ADVERTISEMENT

ಆಸ್ತಿ ತೆರಿಗೆ: ಆನ್‌ಲೈನ್‌ ಪಾವತಿಗೆ ಹೆಚ್ಚಿದ ಒಲವು

ಬಿಬಿಎಂಪಿ: ಲಾಕ್‌ಡೌನ್‌ ನಡುವೆಯೂ ಎರಡೇ ತಿಂಗಳಲ್ಲಿ ₹ 1440 ಕೋಟಿ ಸಂಗ್ರಹ

ಪ್ರವೀಣ ಕುಮಾರ್ ಪಿ.ವಿ.
Published 31 ಮೇ 2020, 20:29 IST
Last Updated 31 ಮೇ 2020, 20:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   
""

ಬೆಂಗಳೂರು: ಆಸ್ತಿ ತೆರಿಗೆ ಪಾವತಿಗೆ ಬಿಬಿಎಂಪಿ ಆನ್‌ಲೈನ್‌ ವ್ಯವಸ್ಥೆ ಅಳವಡಿಸಿ ಅನೇಕ ವರ್ಷಗಳೇ ಕಳೆದರೂ ಹೆಚ್ಚಿನವರು ಬ್ಯಾಂಕ್‌ನಲ್ಲೇ ತೆರಿಗೆ ತುಂಬುತ್ತಿದ್ದರು. ಆದರೆ, ಈ ಬಾರಿ ಆನ್‌ಲೈನ್‌ ಪಾವತಿಗೆ ಒಲವು ಹೆಚ್ಚಿದೆ. 2020–21ನೇ ಸಾಲಿನಲ್ಲಿ ಮೊದಲ ಎರಡು ತಿಂಗಳಲ್ಲಿ ಸಂಗ್ರಹವಾಗಿರುವ ತೆರಿಗೆಯಲ್ಲಿ ಶೇ 50ಕ್ಕೂ ಹೆಚ್ಚು ಪ್ರಮಾಣ ಆನ್‌ಲೈನ್‌ನಲ್ಲೇ ಪಾವತಿಯಾಗಿರುವುದು ವಿಶೇಷ.

ಈ ಬಾರಿ ಕೊರೊನಾ ಸೋಂಕು ಹಬ್ಬುವುದನ್ನು ತಡೆಯುವ ಸಲುವಾಗಿ ಲಾಕ್‌ಡೌನ್‌ ಜಾರಿಯಲ್ಲಿದ್ದುದರಿಂದ ಎಲ್ಲ ವಹಿವಾಟುಗಳೂ ನೆಲಕಚ್ಚಿದ್ದವು. ಹಾಗಾಗಿ ತೆರಿಗೆ ಸಂಗ್ರಹದಲ್ಲಿ ಭಾರಿ ಇಳಿಕೆಯಾಗಲಿದೆಯೇನೋ ಎಂಬ ಆತಂಕ ಬಿಬಿಎಂಪಿಗೆ ಇತ್ತು. ಈ ಸಲುವಾಗಿ ಏಪ್ರಿಲ್‌ 30ರವರೆಗೆ ಮಾತ್ರ ಅನ್ವಯವಾಗುವಾಗುತ್ತಿದ್ದ ಶೇ 5ರಷ್ಟು ತೆರಿಗೆ ರಿಯಾಯಿತಿಯನ್ನು ಮೇ 31ರವರೆಗೂ ವಿಸ್ತರಿಸಿತ್ತು.

ಮೊದಲ ಎರಡು ತಿಂಗಳುಗಳಲ್ಲಿ ಲಾಕ್‌ಡೌನ್‌ ನಡುವೆಯೂ ₹ 1,440 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಿದೆ. 2019–20ನೇ ಸಾಲಿನ ಮೊದಲ ಎರಡು ತಿಂಗಳುಗಳಿಗೆ ಹೋಲಿಸಿದರೆ ಈ ಬಾರಿ ತೆರಿಗೆ ಸಂಗ್ರಹದಲ್ಲಿ ₹ 70.65 ಕೋಟಿ ಮಾತ್ರ ಇಳಿಕೆಯಾಗಿದೆ. ಕಳೆದ ಆರ್ಥಿಕ ವರ್ಷದ ಮೊದಲ ಎರಡು ತಿಂಗಳುಗಳಲ್ಲಿ ₹ 1,510 ಕೋಟಿ ತೆರಿಗೆ ಸಂಗ್ರಹವಾಗಿತ್ತು.

