ಬೆಂಗಳೂರು: ಮಹದೇವಪುರ ವಲಯದಲ್ಲಿರುವ ಕೆಳಗಿನ ಅಂಬಲಿಪುರ ಕೆರೆಯ ಸುತ್ತಲಿನ ಐದು ಅಪಾರ್ಟ್‌ಮೆಂಟ್‌ನವರು ಸಾರ್ವಜನಿಕರ ಪ್ರವೇಶಕ್ಕೆ ಇದ್ದ ಗೇಟ್‌ಗಳನ್ನು ಮುಚ್ಚಿದ್ದಾರೆ.
ನಾಗರಿಕರಿಗೆ ಮುಕ್ತ ಪ್ರವೇಶ ಇಲ್ಲದಿದ್ದರೂ ಕೆರೆಯ ಸುತ್ತಲಿರುವ ಅಪಾರ್ಟ್‌ಮೆಂಟ್‌ಗಳು ಖಾಸಗಿ ಗೇಟ್‌ಗಳನ್ನು ಹೊಂದಿದ್ದು, ಅಲ್ಲಿನ ನಿವಾಸಿಗಳು ಕೆರೆಯ ಅಂಗಳಕ್ಕೆ ನೇರ ಪ್ರವೇಶ ಪಡೆಯುತ್ತಿದ್ದಾರೆ.
‘ರಾಜಕಾಲುವೆಯೇ ಕೆಳಗಿನ ಅಂಬಲಿಪುರ ಕೆರೆಗಿರುವ ‘ಸಾರ್ವಜನಿಕರ ಹಾದಿ’ಯಾಗಿದ್ದು, ನಗರ ಯೋಜನೆ ಬಗ್ಗೆ ಅಧಿಕಾರಿಗಳಿಗೆ ಇರುವ ನಿರ್ಲಕ್ಷ್ಯವನ್ನು ಸ್ಥಳೀಯರು ದೂರುತ್ತಿದ್ದಾರೆ.
ಸರ್ಜಾಪುರ ಮತ್ತು ಹರಳೂರು ರಸ್ತೆ ಸಮೀಪವಿರುವ ಇಬ್ಲೂರು ಜಂಕ್ಷನ್ ಬಳಿಯಿರುವ, ಸುಮಾರು ಏಳು ಎಕರೆ ವಿಸ್ತೀರ್ಣದಲ್ಲಿರುವ ಕೆಳಗಿನ ಅಂಬಲಿಪುರ ಕೆರೆಯಲ್ಲಿ ಹಲವು ಪ್ರಭೇದದ ಪಕ್ಷಿಗಳಿವೆ. ಕೆರೆ ಅಂಗಳದಲ್ಲಿ ನಿರ್ಮಿಸಿರುವ ಪಾದಚಾರಿ ಮಾರ್ಗದ ಸುತ್ತ ಹಲವು ಜಾತಿಯ ಮರಗಳಿವೆ.
ಕೆಳಗಿನ ಅಂಬಲಿಪುರ ಕೆರೆಯ ಒಂದು ಬದಿಯಲ್ಲಿ 600 ಎಕರೆ ಮಿಲಿಟರಿ ಭೂಮಿ ಇದೆ. ಮತ್ತೊಂದು ಬದಿಯಲ್ಲಿ, ಮಂತ್ರಿ ಫ್ಲೋರಾ, ಟ್ರಿನಿಟಿ ಎಕ್ರೆಸ್ ಆ್ಯಂಡ್ ವುಡ್ಸ್, ಎಸ್‌ಜೆಆರ್ ರೆಡ್‌ವುಡ್, ಎಸ್‌ಜೆಆರ್ ವಿಸ್ತಾ ಮತ್ತು ಲಾ ಪಲಜ್ಹೋ ಅಪಾರ್ಟ್‌ಮೆಂಟ್‌ಗಳಿವೆ. ಕೆರೆಯನ್ನು ತಲುಪಬೇಕಾದರೆ ಈ ಐದು ಅಪಾರ್ಟ್‌ಮೆಂಟ್‌ಗಳ ರಸ್ತೆಯಿಂದ ಮಾತ್ರ ಸಾಧ್ಯವಿದೆ.
ಅಪಾರ್ಟ್‌ಮೆಂಟ್‌ಗಳ ರಸ್ತೆಯ ಮೂಲಕ ಪತ್ರಿಕೆಯ ವರದಿಗಾರರು ಕೆರೆಯ ಅಂಗಳಕ್ಕೆ ಪ್ರವೇಶಿಸಲು ಪ್ರಯತ್ನಿಸಿದಾಗ ಭದ್ರತಾ ಸಿಬ್ಬಂದಿ ಅದಕ್ಕೆ ಅವಕಾಶ ನೀಡಲಿಲ್ಲ. ‘ಕೆರೆಗೆ ದಾರಿಯೇ ಇಲ್ಲ’ ಎಂದು ಹೇಳಿದರು. ಟ್ರಿನಿಟಿ ಅಪಾರ್ಟ್‌ಮೆಂಟ್‌ನ ಭದ್ರತಾ ಸಿಬ್ಬಂದಿ ಮೊದಲು ಪ್ರವೇಶಕ್ಕೆ ನಿರಾಕರಿಸಿದರೂ, ನಂತರ ಸ್ಥಳೀಯ ನಿವಾಸಿಗಳ ಮಧ್ಯಪ್ರವೇಶದಿಂದ ಅವಕಾಶ ಮಾಡಿಕೊಟ್ಟರು.
