ADVERTISEMENT

ಜನರ ಮನೆ ಬಾಗಿಲಿಗೆ ಪಾಲಿಕೆಯ ವೈದ್ಯರು: ಕಂದಾಯ ಸಚಿವ ಆರ್‌.ಅಶೋಕ

ಸಾರ್ವಜನಿಕರ ಆರೋಗ್ಯದ ಸಮಗ್ರ ಮಾಹಿತಿ ಕಲೆ ಹಾಕಲು ಸಮೀಕ್ಷೆ * 54 ವಾರ್ಡ್‌ಗಳಲ್ಲಿ ಅನುಷ್ಠಾನ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2021, 10:55 IST
Last Updated 16 ಆಗಸ್ಟ್ 2021, 10:55 IST
ಮನೆ ಮನೆಗೆ ಭೇಟಿ ನೀಡುವ ಪಾಲಿಕೆ ವೈದ್ಯರ ತಂಡಗಳಿಗೆ ಸಚಿವ.ಆರ್‌.ಅಶೋಕ ಅವರು ಟ್ಯಾಬ್‌ಗಳನ್ನು ವಿತರಿಸಿದರು. ಶಾಸಕ ರಿಜ್ವಾನ್‌ ಹರ್ಷದ್‌, ಗೌರವ್‌ ಗುಪ್ತ, ರಾಕೇಶ್‌ ಸಿಂಗ್‌ ಹಾಗೂ ಇತರ ಅಧಿಕಾರಿಗಳು ಇದ್ದಾರೆ
ಮನೆ ಮನೆಗೆ ಭೇಟಿ ನೀಡುವ ಪಾಲಿಕೆ ವೈದ್ಯರ ತಂಡಗಳಿಗೆ ಸಚಿವ.ಆರ್‌.ಅಶೋಕ ಅವರು ಟ್ಯಾಬ್‌ಗಳನ್ನು ವಿತರಿಸಿದರು. ಶಾಸಕ ರಿಜ್ವಾನ್‌ ಹರ್ಷದ್‌, ಗೌರವ್‌ ಗುಪ್ತ, ರಾಕೇಶ್‌ ಸಿಂಗ್‌ ಹಾಗೂ ಇತರ ಅಧಿಕಾರಿಗಳು ಇದ್ದಾರೆ   

ಬೆಂಗಳೂರು: ಜನರ ಆರೋಗ್ಯದ ಸಮಗ್ರ ಮಾಹಿತಿ ಕಲೆ ಹಾಕಲು ಬಿಬಿಎಂಪಿ ವೈದ್ಯರ ತಂಡ ಮನೆ ಬಾಗಿಲಿಗೇ ಬರಲಿದೆ. 27 ವಿಧಾನಸಭಾ ಕ್ಷೇತ್ರಗಳ 54 ವಾರ್ಡ್‌ಗಳಲ್ಲಿ ಅನುಷ್ಠಾನಗೊಳ್ಳುವ ಈ ಸಮೀಕ್ಷೆಗೆ ಕಂದಾಯ ಸಚಿವ ಆರ್‌.ಅಶೋಕ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಸೋಮವಾರ ಚಾಲನೆ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ, ‘ನಗರದಲ್ಲಿ ಕೋವಿಡ್ ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ದೃಷ್ಟಿಯಿಂದ ಈ ಆರೋಗ್ಯ ಸಮೀಕ್ಷೆ ಹಮ್ಮಿಕೊಳ್ಳಲಾಗಿದೆ. ಭವಿಷ್ಯದಲ್ಲಿ ಯಾರಿಗಾದರೂ ಕೊರೊನಾ ಸೋಂಕು ದೃಢಪಟ್ಟರೆ ತಕ್ಷಣ ಅವರಿಗೆ ಸೂಕ್ತ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಇದು ನೆರವಾಗಲಿದೆ. ಉದಾಹರಣೆಗೆ, ಕ್ಯಾನ್ಸರ್‌ ಇದ್ದ ವ್ಯಕ್ತಿಗೆ ಕೋವಿಡ್‌ ದೃಢಪಟ್ಟರೆ ಅವರನ್ನು ಕ್ಯಾನ್ಸರ್‌ ಚಿಕಿತ್ಸೆ ಸೌಲಭ್ಯವಿರುವ ಆಸ್ಪತ್ರೆಗೇ ದಾಖಲಿಸಬಹುದು. ಆಸ್ಪತ್ರೆ, ಆಂಬುಲೆನ್ಸ್, ಔಷಧ ಹುಡುಕಾಟಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲು ಇದು ಪ್ರಯೋಜನಕಾರಿ. ಕೊರೋನ ತಡೆಗಟ್ಟಲು ಪಾಲಿಕೆ ಇಟ್ಟಿರುವ ದಿಟ್ಟ ಹೆಜ್ಜೆ ಇದು’ ಎಂದು ತಿಳಿಸಿದರು.

