ADVERTISEMENT

ಬೆಂಗಳೂರು | 20 ದ್ವಿಚಕ್ರ ವಾಹನ ಕಳವು: ಭಯದಿಂದ ಆಟೊದಲ್ಲೇ ಆರೋಪಿ ವಾಸ್ತವ್ಯ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 15:48 IST
Last Updated 9 ಸೆಪ್ಟೆಂಬರ್ 2025, 15:48 IST
ಕದ್ದ ವಾಹನಗಳೊಂದಿಗೆ ಆರೋಪಿ. 
ಕದ್ದ ವಾಹನಗಳೊಂದಿಗೆ ಆರೋಪಿ.    

ಬೆಂಗಳೂರು: ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿ ವ್ಹೀಲಿ ಮಾಡುತ್ತಿದ್ದ ಆರೋಪಿಯನ್ನು ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವಿಲ್ಸನ್ ಗಾರ್ಡನ್ ನಿವಾಸಿ ಸಲೀಂ ಪಾಷಾ (24) ಎಂಬಾತನನ್ನು ಬಂಧಿಸಿ, ₹18 ಲಕ್ಷ ಮೌಲ್ಯದ 20 ದ್ವಿಚಕ್ರ ವಾಹನ ಹಾಗೂ ಆಟೊ ವಶಪಡಿಸಿಕೊಳ್ಳಲಾಗಿದೆ.‌

ಜಯನಗರ 2ನೇ ಬ್ಲಾಕ್‌ನ ಆರ್. ವಿ. ಟೀಚರ್ಸ್ ಕಾಲೊನಿಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳ್ಳತನವಾಗಿತ್ತು. ಮಾಲೀಕ ನೀಡಿದ್ದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ವಿವಿಧ ಆಯಾಮಗಳಲ್ಲಿ ಹಾಗೂ ಬಾತ್ಮೀದಾರರಿಂದ ಮಾಹಿತಿ ಸಂಗ್ರಹಿಸಿ ಸೋಮೇಶ್ವರ ನಗರದ ಟ್ಯಾಂಕ್ ಗಾರ್ಡನ್ ಬಳಿ ವಾಹನದ ಸಮೇತ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಪಡಿಸಿದರು. 

ADVERTISEMENT

ನಗರದ ವಿವಿಧೆಡೆ ದ್ವಿಚಕ್ರ ವಾಹನ ಹಾಗೂ ಆಟೊ ಕಳವು ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡ ಎಂದು ಪೊಲೀಸರು ತಿಳಿಸಿದರು.

ದ್ವಿಚಕ್ರ ವಾಹನಗಳ ಹ್ಯಾಂಡಲ್ ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದ. ಬಳಿಕ ಅವುಗಳಲ್ಲಿ ವ್ಹೀಲಿ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡುತ್ತಿದ್ದ. ನಂತರ ವಾಹನಗಳನ್ನು ಅಜ್ಞಾತ ಸ್ಥಳಗಳಲ್ಲಿ ನಿಲ್ಲಿಸುತ್ತಿದ್ದ. ಮನೆಗೆ ಹೋದರೆ ಪೊಲೀಸರು ಹುಡುಕಿಕೊಂಡು ಬರಬಹುದು ಎಂಬ ಭಯದಿಂದ ಆಟೊದಲ್ಲಿಯೇ ವಾಸ್ತವ್ಯ ಹೂಡಿದ್ದ ಎಂದು ಪೊಲೀಸರು ತಿಳಿಸಿದರು.

ಠಾಣಾ ವ್ಯಾಪ್ತಿಯ ಗುಂಡಪ್ಪ ಕೊಳಗೇರಿ, ಪಂಪ್ ಹೌಸ್, ವಿಲ್ಸನ್ ಗಾರ್ಡನ್, ವಿನಾಯಕ ನಗರದ ಖಾಲಿ ಜಾಗದಲ್ಲಿ ನಿಲ್ಲಿಸಿದ್ದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿ ಬಂಧನದಿಂದ ಕೆ. ಆರ್. ಪುರ, ವಿಲ್ಸನ್ ಗಾರ್ಡನ್, ಅಶೋಕನಗರ, ಆಡುಗೋಡಿ, ಕೆಂಗೇರಿ, ಡಿ.ಜೆ.ಹಳ್ಳಿ, ಕುಂಬಳಗೋಡು, ತಿಲಕ್‌ ನಗರ, ಬ್ಯಾಟರಾಯನಪುರ, ಚಾಮರಾಜಪೇಟೆ, ಜಯನಗರ, ಪೀಣ್ಯ ಪೊಲೀ್ಸ್‌ ಠಾಣೆಗಳಲ್ಲಿ ದಾಖಲಾಗಿದ್ದ ಪ್ರಕರಣಗಳು ಪತ್ತೆಯಾಗಿವೆ. 18 ದ್ವಿಚಕ್ರ ವಾಹನಗಳ ಹಾಗೂ ಆಟೊ ರಿಕ್ಷಾ ಕಳವು ಪ್ರಕರಣ ಪತ್ತೆಯಾಗಿದೆ. ಉಳಿದ ಎರಡು ವಾಹನಗಳ ವಾರಸುದಾರರು ಪತ್ತೆಯಾಗಬೇಕಿದ್ದು, ತನಿಖೆ ಮುಂದುವರಿದಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.