ADVERTISEMENT

ಮುಂದಾಳುಗಳ ವಲಸೆ ಪರ್ವಕ್ಕೆ ಪೂರ್ವರಂಗ ಸಜ್ಜು

ಬಿಬಿಎಂಪಿ ಚುನಾವಣೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2020, 21:12 IST
Last Updated 6 ಡಿಸೆಂಬರ್ 2020, 21:12 IST
ಬಿಬಿಎಂಪಿ ಕಚೇರಿ
ಬಿಬಿಎಂಪಿ ಕಚೇರಿ   

ಬೆಂಗಳೂರು: ಬಿಬಿಎಂಪಿಗೆ ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಬೇಕು ಎಂದು ಹೈಕೋರ್ಟ್‌ ಆದೇಶ ಹೊರಡಿಸಿದ ಬೆನ್ನಲ್ಲೇ ಸ್ಥಳೀಯ ಮಟ್ಟದ ಮುಂದಾಳುಗಳ ವಲಸೆಗೆ ಪೂರ್ವ ರಂಗ ಸಜ್ಜಾಗಿದೆ.

ಹೈಕೋರ್ಟ್‌ ಆದೇಶದ ಪ್ರಕಾರ ಇನ್ನು ಆರು ವಾರಗಳಲ್ಲೇ ಪಾಲಿಕೆ ಚುನಾವಣೆಗೆ ಅಧಿಸೂಚನೆ ಪ್ರಕಟವಾಗುತ್ತದೆಯೋ ಅಥವಾ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದರೆ ಚುನಾವಣೆ ಮತ್ತಷ್ಟು ಮುಂದಕ್ಕೆ ಹೋಗುತ್ತದೆಯೇ ಎಂಬ ಅನಿಶ್ಚಿತತೆ ಈಗಲೂ ಮುಂದುವರಿದಿದೆ. ಈ ನಡುವೆ, ರಾಜಕೀಯ ಪಕ್ಷಗಳು ಬೇರೆ ಪಕ್ಷಗಳ ಸ್ಥಳೀಯ ಪ್ರಮುಖರಿಗೆ ಗಾಳ ಹಾಕುವುದಕ್ಕೆ ಶುರು ಹಚ್ಚಿಕೊಂಡಿವೆ.

’ಸೂಕ್ತ ಸ್ಥಾನಮಾನ ಸಿಕ್ಕಿಲ್ಲ, ಬಿಜೆಪಿ ಸರ್ಕಾರ ಇರುವುದರಿಂದ ತಮ್ಮವರಿಗೆ ಗುತ್ತಿಗೆ ಕೊಡಿಸುವುದು ಸುಲಭವಾಗಬಹುದು, ಬಿಜೆಪಿಗೆ ಹೋದರೆ ಗೆಲ್ಲುವ ಸಾಧ್ಯತೆ ಹೆಚ್ಚು‘ ಎಂಬ ಕಾರಣಗಳಿಗಾಗಿ ಕಾಂಗ್ರೆಸ್‌ನ ಕೆಲ ತಳಹಂತದ ನಾಯಕರು ಪಕ್ಷಾಂತರಕ್ಕೆ ಮನಸ್ಸು ಮಾಡಿದ್ದಾರೆ.

ADVERTISEMENT

ಗೋವಿಂದರಾಜ ವಿಧಾನಸಭಾ ಕ್ಷೇತ್ರದ ರಾಜ್‌ಕುಮಾರ್‌ ವಾರ್ಡ್‌ನಲ್ಲಿ 2015ರಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದ ರೂಪಾ ಲಿಂಗೇಶ್ವರ್‌ ಈಗಾಗಲೇ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಈ ಕ್ಷೇತ್ರದ ಕಾಂಗ್ರೆಸ್‌ನ ಹಿರಿಯ ಮುಖಂಡ ಸೋಮಶೇಖರ ಗೌಡ ಅವರೂ ಪಕ್ಷದಲ್ಲಿ ಸೂಕ್ತ ಸ್ಥಾನ ಸಿಕ್ಕಿಲ್ಲ ಎಂಬ ಅಸಮಾಧಾನದಿಂದ ಒಂದು ಕಾಲನ್ನು ಪಕ್ಷದಿಂದ ಹೊರಗೆ ಇಟ್ಟಿದ್ದಾರೆ. ಕಾಂಗ್ರೆಸ್‌ ಯುವ ಘಟಕದಲ್ಲಿ ಈ ಹಿಂದೆ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದ ಅವರು ಪಕ್ಷದ ಕಿಸಾನ್‌ ಘಟಕದಲ್ಲಿ ಪದಾಧಿಕಾರಿ.

