ADVERTISEMENT

ಅಡಕತ್ತರಿಯಲ್ಲಿ ಅನರ್ಹ ಶಾಸಕರ ಬೆಂಬಲಿಗ ಸದಸ್ಯರು

ಮೇಯರ್‌ ಚುನಾವಣೆಗೆ ಇನ್ನೊಂದೇ ತಿಂಗಳು * ಪಾಲಿಕೆಯಲ್ಲಿ ಬದಲಾದ ಬಲಾಬಲ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2019, 19:38 IST
Last Updated 29 ಆಗಸ್ಟ್ 2019, 19:38 IST
   

ಬೆಂಗಳೂರು: ಮುಂದಿನ ಅವಧಿಯ ಮೇಯರ್‌ ಆಯ್ಕೆ ಚುನಾವಣೆಗೆ ಮತದಾರರ ಪಟ್ಟಿ ಅಂತಿಮಗೊಂಡಿದ್ದು, ಪಟ್ಟಿಯಿಂದ ಐವರು ಅನರ್ಹ ಶಾಸಕರ ಹೆಸರನ್ನು ತೆಗೆದುಹಾಕಲಾಗಿದೆ. ಸೆಪ್ಟೆಂಬರ್‌ 28ರೊಳಗೆ ಮೇಯರ್‌ ಚುನಾವಣೆ ನಡೆಯಬೇಕಿದೆ.

ಐವರು ಶಾಸಕರು ಅನರ್ಹಗೊಂಡಿರುವುದರಿಂದ ಹಾಗೂ ಕಾಂಗ್ರೆಸ್‌ ವಶದಲ್ಲಿದ್ದ ದೊಡ್ಡಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಬಿ.ಎನ್‌.ಬಚ್ಚೇಗೌಡ ಗೆದ್ದಿದ್ದರಿಂದ ಪಾಲಿಕೆಯಲ್ಲಿ ಪಕ್ಷಗಳ ಬಲಾಬಲ ಏರುಪೇರಾಗಿದೆ.

ತಮ್ಮ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅನರ್ಹ ಶಾಸಕರು ಸೂಚಿಸುವ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಬೇಕೋ ಅಥವಾ ಆರಿಸಿ ಬಂದ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಬೇಕೋ ಎಂಬ ಅಡಕತ್ತರಿಯಲ್ಲಿ ಪಾಲಿಕೆಯ ಕೆಲವು ಸದಸ್ಯರು ಸಿಲುಕಿದ್ದಾರೆ.

ADVERTISEMENT

ಆರ್‌.ಆರ್‌.ನಗರ ಕ್ಷೇತ್ರದ ಶಾಸಕ ಮುನಿರತ್ನ, ಯಶವಂತಪುರದ ಎಸ್‌.ಟಿ.ಸೋಮಶೇಖರ, ಕೆ.ಆರ್‌.ಪುರ ಕ್ಷೇತ್ರದ ಬೈರತಿ ಬಸವರಾಜು, ಶಿವಾಜಿನಗರ ಕ್ಷೇತ್ರದ ಆರ್‌.ರೋಷನ್‌ ಬೇಗ್‌ (ನಾಲ್ವರೂ ಕಾಂಗ್ರೆಸ್‌ನವರು) ಹಾಗೂ ಮಹಾಲಕ್ಷ್ಮೀ ಲೇಔಟ್‌ ಕ್ಷೇತ್ರದ ಕೆ.ಗೋಪಾಲಯ್ಯ ಅನರ್ಹಗೊಂಡ ಶಾಸಕರು. ಈ ಕ್ಷೇತ್ರಗಳ ಕೆಲವು ವಾರ್ಡ್‌ಗಳ ಸದಸ್ಯರು ‘ಪ್ರಜಾವಾಣಿ’ ಜೊತೆ ತಮ್ಮ ಸಂದಿಗ್ಧತೆಯನ್ನು ಹಂಚಿಕೊಂಡರು.

