ಕೆ.ಆರ್.ಪುರ: ಐಟಿ–ಬಿಟಿಗೆ ಹೆಸರಾಗಿರುವ ಬೆಳ್ಳಂದೂರು ಈಗ ರಸ್ತೆಯಲ್ಲಿ ಬಿದ್ದಿರುವ ದೊಡ್ಡ ದೊಡ್ಡ ಗುಂಡಿಗಳಿಂದಾಗಿ ಅಪಖ್ಯಾತಿ ಪಡೆಯುತ್ತಿದೆ. ವಾಹನಗಳ ಸರಾಗ ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿರುವ ಬಗ್ಗೆ ಐಟಿ ರಂಗದವರು ಧ್ವನಿ ಎತ್ತಿದ ಬಳಿಕ ಇಲ್ಲಿನ ಗುಂಡಿಗಳ ಬಗ್ಗೆ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದೆ.
ಹೊರ ವರ್ತುಲ ರಸ್ತೆಯಾದ ಬೆಳ್ಳಂದೂರಿಗೆ ಪಣತ್ತೂರು ಮೂಲಕ ನಿತ್ಯ ಲಕ್ಷಾಂತರ ವಾಹನಗಳು ಸಂಚರಿಸುತ್ತವೆ. ವರ್ತೂರು, ಸರ್ಜಾಪುರ ರಸ್ತೆಗಳ ಮೂಲಕವೂ ಸಾವಿರಾರು ಐಟಿ ಉದ್ಯೋಗಿಗಳು ಇಲ್ಲಿಗೆ ಬರುತ್ತಾರೆ. ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳಿಂದಾಗಿ ಇಲ್ಲಿನ ಸಂಚಾರ ನರಕವಾಗಿ ಪರಿವರ್ತನೆಗೊಂಡಿದೆ. ಮಳೆ ಬಂದಾಗ ರಸ್ತೆ ಯಾವುದು? ಗುಂಡಿ ಯಾವುದು? ಎಂದು ಗೊತ್ತಾಗದಷ್ಟು ನೀರು ತುಂಬಿರುತ್ತದೆ.
ಒಂದು ಕಿ.ಮೀ. ಚಲಿಸಲು ಅರ್ಧ ತಾಸು ಬೇಕಾಗುತ್ತದೆ. ಮನೆ ಬಿಟ್ಟು ಕಚೇರಿ ತಲುಪಲು ದಟ್ಟಣೆ ಮತ್ತು ಮಳೆಯ ಸಮಯದಲ್ಲಿ ನಾಲ್ಕು ತಾಸು ಸಾಕಾಗುತ್ತಿಲ್ಲ. ಇಲ್ಲಿನ ಸಂಚಾರ ನರಕಯಾತನೆಯಾಗಿದೆ ಎಂದು ಐಟಿ ಉದ್ಯೋಗಿಗಳು ದೂರಿದ್ದಾರೆ.
ಬ್ಲ್ಯಾಕ್‌ಬಕ್ ಸಂಸ್ಥಾಪಕ ರಾಜೇಶ್ ಯಬಾಜಿ, ಉದ್ಯಮಿ ಮೋಹನ್ ದಾಸ್ ಪೈ, ಬಯೊಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ಮುಂತಾದವರು ಈ ಬಗ್ಗೆ ಧ್ವನಿ ಎತ್ತಿದ ಬಳಿಕ ಇಲ್ಲಿನ ರಸ್ತೆಗಳು ಗಮನಸೆಳೆದಿವೆ.