ನಾಯಕರ ಅಸಡ್ಡೆಗೆ ಮುನಿಸು: ‘ಕೋವಿಡ್‌ ನಿಯಂತ್ರಣದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇನ್ನೊಂದೆಡೆ, ಕಸ ನಿರ್ವಹಣೆ ಶುಲ್ಕ ವಿಧಿಸಿ ಅದನ್ನು ವಿದ್ಯುತ್‌ ಬಿಲ್‌ ಜೊತೆ ಸಂಗ್ರಹಿಸಲು ಬಿಬಿಎಂಪಿ ಸಿದ್ಧತೆ ನಡೆಸಿದೆ. ಆಸ್ತಿ ತೆರಿಗೆ ಹೆಚ್ಚಿಸುವುದಕ್ಕೂ ತಯಾರಿ ನಡೆದಿದೆ. ಕಟ್ಟಡ ಪರವಾನಗಿ ಶುಲ್ಕದ ಮೇಲೆ ಸೆಸ್‌ ಹಾಕುವ ಮೂಲಕವೂ ನಾಗರಿಕರ ಮೇಲೆ ಹೊರೆ ಹೆಚ್ಚಿಸಲಾಗಿದೆ. ಆದರೂ ನಾಯಕರು ಈ ಬಗ್ಗೆ ಗಟ್ಟಿ ಧ್ವನಿ ಎತ್ತುತ್ತಿಲ್ಲ. ಹೋರಾಟ ರೂಪಿಸುತ್ತಿಲ್ಲ’ ಎಂದು ಕಾಂಗ್ರೆಸ್‌ನಿಂದ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದ ಮುಖಂಡರೊಬ್ಬರು ಬೇಸರ ವ್ಯಕ್ತಪಡಿಸಿದರು.

‘ನಮ್ಮ ನಾಯಕರು ಉಪಚುನಾವಣೆ ಗುಂಗಿನಿಂದ ಇನ್ನೂ ಹೊರಗೆಬಂದಿಲ್ಲ. ಇನ್ನೊಂದೆಡೆ, ಬಿಜೆಪಿ ನಾಯಕರು ಬಿಬಿಎಂಪಿ ವ್ಯಾಪ್ತಿಯಲ್ಲಿ ತಮ್ಮ ಪಕ್ಷದ ವಿರುದ್ಧ ಜನಾಭಿಪ್ರಾಯ ಇದ್ದರೂ ಪಕ್ಷದ ನೆಲೆ ಗಟ್ಟಿ ಮಾಡಿಕೊಳ್ಳುವ ಎಲ್ಲ ಪ್ರಯತ್ನಗಳನ್ನುಮಾಡುತ್ತಿದ್ದಾರೆ. ನಮ್ಮವರು ಈಗ ನಿದ್ದೆ ಹೋಗಿ ಚುನಾವಣೆಯ ಕೊನೆಗಳಿಗೆಯಲ್ಲಿ ಹೋರಾಟ ನಡೆಸಿದರೆಪಾಲಿಕೆ ಚುಕ್ಕಾಣಿ ಹಿಡಿಯುವುದು ಕಷ್ಟವಿದೆ’ ಎಂದು ಅವರು ಅಭಿಪ್ರಾಯಪಟ್ಟರು.

ಬಿಜೆಪಿಯಲ್ಲೂ ಹೆಚ್ಚುತ್ತಿದೆ ಒಳಬೇಗುದಿ

ಇನ್ನೊಂದೆಡೆ, ಬಿಜೆಪಿಯಲ್ಲೂ ನಾಯಕರ ವಿರುದ್ಧ ಮುನಿಸಿಕೊಂಡವರ ಸಂಖ್ಯೆ ಹೆಚ್ಚುತ್ತಿದೆ. ವಾರ್ಡ್‌ ಮೀಸಲಾತಿ ಪ್ರಕಟಿಸುವಾಗ ತಮ್ಮ ಪಕ್ಷದ ಮುಖಂಡರೇ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂಬ ಕಾರಣಕ್ಕೆ ಬಿಜೆಪಿಯ ಕೆಲ ಸ್ಥಳೀಯ ನಾಯಕರು ಬೇಸರಗೊಂಡಿದ್ದಾರೆ.

