ADVERTISEMENT

ಗ್ರಾಹಕರು ಅಡವಿಟ್ಟ ₹4 ಕೋಟಿ ಮೌಲ್ಯದ ಆಭರಣ ಕದ್ದ ಬ್ಯಾಂಕ್ ಅಧಿಕಾರಿ ಬಂಧನ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 16:00 IST
Last Updated 14 ಫೆಬ್ರುವರಿ 2026, 16:00 IST
<div class="paragraphs"><p>(ಸಾಂದರ್ಭಿಕ ಚಿತ್ರ)</p></div>

(ಸಾಂದರ್ಭಿಕ ಚಿತ್ರ)

   

ಬೆಂಗಳೂರು: ಆನ್‌ಲೈನ್‌ ಗೇಮಿಂಗ್‌ ಹಾಗೂ ಕ್ಯಾಸಿನೊದಲ್ಲಿ ಜೂಜಾಟವಾಡಲು ಮಾಡಿದ್ದ ಲಕ್ಷಾಂತರ ರೂಪಾಯಿ ಸಾಲ ತೀರಿಸಲು, ಗ್ರಾಹಕರು ಅಡಮಾನ ಇರಿಸಿದ್ದ ₹4 ಕೋಟಿ ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಪ್ರಕರಣದಲ್ಲಿ ಬ್ಯಾಂಕ್‌ವೊಂದರ ಸಹಾಯಕ ವ್ಯವಸ್ಥಾಪಕರೊಬ್ಬರನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.‌

ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕ ದಿಲೀಪ್ ಕುಮಾರ್ ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಂಡು, ಕಿರಣ್‌ ಕುಮಾರ್‌ (35) ಅವರನ್ನು ಬಂಧಿಸಿ, 700 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಆರೋಪಿ ಸುಮಾರು 6 ತಿಂಗಳಿಂದ ಬ್ಯಾಂಕ್‌ನ ಲಾಕರ್‌ನಲ್ಲಿ ಇರಿಸಿದ್ದ 2 ಕೆ.ಜಿ. 780 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.

ADVERTISEMENT

‘ಆಂಧ್ರಪ್ರದೇಶದ ಚಿತ್ತೂರಿನ ಕಿರಣ್‌ ಕುಮಾರ್‌, ವಿದ್ಯಾರಣ್ಯಪುರದಲ್ಲಿ ವಾಸವಾಗಿದ್ದು, ಗಿರಿನಗರದಲ್ಲಿರುವ ರಾಷ್ಟ್ರೀಯ ಬ್ಯಾಂಕ್‌ವೊಂದರಲ್ಲಿ ಸಹಾಯಕ ವ್ಯವಸ್ಥಾಪಕ. ಆನ್‌ಲೈನ್‌ ಗೇಮಿಂಗ್‌ ಹಾಗೂ ಕ್ಯಾಸಿನೊದಲ್ಲಿ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿ ಕಳೆದುಕೊಂಡಿದ್ದು, ಸುಮಾರು ₹60 ಲಕ್ಷಕ್ಕೂ ಹೆಚ್ಚು ಸಾಲ ಮಾಡಿಕೊಂಡಿದ್ದಾರೆ. ಅದನ್ನು ತೀರಿಸುವ ಸಲುವಾಗಿ ಬ್ಯಾಂಕ್‌ನಲ್ಲಿ ಗ್ರಾಹಕರು ಅಡಮಾನ ಇರಿಸಿದ್ದ ಚಿನ್ನಾಭರಣಗಳನ್ನು ಆರು ತಿಂಗಳಿಂದ ಹಂತ-ಹಂತವಾಗಿ ಕಳವು ಮಾಡಿ ಫೈನಾನ್ಸ್‌ನಲ್ಲಿ ಅಡಮಾನ ಇರಿಸಿ, ಹಣ ಪಡೆದು ಸ್ವಲ್ಪ ಸಾಲ ತೀರಿಸಿದ್ದರು’ ಎಂದು ಪೊಲೀಸರು ಹೇಳಿದರು.

ಆಂತರಿಕ ವಿಚಾರಣೆಯಲ್ಲಿ ಆರೋಪಿ ಕಿರಣ್, ಬ್ಯಾಂಕ್​ನ ವಲಯ ಕಚೇರಿಗೆ ಹಾಜರಾಗಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದರು. ಚಿನ್ನವನ್ನು ಕತ್ರಿಗುಪ್ಪೆಯ ಎರಡು ಖಾಸಗಿ ಫೈನಾನ್ಸ್‌ನಲ್ಲಿ ಅಡಮಾನ ಇರಿಸಿದ್ದಾಗಿ ತಿಳಿಸಿದ್ದರು. ಈ ಕುರಿತು ಬಂದ ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಹಿಳೆಯೊಬ್ಬರು ಆರು ತಿಂಗಳ ಹಿಂದೆ ಬ್ಯಾಂಕ್​ನಲ್ಲಿ ಚಿನ್ನ ಅಡವಿಟ್ಟು ಸಾಲ ಪಡೆದಿದ್ದರು. ಸಾಲ ತೀರಿಸಿ ಒಡವೆ ಬಿಡಿಸಿಕೊಳ್ಳಲು ಇತ್ತೀಚೆಗೆ ಬ್ಯಾಂಕ್​ಗೆ ಬಂದಿದ್ದರು. ಪೂರ್ಣ ಸಾಲ ಪಾವತಿಸಿ ಪ್ಯಾಕೆಟ್​ನಲ್ಲಿದ್ದ ಚಿನ್ನ ಪರಿಶೀಲಿಸಿದಾಗ ಕೆಲ ಆಭರಣಗಳು ನಾಪತ್ತೆಯಾಗಿತ್ತು. ಈ ಬಗ್ಗೆ ಬ್ಯಾಂಕ್‌ನ ವ್ಯವಸ್ಥಾಪಕರ ಗಮನಕ್ಕೆ ತಂದಿದ್ದರು.

ಅದರಿಂದ ಆತಂಕಗೊಂಡ ಅಧಿಕಾರಿಗಳು, ಬ್ಯಾಂಕ್‌ನ ಲಾಕರ್‌ ಪರಿಶೀಲಿಸಿದಾಗ ಕಳೆದ ಒಂದು ವರ್ಷದಿಂದ ಚಿನ್ನದ ಸಾಲ ಮಂಜೂರು ಮಾಡಲಾಗಿದ್ದ 207 ಪ್ಯಾಕೇಟ್​ಗಳಲ್ಲಿ ಸುಮಾರು 21 ಪ್ಯಾಕೇಟ್​ಗಳಲ್ಲಿದ್ದ ಚಿನ್ನ ಕಾಣೆಯಾಗಿತ್ತು. 3 ಪ್ಯಾಕೇಟ್‌ಗಳಲ್ಲಿ ಎಲ್ಲ ಚಿನ್ನ ನಾಪತ್ತೆಯಾಗಿತ್ತು. ಹೀಗೆ ಕಳೆದ ಆರು ತಿಂಗಳಲ್ಲಿ ಒಟ್ಟು 2 ಕೆ.ಜಿ. 783 ಗ್ರಾಂ ಅಂದಾಜು ₹4 ಕೋಟಿ ಮೌಲ್ಯದ ಚಿನ್ನ ಕಳವಾಗಿರುವುದು ಗೊತ್ತಾಗಿತ್ತು. ಈ ಸಂಬಂಧ ಬ್ಯಾಂಕ್‌ನ ವಲಯ ವ್ಯವಸ್ಥಾಪಕ ದೂರು ನೀಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.