‘ಬೆಳಿಗ್ಗೆ ಎಂಟು ಗಂಟೆಗೆ ಮನೆ ಬಿಡುವ ಪರಿಸ್ಥಿತಿ ಇದೆ. ಸಂಜೆ ನಾಲ್ಕು ಗಂಟೆಯ ನಂತರ ಮನೆ ಬಿಟ್ಟು ತೆರಳುವ ಹಾಗಿಲ್ಲ. ಮೊನ್ನೆ ಕೆಲಸದ ನಿಮಿತ್ತ ದೇವರಬಿಸನಹಳ್ಳಿ ಸಕ್ರ ಆಸ್ಪತ್ರೆಯಿಂದ ಬೆಳ್ಳಂದೂರಿನಲ್ಲಿರುವ ಮನೆಗೆ ಬರಲು ಒಂದೂವರೆ ಕಿ.ಮೀ. ದೂರಕ್ಕೆ 45 ನಿಮಿಷ ಬೇಕಾಯಿತು. ದ್ವಿಚಕ್ರ ವಾಹನದಲ್ಲಿಯೇ ಹೀಗಾದರೆ ಬಸ್‌ಗಳಲ್ಲಿ ಸಂಚರಿಸಿದರೆ ಇನ್ನೂ ಅಧಿಕ ಸಮಯ ಬೇಕಾಗುತ್ತದೆ’ ಎಂದು ಬೆಳ್ಳಂದೂರು ನಿವಾಸಿ ರಾಜೇಶ್ ಅನುಭವ ಹಂಚಿಕೊಂಡರು.
‘ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ರಸ್ತೆ ಅಭಿವೃದ್ಧಿ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಮೂಲಸೌಕರ್ಯಗಳಲ್ಲಿ ರಸ್ತೆಯೇ ಮುಖ್ಯ. ಅದೇ ಸರಿಯಿಲ್ಲದಿದ್ದರೆ ಸಂಕಷ್ಟ ಅನುಭವಿಸಬೇಕಾಗುತ್ತದೆ. ಜನಪ್ರತಿನಿಧಿಗಳು ಒಬ್ಬರನ್ನೊಬ್ಬರು ದೂರುವುದನ್ನು ಬಿಟ್ಟು ಅಭಿವೃದ್ಧಿ ಪಥದ ಕಡೆ ಚಿಂತನೆ ನಡೆಸಿದರೆ ಮಾತ್ರ ಸಮಸ್ಯೆ ಬಗೆಹರಿಯಲು ಸಾಧ್ಯ’ ಎಂದು ವಕೀಲ ಸಂತೋಷ್ ತಿಳಿಸಿದರು.
ಪಕ್ಕದ ಬೊಮ್ಮನಹಳ್ಳಿ ಅಭಿವೃದ್ಧಿಯಾಗಿದೆ. ಮಹದೇವಪುರದಲ್ಲಿ ಮಾತ್ರ ಅಭಿವೃದ್ಧಿ ಗಗನಕುಸುಮವಾಗಿದೆ. ರಸ್ತೆಗಳು ಹೊಂಡಮಯವಾಗಿವೆ. ಇಲ್ಲಿನ ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಪಣತ್ತೂರಿನ ಕಾಂಗ್ರೆಸ್ ಮುಖಂಡ ಮಹೇಶ್ ಆರಾಧ್ಯ ದೂರಿದರು.
ಬೆಳ್ಳಂದೂರಿನಂತೆ ಪ್ರಮುಖ ಸಂಪರ್ಕದ ಜಾಲ ಹೊಂದಿರುವ ಕನ್ನೆಲ್ಲಿ ರಸ್ತೆ, ವರ್ತೂರು ರಸ್ತೆ, ಬೋಗನಹಳ್ಳಿ ರಸ್ತೆ, ಮುನ್ನೆನಕೊಳಲು ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಕೆಲವೆಡೆ ರಸ್ತೆಗಳಿಗೆ ಚರಂಡಿ ವ್ಯವಸ್ಥೆ ಇಲ್ಲ. ಸಾವಿರಾರು ಅಪಾರ್ಟ್‌ಮೆಂಟ್‌ಗಳಿಗೆ ಸರಿಯಾದ ರಸ್ತೆಯೇ ಇಲ್ಲ. ರಸ್ತೆ ಇರುವ ಕಡೆ ಬಸ್ ತಂಗುದಾಣಗಳಿಲ್ಲ ಎಂದು ಹೇಳಿದರು.
