ADVERTISEMENT

ಬಿಬಿಎಂಪಿಯಲ್ಲಿ ಅಕ್ರಮ: ₹3,049 ಕೋಟಿ ವೆಚ್ಚದ 761 ಕಾಮಗಾರಿಗಳಲ್ಲಿ ನ್ಯೂನತೆ

* ನ್ಯಾ. ನಾಗಮೋಹನದಾಸ್ ವಿಚಾರಣಾ ಆಯೋಗದ ವರದಿ: ಸಚಿವ ಸಂಪುಟ ಅಂಗೀಕಾರ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 0:30 IST
Last Updated 5 ಸೆಪ್ಟೆಂಬರ್ 2025, 0:30 IST
<div class="paragraphs"><p>ಬಿಬಿಎಂಪಿ</p></div>

ಬಿಬಿಎಂಪಿ

   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ 2019-20ರಿಂದ 2022-23ರ ಅವಧಿಯಲ್ಲಿ ₹3,049.35 ಕೋಟಿ ಮೊತ್ತದ ವೆಚ್ಚದಲ್ಲಿ ಪೂರ್ಣಗೊಂಡಿರುವ 761 ಕಾಮಗಾರಿಗಳಲ್ಲಿ ಯಾವುದಾದರೊಂದು ನ್ಯೂನತೆ ಕಂಡು ಬಂದಿದೆ ಎಂದು ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನದಾಸ್‌ ವಿಚಾರಣಾ ಆಯೋಗ ಪತ್ತೆಹಚ್ಚಿದೆ.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಾಮಗಾರಿಗಳ ಅವ್ಯವಹಾರ/ ಭ್ರಷ್ಟಾಚಾರ ಆರೋಪಗಳ ಕುರಿತ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಗಸ್ಟ್‌ 30ರಂದು ಆಯೋಗ ಸಲ್ಲಿಸಿತ್ತು. ಈ ವರದಿಯನ್ನು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅಂಗೀಕರಿಸಿದ್ದು, ಇದನ್ನು ಆಧರಿಸಿ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ.

ADVERTISEMENT

ಘನತ್ಯಾಜ್ಯ: ಘನತ್ಯಾಜ್ಯ ನಿರ್ವಹಣೆಯ ಏಳು ಕಾಮಗಾರಿಗಳನ್ನು ಸರ್ಕಾರದ ಆಡಳಿತಾತ್ಮಕ ಅನುಮೋದನೆ ಇಲ್ಲದೆ ನಿರ್ವಹಿಸಲಾಗಿದೆ. ಮೂರು ಕಾಮಗಾರಿಗಳ ಅಂದಾಜು ಪಟ್ಟಿಗೆ ಅನುಮೋದನೆ ಇಲ್ಲ. ಒಂದು ಕಾಮಗಾರಿಗೆ ತಾಂತ್ರಿಕ ವಿವರಣೆ ಇಲ್ಲ. ಎರಡು ಕಾಮಗಾರಿಗೆ ಟೆಂಡರ್‌ ಪ್ರಕ್ರಿಯೆ ನಡೆಸಿಲ್ಲ. ನಾಲ್ಕು ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಂಡಿಲ್ಲ. ಒಂದು ಕಾಮಗಾರಿಗೆ ಸಂಬಂಧಪಟ್ಟ ಪ್ರಾಧಿಕಾರದಿಂದ ಅನುಮೋದನೆಯಾಗಿಲ್ಲ. ನಾಲ್ಕು ಕಾಮಗಾರಿಗಳಲ್ಲಿ ಕೆಲಸ ನಿರ್ವಹಿಸದೆ ಬಿಲ್‌ ಪಾವತಿಸಲಾಗಿದೆ. ಮೂರು ಕಾಮಗಾರಿಗಳಲ್ಲಿ ಅನುಷ್ಠಾನ ಪ್ರಮಾಣಕ್ಕಿಂತ ಹೆಚ್ಚು ಪಾವತಿಸಲಾಗಿದೆ. ಮೂರು ಕಾಮಗಾರಿಗಳಲ್ಲಿ ಕಾಲಾವಧಿ ವಿಸ್ತರಣೆಗೆ ಅನುಮೋದನೆ ಇಲ್ಲ. ಎಂಟು ಕಾಮಗಾರಿಗಳಲ್ಲಿ  ನೋಡಲ್‌ ಅಧಿಕಾರಿ ವಿವರ ಸಲ್ಲಿಸಿಲ್ಲ. ಒಟ್ಟಾರೆ ₹63.77 ಕೋಟಿ ವೆಚ್ಚದ 21 ಕಾಮಗಾರಿಗಳಲ್ಲಿ ನ್ಯೂನತೆಗಳು ಆಗಿವೆ.