‘ಪಾಲಿಕೆ ವೈದ್ಯರ ತಂಡವು ನಗರದ 29 ಲಕ್ಷ ಮನೆಗಳಿಗೂ ಹಂತ ಹಂತವಾಗಿ ಭೇಟಿ ನೀಡಿ, ಆ ಕುಟುಂಬಗಳ ಸದಸ್ಯರ ಆರೋಗ್ಯ ತಪಾಸಣೆ ನಡೆಸಲಿದೆ. ಕುಟುಂಬದ ಯಾವುದಾದೂ ಸದಸ್ಯರು ಕ್ಯಾನ್ಸರ್, ಅಧಿಕ ರಕ್ತದೊತ್ತಡ, ಮಧುಮೇಹ ಸೇರಿದಂತೆ ಇನ್ನಿತರೆ ರೋಗಗಳನ್ನು ಹೊಂದಿದ್ದರೆ, ಈ ಕುರಿತ ಮಾಹಿತಿಯನ್ನು ತಂಡವು ಕಲೆ ಹಾಕಲಿದೆ’ ಎಂದು ವಿವರಿಸಿದರು.

ADVERTISEMENT

ಸೋಂಕು ಲಕ್ಷಣವಿದ್ದರೆ ಕೊರೊನಾ ಪರೀಕ್ಷೆ:

‘ಕೋವಿಡ್ ನಿಯಂತ್ರಣದ ಕುರಿತು ಜನ ಜಾಗೃತಿ ಮೂಡಿಸುವುದೂ ಈ ಕಾರ್ಯಕ್ರಮದ ಉದ್ದೇಶ. ಎಲ್ಲಾ ಮನೆಗೂ ಕೋವಿಡ್ ನಿಯಂತ್ರಣ ಸೂತ್ರಗಳ ಅರಿವು ಮೂಡಿಸುವ ಕರಪತ್ರಗಳನ್ನು ಹಂಚಲಾಗುತ್ತದೆ. ಕೊರೊನಾ ಸೋಂಕಿನ ಲಕ್ಷಣ ಹೊಂದಿರುವವರನ್ನು ವೈದ್ಯರ ತಂಡವು ಪರೀಕ್ಷೆಗೂ ಒಳಪಡಿಸಲಿದೆ. ಸೋಂಕು ದೃಢಪಟ್ಟರೆ ಅಂತಹವರನ್ನು ಕೋವಿಡ್‌ ಸೋಂಕಿತರ ಆರೈಕೆ ಕೇಂದ್ರಕ್ಕೆ ಅಥವಾ ಆಸ್ಪತ್ರೆಗೆ ದಾಖಲಿಸಲು ಕ್ರಮಕೈಗೊಳ್ಳಲಿದೆ. ಮನೆಯಲ್ಲೇ ಆರೈಕೆ ಆಗಬೇಕಾದವ ಸೋಂಕಿತರಿಗೆ, ‘ಹೋಂ ಐಸೋಲೇಷನ್’ ಕಿಟ್ ನೀಡಲಾಗುತ್ತದೆ’ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ‘ಮನೆ ಬಾಗಿಲಿಗೆ ಪೊಲೀಸರು ಬಂದರ ಜನ ಭಯ ಪಡಬಹುದು. ಆದರೆ, ವೈದ್ಯರು ಬಂದರೆ ಖುಷಿ ಪಡುತ್ತಾರೆ. ಕೊಳಗೇರಿ ನಿವಾಸಿಗಳು, ಬೀದಿ ಬದಿ ವ್ಯಾಪಾರಿಗಳಿಗೆಲ್ಲ ಆಸ್ಪತ್ರೆಗೆ ಹೋಗಿ ವೈದ್ಯರನ್ನು ಕಾಣುವುದು ಕಷ್ಟ. ಅಂತಹವರಿಗೆ ಈ ಕಾರ್ಯಕ್ರಮದಿಂದ ತುಂಬಾ ಪ್ರಯೋಜನವಾಗಲಿದೆ. ವೈದ್ಯರ ನೇತೃತ್ವದ ತಂಡ ಜನರಲ್ಲಿ ಧೈರ್ಯ ತುಂಬುವ ಕೆಲಸ ಮಾಡಲಿದೆ’ ಎಂದು ವಿವರಿಸಿದರು.

