
ನೆಲಮಂಗಲ: ದೇವನಹಳ್ಳಿ ವಿಮಾನ ನಿಲ್ದಾಣ ರಸ್ತೆಯಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಆರು ವರ್ಷಗಳದ ಹಿಂದೆ ಆರಂಭವಾದ ನೆಲಮಂಗಲ-ದೇವನಹಳ್ಳಿ ಸಿಗ್ನಲ್‌ರಹಿತ ರಸ್ತೆ ಕಾಮಗಾರಿ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ.
ಈ ರಸ್ತೆಯಲ್ಲಿ ನಿತ್ಯ ಸಂಚರಿಸುವ ವಾಹನ ಸವಾರರು ಹೈರಾಣಾಗಿದ್ದಾರೆ. ರಸ್ತೆಯ ಇಕ್ಕೆಲಗಳಲ್ಲಿ ಇರುವ ಅಂಗಡಿಗಳವರು, ನಿವಾಸಿಗಳು ದೂಳು ಸೇವಿಸಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಅಲ್ಲದೆ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ಈಗಾಗಲೇ ಕಾಮಗಾರಿ ಮುಗಿಯಬೇಕಾಗಿತ್ತಾದರೂ ಯೋಜನೆ ಬದಲಾದ ಕಾರಣ ಭೂಸ್ವಾಧೀನ ಮತ್ತಿತರ ಕಾರಣದಿಂದ ಕಾಮಗಾರಿ ವಿಳಂಬವಾಗುತ್ತಲೇ ಇದೆ.
ಕೆಆರ್‌ಡಿಸಿಎಫ್‌ಗೆ ವರ್ಗ: ಒಟ್ಟು 39 ಕಿ.ಮೀ. ಉದ್ದದ ರಸ್ತೆ ಇದಾಗಿದ್ದು, ಗೊಲ್ಲಹಳ್ಳಿ, ಚಿಕ್ಕಮದುರೆ (ಕನಸವಾಡಿ), ಬ್ಯಾತ, ರಾಜಾನುಕುಂಟೆ, ದೇವನಹಳ್ಳಿ ಮಾರ್ಗವಾಗಿ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲಿದೆ.
ಪಟ್ಟಣದ ಬಿ.ಎಚ್ ರಸ್ತೆಯಿಂದ ದೊಡ್ಡಬಳ್ಳಾಪುರಕ್ಕೆ ತಿರುವು ಪಡೆಯುವಲ್ಲಿಯಿಂದ ಬಸವನಹಳ್ಳಿವರೆಗೆ ಹಾಗೂ ಹ್ಯಾಡಾಳು, ರೈಲ್ವೆ ಗೊಲ್ಲಹಳ್ಳಿ, ಅರ್ಜುನ ಬೆಟ್ಟಹಳ್ಳಿ, ಕ್ರಾಸ್‌ವರೆಗಿನ ರಸ್ತೆ ಕಾಮಗಾರಿ ಸ್ಥಗಿತಗೊಂಡಿದೆ.
ಆರಂಭದಲ್ಲಿ ಲೋಕೋಪಯೋಗಿ ಇಲಾಖೆ ಕೈಗೆತ್ತಿಕೊಂಡಿದ್ದ ಈ ಕಾಮಗಾರಿಯು ಬಳಿಕ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮಕ್ಕೆ (ಕೆಆರ್‌ಡಿಸಿಎಲ್) ವರ್ಗಾವಣೆಯಾಗಿದೆ. ಆದರೆ, ಇದರಿಂದ ಯಾವುದೇ ಪ್ರಯೋಜನ ಆದಂತೆ ಕಾಣುತ್ತಿಲ್ಲ.
‘ರಸ್ತೆಯಲ್ಲಿ ಗುಂಡಿಗಳು ಇರುವುದರಿಂದ ಸಂಜೆ ವೇಳೆ ನೆಲಮಂಗಲದಿಂದ ಬಸವನಹಳ್ಳಿಗೆ 1 ಕಿ.ಮೀ. ದೂರ ಕ್ರಮಿಸಲು 30 ನಿಮಿಷದಿಂದ ಒಂದು ತಾಸು ಬೇಕಾಗುತ್ತದೆ. ಎಷ್ಟೋ ಬಾರಿ ಟೈರ್‌ಗಳು ಒಡೆದು ಆಕ್ಸೆಲ್ ತುಂಡಾಗಿ ವಾಹನಗಳು ಹಾಳಾಗುತ್ತಿವೆ’ ಎಂದು ಸೋಲೂರು ಹೋಬಳಿ ಗುಡೆಮಾರನಹಳ್ಳಿಯಿಂದ ನಿತ್ಯ ದಾಸನಪುರದ ಎಪಿಎಂಸಿಗೆ ತರಕಾರಿ ಸಾಗಿಸುವ ಪ್ರವೀಣ್ ಪರಿಸ್ಥಿತಿ ವಿವರಿಸಿದರು.
