ADVERTISEMENT

ರೈಲು ಕೋಚ್‌ ಉತ್ಪಾದನಾ ಚಟುವಟಿಕೆಗೆ ಚಾಲನೆ:53 ಮೆಟ್ರೊ ರೈಲು ಪೂರೈಸಲಿರುವ ಬೆಮೆಲ್‌

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2024, 22:30 IST
Last Updated 31 ಆಗಸ್ಟ್ 2024, 22:30 IST
ಬೆಮೆಲ್‌ನಲ್ಲಿ ತಯಾರಾಗಲಿರುವ ಮೆಟ್ರೊ ರೈಲು ಕೋಚ್‌
ಬೆಮೆಲ್‌ನಲ್ಲಿ ತಯಾರಾಗಲಿರುವ ಮೆಟ್ರೊ ರೈಲು ಕೋಚ್‌   

ಬೆಂಗಳೂರು: ‘ನಮ್ಮ ಮೆಟ್ರೊ’  ಗುಲಾಬಿ ಮತ್ತು ನೀಲಿ ಮಾರ್ಗಗಳಿಗೆ ಮೆಟ್ರೊ ರೈಲುಗಳನ್ನು ಬೆಮೆಲ್‌ (ಬಿಎಂಎಲ್‌) ಪೂರೈಸಲಿದ್ದು, ರೈಲು ಕೋಚ್‌ ಉತ್ಪಾದನಾ ಚಟುವಟಿಕೆಗೆ ಶನಿವಾರ ಚಾಲನೆ ನೀಡಲಾಯಿತು.

ಕಾಳೇನ ಅಗ್ರಹಾರದಿಂದ ನಾಗವಾರ ಸಂಪರ್ಕಿಸುವ ಗುಲಾಬಿ ಮಾರ್ಗವು 21.76 ಕಿ.ಮೀ. ಉದ್ದವಿದೆ. ಈ ಮಾರ್ಗವು 2025ರ ಡಿಸೆಂಬರ್‌ ಒಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಅದೇ ರೀತಿ ಕಸ್ತೂರಿನಗರ ರೇಷ್ಮೆ ಮಂಡಳಿಯಿಂದ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ನೀಲಿ ಮಾರ್ಗವು ಎರಡು ಹಂತಗಳಲ್ಲಿ ನಿರ್ಮಾಣಗೊಳ್ಳುತ್ತಿದೆ. 58.19 ಕಿಲೋಮೀಟರ್‌ ಉದ್ದ ಇರುವ ಈ ಮಾರ್ಗವು 2026ರ ಡಿಸೆಂಬರ್‌ ಒಳಗೆ ಪೂರ್ಣಗೊಳಿಸುವ ಗುರಿಯನ್ನು ಬಿಎಂಆರ್‌ಸಿಎಲ್‌ ಇಟ್ಟುಕೊಂಡಿದೆ. ಈ ಎರಡು ಮಾರ್ಗಗಳಿಗೆ ಒಟ್ಟು 53 ಮೆಟ್ರೊ ರೈಲುಗಳು ಅಗತ್ಯವಿದ್ದು, ಬೆಮೆಲ್‌ ಪೂರೈಸಲಿದೆ.

‘53 ರೈಲು ಕೋಚ್‌ಗಳನ್ನು ಪೂರೈಸುವ ಟೆಂಡರ್‌ ಅನ್ನು 2023ರಲ್ಲಿ ಬೆಮೆಲ್‌ ಪಡೆದುಕೊಂಡಿತ್ತು. ₹3,177 ಕೋಟಿ ಮೊತ್ತದ ಈ ಟೆಂಡರ್‌ನ ಒಪ್ಪಂದದ ಪ್ರಕಾರ ಕೋಚ್‌ಗಳ ತಯಾರಿಸಿ ಪೂರೈಸುವುದಲ್ಲದೇ, ಪರೀಕ್ಷೆ ಮತ್ತು ಮುಂದಿನ 15 ವರ್ಷಗಳವರೆಗೆ ನಿರ್ವಹಣೆಯನ್ನು ಕೂಡ ಬೆಮೆಲ್‌ ಮಾಡಬೇಕಿದೆ’ ಎಂದು ಬೆಮೆಲ್‌ ವ್ಯವಸ್ಥಾಪಕ ನಿರ್ದೇಶಕ ಶಂತನು ರಾಯ್‌ ತಿಳಿಸಿದರು.

ADVERTISEMENT

ವಿಶೇಷವಾಗಿ ವಿನ್ಯಾಸಗೊಳಿಸಿದ ಲಗೇಜ್‌ ರ‍್ಯಾಕ್‌, ಸುಧಾರಿತ ಅಗ್ನಿ ಸುರಕ್ಷತೆ, ಅಡಚಣೆ, ಹಳಿ ತಪ್ಪುವಿಕೆ ಪತ್ತೆ ವ್ಯವಸ್ಥೆ, ಪ್ಯಾಸೆಂಜರ್‌ ಅಲಾರಮ್‌ ಡಿವೈಸ್‌, ಸಿಬಿಟಿಸಿ ಆಧಾರಿತ ಸಿಗ್ನಲಿಂಗ್‌ ಹೀಗೆ ಸುಧಾರಿತ ಮೆಟ್ರೊ ರೈಲು ಸೆಟ್‌ಗಳು ಪ್ರಯಾಣಿಕರಿಗೆ ಹೊಸ ಅನುಭವವನ್ನು ನೀಡಲಿದೆ. ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿಗೆ ಸೂಕ್ತವಾಗುವ ರೈಲು ಸೆಟ್‌ಗಳು ಇದಾಗಿವೆ ಎಂದು ಅವರು ವಿವರಿಸಿದರು.

ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಎಂ. ಮಹೇಶ್ವರ ರಾವ್‌ ಮಾತನಾಡಿ, ‘ನಗರದ ಸಾರಿಗೆ ವ್ಯವಸ್ಥೆಯಲ್ಲಿ ನಮ್ಮ ಮೆಟ್ರೊ ಪ್ರಮುಖ ಪಾತ್ರ ವಹಿಸುತ್ತಿದೆ. ಗುಲಾಬಿ ಮತ್ತು ನೀಲಿ ಮಾರ್ಗಗಳಿಗೆ ಬೇಕಾದ ರೈಲು ಕೋಚ್‌ಗಳನ್ನು ಸಕಾಲದಲ್ಲಿ ಬೆಮೆಲ್‌ ಪೂರೈಸಲಿದೆ’ ಎಂದು ತಿಳಿಸಿದರು.

ಬೆಮೆಲ್‌ನಲ್ಲಿ ರೈಲು ಕೋಚ್‌ ಉತ್ಪಾದನಾ ಚಟುವಟಿಕೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಬಿಎಂಆರ್‌ಸಿಎಲ್‌ ಮತ್ತು ಬೆಮೆಲ್‌ ಅಧಿಕಾರಿಗಳು, ತಂತ್ರಜ್ಞರು ಭಾಗವಹಿಸಿದ್ದರು.

2023ರಲ್ಲೇ ಟೆಂಡರ್‌ ಪಡೆದುಕೊಂಡಿದ್ದ ಬೆಮೆಲ್‌ ₹3,177 ಕೋಟಿ ಮೊತ್ತದ ಒಪ್ಪಂದ ಮುಂದಿನ 15 ವರ್ಷಗಳವರೆಗೆ ನಿರ್ವಹಣೆಯ ಹೊಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.