ಬಿಬಿಎಂಪಿ
ಎಲ್ಲ ಕಟ್ಟಡಗಳಿಗೆ ನಕ್ಷೆ, ಸಿಸಿ, ಒಸಿ ಕಡ್ಡಾಯ l ನಕ್ಷೆ ಅವಧಿಯಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಬೇಕು l ನಕ್ಷೆ ಅವಧಿ ನವೀಕರಣವಾಗ ದಿದ್ದರೂ ನೀರು, ವಿದ್ಯುತ್ ಇಲ್ಲ
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕಟ್ಟಡ ನಕ್ಷೆ ಮಂಜೂರಾತಿ, ಕಟ್ಟಡ ಪ್ರಾರಂಭಿಕ ಪ್ರಮಾಣ ಪತ್ರ (ಸಿಸಿ) ಇಲ್ಲದಿದ್ದರೆ ತಾತ್ಕಾಲಿಕವಾಗಿಯೂ ವಿದ್ಯುತ್ ಹಾಗೂ ನೀರಿನ ಸಂಪರ್ಕ ಸಿಗುವುದಿಲ್ಲ. ನಕ್ಷೆ ಉಲ್ಲಂಘಿಸಿ ಕಟ್ಟಡ ನಿರ್ಮಾಣವಾಗುತ್ತಿದ್ದರೂ ನೀರು–ವಿದ್ಯುತ್ ಸಂಪರ್ಕ ಸ್ಥಗಿತಗೊಳ್ಳಲಿದೆ.
ಸುಪ್ರೀಂ ಕೋರ್ಟ್ ಆದೇಶದಂತೆ ಅನಧಿಕೃತ ಕಟ್ಟಡ ಹಾಗೂ ನಕ್ಷೆ ಉಲ್ಲಂಘಿಸಿ ನಿರ್ಮಾಣವಾಗುತ್ತಿರುವ ಕಟ್ಟಡಗಳ ಮೇಲೆ ಕೈಗೊಳ್ಳಬೇಕಾದ ನಿಯಮಗಳನ್ನು ಜಾರಿ ಮಾಡಿರುವ ಬಿಬಿಎಂಪಿ, ಅಕ್ರಮ ನಿರ್ಮಾಣಗಳಿಗೆ ವಿದ್ಯುತ್ ಮತ್ತು ನೀರು, ಒಳಚರಂಡಿ ಸಂಪರ್ಕವನ್ನು ಸ್ಥಗಿತಗೊಳಿಸಲು ಆಯಾ ಇಲಾಖೆಗಳಿಗೆ ನಿರ್ದೇಶನ ನೀಡಿದೆ.
ಕಟ್ಟಡ ನಕ್ಷೆಗೆ ವಿರುದ್ಧವಾಗಿ ಕಟ್ಟಡ ನಿರ್ಮಿಸುತ್ತಿದ್ದರೆ ಆ ಸಂದರ್ಭದಲ್ಲೇ ನೋಟಿಸ್ ಜಾರಿ ಮಾಡಬೇಕು. ಬೆಸ್ಕಾಂ ಹಾಗೂ ಜಲಮಂಡಳಿಗೆ ಮಾಹಿತಿ ನೀಡಿ, ತಾತ್ಕಾಲಿಕ ಅಥವಾ ಶಾಶ್ವತ ಸೇವಾ ಸಂಪರ್ಕವನ್ನು ಕಡಿತಗೊಳಿಸಲು ವಲಯ ಆಯುಕ್ತರು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯ ಆಯುಕ್ತರು ಹೊರಡಿಸಿರುವ ಸುತ್ತೋಲೆಯಲ್ಲಿ ಸೂಚಿಸಿದ್ದಾರೆ.