ನಿತ್ಯ 50 ಮನೆ ಸಮೀಕ್ಷೆ ನಡೆಸಲಿದೆ ತಂಡ

‘ಪ್ರತೀ ತಂಡವು ನಿತ್ಯ ಕನಿಷ್ಠ 100 ಮನೆಗಳ ಸಮೀಕ್ಷೆ ನಡೆಸಬೇಕು ಎಂದು ಹಿಂದೆ ನಿರ್ಧರಿಸಲಾಗಿತ್ತು. ಆದರೆ, ಅಷ್ಟು ಗುರಿ ಸಾಧನೆ ಕಷ್ಟ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ ನಿತ್ಯ 50 ಮನೆಗಳನ್ನು ತಲುಪುವ ಗುರಿ ನಿಗದಿಪಡಿಸಲಾಗಿದೆ. ವಾರ್ಡ್ ಒಂದದಲ್ಲಿ ವೈದ್ಯರ ಐದು ತಂಡಗಳು ಇರಲಿವೆ. ಒಬ್ಬ ವೈದ್ಯಾಧಿಕಾರಿ, ಅರೆವೈದ್ಯಕೀಯ ಸಿಬ್ಬಂದಿಪ್ರತಿ ತಂಡದಲ್ಲಿ ಇರುತ್ತಾರೆ. ಎಂಬಿಬಿಎಸ್, ಬಿಡಿಎಸ್ ಅಥವಾ ಆಯುಷ್ ವೈದ್ಯರನ್ನು ವೈದ್ಯಾಧಿಕಾರಿಯಾಗಿ ನಿಯೋಜಿಸಲಾಗುತ್ತದೆ. ಪ್ರತಿ ವೈದ್ಯಾಧಿಕಾರಿಗೆ ತಿಗಳಿಗೆ ₹ 60 ಸಾವಿರ ನೀಡಲಾಗುತ್ತದೆ’ ಎಂದು ಸಚಿವರು ತಿಳಿಸಿದರು.

‘ಮನೆ ಮನೆ ಭೇಟಿ ವೇಳೆ ‘ಪಾಲಿಕೆ ವೈದ್ಯರು ನಿಮ್ಮ ಮನೆ ಬಾಗಿಲಿಗೆ, ನಿಮ್ಮ ಆರೋಗ್ಯವೇ ನಮ್ಮ ಧ್ಯೇಯ’ ಎಂದು ಮುದ್ರಿಸಿರುವ ಬಿಳಿ ಬಣ್ಣದ ನಿಲುವಂಗಿಯನ್ನುವೈದ್ಯಾಧಿಕಾರಿಗಳು ಧರಿಸಬೇಕು. ಪ್ರತಿ ತಂಡಕ್ಕೂ ಪ್ರತ್ಯೇಕ ವಾಹನವನ್ನು ಒದಗಿಸಲಾಗಿದೆ’ ಎಂದರು.

