ADVERTISEMENT

ತುರ್ತುಸೇವೆಗಳಿಗೆ ಮೀಸಲಿಟ್ಟಿರುವ ನಿವೇಶನ ಹಂಚಿಕೆ ಮಾಡಲು ಬಿಡಿಎ ಮೀನಮೇಷ

ಆರ್. ಮಂಜುನಾಥ್
Published 16 ಆಗಸ್ಟ್ 2025, 23:43 IST
Last Updated 16 ಆಗಸ್ಟ್ 2025, 23:43 IST
ಸರ್ ಎಂ. ವಿಶ್ವೇಶ್ವರಯ್ಯ ಬಡಾವಣೆಯ 2ನೇ ಬ್ಲಾಕ್‌ನ ಸಿ.ಎ ನಿವೇಶನ 9ರಲ್ಲಿ ಅಕ್ರಮ ನಿರ್ಮಾಣವನ್ನು ಅಗ್ನಿಶಾಮಕ ದಳ ಪೊಲೀಸರೇ ನಿಲ್ಲಿಸಿದ್ದರು
ಸರ್ ಎಂ. ವಿಶ್ವೇಶ್ವರಯ್ಯ ಬಡಾವಣೆಯ 2ನೇ ಬ್ಲಾಕ್‌ನ ಸಿ.ಎ ನಿವೇಶನ 9ರಲ್ಲಿ ಅಕ್ರಮ ನಿರ್ಮಾಣವನ್ನು ಅಗ್ನಿಶಾಮಕ ದಳ ಪೊಲೀಸರೇ ನಿಲ್ಲಿಸಿದ್ದರು   

ಬೆಂಗಳೂರು: ಪೊಲೀಸ್‌ ಠಾಣೆ, ಅಗ್ನಿಶಾಮಕ ಠಾಣೆಯಂತಹ ತುರ್ತುಸೇವೆಗಳಿಗೆ ಮೀಸಲಿಟ್ಟಿರುವ ನಿವೇಶನಗಳನ್ನು ಹಂಚಿಕೆ ಮಾಡಲು ಬಿಡಿಎ ದಶಕದಿಂದ ಮೀನಮೇಷ ಎಣಿಸುತ್ತಿದೆ.

ಸರ್‌ ಎಂ. ವಿಶ್ವೇಶ್ವರಯ್ಯ ಬಡಾವಣೆ ನಿರ್ಮಿಸಿ 15 ವರ್ಷ ಕಳೆದಿದೆ. ಬಡಾವಣೆಯ ನಕ್ಷೆಯಲ್ಲಿ ನಾಗರಿಕ ಸೌಲಭ್ಯ (ಸಿ.ಎ) ನಿವೇಶನಗಳನ್ನು ಗುರುತಿಸಲಾಗಿದೆ. ಪೊಲೀಸ್‌ ಠಾಣೆ, ಆಸ್ಪತ್ರೆ, ಶಾಲೆ, ಕಾಲೇಜು, ಅಗ್ನಿಶಾಮಕ ಠಾಣೆಯಂತಹ ಪ್ರಮುಖ ಸೇವೆಗಳಿಗೂ ನಿವೇಶನಗಳನ್ನು ಮೀಸಲಿಡಲಾಗಿದೆ. ಆದರೆ, ಅವುಗಳನ್ನು ಹಸ್ತಾಂತರಿಸಲು ಬಿಡಿಎ ಅಧಿಕಾರಿಗಳು ಮನಸ್ಸು ಮಾಡುತ್ತಿಲ್ಲ.

ವಿಶ್ವೇಶ್ವರಯ್ಯ ಬಡಾವಣೆಯ 2ನೇ ಬ್ಲಾಕ್‌ನ ನಕ್ಷೆಯಲ್ಲಿ ಸಿ.ಎ ನಿವೇಶನ ಸಂಖ್ಯೆ 4 ಅನ್ನು ‘ಅಗ್ನಿಶಾಮಕ ಠಾಣೆ’ ಎಂದು ನಮೂದಿಸಲಾಗಿದೆ. ಸುಮಾರು ಮೂರು ಮುಕ್ಕಾಲು ಎಕರೆ ವಿಸ್ತೀರ್ಣದ ಈ ನಿವೇಶನವನ್ನು ಹಂಚಿಕೆ ಮಾಡಿ ಎಂದು ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಹಾಗೂ ರಾಜ್ಯ ವಿಪತ್ತು ಸ್ಪಂದನಾ ಪಡೆಯ ನಿರ್ದೇಶನಾಲಯದ ಮಹಾ ನಿರ್ದೇಶಕರು 2024ರ ಫೆಬ್ರುವರಿ 12ರಂದು ಬಿಡಿಎ ಅಧ್ಯಕ್ಷರು ಹಾಗೂ ಆಯುಕ್ತರಿಗೆ ಪತ್ರ ಬರೆದಿದ್ದಾರೆ. 

