
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮಹತ್ವಾಕಾಂಕ್ಷೆಯ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಪೆರಿಫೆರಲ್ ರಿಂಗ್ ರಸ್ತೆ– 1, ಬಿಬಿಸಿ) ಯೋಜನೆಗೆ ಸ್ವಾಧೀನ ಪಡಿಸಿಕೊಳ್ಳುವ ಭೂಮಿಗೆ ಪರಿಹಾರ ದರ ನಿಗದಿಪಡಿಸಲಾಗಿದೆ.
ಯೋಜನೆಗೆ ಭೂಮಿ ಬಿಟ್ಟು ಕೊಡುವ ಮಾಲೀಕರು ಪ್ರಾಧಿಕಾರದ ‘ಸಂಧಾನಿತ ಪರಿಹಾರ ದರ’ಕ್ಕೆ ಆಕ್ಷೇಪ ವ್ಯಕ್ತಪಡಿಸಿದರೆ, ‘ಭೂಮಿಗೆ ಉತ್ತಮ ದರ ನೀಡಲಾಗುತ್ತಿದೆ’ ಎಂದು ಬಿಡಿಎ ಸಮರ್ಥಿಸಿಕೊಂಡಿದೆ. ಉದಾಹರಣೆಗೆ ಯಲಹಂಕ ಹೋಬಳಿಯ ಕೋಗಿಲು ಗ್ರಾಮದ 19 ಗುಂಟೆ ಜಾಗಕ್ಕೆ ಸಂಧಾನಿತ ಮೊತ್ತ ₹2.56 ಕೋಟಿ ನಿಗದಿಪಡಿಸಿದ್ದರೆ, ಬೆಂಗಳೂರು ಉತ್ತರ ತಾಲ್ಲೂಕಿನ ಯಲಹಂಕ ಹೋಬಳಿಯ ವೆಂಕಟಾಲ ಗ್ರಾಮದಲ್ಲಿ ಪ್ರತಿ ಎಕರೆಗೆ ₹15.60 ಕೋಟಿ ದರ ನಿಗದಿಯಾಗಿದೆ.
ಕೆ.ಆರ್.ಪುರ ತಾಲ್ಲೂಕಿನ ಕೊತ್ತನೂರಿನಲ್ಲಿ ಎಕರೆಗೆ ₹14.54 ಕೋಟಿ ನಗದು ಪರಿಹಾರ ನಿಗದಿಪಡಿಸಲಾಗಿದೆ. ಭೂಸ್ವಾಧೀನ ಕಾಯ್ದೆ 1894ರ ಅನ್ವಯ ಲಭ್ಯವಾಗಿರುವ ಸಾಮಾನ್ಯ ಐ ತೀರ್ಪಿನ ನಗದು ಪರಿಹಾರಕ್ಕಿಂತ ಹಲವು ಪಟ್ಟು ಜಾಸ್ತಿ ಪರಿಹಾರ ನೀಡಲಾಗುತ್ತಿದೆ ಎಂದು ಪ್ರಾಧಿಕಾರದ ಅಧಿಕಾರಿಗಳು ಹೇಳಿದ್ದಾರೆ.
20 ಗುಂಟೆಗಿಂತ ಒಳಗೆ ಭೂಮಿ ಕಳೆದುಕೊಳ್ಳುವವರಿಗೆ ನಗದು ಪರಿಹಾರ ಮಾತ್ರ ನೀಡಲಾಗುತ್ತದೆ. 20 ಗುಂಟೆಗಿಂತ ಹೆಚ್ಚು ಭೂಮಿ ಕಳೆದುಕೊಳ್ಳುವ ಭೂ ಮಾಲೀಕರು ಮಾರುಕಟ್ಟೆ ದರದಲ್ಲಿ ನಗರ ಭಾಗದಲ್ಲಿ ಎರಡು ಪಟ್ಟು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮೂರು ಪಟ್ಟು ನಗದು ಪರಿಹಾರ ಅಥವಾ ವರ್ಗಾಯಿಸಬಹುದಾದ ಹಕ್ಕು (ಟಿಡಿಆರ್) ಅಥವಾ ನೆಲ ವಿಸ್ತೀರ್ಣ ಅನುಪಾತ (ಎಫ್ಎಆರ್) ಅಥವಾ ಶೇ 35ರಷ್ಟು ವಾಣಿಜ್ಯ ಭೂಮಿಯನ್ನು ಪಡೆಯಬಹುದು.
ಒಂದು ವೇಳೆ ವಾಣಿಜ್ಯ ಭೂಮಿ ಬೇಡ, ವಸತಿ ಪ್ರದೇಶದಲ್ಲಿ ಜಾಗ ಬೇಕು ಎಂದರೆ ಪ್ರಾಧಿಕಾರ ನಿರ್ಮಿಸುತ್ತಿರುವ ನೂತನ ಬಡಾವಣೆಗಳಲ್ಲಿ ಶೇ 40ರಷ್ಟು ಜಾಗ ನೀಡಲಾಗುತ್ತದೆ.