ಶಾಸಕ ರಿಜ್ವಾನ್ ಹರ್ಷದ್, ‘ನೇರವಾಗಿ ಜನರ ಮನೆಗೇ ಭೇಟಿ ನೀಡಿ ಕಲೆ ಹಾಕುವ ಆರೋಗ್ಯ ಮಾಹಿತಿಯು ಕೋವಿಡ್ ನಿಯಂತ್ರಿಸಲು ಸಹಕಾರಿಯಾಗಲಿದೆ. ಇಡೀ ನಗರದಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿ ಅನುಷ್ಠಾನಗೊಂಡರೆ ಅದೊಂದು ಮೈಲುಗಲ್ಲಾಗಲಿದೆ’ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ಗೌರವ್ ಗುಪ್ತ, ವಿಶೇಷ ಆಯುಕ್ತರುಗಳಾದ ಡಿ.ರಂದೀಪ್, ತುಳಸಿ ಮದ್ದಿನೇನಿ, ಹರೀಶ್ ಕುಮಾರ್, ಮನೋಜ್ ಜೈನ್, ದಯಾನಂದ್, ರವೀಂದ್ರ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಆರೋಗ್ಯ ಮಾಹಿತಿ ಸಂಗ್ರಹಕ್ಕೆ ಟ್ಯಾಬ್‌

‘ಮನೆ-ಮನೆ ಭೇಟಿ ವೇಳೆ ಆರೋಗ್ಯ ಮಾಹಿತಿ ಕಲೆ ಹಾಕುವ ಕಾರ್ಯದಲ್ಲಿ ಕಾಗದರಹಿತವಾಗಿ ನಡೆಯಲಿದೆ. ಕಲೆ ಹಾಕಿದ ಮಾಹಿತಿಯನ್ನು ಬಿಬಿಎಂಪಿ ತಂತ್ರಾಂಶದಲ್ಲಿ ನಮೂದಿಸಲು ವೈದ್ಯರ ತಂಡಕ್ಕೆ ಟ್ಯಾಬ್‌ ನೀಡಲಾಗಿದೆ.

ಪಿಎಚ್ಎಸಿಟಿ (PHAST) ತಂತ್ರಾಂಶ:

ಸಾರ್ವಜನಿಕ ಆರೋಗ್ಯ ಚಟುವಟಿಕೆ, ಸರ್ವೇಕ್ಷಣೆ ಮತ್ತು ನಿಗಾ (ಪಿಎಚ್ಎಸಿಟಿ– ಫಾಸ್ಟ್‌) ತಂತ್ರಾಂಶದ ಮೂಲಕ ವೈದ್ಯರ ತಂಡವು ಜನರ ಆರೋಗ್ಯ ಮಾಹಿತಿ ಸಂಗ್ರಹಿಸಲಿದೆ. ಈ ತಂತ್ರಾಂಶದಲ್ಲಿ ಕುಟುಂಬದ ಮುಖ್ಯಸ್ಥರ ಹೆಸರು, ಮನೆಯ ವಿಳಾಸ, ದೂರವಾಣಿ ಸಂಖ್ಯೆ, ಮನೆಯಲ್ಲಿ ವಾಸವಿರುವವರ ವಿವರ, ಅವರ ವಯಸ್ಸು, ಕೋವಿಡ್ ಹಾಗೂ ಇನ್ನಿತರೆ ಕಾಯಿಲೆ ಕುರಿತ ಮಾಹಿತಿ, ಕೋವಿಡ್ ಲಸಿಕೆ ಪಡೆದಿರುವ ಬಗ್ಗೆ ಮಾಹಿತಿಯನ್ನು ದಾಖಲಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.