ADVERTISEMENT

ಟಿಡಿಆರ್‌ ಪ್ರಕರಣ: ಬಿಡಿಎ ಎಂಜಿನಿಯರ್‌ ಕೃಷ್ಣಲಾಲ್‌ ಬಂಧನ

ಆರು ತಿಂಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2019, 21:51 IST
Last Updated 12 ನವೆಂಬರ್ 2019, 21:51 IST
ಕೃಷ್ಣಲಾಲ್‌
ಕೃಷ್ಣಲಾಲ್‌   

ಬೆಂಗಳೂರು:ಆರು ತಿಂಗಳಿಂದ ತಲೆ ಮರೆಸಿಕೊಂಡು, ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಕೃಷ್ಣಲಾಲ್‌ ಅವರನ್ನು ಮಂಗಳವಾರ ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಸ್ತೆ ವಿಸ್ತರಣೆಗಾಗಿ ಕೌಡೇನಹಳ್ಳಿಯಲ್ಲಿ ವಶಪಡಿಸಿಕೊಳ್ಳಲಾಗಿದ್ದ ಸರ್ವೆ ನಂಬರ್‌ 9ರ ಜಾಗದ ಟಿಡಿಆರ್‌ಸಿ (002961) ಅನ್ನು ನಿಜವಾದ ಮಾಲೀಕರಿಗೆ ವಂಚನೆ ಮಾಡಿ ಎನ್‌. ಮುನಿರಾಜು ಮತ್ತು ಎನ್‌. ಶ್ರೀನಿವಾಸ್‌ ಅವರಿಗೆ ವಿತರಿಸಿದ ಮತ್ತು ಸರ್ವೆ ನಂಬರ್‌ 10ರಲ್ಲಿ ವಶಪಡಿಸಿಕೊಂಡ ಕಟ್ಟಡದ ಪ್ರಮಾಣಕ್ಕಿಂತ ಹೆಚ್ಚು ಟಿಡಿಆರ್‌ಸಿವಿತರಿಸಿರುವಕುರಿತು ಎಸಿಬಿಪ್ರಕರಣ(24/2019)ದಾಖಲಿಸಿದೆ.

ಕೃಷ್ಣಲಾಲ್‌ ಬಿಬಿಎಂಪಿ ಮಹದೇವಪುರ ವಲಯದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಆಗಿದ್ದಾಗ ಟಿಡಿಆರ್‌ಗೆ ಸಂಬಂಧಿಸಿದ 47 ಕಡತಗಳು ನಾಪತ್ತೆ ಆಗಿವೆ.ಈ ಸಂಬಂಧ ಅಧಿಕಾರಿ ವಿರುದ್ಧ ಇನ್ನೊಂದು ಪ್ರಕರಣ ದಾಖಲಾಗಿದೆ.

ADVERTISEMENT

ಈಪ್ರಕರಣಗಳು ಮೇ ತಿಂಗಳಿನಲ್ಲಿ ದಾಖಲಾಗಿದ್ದು, ಅಂದಿನಿಂದ ತಲೆ ಮರೆಸಿಕೊಂಡಿದ್ದರು. ಅವರ ಬಂಧನಕ್ಕಾಗಿ ಎಸಿಬಿ ಅಧಿಕಾರಿಗಳು ಶೋಧ ನಡೆಸಿದ್ದರು. ಎಸಿಬಿ ತನಿಖೆಗೆ ಸಹಕರಿಸದ ಕೃಷ್ಣಲಾಲ್‌ ಅವರ ಮಧ್ಯಂತರ ಜಾಮೀನನ್ನು ವಿಶೇಷ ಲೋಕಾಯುಕ್ತ ನ್ಯಾಯಾಲಯ ರದ್ದುಪಡಿಸಿತ್ತು. ಬಳಿಕ ಹೈಕೋರ್ಟ್‌ ಮೆಟ್ಟಿಲೇರಿದ್ದ ಅವರಿಗೆ ಅಲ್ಲೂ ಹಿನ್ನಡೆಯಾಗಿತ್ತು. ಟಿಡಿಆರ್‌ ವಂಚನೆ ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಎಸಿಬಿ ಅಧಿಕಾರಿಗಳು ಕೃಷ್ಣಲಾಲ್‌ ಹಾಗೂ ಅವರ ಆಪ್ತರ ಮನೆಗಳ ಮೇಲೆ ದಾಳಿ ನಡೆಸಿ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.

ಕ್ರಮ ಕೈಗೊಳ್ಳದ ಬಿಬಿಎಂಪಿ: ಬಿಬಿಎಂಪಿ ಮಹದೇವಪುರ ವಲಯ ಕಚೇರಿಯಲ್ಲಿ ಟಿಡಿಆರ್‌ಗೆ ಸಂಬಂಧಪಟ್ಟ ಕಡತಗಳು ನಾಪತ್ತೆಯಾದ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವರದಿ ಕೊಡಲಾಗಿತ್ತು.

ಮಹದೇವಪುರ ವಲಯ ಕಚೇರಿ ಜಂಟಿ ಆಯುಕ್ತ ಹಾಗೂ ಮುಖ್ಯ ಎಂಜಿನಿಯರ್‌ ಟಿಡಿಆರ್‌ ಕಡತಗಳು ಕಣ್ಮರೆಯಾದ ಬಗ್ಗೆ ಉನ್ನತ ಅಧಿಕಾರಿಗಳಿಗೆ 2014ರಲ್ಲೇ ಪತ್ರ ಬರೆದಿದ್ದರು.

ಟಿಡಿಆರ್‌ ವಂಚನೆ ಪ್ರಕರಣದಲ್ಲಿ ಇನ್ನೂ ಅನೇಕ ಅಧಿಕಾರಿಗಳು ಭಾಗಿಯಾಗಿದ್ದಾರೆ. ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಹಾಗೂ ಮಧ್ಯವರ್ತಿಗಳು ಪ್ರಮುಖ ಪಾತ್ರ ವಹಿಸಿದ್ದಾರೆ. ಕೃಷ್ಣಲಾಲ್‌ ಅವರನ್ನು ಎಸಿಬಿ ಅಧಿಕಾರಿಗಳು ಪ್ರಶ್ನಿಸುತ್ತಿದ್ದು, ವಿಚಾರಣೆ ಬಳಿಕವಷ್ಟೇ ಎಲ್ಲ ಮಾಹಿತಿಗಳು ಬಯಲಿಗೆ ಬರಲಿವೆ ಎಂದು ಎಸಿಬಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.