ADVERTISEMENT

ಬೆಂಗಳೂರು | ಹುಸಿ ಬಾಂಬ್ ಬೆದರಿಕೆ ಹಾವಳಿ ಜಾಸ್ತಿ: ಸವಾಲಾದ ದುಷ್ಕರ್ಮಿಗಳ ಪತ್ತೆ

ಪೊಲೀಸರಿಗೆ ಸವಾಲಾದ ದುಷ್ಕರ್ಮಿಗಳ ಪತ್ತೆ, ನಕಲಿ ಖಾತೆಯಿಂದ ಸಂದೇಶ

ಕೆ.ಎಸ್.ಸುನಿಲ್
Published 21 ಅಕ್ಟೋಬರ್ 2025, 23:30 IST
Last Updated 21 ಅಕ್ಟೋಬರ್ 2025, 23:30 IST
   

ಬೆಂಗಳೂರು: ವಿಮಾನ ನಿಲ್ದಾಣ, ನ್ಯಾಯಾಲಯ, ಹೋಟೆಲ್, ಮಾಲ್, ಶಾಲಾ– ಕಾಲೇಜುಗಳು, ವಸ್ತುಸಂಗ್ರಹಾಲಯ ಹಾಗೂ ರಾಜಕೀಯ ನಾಯಕರನ್ನು ಗುರಿಯಾಗಿಸಿಕೊಂಡು ಬಾಂಬ್ ಸ್ಫೋಟಿಸುವ ಬೆದರಿಕೆ ಕರೆ ಮತ್ತು ಸಂದೇಶಗಳಿಗೆ ಸಂಬಂಧಿಸಿದ ಪ್ರಕರಣಗಳ ಸಂಖ್ಯೆ ನಗರದಲ್ಲಿ ಹೆಚ್ಚುತ್ತಿದೆ.

ನಗರದಲ್ಲಿ ಒಂದು ವರ್ಷದಿಂದ ಈ ರೀತಿಯ 34 ಪ್ರಕರಣಗಳು ದಾಖಲಾಗಿವೆ. ಅದರಲ್ಲೂ ಪಶ್ಚಿಮ ವಲಯದಲ್ಲಿರುವ 14 ಠಾಣೆಗಳಲ್ಲಿ ಒಟ್ಟು 29 ಪ್ರಕರಣಗಳು ದಾಖಲಾಗಿವೆ. ಇತ್ತೀಚಿನ ದಿನಗಳಲ್ಲಿ ಈ ರೀತಿಯ ಪ್ರಕರಣಗಳು ಹೆಚ್ಚು ವರದಿಯಾಗುತ್ತಿದ್ದು, ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದೆ.

ರಾಜ್ಯದ ಇತರೆ ನಗರಗಳಿಗೆ ಹೋಲಿಸಿದರೆ ಬೆಂಗಳೂರು ನಗರದಲ್ಲೇ ಬಾಂಬ್ ಬೆದರಿಕೆ ಹಾವಳಿ ಜಾಸ್ತಿಯಾಗಿದೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ನಗರದ ಹಲವು ಪ್ರತಿಷ್ಠಿತ ಖಾಸಗಿ ಶಾಲೆಗಳಿಗೆ ಹುಸಿ ಬಾಂಬ್‌ ಬೆದರಿಕೆ ಕರೆ, ಸಂದೇಶಗಳು ಬಂದಿದ್ದವು. ಇವು ವಿದ್ಯಾರ್ಥಿಗಳು ಮತ್ತು ಪೋಷಕರನ್ನು ತೀವ್ರ ಆತಂಕಕ್ಕೆ ದೂಡುತ್ತಿವೆ.

ADVERTISEMENT

ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣ, ಹೈಕೋರ್ಟ್‌, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ನಿವಾಸ ಹಾಗೂ ರಾಜಭವನಕ್ಕೂ ಬಾಂಬ್ ಬೆದರಿಕೆಯ ಇ–ಮೇಲ್‌ಗಳು ಬಂದು ದುಗುಡ ತಂದಿದ್ದವು.