ದಟ್ಟಣೆ ಕಡಿಮೆ ಮಾಡಲು ರಸ್ತೆ ನಿರ್ಬಂಧ
ಬೆಂಗಳೂರು: ಎಚ್ಎಎಲ್ ವಿಮಾನ ನಿಲ್ದಾಣ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಹೊರವರ್ತುಲ ರಸ್ತೆಯಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಸೆ.19ರಿಂದ 26ರ ವರೆಗೆ ವಾಹನಗಳ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ಲೇ ಅರೇಬಿಯಾ ಬಿರಿಯಾನಿ ಜೋನ್ ಕ್ರೋಮ ಜಂಕ್ಷನ್ ಬಳಿ ಹೊರವರ್ತುಲ ರಸ್ತೆಯಿಂದ ಮಾರತ್ತಹಳ್ಳಿ–ಕಾಡು ಬೀಸನಹಳ್ಳಿ ಸರ್ವಿಸ್ ರಸ್ತೆಗೆ ಸಂಚರಿಸುವ ಎಲ್ಲ ಮಾದರಿಯ ವಾಹನಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಮಹದೇವಪುರ ಕಾರ್ತಿಕ್‌ನಗರ ಕಡೆಯಿಂದ ಲೇ ಅರೇಬಿಯಾ ಮತ್ತು ಬಿರಿಯಾನಿ ಪಾಯಿಂಟ್ ಮೂಲಕ ಮಾರತ್‌ಹಳ್ಳಿ– ಕಾಡುಬೀಸನಹಳ್ಳಿ ಸರ್ವಿಸ್ ರಸ್ತೆಗೆ ಸಂಚರಿಸುವ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಕಲಾಮಂದಿರ ಬಳಿ ಸರ್ವಿಸ್ ರಸ್ತೆಗೆ ತೆರಳಿ ಮಾರತ್‌ಹಳ್ಳಿಯ ಕಾಂತಿ ಸ್ವೀಟ್ಸ್ ಕೆಳಸೇತುವೆ ಬಳಿ ಯು–ಟರ್ನ್ ತೆಗೆದುಕೊಂಡು ಮಾರತ್ತಹಳ್ಳಿ ಸೇತುವೆ ಬಳಿ ಎಡಕ್ಕೆ ತಿರುಗಿ ಮುನ್ನೇನಕೊಳಲು ಕಾಡುಬೀಸನಹಳ್ಳಿ ಜಂಕ್ಷನ್ ಪಣತ್ತೂರು ಮತ್ತು ಕರಿಯಮ್ಮನ ಅಗ್ರಹಾರ ಕಡೆಗೆ ಹೋಗಲು ಸರ್ವಿಸ್ ರಸ್ತೆಯಲ್ಲಿ ಸಂಚರಿಸಬಹುದು. ದೇವರಬೀಸನಹಳ್ಳಿ ಹಾಗೂ ಬೆಳ್ಳಂದೂರು ಕಡೆಗೆ ಸಂಚರಿಸುವ ವಾಹನಗಳು ಹೊರವರ್ತುಲ ರಸ್ತೆಯ ಮೂಲಕವೇ ಸಂಚರಿಸಬೇಕು ಎಂದು ಸಂಚಾರ ಪೂರ್ವ ವಿಭಾಗದ ಡಿಸಿಪಿ ಸಾಹಿಲ್ ಬಾಗ್ಲಾ ತಿಳಿಸಿದ್ದಾರೆ.
ವರ್ತೂರು–ಗುಂಜೂರು ಕಥೆಯೂ ಭಿನ್ನವಿಲ್ಲ
ವರ್ತೂರು–ಗುಂಜೂರು ರಸ್ತೆಯಲ್ಲಿಯೂ ಸಂಚಾರ ನರಕಯಾತನೆಯಾಗಿದೆ. ಮುತ್ತಸಂದ್ರದ ವರ್ತೂರು ಕೋಡಿ ಬಳಿ 1 ಕಿ.ಮೀ.ಗಿಂತ ಕಡಿಮೆ ದೂರವನ್ನು ಕ್ರಮಿಸಲು ಅರ್ಧ ತಾಸು ಬೇಕಾಗಿದೆ. ವರ್ತೂರು-ಗುಂಜೂರು ರಸ್ತೆಯಲ್ಲಿ ವಿಪರೀತ ದಟ್ಟಣೆ ಉಂಟಾಗುತ್ತಿದೆ.
