ADVERTISEMENT

ಆಸ್ತಿ ತೆರಿಗೆ ರಿಯಾಯಿತಿ: ಅವಧಿ ವಿಸ್ತರಣೆಗೆ ಹೆಚ್ಚಿದ ಒತ್ತಡ

ಆಸ್ತಿ ತೆರಿಗೆ ಪಾವತಿಸಿದವರಿಗೆ ಶೇ 5ರಷ್ಟು ರಿಬೇಟ್‌, ಅವಧಿ ವಿಸ್ತರಣೆ ಇಲ್ಲ: ಆಯುಕ್ತರ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2019, 20:32 IST
Last Updated 21 ಏಪ್ರಿಲ್ 2019, 20:32 IST
   

ಬೆಂಗಳೂರು: ಲೋಕಸಭಾ ಚುನಾವಣೆ ಇದ್ದುದರಿಂದ ಹಾಗೂ ಏಪ್ರಿಲ್‌ ಮೂರನೇ ವಾರದಲ್ಲಿ ಸಾಲು ಸಾಲು ರಜೆಗಳು ಬಂದಿದ್ದರಿಂದ ಆಸ್ತಿ ತೆರಿಗೆ ಪಾವತಿಯಲ್ಲಿ ಶೇ 5ರಷ್ಟು ರಿಯಾಯಿತಿ ಪಡೆಯಲು ಬಯಸುವವರು ಬ್ಯಾಂಕ್‌ಗಳಲ್ಲಿ ಸಾಲುಗಟ್ಟಿ ನಿಲ್ಲಬೇಕಾದ ಸ್ಥಿತಿ ಸೃಷ್ಟಿಯಾಗಿದೆ.

ಏಪ್ರಿಲ್‌ ತಿಂಗಳಿನಲ್ಲಿ ತೆರಿಗೆ ಪಾವತಿಸುವವರಿಗೆ ನೀಡುವ ಶೇ 5ರಷ್ಟು ರಿಯಾಯಿತಿಯನ್ನು ಮೇ ತಿಂಗಳಿಗೂ ವಿಸ್ತರಿಸಬೇಕು ಎಂಬ ಆಸ್ತಿ ಮಾಲೀಕರು ಒತ್ತಾಯಿಸಿದ್ದಾರೆ.

‘ಹಿಂದಿನ ವರ್ಷ ಕಟ್ಟಿದ ತೆರಿಗೆ ಹಾಗೂ ಈ ವರ್ಷ ಕಟ್ಟಬೇಕಾದ ತೆರಿಗೆಯಲ್ಲಿ ವ್ಯತ್ಯಾಸ ಇದೆ. ಈ ವ್ಯತ್ಯಾಸದ ಪ್ರಮಾಣ ಎಷ್ಟು ಎಂಬುದನ್ನು ವಾರ್ಡ್‌ ಕಚೇರಿಯಲ್ಲಿ ತಿಳಿದುಕೊಂಡು, ಅಲ್ಲಿಂದ ಚಲನ್‌ ಪಡೆದು ಬ್ಯಾಂಕ್‌ನಲ್ಲಿ ತೆರಿಗೆ ಕಟ್ಟಬೇಕು. ನಾನು ಎರಡು ವಾರದಲ್ಲಿ ನಾಲ್ಕೈದು ಬಾರಿ ವಾರ್ಡ್‌ ಕಚೇರಿಗೆ ಅಲೆದಾಡಿದ್ದೇನೆ. ಅಲ್ಲಿ ಸಿಬ್ಬಂದಿಯೇ ನಾಪತ್ತೆ. ಕೇಳಿದರೆ ಚುನಾವಣಾ ಕೆಲಸ ಇತ್ತು ಎಂದು ಸಬೂಬು ಹೇಳುತ್ತಾರೆ’ ಎಂದು ಗಂಗಾನಗರದ ನಿವಾಸಿ ಶ್ರೀಧರ ನಾಯಕ್‌ ದೂರಿದರು.