ADVERTISEMENT

‘ಏಪ್ರಿಲ್‌ ಮತ್ತು ಮೇ ತಿಂಗಳುಗಳಲ್ಲಿ ಜನ ಮನೆಯಿಂದ ಹೊರಗೆ ಬರಲು ಸಾಧ್ಯವಾಗದ ಪರಿಸ್ಥಿತಿ ಇತ್ತು. ಇಷ್ಟೊಂದು ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗುತ್ತದೆ ಎಂಬ ನಿರೀಕ್ಷೆ ಇರಲಿಲ್ಲ. ಲಾಕ್‌ಡೌನ್‌ ಇದ್ದರೂ ಜನ ಆನ್‌ಲೈನ್ ಮೂಲಕ ತೆರಿಗೆ ಪಾವತಿಸಿದ್ದಾರೆ. ಇದು ಒಳ್ಳೆಯ ಬೆಳವಣಿಗೆ’ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಕಂದಾಯ) ಡಾ. ಎಸ್‌.ಬಸವರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

2019–20ರಲ್ಲಿ ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಆನ್‌ಲೈನ್‌ನಲ್ಲಿ ₹ 565.10 ಕೋಟಿ ತೆರಿಗೆ ಸಂಗ್ರಹವಾಗಿತ್ತು. ಒಟ್ಟು ತೆರಿಗೆ ಸಂಗ್ರಹದಲ್ಲಿ ಆನ್‌ಲೈನ್‌ ಪಾವತಿಯ ಪಾಲು ಶೇ 37ರಷ್ಟು ತೆರಿಗೆ ಮಾತ್ರ ಇತ್ತು. ಈ ಬಾರಿ ₹ 782.79 ಕೋಟಿ, ಅಂದರೆ ಶೇ 54ರಷ್ಟು ತೆರಿಗೆ ಆನ್‌ಲೈನ್‌ ಮೂಲಕ ಪಾವತಿಯಾಗಿದೆ. ಬ್ಯಾಂಕ್‌ ಚಲನ್‌ ಮೂಲಕ ಪಾವತಿಯಾಗಿರುವುದು ₹ 657.62 ಕೋಟಿ ಮಾತ್ರ. ಕಳೆದ ಸಾಲಿಗೆ ಹೋಲಿಸಿದರೆ ಚಲನ್‌ ಮೂಲಕ ಪಾವತಿ ₹288.07 ಕೋಟಿಗಳಷ್ಟು ಕಡಿಮೆ.

ಆರ್‌.ಆರ್.ನಗರ: ಕಳೆದ ಬಾರಿಗಿಂತ ಹೆಚ್ಚು ತೆರಿಗೆ ಸಂಗ್ರಹ
ಈ ಆರ್ಥಿಕ ವರ್ಷದ ಮೊದಲ ಎರಡು ತಿಂಗಳಲ್ಲಿಬಿಬಿಎಂಪಿಯ ಏಳು ವಲಯಗಳಲ್ಲಿ ತೆರಿಗೆ ಸಂಗ್ರಹ ಪ್ರಮಾಣ ಅಲ್ಪ ಇಳಿಕೆ ಕಂಡಿದ್ದರೆ, ಆರ್‌.ಆರ್‌.ನಗರ ವಲಯದಲ್ಲಿ ಮಾತ್ರ ಕಳೆದ ಸಾಲಿಗಿಂತಲೂ ಹೆಚ್ಚು ತೆರಿಗೆ ಸಂಗ್ರಹವಾಗಿದೆ. ಇಲ್ಲಿ 2019–20ಕ್ಕೆ ಹೋಲಿಸಿದರೆ ಈ ಬಾರಿ ₹ 8.09 ಕೋಟಿ ತೆರಿಗೆ ಸಂಗ್ರಹ ಹೆಚ್ಚಿದೆ.

‘ಹಳೆ ಬಾಕಿ: ಈ ತಿಂಗಳಿನಿಂದಲೇ ನೋಟಿಸ್‌ ಜಾರಿ’
‘ಬಿಬಿಎಂಪಿಗೆ ಕೆಲವರು ಅನೇಕ ವರ್ಷಗಳಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಬಾಕಿ ವಸೂಲಿಗೆ ಕಠಿಣ ಕ್ರಮ ಅನಿವಾರ್ಯ. ಅತ್ಯಂತ ಹೆಚ್ಚು ಬಾಕಿ ಉಳಿಸಿಕೊಂಡವರ ಪಟ್ಟಿ ಸಿದ್ಧಪಡಿಸಿ, ಮಾಲೀಕರಿಗೆ ಜೂನ್‌‌ನಲ್ಲಿ ನೋಟಿಸ್‌ ಜಾರಿಮಾಡಲಿದ್ದೇವೆ. ಜುಲೈನಲ್ಲಿ ವಾರಂಟ್‌ ಜಾರಿಗೊಳಿಸಿ ವಸೂಲಿಗೆ ಕ್ರಮಕೈಗೊಳ್ಳುತ್ತೇವೆ. ಪ್ರತಿ ಬುಧವಾರ ನಡೆಯುತ್ತಿದ್ದ ತೆರಿಗೆ ಸಂಗ್ರಹ ಅಭಿಯಾನ ಈ ವರ್ಷವೂ ಮುಂದುವರಿಯಲಿದೆ’ ಎಂದು ಡಾ. ಎಸ್‌.ಬಸವರಾಜು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.