ADVERTISEMENT

ಬಿಬಿಎಂಪಿ: ಆಸ್ತಿ ತೆರಿಗೆ ಪಾವತಿಗೆ ಸಾಲು

ಒಟಿಎಸ್‌ ಯೋಜನೆ‌ ಕೊನೆ ದಿನ ಹೆಚ್ಚಾದ ಸರ್ವರ್‌ ಸಮಸ್ಯೆ; ಅವಧಿ ವಿಸ್ತರಿಸಲು ಮತ್ತೆ ಮನವಿ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2024, 0:15 IST
Last Updated 1 ಆಗಸ್ಟ್ 2024, 0:15 IST
ಎಚ್‌ಬಿಆರ್‌ ಲೇಔಟ್‌ 2ನೇ ಬ್ಲಾಕ್‌ನಲ್ಲಿರುವ ಬಿಬಿಎಂಪಿ ಕಂದಾಯ ಕಚೇರಿಯಲ್ಲಿ ಬುಧವಾರ ರಾತ್ರಿ 9ರ ವೇಳೆಯಲ್ಲೂ ತೆರಿಗೆ ಪಾವತಿಗೆ ಕಾಯುತ್ತಿದ್ದ ನಾಗರಿಕರು
ಎಚ್‌ಬಿಆರ್‌ ಲೇಔಟ್‌ 2ನೇ ಬ್ಲಾಕ್‌ನಲ್ಲಿರುವ ಬಿಬಿಎಂಪಿ ಕಂದಾಯ ಕಚೇರಿಯಲ್ಲಿ ಬುಧವಾರ ರಾತ್ರಿ 9ರ ವೇಳೆಯಲ್ಲೂ ತೆರಿಗೆ ಪಾವತಿಗೆ ಕಾಯುತ್ತಿದ್ದ ನಾಗರಿಕರು   

ಬೆಂಗಳೂರು: ಒಂದು ಬಾರಿ ಪರಿಹಾರ (ಒಟಿಎಸ್) ಯೋಜನೆ ಪಡೆಯಲು ಕಡೆ ದಿನವಾಗಿದ್ದ ಬುಧವಾರ, ಆಸ್ತಿ ತೆರಿಗೆ ಪಾವತಿ ಮಾಡಲು ನಾಗರಿಕರು ಸಾಲುಗಟ್ಟಿ ನಿಂತಿದ್ದರು. ಪಾಲಿಕೆ ಕಂದಾಯ ಕಚೇರಿಗಳಲ್ಲೂ ಸರ್ವರ್‌ ಸಮಸ್ಯೆಯಿಂದಾಗಿ ಹೆಚ್ಚಿನ ಸಮಯ ಕಾಯಬೇಕಾಯಿತು.

ಒಟಿಎಸ್‌ ಯೋಜನೆ ಅಂತ್ಯವಾಗುವುದರಿಂದ ಗುರುವಾರದಿಂದ (ಆಗಸ್ಟ್‌ 1) ಬಡ್ಡಿ ಹಾಗೂ ದಂಡವನ್ನು ಪಾವತಿಸಬೇಕಾಗುತ್ತದೆ. ಇವೆಲ್ಲವನ್ನೂ ಸೇರಿಸಿದರೆ, ಹಲವು ಆಸ್ತಿಗಳಿಗೆ ಮೂರು ಪಟ್ಟು ಹೆಚ್ಚಿನ ಆಸ್ತಿ ತೆರಿಗೆ ಕಟ್ಟಬೇಕಾಗುತ್ತದೆ. ಹೀಗಾಗಿ ಆಸ್ತಿ ಮಾಲೀಕರು ಬುಧವಾರ ಬೆಳಿಗ್ಗೆಯಿಂದಲೇ ಪಾಲಿಕೆ ಕಚೇರಿಗಳಿಗೆ ಬಂದಿದ್ದರು.

ಆನ್‌ಲೈನ್‌ನಲ್ಲೂ ಸಾಕಷ್ಟು ಜನರು ಪಾವತಿ ಮಾಡುತ್ತಿದ್ದರಿಂದ, ಸರ್ವರ್‌ ಆಗಾಗ್ಗೆ ಕೈಕೊಡುತ್ತಿತ್ತು. ಪಾಲಿಕೆ ಕಚೇರಿ ಸಿಬ್ಬಂದಿ ಹಲವು ಪ್ರಯತ್ನ ಮಾಡಿದರೂ, ಪ್ರಕ್ರಿಯೆ ನಿಧಾನಗತಿಯಲ್ಲಿರುತ್ತಿತ್ತು. ಲಾಗ್‌ ಇನ್‌ ಆಗಿರುವುದು ಅದಾಗಿಯೇ ಲಾಗ್‌ಔಟ್‌ ಆಗಿಬಿಡುತ್ತಿತ್ತು. ಪ್ರಕ್ರಿಯೆಯನ್ನು ಮತ್ತೆ ಮೊದಲಿನಿಂದ ಪ್ರಾರಂಭಿಸಬೇಕಾಗಿತ್ತು. ಇದರಿಂದ ಸಾಲಿನಲ್ಲಿ ಜನರ ಸಂಖ್ಯೆ ಹೆಚ್ಚಾಗುತ್ತಿತ್ತು.

