ADVERTISEMENT

ಲಂಚ ಪಡೆದ ಆರೋಪ | ಬಿಬಿಎಂಪಿ ಆರೋಗ್ಯ ನಿರೀಕ್ಷಕನ ಬಂಧನ

ಉದ್ಯಮ ಪರವಾನಗಿ ನವೀಕರಣಕ್ಕೆ ₹ 18 ಸಾವಿರ ಲಂಚ ಪಡೆದ ಆರೋಪ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2023, 23:00 IST
Last Updated 4 ಮಾರ್ಚ್ 2023, 23:00 IST
ರಾಮಯ್ಯ
ರಾಮಯ್ಯ   

ಬೆಂಗಳೂರು: ವೆಲ್‌ನೆಸ್‌ ಸ್ಪಾ ಒಂದರ ಉದ್ಯಮ ಪರವಾನಗಿ ನವೀಕರಣಕ್ಕೆ₹ 18,000 ಲಂಚ ಪಡೆದ ಬಿಬಿಎಂಪಿ ಸಿ.ವಿ. ರಾಮನ್‌ ನಗರ ವಾರ್ಡ್‌ನ (ವಾರ್ಡ್‌ ಸಂಖ್ಯೆ–58) ಆರೋಗ್ಯ ನಿರೀಕ್ಷಕ ರಾಮಯ್ಯ ಅವರನ್ನು ಲೋಕಾಯುಕ್ತ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಇಂದಿರಾನಗರದಲ್ಲಿರುವ ವೆಲ್‌ನೆಸ್‌ ಸ್ಪಾ ಒಂದರ ಉದ್ಯಮ ಪರವಾನಗಿ ಅವಧಿ ಮುಕ್ತಾಯಗೊಂಡಿತ್ತು. ಪರವಾನಗಿ ನವೀಕರಣಕ್ಕೆ ಸುಬ್ರಮಣ್ಯ ಎಂಬುವವರು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಲೇವಾರಿ ಕುರಿತು ಆರೋಗ್ಯ ನಿರೀಕ್ಷಕರನ್ನು ಸಂಪರ್ಕಿಸಿದಾಗ, ಪರವಾನಗಿ ನವೀಕರಣ ಪ್ರಕ್ರಿಯೆ ಪೂರ್ಣಗೊಳಿಸಲು ₹ 20,000 ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ನಂತರ ಚೌಕಾಸಿ ನಡೆಸಿದಾಗ, ₹ 18,000 ಕೊಟ್ಟರೆ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ತಿಳಿಸಿದ್ದರು.

ಆರೋಪಿಯು ಲಂಚಕ್ಕೆ ಬೇಡಿಕೆ ಇಟ್ಟಿರುವ ಕುರಿತು ಅರ್ಜಿದಾರರು, ಲೋಕಾಯುಕ್ತದ ಬೆಂಗಳೂರು ನಗರ ಪೊಲೀಸ್‌ ಘಟಕಕ್ಕೆ ದೂರು ನೀಡಿದ್ದರು. ಸಿ.ವಿ. ರಾಮನ್‌ ನಗರ ಬಿಬಿಎಂಪಿ ಕಚೇರಿ ಸಮೀಪದಲ್ಲಿರುವ ಬಿಎಸ್‌ಎನ್‌ಎಲ್‌ ಕಚೇರಿ ಎದುರಿನಲ್ಲಿ ಸುಬ್ರಮಣ್ಯ ಅವರನ್ನು ಶನಿವಾರ ಭೇಟಿಮಾಡಿದ ರಾಮಯ್ಯ, ₹ 18,000 ಲಂಚದ ಹಣ ಪಡೆದುಕೊಂಡರು. ತಕ್ಷಣ ದಾಳಿ ಮಾಡಿದ ಲೋಕಾಯುಕ್ತ ಪೊಲೀಸರು ಆರೋಪಿಯನ್ನು ಬಂಧಿಸಿದರು ಎಂದು ಲೋಕಾಯುಕ್ತದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಲೋಕಾಯುಕ್ತದ ಬೆಂಗಳೂರು ನಗರ ಎಸ್‌ಪಿ ಕೆ.ವಿ. ಅಶೋಕ್‌ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಉಮಾದೇವಿ ಆರ್‌., ಇನ್‌ಸ್ಪೆಕ್ಟರ್‌ ಶ್ರೀಕಾಂತ್‌ ಮತ್ತು ತಂಡ ಈ ಕಾರ್ಯಾಚರಣೆ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.