ಕಟ್ಟಡ ನಿರ್ಮಾಣದ ಹಂತದಲ್ಲಿ ಅಥವಾ ಪೂರ್ವದಲ್ಲಿ ಬೆಸ್ಕಾಂ ಅಥವಾ ಜಲಮಂಡಳಿ ತಾತ್ಕಾಲಿಕ ಸಂಪರ್ಕ ನೀಡಬೇಕಾದರೆ, ಪಾಲಿಕೆಯಿಂದ ಮಂಜೂರಾಗಿರುವ ಕಟ್ಟಡ ನಕ್ಷೆ ಹಾಗೂ ಸಿಸಿಯನ್ನು ಇಲಾಖೆಗಳು ಪರಿಶೀಲಿಸಬೇಕು. ಶಾಶ್ವತ ಸಂಪರ್ಕವನ್ನು ನೀಡಬೇಕಾದ ಸಂದರ್ಭದಲ್ಲಿ, ಪಾಲಿಕೆ ನೀಡಿರುವ ಕಟ್ಟಡದ ಪೂರ್ಣತಾ ಪ್ರಮಾಣಪತ್ರ ಅಥವಾ ಸ್ವಾಧೀನಾನುಭವ ಪತ್ರವನ್ನು (ಒಸಿ) ಪರಿಶೀಲಿಸಿಯೇ ಅನುಮೋದನೆ ನೀಡಬೇಕು. ಪಾಲಿಕೆ ನೀಡಿರುವ ನಕ್ಷೆ ಅವಧಿಯಲ್ಲಿ ಕಟ್ಟಡ ಪೂರ್ಣಗೊಂಡಿರದಿದ್ದರೆ, ತಾತ್ಕಾಲಿಕ ಸಂಪರ್ಕವನ್ನು ರದ್ದುಗೊಳಿಸಬೇಕು. ನಕ್ಷೆ ಅವಧಿ ನವೀಕರಣಗೊಂಡಿದ್ದರಷ್ಟೇ ತಾತ್ಕಾಲಿಕ ಸಂಪರ್ಕವನ್ನು ಮುಂದುವರಿಸಬೇಕು ಎಂದು ಜಲಮಂಡಳಿ ಅಧ್ಯಕ್ಷರು ಹಾಗೂ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಬರೆದಿರುವ ಪತ್ರದಲ್ಲಿ ವಿವರಿಸಲಾಗಿದೆ.
‘ಎಲ್ಲ ಕಟ್ಟಡಗಳಿಗೂ ನಕ್ಷೆ ಮಂಜೂರು, ಒಸಿ, ಸಿಸಿ ಅಥವಾ ನಕ್ಷೆ ಮಂಜೂರಾತಿ ನವೀಕರಣದ ಪತ್ರ ಕಡ್ಡಾಯವಾಗಿದೆ. ಬೆಸ್ಕಾಂ ಹಾಗೂ ಜಲಮಂಡಳಿಗಳು ಈ ಪ್ರಮಾಣಪತ್ರಗಳನ್ನು ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಪರಿಶೀಲಿಸಿಕೊಳ್ಳುವ ಅವಕಾಶ ನೀಡಲಾಗಿದೆ. ಅದರ ನಂತರವಷ್ಟೇ ತಾತ್ಕಾಲಿಕ ಅಥವಾ ಶಾಶ್ವತ ಸಂಪರ್ಕ ಅನುಮೋದನೆಯನ್ನು ಆನ್‌ಲೈನ್‌ನಲ್ಲಿಯೇ ದಾಖಲಿಸಬೇಕು. ಇದರಿಂದ ನಕಲಿ ದಾಖಲೆಗಳನ್ನು ನೀಡಿ, ವಿದ್ಯುತ್ ಅಥವಾ ನೀರಿನ ಸಂಪರ್ಕ ಪಡೆಯುವುದನ್ನು ತಪ್ಪಿಸಬಹುದು’ ಎಂದು ನಗರ ಯೋಜನೆ ವಿಭಾಗದ ಹೆಚ್ಚುವರಿ ನಿರ್ದೇಶಕ ಗಿರೀಶ್ ಮಾಹಿತಿ ನೀಡಿದರು.