‘ನನ್ನ ಮನೆಗೆ ತಲುಪಲು ಯಾವುದೇ ಪರ್ಯಾಯ ಮಾರ್ಗಗಳಿಲ್ಲ. ಇದೇ ರಸ್ತೆಯನ್ನು ಬಳಸುತ್ತಿದ್ದೇನೆ. ಪೆಟ್ರೋಲ್ ಬಂಕ್ ಮತ್ತು ಪೊಲೀಸ್ ಠಾಣೆ ನಡುವಿನ ರಸ್ತೆ ಬಹುತೇಕ ಪ್ರತಿದಿನ ಪಾರ್ಕಿಂಗ್ ಸ್ಥಳವಾಗಿ ಬದಲಾಗುತ್ತಿರುವುದರಿಂದ ಸಂಚಾರಕ್ಕೆ ತೊಡಕಾಗಿದೆ’ ಎಂದು ಸ್ಥಳೀಯ ನಿವಾಸಿ ಮಿಥುನ್ ಗಂಗಾಧರ್ ಹೇಳಿದರು.
ರಸ್ತೆಯ ಒಂದು ಭಾಗದಲ್ಲಿ ಕಾಮಗಾರಿ ನಡೆದಿದ್ದು ಇನ್ನೊಂದು ಭಾಗ ಹಾಗೇ ಉಳಿದಿದೆ. ಐದು ತಿಂಗಳ ಹಿಂದೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ವರ್ತೂರು-ಗುಂಜೂರು ರಸ್ತೆ ಕಾಮಗಾರಿ ಪರಿಶೀಲನೆ ನಡೆಸಿದ್ದರು. ₹ 20 ಕೋಟಿ ವೆಚ್ಚದ ಈ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಸೂಚಿಸಿದ್ದರು. ಆದರೆ ಯಾವುದೇ ಪ್ರಗತಿಯಾಗಿಲ್ಲ ಎಂದು ಸ್ಥಳೀಯರು ದೂರಿದರು.
ಜನರು ಏನಂತಾರೆ?
ಪ್ರತಿಸಲ ಮಳೆ ಬಂದಾಗೆಲ್ಲ ಗುಂಡಿಗಳು ಸಾಮಾನ್ಯವಾಗಿವೆ. ಬೀದಿಬದಿಯ ವ್ಯಾಪಾರಿಗಳು ರಸ್ತೆಯನ್ನು ಅತಿಕ್ರಮಿಸಿಕೊಂಡು ವ್ಯಾಪಾರ ಮಾಡುವುದು ಸಾಮಾನ್ಯವಾಗಿದೆ. ಐಟಿ ಕಾರಿಡಾರ್ ಎನಿಸಿಕೊಂಡಿರುವ ಬೆಳ್ಳಂದೂರಿಗೆ ಪ್ರಥಮ ಆದ್ಯತೆ ನೀಡಿ ರಸ್ತೆ ಹಾಗೂ ಸಂಚಾರ ವ್ಯವಸ್ಥೆ ಸುಧಾರಿಸಬಹುದಿತ್ತು. ಆದರೆ ಆ ರೀತಿ ಮಾಡಿಲ್ಲ.– ರಾಜೇಶ್, ಬೆಳ್ಳಂದೂರು ನಿವಾಸಿ
ಮಾಹಿತಿ ತಂತ್ರಜ್ಞಾನಕ್ಕೆ ಪ್ರಸಿದ್ಧಿಯಾಗಿರುವ ಮಹದೇವಪುರ ಕ್ಷೇತ್ರ ಈಗ ಸಂಚಾರ ದಟ್ಟಣೆಗೆ ಪ್ರಸಿದ್ಧಿ ಪಡೆಯುತ್ತಿದೆ. ಕಚೇರಿಗೆ ತೆರಳಲು ನಾಲ್ಕು ಗಂಟೆ ಮುಂಚೆ ಮನೆ ಬಿಡಬೇಕು. ಸಿಲ್ಕ್ ಬೋರ್ಡ್ ರಸ್ತೆಯಿಂದ ಬೆಳ್ಳಂದೂರಿಗೆ ತೆರಳಲು ಎರಡು ತಾಸು ಬೇಕು.– ಸಂತೋಷ್, ವಕೀಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.