‘ನಮ್ಮ ನಾಯಕರು ಪಕ್ಷದಲ್ಲಿ ಮುಂದುವರಿಯಲೂ ಹೇಳಿಲ್ಲ. ನಮ್ಮ ಜೊತೆ ಬನ್ನಿ ಎಂದೂ ಹೇಳಿಲ್ಲ. ನಿಮ್ಮ ಭವಿಷ್ಯ ನೀವೇ ನಿರ್ಧಾರ ಕೈಗೊಳ್ಳಿ ಎಂದಿದ್ದಾರೆ. ಹಾಗಾಗಿ ನಾವು ಇಕ್ಕಟ್ಟಿಗೆ ಸಿಲುಕಿದ್ದೇವೆ’ ಎಂದು ಆರ್‌.ಆರ್.ನಗರ ಕ್ಷೇತ್ರದ ಕಾಂಗ್ರೆಸ್‌ ಕಾರ್ಪೊರೇಟರ್‌ ಒಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಆರ್‌.ಆರ್‌.ನಗರ ಕ್ಷೇತ್ರದಲ್ಲಿ ಐವರು ಕಾಂಗ್ರೆಸ್‌, ಮೂವರು ಬಿಜೆಪಿ ಹಾಗೂ ಒಬ್ಬರು ಜೆಡಿಎಸ್‌ ಕಾರ್ಪೊರೇಟರ್‌ಗಳಿದ್ದಾರೆ. ಲಗ್ಗೆರೆ ಸದಸ್ಯೆ ಮಂಜುಳಾ ಎನ್‌.ಸ್ವಾಮಿ (ಜೆಡಿಎಸ್‌) ಕಳೆದ ಮೇಯರ್‌ ಚುನಾವಣೆಯಲ್ಲಿ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದರು. ಐವರು ಕಾಂಗ್ರೆಸ್‌ ಸದಸ್ಯರ ಪೈಕಿ ಎಚ್‌ಎಂಟಿ ವಾರ್ಡ್‌ನ ಆಶಾ ಸುರೇಶ್‌ ಅವರು ‘ತಮ್ಮ ವಾರ್ಡ್‌ ಕಾಮಗಾರಿಗಳಲ್ಲಿ ಮುನಿರತ್ನ ಹಸ್ತಕ್ಷೇಪ ಮಾಡುತ್ತಾರೆ’ ಎಂದು ಆರೋಪಿಸಿ ಪಾಲಿಕೆ ಸಭೆಯಲ್ಲೇ ಪ್ರತಿಭಟನೆ ನಡೆಸಿದ್ದರು. ಈ ಕ್ಷೇತ್ರದ ಮೂವರು ಕಾಂಗ್ರೆಸ್‌ ಸದಸ್ಯರು ಸಚಿವ ಆರ್‌.ಅಶೋಕ ಅವರನ್ನು ಭೇಟಿ ಮಾಡಿದ್ದಾರೆ ಎನ್ನಲಾಗಿದೆ.

ಕೆ.ಆರ್‌.ಪುರ ಕ್ಷೇತ್ರದ ಒಂಬತ್ತು ಸದಸ್ಯರಲ್ಲಿ ಆರು ಮಂದಿ ಹಾಗೂ ಶಿವಾಜಿನಗರ ಕ್ಷೇತ್ರದ ಏಳು ಸದಸ್ಯರ ಪೈಕಿ ಐವರು ಕಾಂಗ್ರೆಸ್‌ನವರು. ಇವರೂ ಕೂಡಾ ಇದೇ ರೀತಿಯ ಇಕ್ಕಟ್ಟನ್ನು ಎದುರಿಸುತ್ತಿದ್ದಾರೆ.

‘ಪಕ್ಷ ವಿಪ್‌ ಜಾರಿ ಮಾಡಲು ಅವಕಾಶ ಇದೆ. ವಿಪ್‌ಗಿಂತ ನಮಗೆ ನಮ್ಮ ನಾಯಕರೇ ಮುಖ್ಯ. ಅಷ್ಟಕ್ಕೂ ಈಗ ಮೈತ್ರಿ ಸರ್ಕಾರ ರಾಜ್ಯದಲ್ಲಿ ಇಲ್ಲವಲ್ಲ’ ಎಂದು ಶಿವಾಜಿನಗರ ಕ್ಷೇತ್ರದ ವಾರ್ಡ್‌ನ ಕಾರ್ಪೊರೇಟರ್‌ ಒಬ್ಬರು ಹೇಳಿದರು.

ಮಹಾಲಕ್ಷ್ಮಿಪುರ ಲೇಔಟ್‌ ಕ್ಷೇತ್ರದ ಏಳು ವಾರ್ಡ್‌ಗಳಲ್ಲಿ ಅನರ್ಹ ಶಾಸಕ ಗೋಪಾಲಯ್ಯ ಅವರ ಪತ್ನಿ ಎಸ್‌.ಪಿ.ಹೇಮಲತಾ (ವೃಷಭಾವತಿನಗರ ವಾರ್ಡ್‌) ಸೇರಿ ಒಟ್ಟು ನಾಲ್ವರು ಜೆಡಿಎಸ್‌ ಕಾರ್ಪೊರೇಟರ್‌ಗಳಿದ್ದಾರೆ. ಈ ಪೈಕಿ ಬಹುತೇಕರು ಜೆಡಿಎಸ್‌ನಲ್ಲೇ ಉಳಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ.

‘ನಮಗಿನ್ನೂ ಒಂದು ವರ್ಷ ಅಧಿಕಾರಾವಧಿ ಇದೆ. ಪಕ್ಷದ ವರಿಷ್ಠರು ಸೂಚಿಸುವ ಅಭ್ಯರ್ಥಿಯನ್ನು ಬಿಟ್ಟು ಬೇರೆಯವರನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ’ ಎಂದು ಮಾರಪ್ಪನಪಾಳ್ಯ ವಾರ್ಡ್‌ನ ಸದಸ್ಯ ಎಂ.ಮಹಾದೇವ ತಿಳಿಸಿದರು.

