ADVERTISEMENT

ಹಳೆ ಬಾಕಿ ವಸೂಲಿ: ಸ್ಥಿರಾಸ್ತಿ ಜಪ್ತಿಗೂ ಅವಕಾಶ ಬಿಬಿಎಂಪಿ ಪ್ರಸ್ತಾವ

ಕೆಎಂಸಿ ಕಾಯ್ದೆಯಲ್ಲಿ ಚರಾಸ್ತಿ ಜಪ್ತಿಗೆ ಮಾತ್ರ ಅವಕಾಶ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2020, 19:31 IST
Last Updated 20 ಸೆಪ್ಟೆಂಬರ್ 2020, 19:31 IST
ಬಿಬಿಎಂಪಿ
ಬಿಬಿಎಂಪಿ   

ಬೆಂಗಳೂರು: ಬಾಕಿ ಉಳಿಸಿಕೊಂಡಿರುವ ಆಸ್ತಿ ತೆರಿಗೆ ವಸೂಲಿ ಮಾಡಲು ಆಸ್ತಿ ಮಾಲೀಕರ ಸ್ಥಿರಾಸ್ತಿಯನ್ನು ಜಪ್ತಿ ಮಾಡುವುದಕ್ಕೆ ಅನುವು ಮಾಡಿಕೊಡುವ ಸಲುವಾಗಿ 1976ರ ಕೆಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಬಗ್ಗೆ ಬಿಬಿಎಂಪಿ ಪ್ರಸ್ತಾವನೆ ಸಿದ್ಧಪಡಿಸಿದೆ.

ಆಸ್ತಿ ಮಾಲೀಕರು ಬಾಕಿ ಉಳಿಸಿಕೊಂಡಿರುವ ಮೊತ್ತವನ್ನು ವಸೂಲಿಮಾಡಲು ಚರಾಸ್ತಿಯನ್ನು ಜಪ್ತಿ ಮಾಡುವುದಕ್ಕೆ ಮಾತ್ರ ಕರ್ನಾಟಕ
ಮುನಿಸಿಪಲ್‌ ಕೌನ್ಸಿಲ್‌ (ಕೆಎಂಸಿ) ಕಾಯ್ದೆ ಅವಕಾಶ ಕಲ್ಪಿಸುತ್ತದೆ. ಆದರೆ, ಆಸ್ತಿ ತೆರಿಗೆಯನ್ನು ಅನೇಕ ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವ ಹೆಚ್ಚಿನ ಪ್ರಕರಣಗಳಲ್ಲಿ ಬಿಬಿಎಂಪಿ ಚರಾಸ್ತಿಯನ್ನು ವಸೂಲಿ ಮಾಡಿದರೂ, ಅದರಿಂದ ಬಾಕಿ ಮೊತ್ತ ಸರಿ ಹೊಂದಿಸಲು ಸಾಧ್ಯವಾಗುವುದಿಲ್ಲ.

ಸ್ಥಿರಾಸ್ತಿಯನ್ನು ಜಪ್ತಿ ಮಾಡುವುದಕ್ಕೆ 1964ರ ಕರ್ನಾಟಕ ಭೂಕಂದಾಯ ಕಾಯ್ದೆಯ 165ರಿಂದ 170ರ ವರೆಗಿನ ಕಲಂಗಳು ಹಾಗೂ ಅದರನ್ವಯ ರೂಪಿಸಿರುವ ನಿಯಮಾವಳಿಗಳು ಅವಕಾಶ ಕಲ್ಪಿಸುತ್ತವೆ. ಬಿಬಿಎಂಪಿಗೆ ಅನ್ವಯವಾಗುವಂತೆ ಈ ಕಲಂಗಳನ್ನು 1976ರ ಕೆಎಂಸಿ ಕಾಯ್ದೆಯಲ್ಲೂ ಹೊಸದಾಗಿ ಅಳವಡಿಸಬೇಕಿದೆ. ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ, ತೆರಿಗೆ ಮತ್ತು ಆರ್ಥಿಕ ಸ್ಥಾಯಿಸಮಿತಿಗಳ ಹಾಗೂ ಪಾಲಿಕೆ ಸಭೆಯ ಅಧಿಕಾರವನ್ನು ಚಲಾಯಿಸಿಈ ಬಗ್ಗೆ ತೀರ್ಮಾನಕೈಗೊಳ್ಳುವ ಕುರಿತು ಆಡಳಿತಾಧಿಕಾರಿ ಮುಂದೆ ಆಯುಕ್ತರು ಟಿಪ್ಪಣಿ ಮಂಡಿಸಿದ್ದಾರೆ.