ಎಲ್ಲೆಲ್ಲಿ ಹೇಗಿದೆ ಸ್ಥಿತಿ?: ಗೊಲ್ಲಹಳ್ಳಿ ರೈಲ್ವೆ ಹಳಿ ದಾಟಲು ಪ್ರಾರಂಭಿಸಿದ್ದ ಮೇಲ್ಸೇತುವೆ ಕಾಮಗಾರಿ ಅರ್ಧಕ್ಕೆ ನಿಂತಿದೆ. ಮೇಲ್ಸೇತುವೆ ಕಾಮಗಾರಿ ವಿನ್ಯಾಸ ಬದಲಾವಣೆ ಹಾಗೂ ಭೂ ಸ್ವಾಧೀನಕ್ಕೆ ನಿಗದಿಯಾಗಿದ್ದ ದರ ಹೆಚ್ಚಳ, ಕೆಆರ್‌ಡಿಸಿಎಲ್, ಸರ್ಕಾರ ಹಾಗೂ ಗುತ್ತಿಗೆದಾರರ ನಡುವಿನ ಹಗ್ಗಜಗ್ಗಾಟದಿಂದಾಗಿ ಕಾಮಗಾರಿ ಮುಗಿಯುತ್ತಿಲ್ಲ.
‘ರೈಲ್ವೆ ಮೇಲ್ಸೇತುವೆ ತುರ್ತಾಗಿ ಆಗಬೇಕಾಗಿದೆ. ಈಗಿರುವ ಅಂಡರ್‌ಪಾಸ್‌ನಲ್ಲಿ ಭಾರಿ ವಾಹನಗಳು ತಿರುವು ಪಡೆಯುವುದು ಕಷ್ಟವಾಗಿದೆ. ನಿಧಾನಗತಿಯ ಸಂಚಾರದಿಂದ ಅರ್ಜುನಬೆಟ್ಟಹಳ್ಳಿಯ 1 ಕಿ.ಮೀವರೆಗೂ ಸಂಚಾರ ದಟ್ಟಣೆ ಉಂಟಾಗುತ್ತದೆ’ ಎಂದು ಬೊಮ್ಮಶೆಟ್ಟಹಳ್ಳಿ ನಿವಾಸಿ ಕೆಂಪರಾಜು ಹೇಳಿದರು.
‘18 ಮೀಟರ್ ಅಗಲಕ್ಕೆ ಮಂಜೂರಾಗಿದ್ದ ರಸ್ತೆ ನಂತರ 20.6 ಮೀಟರ್‌ಗೆ ಚತುಷ್ಪಥ ರಸ್ತೆಯಾಗಿ ವಿಸ್ತರಣೆಯಾಯಿತು. ಇದರಿಂದ ಭೂ ಸ್ವಾಧೀನ ಪ್ರಕ್ರಿಯೆ ಹಾಗೂ ಪರಿಹಾರ ವಿತರಣೆ ವಿಳಂಬವಾಯಿತು. ಭೂಮಿಯ ಬೆಲೆ ಹೆಚ್ಚಾಗಿದ್ದರಿಂದ ಸ್ವಾಧೀನ ದರ ಹೆಚ್ಚಾಯಿತು. ಈಗ ಪ್ರಕ್ರಿಯೆ ಮುಗಿದಿದ್ದು, ಬಾಕಿ ಇರುವ ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳ್ಳಲಿದೆ’ ಎಂದು ಕೆಆರ್‌ಡಿಸಿಎಲ್ ಅಧಿಕಾರಿಯೊಬ್ಬರು ತಿಳಿಸಿದರು.
ರಸ್ತೆ ಸಂಪೂರ್ಣ ಹಾಳಾಗಿರುವುದರಿಂದ ಸಂಚಾರ ದಟ್ಟಣೆ ಉಂಟಾಗಿ ವಿಪರೀತ ಶಬ್ದದಿಂದ ರಾತ್ರಿ ವೇಳೆ ನಿದ್ದೆ ಬರುತ್ತಿಲ್ಲ ರಸ್ತೆ ಕಾಮಗಾರಿ ಯಾವಾಗ ಮುಗಿಯುತ್ತದೋ ಎಂದು ಕಾಯುತ್ತಿದ್ದೇವೆ.– ಎನ್.ಎಸ್.ಶಿವರಾಜ್, ವಿಶ್ವೇಶ್ವರಪುರ ನಿವಾಸಿ
ಭೂ ಸ್ವಾಧೀನ ಪ್ರಕ್ರಿಯೆ ಹೆಚ್ಚಿನ ಪರಿಹಾರಕ್ಕೆ ಆಗ್ರಹಿಸಿ ರೈತರು ನ್ಯಾಯಾಲಯದ ಮೊರೆಹೋಗಿರುವುದರಿಂದ ವಿಳಂಬವಾಗಿದೆ. ಕೆಆರ್‌ಡಿಸಿಎಲ್ ಅಧಿಕಾರಿಗಳ ಜತೆಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಶೀಘ್ರ ಪರಿಹಾರ ಕಂಡುಕೊಳ್ಳುತ್ತೇವೆ..– ಎನ್.ಶ್ರೀನಿವಾಸ್, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.