ರಸ್ತೆ ಅಭಿವೃದ್ಧಿ– ಒಎಫ್‌ಸಿ: ನಾಲ್ಕು ಕಾಮಗಾರಿಗಳ ಅನುಷ್ಠಾನ ಪೂರ್ಣಗೊಳ್ಳದಿದ್ದರೂ ದೃಢೀಕರಿಸಲಾಗಿದೆ. 18 ಕಾಮಗಾರಿಗಳ ಅನುಷ್ಠಾನದಲ್ಲಿ ಮೂಲ ಅಂದಾಜು ಪಟ್ಟಿ ಅನುಮೋದನೆಯಾಗಿಲ್ಲ. 13 ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡಿಕೊಂಡಿಲ್ಲ. ಐದು ಕಾಮಗಾರಿಗಳಲ್ಲಿ ನಿರ್ವಹಣಾ ಅವಧಿ ನಿರ್ವಹಿಸಿಲ್ಲ. ಏಳು ಕಾಮಗಾರಿಗಳಲ್ಲಿ ಅನುಮೋದಿತ ವೇರಿಯೇಷನ್‌ ನಿರ್ವಹಿಸಿಲ್ಲ. ಲೆಕ್ಕಪತ್ರ ವಿಭಾಗವು 22 ಕಾಮಗಾರಿಗಳಲ್ಲಿ ಬಿಲ್‌ ಪಾವತಿಸುವಾಗ ಶಾಸನಬದ್ಧ ಕಟಾವು ಮಾಡಿಲ್ಲ. 49 ಕಾಮಗಾರಿಗಳ ಭದ್ರತಾ ಠೇವಣಿಯನ್ನು ನಿಗದಿತ ವೇಳೆಯಲ್ಲಿ ಹಿಂದಿರುಗಿಸಿಲ್ಲ. ಒಎಫ್‌ಸಿ ಕೇಬಲ್‌ಗೆ ಅನುಮತಿ ನೀಡುವ ಬಗ್ಗೆ ಆಯೋಗ ಕೋರಿದ ಮಾಹಿತಿಯನ್ನು ನೀಡದೆ, ಬಿಬಿಎಂಪಿ ನಿರ್ಲಕ್ಷ್ಯ ವಹಿಸಿದೆ. ಒಟ್ಟು ₹875 ಕೋಟಿ ವೆಚ್ಚದ ಕಾಮಗಾರಿಗಳಲ್ಲಿ ಲೋಪವಾಗಿದೆ. 

ಬೃಹತ್‌ ನೀರುಗಾಲುವೆ– ನಗರ ಯೋಜನೆ: ಬೃಹತ್‌ ನೀರುಗಾಲುವೆ ಕಾಮಗಾರಿ ಹಾಗೂ ಕೇಂದ್ರ ವಲಯ ನಗರ ಯೋಜನೆ ವಿಭಾಗಗಳಲ್ಲಿ ನಕ್ಷೆ ಮಂಜೂರು, ಸ್ವಾಧೀನಾನುಭವ ಪತ್ರದ ಪ್ರಕರಣಗಳಲ್ಲಿ ಆಡಳಿತಾತ್ಮಕ ಅನುಮೋದನೆ ಪಡೆಯದ 43 ಕಾಮಗಾರಿ, ಕ್ರಿಯಾಯೋಜನೆ ಅನುಮೋದನೆಯಾಗದ 43 ಕಾಮಗಾರಿ, ಟೆಂಡರ್‌ ಪ್ರಕ್ರಿಯೆ ನಡೆಸದ 24 ಕಾಮಗಾರಿ, ಇ–ಪ್ರೊಕ್ಯೂರ್‌ಮೆಂಟ್‌ನಲ್ಲಿ ನಿಯಮಾವಳಿ ಪಾಲಿಸದ 74 ಕಾಮಗಾರಿಗಳು, ಗುಣಮಟ್ಟ ಕಾಪಾಡದ 10 ಕಾಮಗಾರಿಗಳು, ಗುತ್ತಿಗೆ ಕರಾರಿನಂತೆ ಅನುಷ್ಠಾನವಾಗದ 92 ಕಾಮಗಾರಿಗಳು, 1,504 ಅರ್ಜಿಗಳಲ್ಲಿ ಶೇ 4.15ರಷ್ಟು ಮಾತ್ರ ಸ್ವಾಧೀನಾನುಭವಪತ್ರ ನೀಡಿರುವುದು ಸೇರಿದಂತೆ ₹810.12 ಕೋಟಿ ಮೊತ್ತದ ಕಾಮಗಾರಿಗಳಲ್ಲಿ ಹಲವು ನ್ಯೂನತೆಗಳು ಕಂಡುಬಂದಿದೆ. ಇದಕ್ಕೆ ಕಾರಣರಾದ ಎಲ್ಲರ ಮೇಲೆ ಶಿಸ್ತುಕ್ರಮವಾಗಬೇಕು ಎಂದು ಶಿಫಾರಸು ಮಾಡಲಾಗಿದೆ.

