಪೌರ ಕಾರ್ಮಿಕರ ಸಂಘದವರೂ ಬೆಂಬಲ ನೀಡಿದ್ದರು. ನಗರದ ಕೆಲವೆಡೆ ಮನೆಗಳಿಂದ ಕಸವನ್ನೂ ಸಂಗ್ರಹಿಸಲಿಲ್ಲ.
ಬೇಡಿಕೆ ಈಡೇರಿಸುವ ಭರವಸೆ: ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘ ಮತ್ತು ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘಗಳ ಪರಿಷತ್ತಿನ ವತಿಯಿಂದ ನೌಕರರು ಪ್ರತಿಭಟಿಸುತ್ತಿದ್ದ ಸ್ವಾತಂತ್ರ್ಯ ಉದ್ಯಾನಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರರಾವ್ ಅವರು ಭೇಟಿ ನೀಡಿ, ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು.
‘ಮುಂದಿನ ದಿನಗಳಲ್ಲಿ ಹೋರಾಟ ಮಾಡುವ ಅಗತ್ಯ ಇಲ್ಲ. ಕುಳಿತು ಚರ್ಚೆ ಮಾಡಿ ಸಮಸ್ಯೆ ಬಗೆಹರಿಸೋಣ. ಅಮಾನತುಗೊಂಡಿರುವ ನೌಕರರ ಪ್ರಕರಣಗಳನ್ನು ಪರಿಶೀಲಿಸಿ, ಕ್ರಮ ಕೈಗೊಳ್ಳುತ್ತೇನೆ. ಸಂಘದವರ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು’ ಎಂದು ಮಹೇಶ್ವರರಾವ್ ಹೇಳಿದರು.
ಕಲ್ಯಾಣ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಮಾತನಾಡಿ, ‘ವಿವಿಧ ಬೇಡಿಕೆಗಳು, ಬಿಬಿಎಂಪಿ ನೌಕರರ ಕುಂದುಕೂರತೆಗಳನ್ನು ಸಚಿವರು, ಮುಖ್ಯ ಆಯುಕ್ತರ ಗಮನಕ್ಕೆ ತರಲಾಗಿದೆ. ನೌಕರರಿಗೆ ಸಹಾಯ ಮಾಡಬೇಕು ಎಂಬುದು ನಮ್ಮ ನಿಲುವು. ನಿಮಗೆಲ್ಲ ನ್ಯಾಯ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ’ ಎಂದರು.
ಪಾಲಿಕೆ ಅಧಿಕಾರಿ ನೌಕರರ ಮೇಲೆ ಸಹನಾಭೂತಿ ಇದೆ. ಅವರ ಕಷ್ಟಗಳು ಕುರಿತು ನನಗೆ ಅರಿವಿದೆಮಹೇಶ್ವರ್ ರಾವ್ ಮುಖ್ಯ ಆಯುಕ್ತ ಬಿಬಿಎಂಪಿ
‘ಬಿಬಿಎಂಪಿಯಲ್ಲಿ ಸಿಬ್ಬಂದಿ ಕೊರತೆ ಸೇರಿದಂತೆ ಹಲವು ರೀತಿಯ ಸಮಸ್ಯೆಗಳನ್ನು ಸಿಬ್ಬಂದಿ ನಿತ್ಯವೂ ಅನುಭವಿಸುತ್ತಿದ್ದಾರೆ. ನಮ್ಮ ಎಲ್ಲ ನ್ಯಾಯಯುತ ಬೇಡಿಕೆಗಳಿಗಾಗಿ ಹೋರಾಟ ನಡೆಸಲಾಗುತ್ತಿದೆ’ ಎಂದು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಎ. ಅಮೃತ್‌ರಾಜ್ ಹೇಳಿದರು. ‘ಬಿಬಿಎಂಪಿಯಲ್ಲಿ ಖಾಲಿ ಇರುವ 6000ಕ್ಕೂ ಹೆಚ್ಚು ವಿವಿಧ ವೃಂದದ ಅಧಿಕಾರಿ/ ನೌಕರರ ಹುದ್ದೆಗಳನ್ನು ಭರ್ತಿ ಮಾಡಿ ನೌಕರರ ಮೆಲಿನ ಒತ್ತಡ ಕಡಿಮೆ ಮಾಡಬೇಕು. ಪಾಲಿಕೆ ಸಿಬ್ಬಂದಿಯ ಕೆಲಸ ‘ನಾನ್ ಎಕ್ಸಿಕ್ಯೂಟಿವ್’ ಆಗಿದ್ದು ‘ಲಾಗ್‌ಸೇಫ್’ ಪದ್ಧತಿಯ ಹಾಜರಾತಿಯನ್ನು ಕೈಬಿಡಬೇಕು. ಶಿಕ್ಷಣ ವಿಭಾಗದಲ್ಲಿ ಪ್ರಾಂಶುಪಾಲರು ಮುಖ್ಯ ಶಿಕ್ಷಕರ ಮೇಲಿನ ಇಲಾಖಾ ವಿಚಾರಣೆ ಕೈಬಿಡಬೇಕು. ಸಹಾಯಕ ಕಾರ್ಯಪಾಲಕ ಕಾರ್ಯಪಾಲಕ ಎಂಜಿನಿಯರ್‌ಗಳಿಗೆ ಮುಂಬಡ್ತಿ ನೀಡಬೇಕು’ ಎಂದು ಆಗ್ರಹಿಸಿದರು. ‘ಪಾಲಿಕೆ ನಮ್ಮ ಮಾತೃ ಸಂಸ್ಥೆ ನಮ್ಮ ಹೋರಾಟ ಅಧಿಕಾರಿಗಳ ವಿರುದ್ಧ ಅಲ್ಲ. ನಮ್ಮ ಸಂಘದ 12 ಬೇಡಿಕೆಗಳಿಗೆ ಮುಖ್ಯ ಆಯುಕ್ತರು ಉತ್ತಮವಾಗಿ ಸ್ಪಂದಿಸಿದ್ದಾರೆ. ನೌಕರರ ಅಮಾನತು ಆದೇಶವನ್ನು ವಾಪಸ್ ಪಡೆದಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.