
ಬೆಂಗಳೂರು: ವೇಗವಾಗಿ ಚಲಿಸುತ್ತಿದ ಆ್ಯಂಬುಲೆನ್ಸ್ ಎರಡು ಬೈಕ್‌ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಮೃತಪಟ್ಟು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ವಿಲ್ಸನ್ ಗಾರ್ಡನ್‌ನ ಕೆ.ಎಚ್. ರಸ್ತೆಯಲ್ಲಿ ಶನಿವಾರ ತಡರಾತ್ರಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದ ಬಳಿಕ ಪರಾರಿಯಾಗಿದ್ದ ಆ್ಯಂಬುಲೆನ್ಸ್ ಚಾಲಕನನ್ನು ಪೊಲೀಸರು ಪತ್ತೆ ಮಾಡಿ ವಿಚಾರಣೆಗೆ ಒಳಪಡಿಸಿದ್ದಾರೆ.
ಪ್ರತ್ಯಕ್ಷದರ್ಶಿ ದಾಖಲಿಸಿರುವ ದೂರಿನಲ್ಲಿ, ಆ್ಯಂಬುಲೆನ್ಸ್ ಶಾಂತಿನಗರದಿಂದ ಲಾಲ್‌ಬಾಗ್ ಕಡೆಗೆ ಅತ್ಯಂತ ವೇಗವಾಗಿ ಚಲಿಸುತ್ತಿತ್ತು. ಇಸ್ಮಾಯಿಲ್ ನಥನ್ ದಬಾಪು(40) ಮತ್ತು ಅವರ ಪತ್ನಿ ಸಮೀನಾ ಬಾನು(33) ಪ್ರಯಾಣಿಸುತ್ತಿದ್ದ ಸುಜುಕಿ ಬೈಕ್‌ಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ನಿಯಂತ್ರಣ ತಪ್ಪಿದ್ದ ಆ್ಯಂಬುಲೆನ್ಸ್ ಮತ್ತೆ ಮೊಹಮ್ಮದ್ ರಯಾನ್ (29) ಮತ್ತು ಹಿಂಬದಿ ಸವಾರ ಮೊಹಮ್ಮದ್ ಸಿದ್ದಿಕ್ (32) ಪ್ರಯಾಣಿಸುತ್ತಿದ್ದ ಹೊಂಡಾ ಡಿಯೊ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರರು ಕೆಳಗೆ ಬಿದ್ದಿದ್ದಾರೆ. ಬಳಿಕ, ಪಾದಚಾರಿ ಮಾರ್ಗದಲ್ಲಿರುವ ಟ್ರಾಫಿಕ್ ಸಿಗ್ನಲ್ ಆಪರೇಟರ್ ಬಾಕ್ಸ್‌ಗೆ ಡಿಕ್ಕಿ ಹೊಡೆದ ನಂತರ ಆ್ಯಂಬುಲೆನ್ಸ್ ನಿಂತಿದೆ. ಘಟನೆಯ ನಂತರ, ಉದ್ರಿಕ್ತಗೊಂಡ ಸ್ಥಳೀಯರು ಆ್ಯಂಬುಲೆನ್ಸ್ ಅನ್ನು ತಳ್ಳಿ ಉರುಳಿಸಿದ್ದಾರೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ದಂಪತಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ದಬಾಪು ಅವರು ಆಸ್ಪತ್ರೆಗೆ ದಾಖಲಿಸಿದ ಸ್ವಲ್ಪ ಸಮಯದ ನಂತರ ಮೃತಪಟ್ಟರೆ, ತಲೆಗೆ ತೀವ್ರ ಪೆಟ್ಟಾಗಿದ್ದ ಬಾನು ಭಾನುವಾರ ಮುಂಜಾನೆ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ.
ಹೋಂಡಾ ಡಿಯೊದಲ್ಲಿದ್ದವರಲ್ಲಿ, ಸವಾರ ರಯಾನ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಗೊಂಡಿದ್ದು, ಸಿದ್ದಿಕ್ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಲ್ಸನ್ ಗಾರ್ಡನ್ ಸಂಚಾರ ಪೊಲೀಸರು ಅಪರಿಚಿತ ಆಂಬ್ಯುಲೆನ್ಸ್ ಚಾಲಕನ ವಿರುದ್ಧ ನಿರ್ಲಕ್ಷ್ಯ, ಅತಿವೇಗದ ಚಾಲನೆಯಿಂದ ಸಾವಿಗೆ ಕಾರಣ ಮತ್ತು ಮೋಟಾರು ವಾಹನ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸ್ ಪ್ರಾಥಮಿಕ ವರದಿಯ ಪ್ರಕಾರ, ಈ ಅಪಘಾತಕ್ಕೆ ಆ್ಯಂಬುಲೆನ್ಸ್ ಚಾಲಕನ ಅತಿವೇಗ ಮತ್ತು ಅಜಾಗರೂಕ ಚಾಲನೆ ಕಾರಣವಾಗಿದೆ.
ಚಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ದೃಢಪಡಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.