ಕಾಂಗ್ರೆಸ್‌ನಿಂದ ಇಬ್ಬರು ಆಕಾಂಕ್ಷಿಗಳು
‘ಒಟ್ಟು ಮತದಾರರ ಪೈಕಿ ನಮಗೇ ಹೆಚ್ಚು ಸ್ಥಾನಗಳಿವೆ. ನಮ್ಮ ಪಕ್ಷದ ಚಿಹ್ನೆಯಿಂದ ಗೆದ್ದವರು ನಮ್ಮ ಪಕ್ಷದ ಅಭ್ಯರ್ಥಿಗೆ ಮತ ಹಾಕುತ್ತಾರೆ ಎಂಬ ವಿಶ್ವಾಸವಿದೆ. ಹಾಗಾಗಿ ನಮ್ಮ ಪಕ್ಷದವರೇ ಮುಂದಿನ ಅವಧಿಗೂ ಮೇಯರ್‌ ಆಗಲಿದ್ದಾರೆ’ ಎಂದು ಪಾಲಿಕೆಯ ಆಡಳಿತ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌ ‘ಪ್ರಜಾವಾಣಿ’ಗೆ ತಿಳಿಸಿದರು. ಕಾಂಗ್ರೆಸ್‌ನಲ್ಲಿ ಎಂ.ಶಿವರಾಜ್‌ ಹಾಗೂ ಮಹಮ್ಮದ್‌ ರಿಜ್ವಾನ್‌ ನವಾಬ್‌ ಮೇಯರ್‌ ಹುದ್ದೆಯ ಆಕಾಂಕ್ಷಿಗಳು.

ಬಿಜೆಪಿಯಲ್ಲಿ ಮೂವರ ನಡುವೆ ಪೈಪೋಟಿ
ಪಾಲಿಕೆಯಲ್ಲಿ ವಿರೋಧಪಕ್ಷದ ನಾಯಕ ಪದ್ಮನಾಭ ರೆಡ್ಡಿ, ಕುಮಾರಸ್ವಾಮಿ ಬಡಾವಣೆ ವಾರ್ಡ್‌ನ ಸದಸ್ಯ ಎಲ್‌.ಶ್ರೀನಿವಾಸ್ ಹಾಗೂ ಗೋವಿಂದರಾಜನಗರದ ಕೆ.ಉಮೇಶ ಶೆಟ್ಟಿ ನಡುವೆ ಮೇಯರ್ ಸ್ಥಾನಕ್ಕಾಗಿ ಪೈಪೋಟಿ ಇದೆ.

‘ಅನರ್ಹಗೊಂಡ ಶಾಸಕರ ಬೆಂಬಲಿಗರು ಈ ಬಾರಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುತ್ತಾರೆ. ಹಾಗಾಗಿ ಪಕ್ಷೇತರ ಸದಸ್ಯರ ಅಗತ್ಯ ನಮಗಿಲ್ಲ. ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿಗೆ ಹೋಲಿಸಿದರೆ ನಮಗೆ 35 ಮತಗಳು ಹೆಚ್ಚು ಸಿಗಲಿವೆ’ ಎಂಬ ಲೆಕ್ಕಾಚಾರ ಬಿಜೆಪಿಯದು.

ಪಕ್ಷೇತರರಿಗೆ ಕುಸಿದ ಬೇಡಿಕೆ: ಈ ಹಿಂದಿನ ನಾಲ್ಕು ಮೇಯರ್‌ಗಳ ಆಯ್ಕೆಯಲ್ಲೂ ಪಕ್ಷೇತರರು ಮಹತ್ತರ ಪಾತ್ರ ವಹಿಸಿದ್ದರು. ಆದರೆ, ಈ ಬಾರಿ ಅವರಿಗೆ ಹಿಂದಿನಷ್ಟು ಬೇಡಿಕೆ ಇಲ್ಲ.

*
ಮತದಾರರ ಅಂತಿಮ ಪಟ್ಟಿ ಬಂದಿದೆ. ಮೇಯರ್‌ ಚುನಾವಣೆಯನ್ನು ಸೆಪ್ಟೆಂಬರ್‌ನಲ್ಲೇ ನಡೆಸಬೇಕಿದ್ದು, ವೇಳಾಪಟ್ಟಿಯನ್ನು ಶೀಘ್ರವೇ ಪ್ರಕಟಿಸಲಾಗುವುದು
-ಹರ್ಷ ಗುಪ್ತ, ಪ್ರಾದೇಶಿಕ ಆಯುಕ್ತರು, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.