ಬೆಂಗಳೂರು: ಬಸವೇಶ್ವರನಗರ ಸಮೀಪದ ಶಿವನಹಳ್ಳಿಯ ಹೋಟೆಲ್‍ನಲ್ಲಿ ಸೋಮವಾರ ರಾತ್ರಿ ಕಾಲು ತುಳಿದಿದ್ದ ವಿಚಾರಕ್ಕೆ ಗಲಾಟೆ ನಡೆದು ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ.
ಶ್ರೀರಾಂಪುರದ ನಿವಾಸಿ ಶಶಿಕುಮಾರ್ (31) ಕೊಲೆಯಾದವರು.
ಆರೋಪಿಗಳಾದ ಮಂಜುನಾಥ್ ಮತ್ತು ಆತನ ತಮ್ಮ ಭಾಗ್ಯರಾಜ್ ಅವರು ಪರಾರಿಯಾಗಿದ್ದು, ಅವರ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಕೊಲೆ ಪ್ರಕರಣದ ಸಂಬಂಧ ಬಸವೇಶ್ವರನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಶಿಕುಮಾರ್ ಅವರು ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಸೋಮವಾರ ರಾತ್ರಿ ಶಿವನಹಳ್ಳಿಯ ತಿಮ್ಮಯ್ಯ ರಸ್ತೆಯಲ್ಲಿನ ಶ್ರೀರಾಘವೇಂದ್ರ ವೆಜ್ ದೋಸೆ ಕಾರ್ನರ್ ಹೋಟೆಲ್‍ಗೆ ಬಂದಿದ್ದರು. ಆಗ ಗಲಾಟೆ ನಡೆದು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
‘ಶಶಿಕುಮಾರ್ ಅವರು ಬಂದಿದ್ದ ಹೋಟೆಲ್‌ಗೆ ಆರೋಪಿ ಮಂಜುನಾಥ್ ಸಹ ಸೋಮವಾರ ರಾತ್ರಿ ಬಂದಿದ್ದ. ಹೋಟೆಲ್‌ನಲ್ಲಿ ಓಡಾಡುವಾಗ ಆಕಸ್ಮಿಕವಾಗಿ ಶಶಿಕುಮಾರ್ ಅವರ ಕಾಲನ್ನು ಮಂಜುನಾಥ್ ತುಳಿದಿದ್ದ. ಈ ವಿಚಾರಕ್ಕೆ ಶಶಿಕುಮಾರ್ ಅವರು ಆತನಿಗೆ ಬೈದಿದ್ದರು. ಬಳಿಕ ಇಬ್ಬರ ನಡುವೆ ವಾಗ್ವಾದ ನಡೆದು ಜಗಳವಾಗಿತ್ತು. ಹೋಟೆಲ್ ಸಿಬ್ಬಂದಿ ಗಲಾಟೆ ಬಿಡಿಸಿದ್ದರು. ಮಂಜುನಾಥ್, ತನ್ನ ತಮ್ಮ ಭಾಗ್ಯರಾಜ್‍ಗೆ ಕರೆ ಮಾಡಿ ಜಗಳದ ವಿಚಾರ ತಿಳಿಸಿದ್ದ. ಅಲ್ಲಿಗೆ ಡ್ಯಾಗರ್ ಸಹಿತ ಭಾಗ್ಯರಾಜ್ ಬಂದಿದ್ದ. ಇಬ್ಬರೂ ಸೇರಿಕೊಂಡು ಶಶಿಕುಮಾರ್ ಮೇಲೆ ಹಲ್ಲೆ ನಡೆಸಿದ್ದರು’ ಎಂದು ಪೊಲೀಸರು ಹೇಳಿದರು.
ಜಗಳ ವಿಕೋಪಕ್ಕೆ ಹೋಗಿ ಶಶಿಕುಮಾರ್ ಅವರಿಗೆ ಆರೋಪಿಗಳು ಡ್ಯಾಗರ್‌ನಿಂದ ಇರಿದು ಕೊಲೆ ಮಾಡಿ ಪರಾರಿ ಆಗಿದ್ದಾರೆ ಎಂದು ಪೊಲೀಸರು ಹೇಳಿದರು.
ಅಪರಾಧ ಹಿನ್ನೆಲೆಯುಳ್ಳ ಭಾಗ್ಯರಾಜ್, ಈ ಹಿಂದೆ 2025ರ ಜನವರಿಯಲ್ಲಿ ಬಾರ್‌ನಲ್ಲಿ ಗಲಾಟೆ ಮಾಡಿದ್ದ. ಈ ಸಂಬಂಧ ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಬಳಿಕ ಆತ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಎಂದು ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.