ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ 45 ಸಾವಿರಕ್ಕೂ ಹೆಚ್ಚು ಆಸ್ತಿಗಳಿಗೆ ಅಕ್ರಮವಾಗಿ ‘ಎ ಖಾತಾ’ ನೀಡಿರುವ ಪ್ರಕರಣಗಳನ್ನು ಪತ್ತೆಹಚ್ಚಿ ಒಂದೂವರೆ ವರ್ಷವಾದರೂ ಎಂಟೂ ವಲಯ ಆಯುಕ್ತರು ಯಾರ ವಿರುದ್ಧವೂ ಶಿಸ್ತು ಕ್ರಮ ಕೈಗೊಂಡಿಲ್ಲ.
ಬಿ ಖಾತಾಗೆ ಅರ್ಹವಾಗಿರುವ ಆಸ್ತಿಗಳ ಮಾಲೀಕರಿಂದ ಅಕ್ರಮವಾಗಿ ಅಭಿವೃದ್ಧಿ ಶುಲ್ಕ ಕಟ್ಟಿಸಿಕೊಂಡು, ‘ಐಎಫ್‌ಎಂಎಸ್’ ತಂತ್ರಾಂಶದ ‘ಆರ್ ಕೋಡ್ 130’ ಬಳಸಿ ‘ಎ’ ಖಾತಾ ನೀಡಿರುವುದು ತನಿಖೆಯಲ್ಲಿ ಪತ್ತೆಯಾಗಿತ್ತು.
ಪ್ರಕರಣದ ಕುರಿತು ತನಿಖೆ ನಡೆಸಿದ್ದ ಅಂದಿನ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಂ ರಾಯಪುರ, ‘2015ರಿಂದ 2023ರವರೆಗೆ ಒಟ್ಟು 45,133 ಪ್ರಕರಣಗಳಲ್ಲಿ ₹898.70 ಕೋಟಿ ಪಾವತಿಸಿಕೊಳ್ಳಲಾಗಿದೆ. ಇವುಗಳಲ್ಲಿ ಬಹುತೇಕ ಪ್ರಕರಣಗಳು ಅಕ್ರಮ’ ಎಂದು 2023ರ ಜುಲೈನಲ್ಲಿ ವರದಿ ನೀಡಿದ್ದರು.
ಸರ್ಕಾರದ ಆದೇಶದಂತೆ, ಕೊಳೆಗೇರಿ ಸೇರಿದಂತೆ ಕೆಲವು ಪ್ರದೇಶಗಳ ಆಸ್ತಿಗಳಿಗೆ ಅಭಿವೃದ್ಧಿ ಶುಲ್ಕ ಕಟ್ಟಿಸಿಕೊಂಡು ಎ ಖಾತಾ ನೀಡಲು ‘ಆರ್ ಕೋಡ್– 130’ ಬಳಸಲಾಗುತ್ತದೆ. ಈ ಕೋಡ್ ಅನ್ನು ದುರ್ಬಳಕೆ ಮಾಡಿಕೊಂಡಿರುವ ಎಆರ್‌ಒಗಳು, ಬಿ ಖಾತಾ ಹೊಂದಬೇಕಿರುವ ಆಸ್ತಿಗಳಿಗೆ ಎ ಖಾತಾ ನೀಡಿದ್ದಾರೆ. ಭೂ ಪರಿವರ್ತನೆಯಾಗದ ನಿವೇಶನಗಳಿಗೆ ಅಭಿವೃದ್ಧಿ ಶುಲ್ಕ ಪಾವತಿಸಿಕೊಳ್ಳಲು ಅವಕಾಶವಿಲ್ಲ. ಅಂತಹ ಆಸ್ತಿಗಳೆಲ್ಲವೂ ಬಿ ಖಾತಾ ಅಥವಾ ವಹಿಯಲ್ಲಿ ದಾಖಲಾಗಿರುತ್ತವೆ. ಇಂತಹ ಪ್ರಕರಣಗಳಲ್ಲೂ ಎ ಖಾತಾ ನೀಡಿ ಅಕ್ರಮ ಎಸಗಲಾಗಿದೆ. ಅಂತಹ ಎಲ್ಲ ಅಧಿಕಾರಿಗಳ ವಿರುದ್ಧ ವಲಯ ಆಯುಕ್ತರು ಕ್ರಮಕೈಗೊಂಡು ವರದಿ ಸಲ್ಲಿಸಬೇಕು ಎಂದು ಕಳೆದ ವರ್ಷವೇ ಸೂಚಿಸಲಾಗಿತ್ತು.