ADVERTISEMENT

‘ಅಗ್ನಿಶಮನ, ಶೋಧನೆ–ರಕ್ಷಣೆ, ವಿಪತ್ತು ನಿರ್ವಹಣೆ, ಬಹುಮಹಡಿ ಕಟ್ಟಡ, ತೈಲೋತ್ಪನ್ನ, ಸ್ಫೋಟಕಗಳ ಶೇಖರಣೆಗೆ ನಿರಾಕ್ಷೇಪಣೆ ನೀಡುವುದು ಸೇರಿದಂತೆ ಅವಘಡಗಳ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಾರ್ವಜನಿಕರು, ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು, ಗಣ್ಯ ವ್ಯಕ್ತಿಗಳ ಭದ್ರತೆಗೆ ಅಗ್ನಿಶಾಮಕ ಠಾಣೆ ಸ್ಥಾಪಿಸುವುದು ಅಗತ್ಯವಾಗಿದೆ. ಹೀಗಾಗಿ, ನಿವೇಶನವನ್ನು ಇಲಾಖೆಗೆ ಹಂಚಿಕೆ ಮಾಡಿ, ಸ್ವಾಧೀನ ಪತ್ರ ನೀಡಬೇಕು’ ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ. ಆದರೆ, ಬಿಡಿಎ ಅಧಿಕಾರಿಗಳು ಸ್ಪಂದಿಸಿಲ್ಲ.

‘ಸಿ.ಎ ನಿವೇಶನ 4ರ ಪ್ರದೇಶದಲ್ಲಿ ಈ ಹಿಂದೆ ಕೆಲವರು ಅಕ್ರಮವಾಗಿ ಕಾಂಪೌಂಡ್‌ ನಿರ್ಮಿಸುತ್ತಿದ್ದರು. ಅಗ್ನಿಶಾಮಕ ದಳದವರೇ ಅದನ್ನು ತಡೆದಿದ್ದರು. ಹಂಚಿಕೆ ಪತ್ರ ನೀಡುವ ಬದಲು, ‘ಈ ಪ್ರದೇಶ ವ್ಯಾಜ್ಯದಲ್ಲಿದೆ’ ಎಂದು ಬಿಡಿಎ ಅಧಿಕಾರಿಗಳು ಮೌಖಿಕವಾಗಿ ಸಬೂಬು ಹೇಳುತ್ತಿದ್ದಾರೆ’ ಎಂದು ಸ್ಥಳೀಯ ನಿವಾಸಿ ಶಿವಕುಮಾರ್‌ ಆರೋಪಿಸಿದರು.

ಪೊಲೀಸ್‌ ಠಾಣೆ:

ವಿಶ್ವೇಶ್ವರ ಬಡಾವಣೆಯ 2ನೇ ಬ್ಲಾಕ್‌ನಲ್ಲಿ ಒಂದು ಎಕರೆ 20 ಗುಂಟೆಯಲ್ಲಿರುವ ಸಿ.ಎ ನಿವೇಶನ ಸಂಖ್ಯೆ 9 ಅನ್ನು ಪೊಲೀಸ್ ಠಾಣೆಗೆ ಮೀಸಲಿಡಲಾಗಿದೆ.  ಇದನ್ನು ಹಂಚಿಕೆ ಮಾಡಲು ಕೆಂಗೇರಿ ಇನ್‌ಸ್ಪೆಕ್ಟರ್‌ ಅವರು 2024ರ ಮೇ 30ರಂದು ಬಿಡಿಎ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ. ಈ ಮನವಿಗೂ ಪ್ರತಿಕ್ರಿಯೆ ಬಂದಿಲ್ಲ.

‘ವಿಶ್ವೇಶ್ವರಯ್ಯ ಬಡಾವಣೆ 1ರಿಂದ 9 ಬ್ಲಾಕ್‌ಗಳೊಂದಿಗೆ ರಚನೆಯಾಗಿದ್ದು, ಮಧ್ಯೆ ಖಾಸಗಿ ಬಡಾವಣೆ, ಹಳೆ ಊರುಗಳೂ ಇವೆ. ಹೀಗಾಗಿ, 2ನೇ ಬ್ಲಾಕ್‌ನಲ್ಲಿ ಪೊಲೀಸ್‌ ಠಾಣೆ ಅಗತ್ಯವಾಗಿದ್ದು, ನಿವೇಶನವನ್ನು ಹಂಚಿಕೆ ಮಾಡಿ, ಸ್ವಾಧೀನಕ್ಕೆ ನೀಡಿ’ ಎಂದು ಇನ್‌ಸ್ಪೆಕ್ಟರ್‌ ಮನವಿ ಮಾಡಿದ್ದಾರೆ.

