ADVERTISEMENT

ಪೌರಕಾರ್ಮಿಕರಿಗೆ ಅವಮಾನ; ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2019, 19:45 IST
Last Updated 9 ಜುಲೈ 2019, 19:45 IST
ವೆಂಗಯ್ಯಕೆರೆಯ ಪ್ರವೇಶ ದ್ವಾರದ ಎದುರು ಪೌರಕಾರ್ಮಿಕರು ಮಂಗಳವಾರ ಪ್ರತಿಭಟನೆ ನಡೆಸಿದರು
ವೆಂಗಯ್ಯಕೆರೆಯ ಪ್ರವೇಶ ದ್ವಾರದ ಎದುರು ಪೌರಕಾರ್ಮಿಕರು ಮಂಗಳವಾರ ಪ್ರತಿಭಟನೆ ನಡೆಸಿದರು   

ಬೆಂಗಳೂರು: ‘ಪೌರಕಾರ್ಮಿಕರಿಗೆ ಅವಮಾನ ಮಾಡುವ ರೀತಿಯಲ್ಲಿ ಅರಣ್ಯ ಇಲಾಖೆ ಅಧಿಕಾರಿ ಹೇಳಿಕೆ ನೀಡಿದ್ದಾರೆ’ ಎಂದು ಆರೋಪಿಸಿ ಪೌರಕಾರ್ಮಿಕರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಕೆ.ಆರ್. ಪುರ ಸಮೀಪದ ವೆಂಗಯ್ಯಕೆರೆಯ ಪ್ರವೇಶ ದ್ವಾರ ಎದುರು ಕುಳಿತು ಪ್ರತಿಭಟನೆ ನಡೆಸಿದ್ದ ಪೌರ ಕಾರ್ಮಿಕರು, ’ಅರಣ್ಯ ಅಧಿಕಾರಿ ತಮ್ಮ ಹೇಳಿಕೆ ಹಿಂಪಡೆದು ಕ್ಷಮೆ ಕೇಳಬೇಕು’ ಎಂದು ಒತ್ತಾಯಿಸಿದರು.

‘ಕೆರೆ ಸಮೀಪದಲ್ಲೇ ಅರಣ್ಯ ಇಲಾಖೆಗೆ ಸೇರಿದ್ದ ಉದ್ಯಾನವಿದೆ. ಅದರ ಬಳಿಯೇ ಕಸ ಸಂಗ್ರಹ ಯಾರ್ಡ್‌ ಇದೆ. ಮನೆಗಳಿಂದ ಸಂಗ್ರಹಿಸಿದ್ದ ಕಸವನ್ನು ಪೌರಕಾರ್ಮಿಕರು ಯಾರ್ಡ್‌ಗೆ ತಂದು ಲಾರಿಗಳಿಗೆ ತುಂಬಿಸುತ್ತಾರೆ’ ಎಂದು ಪ್ರತಿಭಟನಾಕಾರರು ಹೇಳಿದರು.

ADVERTISEMENT

‘ಅರಣ್ಯ ಇಲಾಖೆಯ ಎಸಿಎಫ್‌ ಪಿ.ಎನ್‌. ಹರ್ಷವರ್ಧನ್ ಅವರು ಸೋಮವಾರ ಉದ್ಯಾನಕ್ಕೆ ಭೇಟಿ ನೀಡಿದ್ದರು. ಕಸದ ರಾಶಿ ಕಂಡು ಕೆಳ ಹಂತದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಅದೇ ವೇಳೆಯೇ ಪೌರಕಾರ್ಮಿಕರ ಗೌರವಕ್ಕೆ ಧಕ್ಕೆ ಆಗುವ ಹೇಳಿಕೆಯನ್ನು ನೀಡಿದ್ದರು’ ಎಂದು ಪ್ರತಿಭಟನಾಕಾರರು ದೂರಿದರು.

ತಪ್ಪಾಗಿ ಅರ್ಥೈಸಲಾಗಿದೆ: ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಹರ್ಷವರ್ಧನ್, ‘ಉದ್ಯಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೆ. ಉದ್ಯಾನದ ಅಭಿವೃದ್ಧಿ ಬಗ್ಗೆ ಸಿಬ್ಬಂದಿ ಜೊತೆ ಮಾತನಾಡಿದ್ದೆ. ಅದನ್ನು ಬಿಟ್ಟು ಪೌರಕಾರ್ಮಿಕರ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ’ ಎಂದು ಹೇಳಿದರು.

‘ಸಿಬ್ಬಂದಿ ಜೊತೆ ಮಾತನಾಡಿದ್ದನ್ನೇ ತಪ್ಪಾಗಿ ಅರ್ಥೈಸಿಕೊಂಡ ಕೆಲವರು, ಅಪಪ್ರಚಾರ ಮಾಡಿದ್ದರಿಂದ ಈ ರೀತಿಯಾಗಿದೆ. ದಯವಿಟ್ಟು ಪ್ರತಿಭಟನೆ ಕೈಬಿಡಿ’ ಎಂದು ಮನವಿ ಮಾಡಿದರು. ಅದಕ್ಕೆ ಪ್ರತಿಭಟನಾಕಾರು ಒಪ್ಪಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.