ADVERTISEMENT

ಬುಧವಾರ ರಾತ್ರಿ 9ರವರೆಗೆ ಪಾಲಿಕೆ ಕಚೇರಿಗಳು ತೆರೆದಿದ್ದು, ಆಸ್ತಿ ತೆರಿಗೆ ಪಾವತಿಗೆ ಅವಕಾಶ ಮಾಡಿಕೊಡಲಾಗಿತ್ತು. ರಾತ್ರಿ 8ರ ವೇಳೆಯಲ್ಲೂ ಸಾಲು ಉದ್ದವಾಗಿತ್ತು. ಹಲವು ಕಡೆ ಪಾಲಿಕೆ ಸಿಬ್ಬಂದಿ ತುಸು ಹೆಚ್ಚಿನ ಅವಧಿಯೇ ಕೆಲಸ ಮಾಡಿ ನಾಗರಿಕರು ಆಸ್ತಿ ತೆರಿಗೆ ಪಾವತಿಸಲು ಅನುವು ಮಾಡಿಕೊಟ್ಟರು.

ಜುಲೈ 29ರ ಅಂತ್ಯಕ್ಕೆ 2.87 ಲಕ್ಷ ಆಸ್ತಿಗಳಿಂದ ಒಟ್ಟು ₹831 ಕೋಟಿ ಆಸ್ತಿ ತೆರಿಗೆ ಪಾವತಿಯಾಗಬೇಕಿತ್ತು. ಜುಲೈ 30 ಹಾಗೂ 31ರಂದು ಬಹಳಷ್ಟು ಸಂಖ್ಯೆಯಲ್ಲೇ ಆಸ್ತಿ ತೆರಿಗೆ ಪಾವತಿಯಾಗಿದೆ.

‘ಸಾಕಷ್ಟು ಗೊಂದಲವಿದೆ. ಬೇಡಿಕೆ ಪತ್ರದಲ್ಲಿ ಹೆಚ್ಚಾಗಿ ನಮೂದಿಸಲಾಗಿದೆ. ಈ ಬಗ್ಗೆ ಮಾಹಿತಿ ಬೇಕಿತ್ತು. ಆದರೆ, ಇಂದೇ ಕೊನೆ ದಿನವಾಗಿರುವುದರಿಂದ ವಿವರಣೆ ಪಡೆಯಲು ಸಾಧ್ಯವಾಗುತ್ತಿಲ್ಲ. ಇನ್ನಷ್ಟು ದಿನ ಯೋಜನೆ ವಿಸ್ತರಿಸಬೇಕಿತ್ತು’ ಎಂದು ಹಲವು ನಾಗರಿಕರು ಅಭಿಪ್ರಾಯಪಟ್ಟರು.

ಒಟಿಎಸ್‌ ವಿಸ್ತರಣೆ: ಸಚಿವ ಸಂಪುಟದಲ್ಲಿ ನಿರ್ಧಾರ?

‘ಒಟಿಎಸ್‌ ಯೋಜನೆಯನ್ನು ಮತ್ತಷ್ಟು ತಿಂಗಳ ಅವಧಿಗೆ ವಿಸ್ತರಿಸಲು ಸರ್ಕಾರ ಚಿಂತನೆ ನಡೆಸಿದ್ದು ಈ ಬಗ್ಗೆ ಗುರುವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ’ ಎಂದು ಮೂಲಗಳು ತಿಳಿಸಿವೆ. ಒಟಿಎಸ್‌ ಯೋಜನೆ ಫೆಬ್ರುವರಿಯಿಂದಲೇ ಜಾರಿಯಲ್ಲಿತ್ತು. ಇದರ ಪ್ರಯೋಜನ ಹೆಚ್ಚಿನ ನಾಗರಿಕರು ಪಡೆದುಕೊಂಡಿದ್ದು ಹೆಚ್ಚಿನ ಮೊತ್ತವೂ ಪಾವತಿಯಾಗಿತ್ತು. ಎಫ್‌ಕೆಸಿಸಿಐ ಸೇರಿದಂತೆ ಹಲವು ಸಂಸ್ಥೆ ನಾಗರಿಕರು ಯೋಜನೆಯನ್ನು ವಿಸ್ತರಿಸಲು ಮನವಿ ಮಾಡಿದ್ದರು. ಆದ್ದರಿಂದ ಇನ್ನಷ್ಟು ಸಮಯ ವಿಸ್ತರಿಸಿದರೆ ಎಲ್ಲರಿಗೂ ಅನುಕೂಲವಾಗುವ ಕಾರಣದಿಂದ ಆ ಬಗ್ಗೆ ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.