ಸಂಧಾನಿತ ಭೂ ಪರಿಹಾರ ಮೊತ್ತಕ್ಕೆ ಮೀರದ ಸಮಾನಾಂತರ ಮೌಲ್ಯವುಳ್ಳ ಡಾ.ಕೆ.ಶಿವರಾಮ ಕಾರಂತ ವಸತಿ ಬಡಾವಣೆ ಅಥವಾ ಪಿಆರ್ ಆರ್–1ರ ಸುತ್ತಮುತ್ತಲಿನ ವಸತಿ ಬಡಾವಣೆಗಳಲ್ಲಿ ವಸತಿ ನಿವೇಶನ ಪರಿಹಾರ ನೀಡಲಾಗತ್ತದೆ. 65:35ರ ಅನುಪಾತದಡಿ ಎಕರೆಯೊಂದಕ್ಕೆ 8,345 ಚದರ ಅಡಿ ಅಭಿವೃದ್ಧಿ ಪಡಿಸಿದ ವಾಣಿಜ್ಯ ನಿವೇಶನ ನೀಡಲಾಗುತ್ತದೆ.
ಭೂಸ್ವಾಧೀನಕ್ಕೆ ಒಳಪಡುವ ಭೂಮಿ ಕೃಷಿ ಭೂಮಿಯಾಗಿದ್ದಲ್ಲಿ ಕೃಷಿಯೇತರ ಭೂಮಿಯನ್ನಾಗಿ ಪರಿವರ್ತಿಸುವ ಶುಲ್ಕ, ಅಭಿವೃದ್ಧಿ ಶುಲ್ಕ ಹಾಗೂ ಇತರೆ ಶುಲ್ಕವನ್ನು ಪ್ರಾಧಿಕಾರ ಪಾವತಿಸಿಕೊಳ್ಳಲಿದೆ. ನಂತರ ಕೃಷಿ ಭೂಮಿಗೆ ಅಭಿವೃದ್ಧಿ ಹೊಂದಿದ ವಸತಿ ಉದ್ದೇಶದ ನಿವೇಶನದ ದರದಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಮಾರ್ಗಸೂಚಿ ದರಗಳ ಅನುಸಾರ ಟಿಡಿಆರ್ ನೀಡುತ್ತದೆ.
ಪರಿಹಾರ ದರಕ್ಕೆ ವಿರೋಧ
ಬಿಬಿಸಿ ಯೋಜನೆಗೆ ಸ್ವಾಧೀನ ಪಡಿಸಿಕೊಳ್ಳುತ್ತಿರುವ ಭೂಮಿಗೆ ಬಿಡಿಎ ಕಡಿಮೆ ದರ ನಿಗದಿ ಮಾಡಿದೆ. ಜಮೀನು ಕಳೆದುಕೊಂಡ ರೈತರಿಗೆ ಪುನವರ್ಸತಿ ಸೌಲಭ್ಯ ಕಲ್ಪಿಸುತ್ತಿಲ್ಲ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಪಿಆರ್‌ಆರ್ ರೈತ ಹಾಗೂ ನಿವೇಶನದಾರರ ಸಂಘದ ಆರೋಪಿಸಿದೆ. ‘ಕೇಂದ್ರ ಸರ್ಕಾರದ ಎಲ್‌ಎಆರ್‌ಆರ್ ಕಾಯ್ದೆ 2013 ಜಾರಿಯಲ್ಲಿದ್ದರೂ ಅದನ್ನು ಬದಿಗಿಟ್ಟು ಬಿಡಿಎ ತನ್ನದೇ ಖಾಸಗಿ ಪ್ಯಾಕೇಜ್ ಘೋಷಿಸಿದೆ. ವೆಂಕಟಾಲದಲ್ಲಿ ಮಾರುಕಟ್ಟೆ ಮೌಲ್ಯ ಎಕರೆಗೆ ₹ 56 ಕೋಟಿ ಇದೆ. ಆದರೆ ಪ್ರಾಧಿಕಾರ ಎಕರೆಗೆ ₹15.60 ಕೋಟಿ ನಿಗದಿ ಮಾಡಿದೆ. ಕೇಂದ್ರದ ಕಾಯ್ದೆಯಡಿ ಪರಿಹಾರಕ್ಕೆ ಆದಾಯ ತೆರಿಗೆ ವಿನಾಯಿತಿ ಇದೆ. ಆದರೆ ಬಿಡಿಎ ಈ ಬಗ್ಗೆ ಪತ್ರದಲ್ಲಿ ಎಲ್ಲಿಯೂ ಉಲ್ಲೇಖಿಸಿಲ್ಲ’ ಎಂದು ವರ್ತೂರು ರೈತ ಜಗದೀಶ್ ರೆಡ್ಡಿ ಬೇಸರ ವ್ಯಕ್ತಪಡಿಸಿದ್ದಾರೆ.
ಬಿಬಿಸಿ ಯೋಜನೆಗೆ ಸ್ವಾಧೀನಪಡಿಸಿಕೊಳ್ಳುವ ಭೂಮಿಗೆ ಉತ್ತಮ ದರವನ್ನು ನೀಡಲಾಗುತ್ತಿದೆ. ಈ ವಿಚಾರದಲ್ಲಿ ರೈತರಿಗೆ ಅನ್ಯಾಯವಾಗದ ಕಾರಣ ವದಂತಿಗಳಿಗೆ ಕಿವಿಗೊಡಬಾರದು.ಎಲ್.ಕೆ.ಅತೀಕ್, ಬಿಬಿಸಿ ವಿಶೇಷ ಉದ್ದೇಶದ ಘಟಕ (ಎಸ್‌ಪಿವಿ) ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.