ADVERTISEMENT

‘ಆನ್‌ಲೈನ್‌ ಮೂಲಕ ತೆರಿಗೆ ಕಟ್ಟಬಹುದು ಎಂದು ಬಿಬಿಎಂಪಿಯವರು ಹೇಳುತ್ತಾರೆ. ಆದರೆ, ಈ ಪ್ರಕ್ರಿಯೆ
ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಸರ್ವರ್‌ ಹ್ಯಾಂಗ್‌ ಆಗುತ್ತಿದೆ. ಈ ವಾರ ಸಾಲು ಸಾಲು ರಜೆಗಳೂ ಬಂದಿದ್ದರಿಂದಲೂ ಅನೇಕರು ಬ್ಯಾಂಕ್‌ಗಳಲ್ಲೂ ತೆರಿಗೆ ಪಾವತಿಸುವುದಕ್ಕೆ ಸಾಧ್ಯವಾಗಿಲ್ಲ. ಹಾಗಾಗಿ ಮೇ ತಿಂಗಳಿನಲ್ಲೂ ತೆರಿಗೆ ಕಟ್ಟುವವರಿಗೂ ಒಟ್ಟು ಮೊತ್ತದಲ್ಲಿ ಶೇ 5ರಷ್ಟು ರಿಯಾಯಿತಿ ನೀಡಬೇಕು’ ಎಂದು ಅವರು ಒತ್ತಾಯಿಸಿದರು.

‘ತೆರಿಗೆ ಕಟ್ಟುವುದಕ್ಕೆ ವಾರ್ಡ್‌ ಕಚೇರಿಗೆ ಹೋಗುವ ಅಗತ್ಯವೇ ಇಲ್ಲ. ನೇರವಾಗಿ ಬ್ಯಾಂಕ್‌ ಮೂಲಕವೇ ಪಾವತಿ ಮಾಡಬಹುದು. ಚುನಾವಣೆಗೂ ತೆರಿಗೆ ಪಾವತಿಗೂ ಸಂಬಂಧ ಇಲ್ಲ. ರಿಯಾಯಿತಿಯ ಅವಧಿಯನ್ನು ಮೇ ತಿಂಗಳಿಗೂ ವಿಸ್ತರಿಸುವ ಬಗ್ಗೆ ಪಾಲಿಕೆ ಇನ್ನೂ ನಿರ್ಧಾರ ತಳೆದಿಲ್ಲ’ ಎಂದು ಪಾಲಿಕೆಯು ಜಂಟಿ ಆಯುಕ್ತ (ಕಂದಾಯ) ವೆಂಕಟಾಚಲಪತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇದೇ ಏಪ್ರಿಲ್‌ 30ರ ಒಳಗೆ ಆಸ್ತಿ ತೆರಿಗೆ ಪಾವತಿಸುವವರಿಗೆ ಮಾತ್ರ ಒಟ್ಟು ತೆರಿಗೆಯಲ್ಲಿ ಶೇ 5ರಷ್ಟು ರಿಯಾಯಿತಿ ಸಿಗಲಿದೆ. ಈ ಸೌಲಭ್ಯವನ್ನು ಏಪ್ರಿಲ್‌ ಬಳಿಕ ವಿಸ್ತರಿಸುವುದಿಲ್ಲ’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಸ್ಪಷ್ಟಪಡಿಸಿದರು.

‘ಪಾಲಿಕೆ ಕೌನ್ಸಿಲ್‌ ಸಭೆಯಲ್ಲಿ ಒಪ್ಪಿಗೆ ಪಡೆದು ತೆರಿಗೆ ಪಾವತಿದಾರರಿಗೆ ನೀಡುವ ರಿಯಾಯಿತಿಯನ್ನು ಮೇ ತಿಂಗಳಿಗೂ ವಿಸ್ತರಿಸುವುದಕ್ಕೆ ಅವಕಾಶ ಇದೆ. ಈ ಹಿಂದೆಯೂ ಅನೇಕ ಸಲ ಇದೇ ರೀತಿ ಅವಧಿಯನ್ನು ವಿಸ್ತರಿಸಿರುವ ಉದಾಹರಣೆಗಳಿವೆ. ನಾನು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷನಾಗಿದ್ದಾಗಲೂ ಪಾಲಿಕೆ ಈ ನಿರ್ಣಯ ಕೈಗೊಂಡಿತ್ತು. ಈ ಬಾರಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಚುನಾವಣಾ ಆಯೋಗದ ಅನುಮತಿ ಪಡೆದು ರಿಯಾಯಿತಿಯ ಅವಧಿ ವಿಸ್ತರಣೆ ಮಾಡಬಹುದು’ ಎಂದು ಪಾಲಿಕೆ ಸದಸ್ಯ ಎಂ.ಕೆ.ಗುಣಶೇಖರ ತಿಳಿಸಿದರು.

