ADVERTISEMENT

ದಕ್ಷಿಣ ವಲಯ ವಾರ್‌ ರೂಂ 17 ಸಿಬ್ಬಂದಿ ವಜಾ

ಕೋವಿಡ್‌ ರೋಗಿಗಳಿಗೆ ಹಾಸಿಗೆ ಹಂಚಿಕೆಯಲ್ಲಿ ಅವ್ಯವಹಾರ ಆರೋಪ

​ಪ್ರಜಾವಾಣಿ ವಾರ್ತೆ
Published 4 ಮೇ 2021, 19:47 IST
Last Updated 4 ಮೇ 2021, 19:47 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಕೋವಿಡ್‌ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಹಾಸಿಗೆ ಹಂಚಿಕೆ ಮಾಡುವುದರ ಹಿಂದೆ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದ ಬಳಿಕ ಬಿಬಿಎಂಪಿಯು, ದಕ್ಷಿಣ ವಲಯದ ವಾರ್‌ ರೂಂನಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ 17 ಸಿಬ್ಬಂದಿಯನ್ನು ವಜಾ ಮಾಡಿದೆ.

‘ವಾರ್‌ ರೂಂನಲ್ಲಿ ಡೇಟಾ ಎಂಟ್ರಿ ಕೆಲಸ ಮಾಡುತ್ತಿದ್ದ 17 ಸಿಬ್ಬಂದಿ ಬಗ್ಗೆ ಸಂಸದರು ಹಾಗೂ ಶಾಸಕರು ಆರೋಪ ಮಾಡಿದ್ದಾರೆ. ಅವರನ್ನೆಲ್ಲ ಕೆಲಸದಿಂದ ತೆಗೆದಿದ್ದೇವೆ’ ಎಂದು ದಕ್ಷಿಣ ವಲಯ ಆಯುಕ್ತರಾದ ತುಳಸಿ ಮದ್ದಿನೇನಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಂಸದರು ಮತ್ತು ಶಾಸಕರು ಮಾಡಿರುವ ಆರೋಪಗಳು ಕೇವಲ ದಕ್ಷಿಣ ವಲಯಕ್ಕೆ ಸಂಬಂಧಿಸಿದ್ದಲ್ಲ. ಅವರು ಕೊಟ್ಟಿರುವ ದಾಖಲೆಗಳಲ್ಲಿ ದಕ್ಷಿಣ ವಲಯಕ್ಕೆ ಸಂಬಂಧಿಸಿದ್ದು ಎರಡು ಮೂರು ಮಾತ್ರ. ಆರೋಪದ ಆ ಬಗ್ಗೆ ದಾಖಲೆ ಒದಗಿಸಿದರೆ ಮುಖ್ಯ ಆಯುಕ್ತರು ತನಿಖೆ ನಡೆಸಲಿದ್ದಾರೆ. ಆರೋಪಗಳು ತನಿಖೆಯಲ್ಲಿ ಸಾಬೀತಾದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.

ADVERTISEMENT

‘ಹಾಸಿಗೆ ಕಾಯ್ದಿರಿಸುವ ಕುರಿತು ತನಿಖೆ ನಡೆಸುವ ಹೊಣೆಯನ್ನು ಸರ್ಕಾರ ಪೊಲೀಸರಿಗೆ ವಹಿಸಿದೆ. ಅವರೇ ತನಿಖೆ ನಡೆಸಲಿದ್ದಾರೆ. ಹಾಸಿಗೆ ಕಾಯ್ದಿರಿಸಿದ್ದು ಯಾರು, ಆ ಸಂದರ್ಭದಲ್ಲಿ ತಂತ್ರಾಂಶದ ಲಾಗಿನ್‌ ಐಡಿ ಯಾರ ನಿಯಂತ್ರಣದಲ್ಲಿತ್ತು, ಲಾಗಿನ್‌ ಆಗಿದ್ದವರು ಯಾರು, ರೋಗಿಗಳ ಕಡೆಯವರು ಯಾರಿಗೆ ದುಟ್ಟು ಕೊಟ್ಟಿದ್ದಾರೆ, ತೆಗೊಂಡಿದ್ದು ಯಾರು ಎಂಬ ಆಯಾಮದಲ್ಲೂ ತನಿಖೆ ಆಗಬೇಕಿದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.