ಆನ್‌ಲೈನ್‌ನಲ್ಲಿ ಮಾಹಿತಿ
ಕಟ್ಟಡ ನಕ್ಷೆ ಮಂಜೂರಾದ ಮೇಲೆ, ಮಾಲೀಕರು ಕಟ್ಟಡ ಆರಂಭಿಕ ಪ್ರಮಾಣಪತ್ರ (ಸಿಸಿ) ಪಡೆದುಕೊಳ್ಳಬೇಕು. ಅದಾದ ನಂತರ ಪ್ರತಿ ಎರಡು ತಿಂಗಳಿಗೊಮ್ಮೆ (ಜನವರಿ, ಮಾರ್ಚ್, ಮೇ, ಜುಲೈ, ಸೆಪ್ಟೆಂಬರ್, ನವೆಂಬರ್) ನಗರ ಯೋಜನೆಯ ಸ್ಥಳೀಯ ಎಂಜಿನಿಯರ್‌ಗಳು ಕಟ್ಟಡ ನಿರ್ಮಾಣದ ಪ್ರಕ್ರಿಯೆ ಪರಿಶೀಲಿಸುತ್ತಾರೆ. ಮಂಜೂರಾದ ನಕ್ಷೆಯಂತೆ ನಿರ್ಮಾಣ ನಡೆಯುತ್ತಿದೆಯೇ ಎಂಬ ಮಾಹಿತಿ ಜೊತೆಗೆ ಚಿತ್ರಗಳನ್ನೂ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುತ್ತಾರೆ. ನೀರು, ವಿದ್ಯುತ್ ಸಂಪರ್ಕ ಸೇರಿದಂತೆ ಎಲ್ಲ ಮಾಹಿತಿಗಳು ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಲಭ್ಯವಾಗಲಿದೆ. ಕಟ್ಟಡ ನಿರ್ಮಾಣದ ನಂತರ ಸ್ವಾಧೀನಾನುಭವ ಪ್ರಮಾಣಪತ್ರ (ಒಸಿ) ಪಡೆದ ಮೇಲೂ ಹೆಚ್ಚುವರಿ ನಿರ್ಮಾಣ, ಉಲ್ಲಂಘನೆಗಳು ಕಂಡು ಬಂದರೆ ವಾರ್ಡ್ ಎಂಜಿನಿಯರ್ ವರದಿ ಸಲ್ಲಿಸಿ, ಕಾನೂನಿನಂತೆ ಕ್ರಮ ಕೈಗೊಳ್ಳಲಿದ್ದಾರೆ.
ನಕ್ಷೆಗೆ ಇ–ಖಾತಾ ಕಡ್ಡಾಯ
ಬಿಬಿಎಂಪಿ ವ್ಯಾಪ್ತಿಯಲ್ಲಿ ಏಪ್ರಿಲ್ 1ರಿಂದ ಕಟ್ಟಡ ನಕ್ಷೆ ಪಡೆಯಲು ಇ–ಖಾತಾ ಕಡ್ಡಾಯವಾಗಲಿದೆ. ಇಲ್ಲಿವರೆಗೆ ‘ಮ್ಯಾನ್ಯುಯಲ್ ಖಾತಾ’ ಹೊಂದಿರುವವರಿಗೆ ಕಟ್ಟಡ ನಕ್ಷೆ ನೀಡಲಾಗುತ್ತದೆ. ಇನ್ನೆರಡು ತಿಂಗಳ ನಂತರ ಅದು ಸ್ಥಗಿತಗೊಳ್ಳಲಿದೆ.