ADVERTISEMENT

‘ಬಾಕಿ ತೆರಿಗೆ ವಸೂಲಿ ಮಾಡಲು ನಾವು ಚರಾಸ್ತಿಯನ್ನು ಜಪ್ತಿ ಮಾಡಿದರೂ ಅದರ ಒಟ್ಟು ಮೌಲ್ಯವು ಹಳೆ ಬಾಕಿಗೆ ಸಮನಾಗುವುದಿಲ್ಲ. ಆದರೆ, ಸ್ಥಿರಾಸ್ತಿ ಜಪ್ತಿಗೆ ಕೆಎಂಸಿ ಕಾಯ್ದೆಯಲ್ಲಿ ಅವಕಾಶ ಇಲ್ಲ. ಕಾನೂನು ತಿದ್ದುಪಡಿ ಮಾಡಿದರೆ ನಮಗೂ ಹಳೆ ಬಾಕಿ ವಸೂಲಿಗೆ
ಅವಕಾಶವಾಗುತ್ತದೆ’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಪ್ರಸ್ತಾವನೆಗೆ ಆಡಳಿತಾಧಿಕಾರಿಯವರು ಒಪ್ಪಿಗೆ ನೀಡಿದರೆ, ಅದನ್ನು ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಲಿದ್ದೇವೆ. ಕೆಎಂಸಿ ಕಾಯ್ದೆಗೆ ತಿದ್ದುಪಡಿ ತಂದ ಬಳಿಕವಷ್ಟೇ ಸ್ಥಿರಾಸ್ತಿ ಜಪ್ತಿ ಮಾಡಲು ಅವಕಾಶ ಸಿಗಲಿದೆ’ ಎಂದರು.

‘ಟಿಪ್ಪಣಿಯಲ್ಲಿ ಸ್ಪಷ್ಟತೆ ಇರಲಿ’
‘ಅಧಿಕಾರಿಗಳು ಯಾವುದೇ ಪ್ರಸ್ತಾವನೆಗೆ ಸಂಬಂಧಿಸಿ, ಕಡತಗಳಲ್ಲಿ ಟಿಪ್ಪಣಿ ಬರೆಯುವಾಗ ಸ್ಪಷ್ಟತೆ ಇರಬೇಕು. ಅವು ಅಧೀನದ ಅಧಿಕಾರಿಗಳಲ್ಲಿ ಅಥವಾ ಸಿಬ್ಬಂದಿಯಲ್ಲಿ ಗೊಂದಲ ಮೂಡಿಸುವಂತಿರಬಾರದು’ ಎಂದು ಬಿಬಿಎಂಪಿ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

‘ಯಾವುದೇ ಪ್ರಸ್ತಾವನೆಗಳನ್ನು ಮೇಲಧಿಕಾರಿಗೆ ಮಂಡಿಸುವಾಗ ಆ ಕಡತವು ವಿವರವಾದ ವರದಿಯನ್ನು ಹಾಗೂ ಸ್ಪಷ್ಟ ಶಿಫಾರಸುಗಳನ್ನು ಹೊಂದಿರಬೇಕು. ಪ್ರಸ್ತಾವನೆಯು ಕ್ರಮಬದ್ಧವಾಗಿದ್ದಲ್ಲಿಮೇಲಧಿಕಾರಿಗಳು ಅನುಮೋದನೆ, ಒಪ್ಪಿಗೆಯನ್ನು ಸ್ಪಷ್ಟವಾಗಿ ನಮೂದಿಸಬೇಕು. ಕ್ರಮಬದ್ಧವಾಗಿಲ್ಲದಿದ್ದರೆ ಅದನ್ನು ತಿರಸ್ಕರಿಸಬೇಕು. ಲೋಪಗಳಿದ್ದಲ್ಲಿ ಸ್ಪಷ್ಟ ವಿವರದೊಂದಿಗೆ ಮರುಪರಿಶೀಲನೆಗೆ ಕಳುಹಿಸಬೇಕು’ ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

‘ವಲಯ ಮಟ್ಟದಲ್ಲಿ ಕೆಲ ಅಧಿಕಾರಿಗಳು, ಯಾವುದೇ ಸ್ಪಷ್ಟ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲದಂತೆ ಟಿಪ್ಪಣಿ ಬರೆಯುತ್ತಿದ್ದಾರೆ. ಅಧೀನದ ಸಿಬ್ಬಂದಿ ಈ ಟಿಪ್ಪಣಿಗಳನ್ನು ತಮ್ಮ ವಿವೇಚನೆಗೆ ತಕ್ಕಂತೆ ಅರ್ಥೈಸಿಕೊಳ್ಳುತ್ತಿದ್ದು, ಪ್ರಸ್ತಾವನೆಗಳ ಕುರಿತು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಇದು ವೃಥಾ ಕಾಲಹರಣಕ್ಕೆ ಕಾರಣವಾಗುತ್ತಿದೆ’ ಎಂದೂ ಅವರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.