ಕೆರೆ ಅಭಿವೃದ್ಧಿ– ಸ್ಮಾರ್ಟ್ ಸಿಟಿ: ಕೆರೆ ಅಭಿವೃದ್ಧಿ, ವಾರ್ಡ್‌ ಮಟ್ಟದ ಕಾಮಗಾರಿಗಳು ಮತ್ತು ಸ್ಮಾರ್ಟ್‌ ಸಿಟಿ ಯೋಜನೆ ಕಾಮಗಾರಿಗಳಲ್ಲಿ 305ಕ್ಕೆ ಆಡಳಿತಾತ್ಮಕ ಅನುಮೋದನೆ ಪಡೆದಿಲ್ಲ. 300 ಕಾಮಗಾರಿಗಳ ಕ್ರಿಯಾಯೋಜನೆಗೆ ಅನುಮೋದನೆ ಇಲ್ಲ. 25 ಕಾಮಗಾರಿಗಳ ಅಂದಾಜುಪಟ್ಟಿ, ತಾಂತ್ರಿಕ ವಿವರಣೆಗೆ ಸರಿಯಾದ ಪ್ರಮಾಣದಲ್ಲಿ ಅಳವಡಿಸಿಲ್ಲ. 137 ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿಲ್ಲ. 344 ಕಾಮಗಾರಿಗಳಲ್ಲಿ ಟೆಂಡರ್‌ ದಾಖಲೆಗಳನ್ನು ಪರಿಶೀಲಿಸದೆ, ನಿಯಮಾವಳಿ ಉಲ್ಲಂಘಿಸಲಾಗಿದೆ. 97 ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡಿಲ್ಲ. 217 ಕಾಮಗಾರಿಗಳಲ್ಲಿ ಯೋಜನಾ ಸಮಾಲೋಚಕರ ನಿಯೋಜನೆಯಲ್ಲಿ ಉಲ್ಲಘನೆಯಾಗಿದೆ. 209 ಕಾಮಗಾರಿಗಳಲ್ಲಿ ಪರೀಕ್ಷಾ ವರದಿ ಸಲ್ಲಿಸಿಲ್ಲ. 13 ಕಾಮಗಾರಿಗಳಲ್ಲಿ ಅತಿ ಗಂಭೀರ ನ್ಯೂನತೆಗಳಿವೆ. ₹1,300.08 ಕೋಟಿ ಮೊತ್ತದ ಕಾಮಗಾರಿಗಳಲ್ಲಿ ನ್ಯೂನತೆ ಇದೆ ಎಂದು ಉಲ್ಲೇಖಿಸಲಾಗಿದೆ

ಕ್ರಿಮಿನಲ್‌ ಪ್ರಕರಣಕ್ಕೆ ಶಿಫಾರಸು

‘ಅಕ್ರಮಗಳಲ್ಲಿ ಭಾಗಿಯಾಗಿರುವ ಅಧಿಕಾರಿ, ಎಂಜಿನಿಯರ್‌, ಲೆಕ್ಕ ಶಾಖೆ ಸಿಬ್ಬಂದಿ ಬೇರೆ ಇಲಾಖೆಗೆ ವರ್ಗವಾಗಿದ್ದರೂ ಅಥವಾ ನಿವೃತ್ತರಾಗಿದ್ದರೂ ಅವರ ಮೇಲೆ ಸೂಕ್ತ ಶಿಸ್ತಿನ ಕ್ರಮ ಕೈಗೊಳ್ಳಬೇಕು’ ಎಂದು ಎಚ್‌.ಎನ್‌. ನಾಗಮೋಹನದಾಸ್‌ ವಿಚಾರಣಾ ಆಯೋಗ ಶಿಫಾರಸು ಮಾಡಿದೆ.

