ADVERTISEMENT

ಬೆಂಗಳೂರು ನಗರದ ಶೇ 75ರಷ್ಟು ಜನರಲ್ಲಿ ಪ್ರತಿಕಾಯ ವೃದ್ಧಿ: ಸೆರೊ ಸಮೀಕ್ಷೆ

ಪ್ರಾಥಮಿಕ ವರದಿಯಲ್ಲಿ ಬಹಿರಂಗ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2021, 19:30 IST
Last Updated 2 ಸೆಪ್ಟೆಂಬರ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ನಗರದ ಶೇ 75ರಷ್ಟು ಮಂದಿಯಲ್ಲಿ ಪ್ರತಿಕಾಯ ವೃದ್ಧಿಯಾಗಿದೆ (ರೋಗ ನಿರೋಧಕ ಶಕ್ತಿ) ಎಂದು ಬಿಬಿಎಂಪಿ ನಡೆಸಿದ ಸೆರೊ ಸಮೀಕ್ಷೆಯ ಪ್ರಾಥಮಿಕ ವರದಿಯಲ್ಲಿ ಬಹಿರಂಗವಾಗಿದೆ.

ನಗರದ ನಿವಾಸಿಗಳಲ್ಲಿ ಎಷ್ಟು ಪ್ರಮಾಣದಲ್ಲಿ ರೋಗ ನಿರೋಧಕ ಶಕ್ತಿ ಬೆಳೆದಿದೆ ಎಂಬುದನ್ನು ಪತ್ತೆಹಚ್ಚಲು ಬಿಬಿಎಂಪಿಯು ಆಗಸ್ಟ್‌ 4ರಂದು ಸೆರೊ ಸಮೀಕ್ಷೆ ಆರಂಭಿಸಿತ್ತು.

ನಗರದ 2 ಸಾವಿರ ನಿವಾಸಿಗಳ ರಕ್ತದ ದ್ರವ ಸಂಗ್ರಹಿಸಿ ಪ್ರಯೋಗಾಲಯದಲ್ಲಿ ಅಧ್ಯಯನಕ್ಕೆ ಒಳಪಡಿಸಲಾಗಿತ್ತು.ಲಸಿಕೆ ಪಡೆದವರಲ್ಲಿ ಒಂದು ಸಾವಿರ ಹಾಗೂ ಲಸಿಕೆ ಪಡೆಯದವರಲ್ಲಿ ಒಂದು ಸಾವಿರ ಮಂದಿ ಸಮೀಕ್ಷೆಗೆ ಒಳಗಾಗಿದ್ದರು. ಅವರ ರಕ್ತದ ದ್ರವ (ಸೀರಂ) ಸಂಗ್ರಹಿಸಿ ಅವರಲ್ಲಿ ಎಷ್ಟು ಪ್ರಮಾಣದಲ್ಲಿ ಪ್ರತಿಕಾಯಗಳು ಪತ್ತೆಯಾಗಿವೆ ಎಂಬುದನ್ನು ಪರೀಕ್ಷೆ ಮಾಡಲಾಗಿತ್ತು.

ADVERTISEMENT

18 ವರ್ಷದೊಳಗಿನವರು, 18 ರಿಂದ 45 ವರ್ಷಗಳ ಒಳಗಿನವರು ಹಾಗೂ 45 ವರ್ಷ ಮೇಲಿನವರು ಎಂಬ ಮೂರು ಗುಂಪುಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಎರಡು ಸಾವಿರ ಮಂದಿಯಲ್ಲಿ18 ವರ್ಷಗಳ ಒಳಗಿನ ಶೇ 30ರಷ್ಟು ಮಂದಿ, 18 ವರ್ಷಗಳಿಂದ 45 ವರ್ಷಗಳ ಒಳಗಿನವರು ಶೇ 50ರಷ್ಟು ಮಂದಿ ಹಾಗೂ 45 ವರ್ಷ ಮೇಲ್ಪಟ್ಟ ಶೇ 20ರಷ್ಟು ಮಂದಿ ಇದ್ದರು.

‘1,800 ಜನರ ಪೈಕಿ, 1,400 ಮಂದಿಯಲ್ಲಿ ಕೊರೊನಾ ಸೋಂಕಿನ ವಿರುದ್ಧದ ಪ್ರತಿಕಾಯಗಳು ವೃದ್ಧಿಯಾಗಿವೆ’ ಎಂದು ಬಿಬಿಎಂಪಿಯ ಮೂಲಗಳು ಹೇಳಿವೆ.

‘ಕೋವಿಡ್‌ ಲಸಿಕೆಯು ಜನರಲ್ಲಿ ಯಾವ ರೀತಿಯಲ್ಲಿ ಪ್ರತಿಕಾಯಗಳನ್ನು ವೃದ್ಧಿ ಮಾಡಿದೆ, ಲಸಿಕೆ ಪಡೆಯದವರಲ್ಲಿ ಯಾವ ರೀತಿಯ ಪರಿಣಾಮಗಳು ಇರುತ್ತವೆ ಎಂಬುದನ್ನು ತಿಳಿಯಲು ಸಮೀಕ್ಷೆ ನಡೆಸಲಾಗಿತ್ತು. ಆದರೆ, ಸಮೀಕ್ಷೆಯ ಅಂತಿಮ ವರದಿ ಇನ್ನೂ ನಮ್ಮ ಕೈ ಸೇರಿಲ್ಲ. ನಗರದ ಹೆಚ್ಚು ನಿವಾಸಿಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವುದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ’ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಡಿ. ರಂದೀಪ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.