‘ಕೆರೆ ಇರುವ ಬಗ್ಗೆ ಇಲ್ಲಿ ಫಲಕಗಳಿಲ್ಲ. ಬಿಬಿಎಂಪಿಯವರು ಅಭಿವೃದ್ಧಿಪಡಿಸಿದ್ದರೂ ಅಪಾರ್ಟ್‌ಮೆಂಟ್ ನಿವಾಸಿಗಳು ಇದನ್ನು ಖಾಸಗಿ ಕೆರೆ ಎಂದೇ ಭಾವಿಸಿದ್ದಾರೆ. ಕೆರೆಗೆ ದಾರಿ ಕಲ್ಪಿಸುವ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದರೂ ಕಟ್ಟಡ ನಕ್ಷೆ ನೀಡಲಾಗಿದೆ’ ಎಂದು ಸ್ಥಳೀಯರು ದೂರಿದರು.
‘ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಸೆಪ್ಟೆಂಬರ್‌ನಲ್ಲಿ ಒತ್ತುವರಿಯನ್ನು ಗುರುತಿಸಿದ್ದಾರೆ. ಆದರೆ ಸರ್ವೆ ಮಾಡುವ ಕಾರ್ಯವನ್ನು ಮುಂದೂಡುತ್ತಲೇ ಬಂದಿದ್ದಾರೆ. ಹಲವು ಬಾರಿ ದೂರು ನೀಡಿದ್ದರೂ ಸರ್ವೆ ಮಾಡಿಲ್ಲ. ಕೆಳಗಿನ ಅಂಬಲಿಪುರ ಕೆರೆಯ ಕೋಡಿ ಇಬ್ಲೂರು ಕೆರೆಗೆ ತಲುಪುತ್ತದೆ. ಆದರೆ ಅದೂ ಒತ್ತುವರಿಯಾಗಿದೆ. ಇದರಿಂದ ಸರ್ಜಾಪುರ ರಸ್ತೆ ಹಾಗೂ ಕೆಲವು ಅಪಾರ್ಟ್‌ಮೆಂಟ್‌ಗಳಿಗೆ ಮಳೆ ನೀರು ನುಗ್ಗುತ್ತಿದೆ’ ಎಂದು ಸ್ಥಳೀಯ ನಿವಾಸಿ ಆರೋಪಿಸಿದರು.
ಕೆಳಗಿನ ಅಂಬಲಿಪುರ ಕೆರೆಗೆ ದಾರಿ ಇಲ್ಲದಿದ್ದರೂ ಬಿಬಿಎಂಪಿ 2025–26ನೇ ಸಾಲಿನಲ್ಲಿ ₹1 ಕೋಟಿಯನ್ನು ಅಭಿವೃದ್ಧಿ ಕಾಮಗಾರಿಗಳಿಗೆ ಮೀಸಲಿರಿಸಿದೆ.
ಕೆರೆ ಸುತ್ತಲೂ ಅಪಾರ್ಟ್‌ಮೆಂಟ್‌ಗಳು ಅಪಾರ್ಟ್‌ಮೆಂಟ್‌ಗಳಿಗೆ ‘ಖಾಸಗಿ ಸೌಲಭ್ಯ’ವಾಗಿರುವ ಕೆರೆ ಒತ್ತುವರಿಯನ್ನು ತೆರವು ಮಾಡದ ಕಂದಾಯ ಇಲಾಖೆ
‘ಚರಂಡಿ ಮೇಲೆ ರಸ್ತೆ’
‘ಸ್ಥಳೀಯರು ದೂರು ನೀಡಿದ ನಂತರ ಸ್ಥಳ ಪರಿಶೀಲನೆ ಮಾಡಲಾಯಿತು. ರಾಜಕಾಲುವೆ ವಿಭಾಗಕ್ಕೆ ಈ ವಿಷಯವನ್ನು ಹಸ್ತಾಂತರಿಸಲಾಯಿತು. ಸರ್ಜಾಪುರ ರಸ್ತೆಯಿಂದ ಚರಂಡಿಯ ಮೇಲ್ಭಾಗದಲ್ಲಿ ದಾರಿ ಕಲ್ಪಿಸಲು ಸಾಧ್ಯವಿದೆ’ ಎಂದು ಬಿಬಿಎಂಪಿ ಕೆರೆಗಳ ವಿಭಾಗದ ಮುಖ್ಯ ಎಂಜಿನಿಯರ್ ವಿಜಯಕುಮಾರ್ ಹರಿದಾಸ್ ತಿಳಿಸಿದರು. ‘ಗೇಟೆಡ್ ಕಮ್ಯುನಿಟಿಯವರು ತಮ್ಮ ಖಾಸಗಿ ರಸ್ತೆಗಳ ಮೂಲಕ ಕೆರೆಗೆ ಹೋಗಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಬಹುದು’ ಎಂದು ಎಂಜಿನಿಯರ್‌ರೊಬ್ಬರು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.