‘ಕಟ್ಟಡ ನಕ್ಷೆಗೆ ಅರ್ಜಿ ಸಲ್ಲಿಸುವಾಗ ಇ–ಖಾತಾವನ್ನೇ ಸಲ್ಲಿಸುವುದು ಕಡ್ಡಾಯ. ಇದರಿಂದ, ಆಸ್ತಿಗೆ ಸಂಬಂಧಿಸಿದಂತೆ ಇತರೆ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿಲ್ಲ. ಆಸ್ತಿ ತೆರಿಗೆ, ಕ್ರಯಪತ್ರ, ಆಸ್ತಿಯ ಸ್ಥಳ (ಅಕ್ಷಾಂಶ, ರೇಖಾಂಶ), ಮಾಲೀಕರ ಚಿತ್ರ, ಆಧಾರ್ ಎಲ್ಲವೂ ಇ–ಖಾತಾದಲ್ಲಿಯೇ ನಮೂದಾಗಿರುವುದರಿಂದ ಈ ಎಲ್ಲ ದಾಖಲೆಗಳು ಆನ್‌ಲೈನ್‌ನಲ್ಲಿಯೇ ಲಭ್ಯವಾಗುತ್ತದೆ. ನಕ್ಷೆಗೆ ಸಂಬಂಧಿಸಿದ ದಾಖಲೆಗಳನ್ನು ಮಾತ್ರ ಸಲ್ಲಿಸಬೇಕಾಗುತ್ತದೆ’ ಎಂದು ನಗರ ಯೋಜನೆ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದರು.
1584 ಕಟ್ಟಡ ಅನಧಿಕೃತ
ಬಿಬಿಎಂಪಿ ವ್ಯಾಪ್ತಿಯಲ್ಲಿ 1,584 ಕಟ್ಟಡಗಳು ಅನಧಿಕೃತವಾಗಿ ನಿರ್ಮಾಣವಾಗುತ್ತಿವೆ ಎಂಬುದು ಪಾಲಿಕೆ ನಡೆಸುತ್ತಿರುವ ಸಮೀಕ್ಷೆಯಿಂದ ತಿಳಿದುಬಂದಿದೆ. ಪ್ರತಿ ದಿನವೂ ಇವುಗಳ ಸಂಖ್ಯೆ ವೃದ್ಧಿಯಾಗುತ್ತಿದ್ದು, ಕಾನೂನು ಪ್ರಕಾರ ನೋಟಿಸ್‌ಗಳೂ ಜಾರಿಯಾಗುತ್ತಿವೆ. ಈ ಕಟ್ಟಡಗಳಿಗೆ ಜನವರಿ 20ರಿಂದ ನೀರು, ವಿದ್ಯುತ್ ಸಂಪರ್ಕವನ್ನೂ ಕಡಿತ ಮಾಡಲಾಗುತ್ತದೆ ಎಂದು ನಗರ ಯೋಜನೆ ಅಧಿಕಾರಿಗಳು ತಿಳಿಸಿದರು.
777 ಕಟ್ಟಡಗಳು ನಕ್ಷೆಯನ್ನು ಉಲ್ಲಂಘಿಸಿ ನಿರ್ಮಾಣವಾಗುತ್ತಿವೆ. 82 ಕಟ್ಟಡಗಳಿಗೆ ಬೀಗಮುದ್ರೆ ಹಾಕಲಾಗಿದೆ. 33 ಪ್ರಕರಣಗಳು ನ್ಯಾಯಾಲಯದಲ್ಲಿವೆ. ಆರು ಕಟ್ಟಡಗಳನ್ನು ತೆರವು ಮಾಡಲಾಗಿದೆ. 177 ಕಟ್ಟಡಗಳನ್ನು ತೆರವುಗೊಳಿಸಲು ಆದೇಶ ಹೊರಡಿಸಲಾಗಿದೆ. ಉಳಿದ ಅನಧಿಕೃತ ಕಟ್ಟಡಗಳ ಮೇಲಿನ ಕ್ರಮಕ್ಕೆ ನೋಟಿಸ್‌ಗಳು ಜಾರಿಯಾಗಿವೆ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.