‘ಅಕ್ರಮವಾಗಿ ಎ ಖಾತಾ ಪಡೆಯಲು ಅಭಿವೃದ್ಧಿ ಶುಲ್ಕವನ್ನು ಪಾವತಿಸಿರುವ ನಿವೇಶನಗಳ ಮಾಲೀಕರು ತಪ್ಪೊಪ್ಪಿಗೆ ಅರ್ಜಿ ನೀಡಿದರೆ ಶುಲ್ಕವನ್ನು ಹಿಂದಿರುಗಿಸಲಾಗುತ್ತದೆ. ಇಲ್ಲದಿದ್ದರೆ ಆ ಮೊತ್ತ ಪಾಲಿಕೆಯಲ್ಲೇ ಉಳಿಯುತ್ತದೆ. ಅಕ್ರಮ ಎ ಖಾತಾವನ್ನು ರದ್ದುಪಡಿಸಿ, ಆ ಎಲ್ಲ ಆಸ್ತಿಗಳನ್ನು ಬಿ ಖಾತಾ ಪಟ್ಟಿಗೆ ವರ್ಗಾಯಿಸಲಾಗುತ್ತದೆ’ ಎಂದೂ ಹೇಳಲಾಗಿತ್ತು.
ಕ್ರಮ ಕೈಗೊಳ್ಳಲು ವಲಯ ಆಯುಕ್ತರಿಗೆ ಸೂಚನೆ ನೀಡಿದ ನಂತರ ಜಯರಾಂ ರಾಯಪುರ ವರ್ಗಾವಣೆಯಾದರು. ನಂತರ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ನೇತೃತ್ವದಲ್ಲಿ ಸಮಿತಿ ರಚಿಸಿ, ಈ ಪ್ರಕರಣಗಳ ಬಗ್ಗೆ ಕ್ರಮ ಕೈಗೊಳ್ಳಲು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಆದೇಶಿಸಿದ್ದರು. ಇಷ್ಟಾದರೂ ಈವರೆಗೆ ಯಾವುದೇ ಕ್ರಮವಾಗಿಲ್ಲ.
‘ಅಕ್ರಮ ‘ಎ’ ಖಾತಾಗಳ ಬಗ್ಗೆ ಈಗಾಗಲೇ ತನಿಖೆ ನಡೆದಿದೆ. ಅಕ್ರಮದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬುದರ ಕುರಿತು ಹಣಕಾಸು ವಿಭಾಗದಲ್ಲಿ ಹಿಂದೆ ಇದ್ದ ವಿಶೇಷ ಆಯುಕ್ತ ಜಯರಾಂ ಅವರೇ ವರದಿ ನೀಡಿದ್ದಾರೆ. ಅದರಂತೆ ವಲಯ ಆಯುಕ್ತರು ಕ್ರಮ ಕೈಗೊಳ್ಳಬೇಕು. ತನಿಖೆಗೆ ಹೊಸ ಸಮಿತಿ ರಚನೆಯಾಗಿದ್ದರೂ ಹೊಸ ಕ್ರಮ ತೆಗೆದುಕೊಳ್ಳುವಂತಹದ್ದೇನೂ ಇಲ್ಲ. ಆದ್ದರಿಂದ ಹಿಂದಿನ ಆದೇಶದಂತೆಯೇ ವಲಯ ಆಯುಕ್ತರು ಶಿಸ್ತು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಮತ್ತೊಮ್ಮೆ ಅವರಿಗೆ ನೆನಪಿಸಲಾಗುತ್ತದೆ’ ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.