₹250 ಕೋಟಿ ತೆರಿಗೆ ಸಂಗ್ರಹ
ಪಾಲಿಕೆಯು ಕಳೆದ ವರ್ಷಕ್ಕೆ ಹೋಲಿಸಿದರೆ 2019–20ನೇ ಸಾಲಿನಲ್ಲಿ ಸಂಗ್ರಹ ಗುರಿಯನ್ನು ₹ 900 ಕೋಟಿಗಳಷ್ಟು ಹೆಚ್ಚಿಸಿದೆ. ಆದರೆ, ಏಪ್ರಿಲ್‌ ತಿಂಗಳಿನಲ್ಲಿ ಇದುವರೆಗೆ ತೆರಿಗೆ ಸಂಗ್ರಹ ಪ್ರಮಾಣ ಕಳೆದ ವರ್ಷಕ್ಕಿಂತ ಕಡಿಮೆಯೇ ಇದೆ.

‘ಏಪ್ರಿಲ್‌ 20ರವರೆಗೆ ₹250 ಕೋಟಿ ತೆರಿಗೆ ಸಂಗ್ರಹವಾಗಿದೆ. 2018–19ನೇ ಸಾಲಿನಲ್ಲಿ ಏಪ್ರಿಲ್‌ ತಿಂಗಳಿನಲ್ಲಿ ₹ 350 ಕೋಟಿ ವರೆಗೆ ತೆರಿಗೆ ಸಂಗ್ರಹಿಸಿತ್ತು. ತೆರಿಗೆಯಲ್ಲಿ ಶೇ 5ರಷ್ಟು ರಿಯಾಯಿತಿ ಪಡೆಯುವುದಕ್ಕೆ ಏಪ್ರಿಲ್‌ 30ರ ವರೆಗೆ ಕಾಲಾವಕಾಶ ಇದೆ. ಕೊನೆಯ ವಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಪಾವತಿ ಆಗುವ ನಿರೀಕ್ಷೆ ಇದೆ’ ಎಂದು ವೆಂಕಟಾಚಲಪತಿ ತಿಳಿಸಿದರು.

ಪಾಲಿಕೆಯ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಎಸ್‌.ಪಿ.ಹೇಮಲತಾ ಅವರು 2019–20ನೇ ಸಾಲಿಗೆ ಆರಂಭದಲ್ಲಿ ₹ 10,691 ಕೋಟಿ ಗಾತ್ರದ ಬಜೆಟ್‌ ಮಂಡಿಸಿದ್ದರು. ಆರ್ಥಿಕ ವರ್ಷದಲ್ಲಿ₹ 3,500 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿಯನ್ನು ನಿಗದಿಪಡಿಸಿದ್ದರು. ಈ ಕುರಿತ ಚರ್ಚೆಯ ಬಳಿಕ ಬಜೆಟ್‌ ಗಾತ್ರವನ್ನು ₹ 12,574 ಕೋಟಿಗೆ ಪರಿಷ್ಕರಿಸಲಾಗಿತ್ತು. ‌ಆಸ್ತಿ ತೆರಿಗೆ ಸಂಗ್ರಹದ ಗುರಿಯನ್ನು ₹ 4 ಸಾವಿರ ಕೋಟಿಗೆ ಹೆಚ್ಚಿಸಲಾಯಿತು.

2018–19ನೇ ಸಾಲಿನಲ್ಲಿ ₹ 3,100 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿಯನ್ನು ಪಾಲಿಕೆ ಹೊಂದಿತ್ತು. ಆದರೆ ಸಂಗ್ರಹವಾಗಿದ್ದು ₹ 2,550 ಕೋಟಿ ಮಾತ್ರ. 2017–18ಕ್ಕೆ ಹೋಲಿಸಿದರೆ (₹ 2,179 ಕೋಟಿ) ತೆರಿಗೆ ಸಂಗ್ರಹದಲ್ಲಿ ಶೇ 17ರಷ್ಟು ಹೆಚ್ಚಳವಾಗಿತ್ತು.

ಅಂಕಿ ಅಂಶ
₹12.43 ಲಕ್ಷ:
2018–19ನೇ ಸಾಲಿನಲ್ಲಿ ಆಸ್ತಿ ತೆರಿಗೆ ಪಾವತಿಸಿದವರ ಸಂಖ್ಯೆ
₹19 ಲಕ್ಷ:ಪಾಲಿಕೆ ವ್ಯಾಪ್ತಿಯಲ್ಲಿರುವ ಆಸ್ತಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.