ಪಿ. ಮಣಿವಣ್ಣನ್‌
ಅಧ್ಯಕ್ಷರೊಂದಿಗೆ ಚರ್ಚಿಸಿ ನಿರ್ಧಾರ:
ಮಣಿವಣ್ಣನ್‌ ‘ತುರ್ತುಸೇವೆಗಳಿಗೆ ಮೀಸಲಿಟ್ಟಿರುವ ನಾಗರಿಕರ ಸೌಲಭ್ಯದ ನಿವೇಶನಗಳನ್ನು ನಾವು ನೀಡಲೇಬೇಕು. ಈ ಬಗ್ಗೆ ಪರಿಶೀಲನೆ ನಡೆಸಿ ಅಧ್ಯಕ್ಷರೊಂದಿಗೆ ಚರ್ಚೆ ಮಾಡಿ ಅಗ್ನಿಶಾಮಕ ದಳ ಹಾಗೂ ಪೊಲೀಸ್‌ ಠಾಣೆಗಳಿಗೆ ನಿವೇಶನ ಹಸ್ತಾಂತರಿಸಲು ಶೀಘ್ರ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಬಿಡಿಎ ಆಯುಕ್ತ ಮಣಿವಣ್ಣನ್ ತಿಳಿಸಿದರು.
ಹಣವಿದೆ ನಿವೇಶನ ಇಲ್ಲ: ಶಿವಶಂಕರ್‌
‘ಅಗ್ನಿಶಾಮಕ ಠಾಣೆ ಸ್ಥಾಪಿಸಲು 15ನೇ ಹಣಕಾಸು ಯೋಜನೆಯಡಿ ನಮ್ಮಲ್ಲಿ ಹಣವಿದೆ. ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಅಗ್ನಿಶಾಮಕ ಠಾಣೆಗಾಗಿಯೇ ಮೀಸಲಿಟ್ಟರುವ ನಿವೇಶನವನ್ನು ಹಸ್ತಾಂತರಿಸಿ ಎಂದು ಬಿಡಿಎ ಅಧ್ಯಕ್ಷರು ಹಾಗೂ ಆಯುಕ್ತರಿಗೆ ಪತ್ರ ಬರೆದಿದ್ದೇವೆ. ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ’ ಎಂದು ಅಗ್ನಿಶಾಮಕ ಮತ್ತು ತುರ್ತುಸೇವೆಗಳ ನಿರ್ದೇಶಕ ಟಿ.ಎನ್‌. ಶಿವಶಂಕರ ತಿಳಿಸಿದರು.

ರಕ್ಷಣೆ ಇದ್ದರೆ ಮನೆ ಕಟ್ಟಿಕೊಳ್ಳುತ್ತಾರೆ: ಶಿವಕುಮಾರ್‌

‘ವಿಶ್ವೇಶ್ವರಯ್ಯ ಬಡಾವಣೆ ನಿರ್ಮಾಣವಾಗಿ 15 ವರ್ಷವಾಗುತ್ತಿದ್ದರೂ ಹೆಚ್ಚು ಜನರು ಇಲ್ಲಿ ಕಟ್ಟಡ ನಿರ್ಮಿಸಿಲ್ಲ. ಪೊಲೀಸ್‌ ಠಾಣೆ ಹಾಗೂ ಅಗ್ನಿಶಾಮಕ ಠಾಣೆಗಳಂತಹ ರಕ್ಷಣೆ– ತುರ್ತು ಸೌಲಭ್ಯಗಳು ಈ ಪ್ರದೇಶದಲ್ಲಾದರೆ ಜನರು ಧೈರ್ಯದಿಂದ ಇಲ್ಲಿ ವಾಸಿಸಲು ಬರುತ್ತಾರೆ. ಅಲ್ಲದೆ ಈ ಪ್ರದೇಶದ ಸುತ್ತಮುತ್ತಲಿನ ಜನರಿಗೆ ತುರ್ತುಸೇವೆಗಳು ಶೀಘ್ರವಾಗಿ ಸಿಗಬೇಕಾದ ಅಗತ್ಯವಿದೆ. ಶಾಸಕ ಎಸ್‌.ಟಿ. ಸೋಮಶೇಖರ್‌ ಅವರು ಬಿಡಿಎ ಅಧ್ಯಕ್ಷ ಹಾಗೂ ಆಯುಕ್ತರಿಗೆ ಪತ್ರ ಬರೆದು ನಿವೇಶನ ಮಂಜೂರು ಮಾಡಲು ಹೇಳಿದ್ದರೂ ಕ್ರಮವಾಗಿಲ್ಲ. ರಿಯಲ್‌ ಎಸ್ಟೇಟ್‌ ಕುಳಗಳಿಗೆ ಮಣೆ ಹಾಕಿ ಅಧಿಕಾರಿಗಳು ಹೆಚ್ಚಿನ ಲಾಭ ಗಳಿಸುವ ಹುನ್ನಾರ ನಡೆಸುತ್ತಿದ್ದಾರೆ’ ಎಂದು ಜಯಪ್ರಕಾಶ್‌ ನಾರಾಯಣ್‌ ವಿಚಾರ ವೇದಿಕೆಯ ಅಧ್ಯಕ್ಷ ಶಿವಕುಮಾರ್‌ ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.