ದಾಬಸ್ ಪೇಟೆ: ಶ್ರೀಪತಿಹಳ್ಳಿಯ ಹೊಲದಲ್ಲಿ ಸುಮಾರು 6 ವರ್ಷದ ಹೆಣ್ಣು ಕರಡಿಯೊಂದು ನಿತ್ರಾಣ ಸ್ಥಿತಿಯಲ್ಲಿ ಗುರುವಾರ ಕಾಣಿಸಿಕೊಂಡಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ಚಿಕಿತ್ಸೆ ನೀಡಿ ಬನ್ನೇರುಘಟ್ಟ ಅರಣ್ಯಧಾಮಕ್ಕೆ ಕಳುಹಿಸಿದ್ದಾರೆ.
ನೆಲಮಂಗಲ ತಾಲ್ಲೂಕು, ಸೋಂಪುರ ಹೋಬಳಿ ಶ್ರೀಪತಿಹಳ್ಳಿ ಗ್ರಾಮದ ಹೊಲದಲ್ಲಿ ಬಿದ್ದಿದ್ದ ಕರಡಿ ಬಾಯಿಗೆ ಗಂಭೀರ ಗಾಯವಾಗಿತ್ತು. ಹೊಲದ ಮೂರ್ನಾಲ್ಕು ಕಡೆಗಳಲ್ಲಿ ರಕ್ತ ಬಿದ್ದಿತ್ತು. ತೀವ್ರ ರಕ್ತಸ್ರಾವದಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿ ಕರಡಿ ಬಿದ್ದಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದರು.
‘ಸಾಮಾನ್ಯವಾಗಿ ಕರಡಿಗಳು ಆಹಾರ ಹರಸುತ್ತಾ ರಾತ್ರಿ ವೇಳೆ ಸಂಚರಿಸುತ್ತವೆ. ಈ ಸಂದರ್ಭದಲ್ಲಿ ಯಾರೋ ಹೊಡೆದಿರಬಹುದು ಅಥವಾ ಸಿಡಿಮದ್ದು ತಿಂದು ಬಾಯಿಗೆ ಗಾಯ ಆಗಿರಬಹುದು’ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟರು.
ನೆಲಮಂಗಲ ತಾಲ್ಲೂಕು ವಲಯ ಅರಣ್ಯ ಅರಣ್ಯಾಧಿಕಾರಿ ಮಂಜುನಾಥ್ ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿದರು. ವೈದ್ಯರು ಗಾಯಗೊಂಡ ಕರಡಿಗೆ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬನ್ನೇರುಘಟ್ಟ ಅರಣ್ಯಧಾಮಕ್ಕೆ ಕಳುಹಿಸಿದರು.
‘ರೈತರೇ ಹೆಚ್ಚಿರುವ ವೀರಸಾಗರ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಶ್ರೀಪತಿಹಳ್ಳಿಯಲ್ಲಿ ಕಾಡು ಹಂದಿಗಳು ಹೆಚ್ಚಿವೆ. ರಾತ್ರಿ ವೇಳೆ ಹಂದಿಗಳು ಬಂದು ಬೆಳೆಗಳನ್ನು ಹಾಳು ಮಾಡುತ್ತಿದ್ದು, ಬೆಳೆ ರಕ್ಷಣೆಗಾಗಿ ಸಿಡಿಮದ್ದು ಇಟ್ಟಿರಬಹುದು. ಅದನ್ನು ಕರಡಿ ತಿಂದಿರಬಹುದು ಅಥವಾ ಹಂದಿ ಅಂತ ತಿಳಿದು ಯಾರಾದರೂ ಹಲ್ಲೆ ಮಾಡಿರಬಹುದು. ಏನಾಗಿದೆ ಅನ್ನುವುದು ವೈದ್ಯರ ವರದಿಯಿಂದ ತಿಳಿಯಲಿದೆ’ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದರು.
ಚಿರತೆ ಓಡಾಟ ತಪ್ಪದ ಆತಂಕ
ದಾಬಸ್ ಪೇಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ತುಮಕೂರು ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಜಿನ್ನಯ್ಯನ ಪಾಳ್ಯ ಹಾಗೂ ಕುರುವೆಲ್ ತಿಮ್ಮನಹಳ್ಳಿ ಗ್ರಾಮದಲ್ಲಿ ಚಿರತೆ ಸಂಚರಿಸುತ್ತಿದ್ದು ಜನರಲ್ಲಿ ಆತಂಕ ಮೂಡಿಸಿದೆ. ಇಲ್ಲಿನ ಗುಂಡುತೋಪಿನ ಕಾಡಿನಲ್ಲಿ ಬುಧವಾರ ಮೇಕೆ ಮೇಲೆ ಚಿರತೆ ದಾಳಿ ಮಾಡಿದೆ.
ಮೇಕೆ ಮೇಲೆ ಚಿರತೆ ದಾಳಿ ಮಾಡಿದ ಸಂದರ್ಭದಲ್ಲಿ ಮೇಕೆ-ಕುರಿಗಾಹಿಗಳು ಕಿರುಚಾಡಿದಾಗ ಮೇಕೆಯನ್ನು ಬಿಟ್ಟು ಚಿರತೆ ಓಡಿಹೋಗಿದೆ. ಇದೇ ಗುಂಡುತೋಪಿನಲ್ಲಿ ಬುಗಡಿಹಳ್ಳಿ ಗೊಲ್ಲರಹಟ್ಟಿಯ ಮೇಕೆಯನ್ನು ತಿಂದಿತ್ತು. ಮೇ 20ರಂದು ಹಗಲಿನಲ್ಲೇ ಚಿರತೆ ಆನಂದ್ ಅವರ ತೋಟದಲ್ಲಿ ಕಾಣಿಸಿಕೊಂಡಿತ್ತು. ಸೆ.23ರಂದು ಹಸುವನ್ನು ಕೊಂದುಹಾಕಿತ್ತು.
‘ಚಿರತೆ ಈ ಭಾಗದಲ್ಲಿ ನಿರಂತರ ಓಡಾಡುತ್ತಿದೆ. ಹಿಡಿಯುವಂತೆ ಅರಣ್ಯ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಕ್ರಮ ಕೈಗೊಳ್ಳುತ್ತಿಲ್ಲ. ಮುಂದೆ ಜನರ ಮೇಲೆ ಬಿದ್ದರೆ ಏನು ಮಾಡುವುದು’ ಎಂದು ಸ್ಥಳೀಯರು ಪ್ರಶ್ನಿಸಿದರು.
ಜಿಗಣಿ ಸಮೀಪ ಚಿರತೆ ಓಡಾಟ
ಆನೇಕಲ್: ತಾಲ್ಲೂಕಿನ ಜಿಗಣಿ ಸಮೀಪ ನಿಸರ್ಗ ಮತ್ತು ಲೋಟಸ್ ಬಡಾವಣೆ ಸುತ್ತಮುತ್ತ ಗುರುವಾರ ರಾತ್ರಿ ಚಿರತೆ ಓಡಾಟದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಜನರು ಆತಂಕಗೊಂಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಸೆರೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಎಲೆಕ್ಟ್ರಾನಿಕ್‌ಸಿಟಿ ಹುಸ್ಕೂರು ಶಾಂತಿಪುರ ಗೂಳಿಮಂಗಲ ಭಾಗದಲ್ಲೂ ಚಿರತೆ ಓಡಾಟವಿದೆ ಆ ಭಾಗದ ನಿವಾಸಿಗಳು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.