‘ಬಿಬಿಎಂಪಿ ಆಡಳಿತಾವಧಿಯ ಕೊನೆಯ ವರ್ಷ ತಮ್ಮದೇ ಪಕ್ಷ ಚುಕ್ಕಾಣಿ ಹಿಡಿದರೂ ನಮ್ಮ ವಾರ್ಡ್‌ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಲಿಲ್ಲ’ ಎಂಬ ಅಸಮಾಧಾನವೂ ಕೆಲವರಲ್ಲಿ ಮನೆ ಮಾಡಿದೆ. ಬಿಜೆಪಿಯ ಶಾಸಕರು ಬಿಬಿಎಂಪಿ ಚುನಾವಣೆ ಮುಂದೂಡಲು ಇನ್ನಿಲ್ಲದ ಸಾಹಸ ಮಾಡುತ್ತಿರುವುದರಿಂದಲೂ ಪಾಲಿಕೆಯ ಮಾಜಿ ಸದಸ್ಯರು ಬೇಸತ್ತಿದ್ದಾರೆ.

‘2015ರಲ್ಲಿ ನಮ್ಮ ಪಕ್ಷದ ಮುಖಂಡರೇ ನ್ಯಾಯಾಲಯದ ಮೊರೆ ಹೋಗಿ ಬಿಬಿಎಂಪಿ ಚುನಾವಣೆ ಮುಂದೂಡುವ ಸರ್ಕಾರದ ಪ್ರಯತ್ನವನ್ನು ವಿಫಲಗೊಳಿಸಿದ್ದರು. ಈಗ ನಮ್ಮದೇ ಸರ್ಕಾರವಿರುವಾಗ ಅದೇ ಚಾಳಿ ಮುಂದುವರಿಸುವುದು ಸರಿಯಲ್ಲ. ನಮ್ಮದು ವಿಭಿನ್ನ ಪಕ್ಷ, ಶಿಸ್ತಿನ ಪಕ್ಷ ಎಂದು ಜನರ ಮುಂದೆ ಬಾಯಿ ಮಾತಿಗೆ ಹೇಳಿಕೊಂಡರೇ ಸಾಕೇ. ಅದಕ್ಕೆ ತಕ್ಕಂತೆ ನಡೆದುಕೊಳ್ಳಬೇಡವೇ’ ಎಂದು ಬಿಜೆಪಿಯ ಸ್ಥಳೀಯ ನಾಯಕರೊಬ್ಬರು ಬೇಸರ ವ್ಯಕ್ತಪಡಿಸಿದರು.

ಆರ್‌.ಆರ್‌.ನಗರ, ಕೆ.ಆರ್‌.ಪುರ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಶಾಸಕರ ಜೊತೆ ಕಾಂಗ್ರೆಸ್‌ನ ಅನೇಕ ಮಾಜಿ ಕಾರ್ಪೊರೇಟರ್‌ಗಳು ಬಿಜೆಪಿಗೆ ವಲಸೆ ಬಂದಿದ್ದಾರೆ. ಅವರು ಪ್ರತಿನಿಧಿಸುತ್ತಿದ್ದ ವಾರ್ಡ್‌ಗಳಲ್ಲಿ ಬಿಬಿಎಂಪಿ ಚುನಾವಣೆಯಲ್ಲಿ ಟಿಕೆಟ್‌ ಆಕಾಂಕ್ಷಿಗಳಾಗಿದ್ದ ಬಿಜೆಪಿಯ ಸ್ಥಳೀಯ ನಾಯಕರು ಇದರಿಂದಾಗಿ ಟಿಕೆಟ್‌ ಕೈತಪ್ಪುವ ಆತಂಕ ಎದುರಿಸುತ್ತಿದ್ದಾರೆ. ಅಂತಹ ಕೆಲ ನಾಯಕರು ಕಾಂಗ್ರೆಸ್‌ ಕದ ತಟ್ಟಲು ತೆರೆಮರೆಯಲ್ಲಿ ಸಿದ್ಧತೆ ನಡೆಸಿದ್ದಾರೆ.

ವಾರ್ಡ್ ರಚನೆ ಬಳಿಕವೇ ಚುನಾವಣೆ: ಅಶೋಕ

‘ವಾರ್ಡ್‌ಗಳ ಸಂಖ್ಯೆಯನ್ನು243ಕ್ಕೆ ಹೆಚ್ಚಿಸಿ ಮರುವಿಂಗಡಣೆ ಮಾಡಿದ ಬಳಿಕವೇ ಬಿಬಿಎಂಪಿ ಚುನಾವಣೆ ನಡೆಸುವ ಇಚ್ಛೆಯನ್ನು ಸರ್ಕಾರ ಹೊಂದಿದೆ. ಈ ಸಲುವಾಗಿ ವಿಧಾನ ಮಂಡಲದ ಅಧಿವೇಶನದಲ್ಲಿ ಪ್ರತ್ಯೇಕ ಮಸೂದೆ ಮಂಡನೆಗೂ ಸಿದ್ಧತೆ ನಡೆದಿದೆ’ ಎಂದು ಕಂದಾಯ ಸಚಿವ ಆರ್‌.ಅಶೋಕ ತಿಳಿಸಿದರು.

ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು, ‘ಅಧಿವೇಶನದಲ್ಲಿ ಬಿಬಿಎಂಪಿ ಮಸೂದೆ ಮಂಡಿಸಲಿದ್ದೇವೆ. ಈ ಮಸೂದೆ ಅಂಗೀಕಾರಗೊಂಡರೆ, ಬಿಬಿಎಂಪಿ ಚುನಾವಣೆ ಸಂಬಂಧ ಹೈಕೋರ್ಟ್‌ ಇತ್ತೀಚೆಗೆ ನೀಡಿರುವ ಆದೇಶವನ್ನು ಪ್ರಶ್ನಿಸಿ ಸರ್ಕಾರವು ಸುಪ್ರೀಂ ಕೋರ್ಟ್‌ ಮೊರೆ ಹೋಗುವ ಪ್ರಮೇಯವೇ ಎದುರಾಗದು’ ಎಂದರು.

ಈಗಿರುವ 198 ವಾರ್ಡ್‌ಗಳ ಸಂಖ್ಯೆಯನ್ನು ಹಾಗೆಯೇ ಉಳಿಸಿಕೊಂಡು ಬಿಬಿಎಂಪಿಗೆ ಶೀಘ್ರವೇ ಚುನಾವಣೆ ನಡೆಸಬೇಕು. ಆರು ವಾರಗಳ ಒಳಗೆ ಈ ಕುರಿತು ಅಧಿಸೂಚನೆ ಹೊರಡಿಸಬೇಕು ಎಂದು ಹೈಕೋರ್ಟ್‌ ಆದೇಶ ಮಾಡಿತ್ತು.

‘ವಾರ್ಡ್‌ಗಳ ಸಂಖ್ಯೆಯನ್ನು 243ಕ್ಕೆ ಹೆಚ್ಚಿಸುವ ಕುರಿತು ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿದ್ದೇವೆ. ಬೆಂಗಳೂರಿಗೆ ಪ್ರತ್ಯೇಕ ಕಾಯ್ದೆ ರೂಪಿಸುವ ಸಲುವಾಗಿ ರಚಿಸಲಾಗಿದ್ದ ವಿಧಾನ ಮಂಡಲದ ಜಂಟಿ ಸಲಹಾ ಸಮಿತಿಯೇ ಈ ಮಸೂದೆಯನ್ನು ರೂಪಿಸಿದೆ. ವಾರ್ಡ್‌ಗಳ ಸಂಖ್ಯೆ ಹೆಚ್ಚಿಸುವುದರ ಜೊತೆ ಮೇಯರ್‌ ಅಧಿಕಾರಾವಧಿಯನ್ನು ಎರಡೂವರೆ ವರ್ಷಗಳಿಗೆ ಹೆಚ್ಚಿಸುವ ಪ್ರಸ್ತಾಪವೂ ಇದೆ. ವಲಯಗಳ ಸಂಖ್ಯೆಯನ್ನು 12ಕ್ಕೆ ಅಥವಾ 15ಕ್ಕೆ ಹೆಚ್ಚಿಸುವ ಅಂಶವೂ ಮಸೂದೆಯಲ್ಲಿದೆ’ ಎಂದು ಅವರು ತಿಳಿಸಿದರು.

ಹೊಸ ಪಕ್ಷಗಳಿಂದ ಬಿರುಸಿನ ತಾಲೀಮು

ಇದೇ ಮೊದಲ ಬಾರಿಗೆ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಲು ಆಮ್‌ ಆದ್ಮಿ ಪಾರ್ಟಿ, ಬೆಂಗಳೂರು ನವನಿರ್ಮಾಣ ಪಕ್ಷ, ಕರ್ನಾಟಕ ರಾಷ್ಟ್ರ ಸಮಿತಿ ಮೊದಲಾದ ಪಕ್ಷಗಳು ಸಿದ್ಧತೆ ನಡೆಸಿವೆ.

ಜನರನ್ನು ಬಾಧಿಸುವ ತಳ ಹಂತದ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಬಿಬಿಎಂಪಿ ಹಾಗೂ ಸರ್ಕಾರದ ವಿರುದ್ಧ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುತ್ತಿವೆ. ತಳಮಟ್ಟದಲ್ಲಿ ವರ್ಚಸ್ಸು ಹೊಂದಿರುವ ಹಾಗೂ ನಾಗರಿಕ ಹೋರಾಟಗಳಲ್ಲಿ ಸಕ್ರಿಯವಾಗಿರುವ ಮುಖಂಡರನ್ನು ತಮ್ಮ ಪಕ್ಷಗಳತ್ತ ಸೆಳೆಯಲು ಕಾರ್ಯತಂತ್ರ ರೂಪಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.