‘ಬಿಬಿಎಂಪಿಯ ನಾಲ್ಕು ವಿಭಾಗಗಳ ಕಾಮಗಾರಿಗಳ ತನಿಖೆಯಲ್ಲಿ ಹೆಚ್ಚಿನ ಅಕ್ರಮ ನಡೆದಿರುವುದು ಸ್ಪಷ್ಟವಾಗಿದೆ. ಈ ಅಕ್ರಮದಲ್ಲಿ ಅಧಿಕಾರಿಗಳು ಮತ್ತು ಕೆಲವು ಗುತ್ತಿಗೆದಾರರು ಕೈಜೋಡಿಸಿರುವುದನ್ನು ಅಲ್ಲಗಳೆಯುವಂತಿಲ್ಲ. ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳು, ಎಂಜಿನಿಯರ್, ಲೆಕ್ಕಶಾಖೆ ಸಿಬ್ಬಂದಿ, ಯೋಜನಾ ಸಮಾಲೋಚಕರು, ಗುತ್ತಿಗೆದಾರರು, ಕಾಮಗಾರಿ ಅನುಷ್ಠಾನ ಪ್ರಕ್ರಿಯೆಯಲ್ಲಿ ನಿಯಮಬಾಹಿರವಾಗಿ ನಡೆದುಕೊಂಡಿರುವ ಇತರರ ಮೇಲೆ ಸಿವಿಲ್‌ ಮತ್ತು ಕ್ರಿಮಿನಲ್ ಮೊಕದ್ದಮೆ ಹೂಡಬೇಕು’ ಎಂದು ಶಿಫಾರಸು ಮಾಡಲಾಗಿದೆ.

‘ಕಾರ್ಯಪಾಲಕ ಎಂಜಿನಿಯರ್‌ ಮತ್ತು ಅದಕ್ಕೂ ಮೇಲಿನ ಹುದ್ದೆಗಳಿಗೆ ಪದೋನ್ನತಿ ನೀಡುವ ಮೊದಲು ಪರಿಶೀಲನೆ ನಡೆಸಬೇಕು. ಅಶಿಸ್ತಿನ ಕ್ರಮಕ್ಕೆ ಅವರು ಒಳಪಟ್ಟಿದ್ದರೆ ಪದೋನ್ನತಿ ನೀಡಬಾರದು. ಕಾರ್ಯದಕ್ಷತೆಯುಳ್ಳ ಅಧಿಕಾರಿಗಳನ್ನು ನೇಮಿಸುವುದು ಸೂಕ್ತ’ ಎಂದು ಸಲಹೆ ನೀಡಲಾಗಿದೆ.

ಕ್ರಮವಾಗದಿದ್ದರೆ ವರದಿಗೆ ಅರ್ಥ ಇಲ್ಲ’

‘ಬಿಬಿಎಂಪಿ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗಿರುವ ಕಾಮಗಾರಿಗಳಲ್ಲಿ ಗಂಭೀರ ನ್ಯೂನತೆಗಳು ಕಂಡುಬಂದಿವೆ. ಹತ್ತಾರು ವರ್ಷಗಳಿಂದ ಸರ್ಕಾರ ತನಿಖಾ ಸಮಿತಿಗಳಿಂದ ಪಡೆದಿರುವ ವರದಿಗಳಲ್ಲಿ
ಮಾಡಿರುವ ಶಿಫಾರಸಿನ ಶಿಸ್ತು ಕ್ರಮ, ಮಹಾಲೇಖಪಾಲಕರು ಗಂಭೀರ ನ್ಯೂನತೆ ಗಮನಿಸಿ ಶಿಫಾರಸು ಮಾಡಿರುವ ಶಿಸ್ತುಕ್ರಮ, ಲೋಕಾಯುಕ್ತ– ಇತರೆ ಸಂಸ್ಥೆಗಳು ತನಿಖೆ ನಡೆಸಿ ಮಾಡಿರುವ ಶಿಫಾರಸು, ಸುಧಾರಣಾ ಕ್ರಮಗಳನ್ನು ಸಕಾಲದಲ್ಲಿ ಅನುಷ್ಠಾನಗೊಳಿಸದಿದ್ದರೆ, ತನಿಖಾ ಸಂಸ್ಥೆಗಳು ಸಲ್ಲಿಸುವ ವರದಿಗಳು ಅರ್ಥ ಕಳೆದುಕೊಳ್ಳುತ್ತವೆ. ಈ ಹಿನ್ನೆಲೆಯಲ್ಲಿ ಸರ್ಕಾರ ವರದಿಯನ್ನು ಗಂಭೀರವಾಗಿ ಪರಿಗಣಿಸಿ, ಶಿಸ್ತಿನ ಕ್ರಮ ಮತ್ತು ಸುಧಾರಣಾ ಕ್ರಮಗಳನ್ನು ಸಕಾಲದಲ್ಲಿ ತೆಗೆದುಕೊಂಡಲ್ಲಿ ಮಾತ್ರ ಮಹಾನಗರ ಪಾಲಿಕೆ ಆಡಳಿತ ವ್ಯವಸ್ಥೆಯಲ್ಲಿ ಮುಂದಿನ ದಿನಗಳಲ್ಲಿ ಸುಧಾರಣೆ ಕಾಣಬಹುದು’ ಎಂದು ಆಯೋಗ ಅಭಿಪ್ರಾಯಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.