ಕೆಲ ತಿಂಗಳ ಹಿಂದೆ ನಗರದ 40ಕ್ಕೂ ಅಧಿಕ ಶಾಲೆಗಳಿಗೆ ಒಂದೇ ದಿನ ಇ– ಮೇಲ್‌ನಿಂದ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ಪೊಲೀಸರು ಬಾಂಬ್ ಪತ್ತೆ ತಂಡ, ಶ್ವಾನದಳ ಹಾಗೂ ಅಗ್ನಿಶಾಮಕ ದಳದೊಂದಿಗೆ ಶಾಲೆಗಳಿಗೆ ದೌಡಾಯಿಸಿ ತೀವ್ರ ತಪಾಸಣೆ ನಡೆಸಿದ್ದರು. ಆದರೆ, ‘ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ. ಇದೊಂದು ಹುಸಿ ಬೆದರಿಕೆ’ ಎಂದು ಪೊಲೀಸರು ಖಚಿತಪಡಿಸಿದ್ದರು. ಬಳಿಕ, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಶಾಲಾ ಆಡಳಿತ ಮಂಡಳಿ ಸದಸ್ಯರು ನಿಟ್ಟುಸಿರು ಬಿಟ್ಟರು.

ಯಾವ ಸ್ಥಳದಿಂದ, ಯಾರು ಇ–ಮೇಲ್ ಬೆದರಿಕೆ ಸಂದೇಶ ಕಳುಹಿಸಿದ್ದಾರೆ ಎಂಬುದರ ಕುರಿತು ಪೊಲೀಸರು ತಾಂತ್ರಿಕವಾಗಿ ಪರಿಶೀಲನೆ ನಡೆಸಿದರು. ಪ್ರಾಥಮಿಕ ತನಿಖೆಯಂತೆ ಇ–ಮೇಲ್ ಡೊಮೈನ್ ಬ್ರಿಟಿಷ್ ಇಂಡಿಯನ್ ಓಷನ್ ಟೆರಿಟರಿ ಮೂಲದ್ದಾಗಿದೆ ಎಂಬುದು ಕಂಡು ಬಂದಿದೆ. ಆದರೆ, ಆರೋಪಿಗಳ ಸುಳಿವು ಸಿಕ್ಕಿಲ್ಲ.

‘ಹುಸಿ ಬಾಂಬ್ ಬೆದರಿಕೆ ಪ್ರಕರಣಗಳಲ್ಲಿ ದುಷ್ಕರ್ಮಿಗಳ ಪತ್ತೆಯೇ ಇಲಾಖೆಗೆ ಸವಾಲಾಗಿದೆ. ಕೆಲವು ಪ್ರಕರಣಗಳನ್ನು ಪತ್ತೆ ಮಾಡಿ, ಆರೋಪಿಗಳನ್ನು ಬಂಧಿಸಲಾಗಿದೆ. ಕೆಲ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿವೆ. ವಿದೇಶಗಳಲ್ಲಿ ಕುಳಿತು ನಕಲಿ ಖಾತೆಯಿಂದ ಇ–ಮೇಲ್‌ ಕಳುಹಿಸುವುದು ಮತ್ತು ನಕಲಿ ಸಿಮ್‌ಗಳನ್ನು ಬಳಸಿ ಕರೆಗಳನ್ನು ಮಾಡುವುದರಿಂದ ದುಷ್ಕರ್ಮಿಗಳ ಜಾಡು ಪತ್ತೆ ಹಚ್ಚುವುದು ದೊಡ್ಡ ಸವಾಲಾಗಿದೆ. ಈ ರೀತಿಯ ಬೆದರಿಕೆ ಸಂದೇಶ ಮತ್ತು ಕರೆಗಳನ್ನು ನಿರ್ಲಕ್ಷ್ಯ ಮಾಡುವಂತಿಲ್ಲ’ ಎನ್ನುತ್ತಾರೆ ಹಿರಿಯ ಪೊಲೀಸ್‌ ಅಧಿಕಾರಿಗಳು.

‘ದೇಶದಾದ್ಯಂತ ಹುಸಿ ಬಾಂಬ್ ಸ್ಫೋಟ ಬೆದರಿಕೆ ಸಂಬಂಧ ನೂರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕೇಂದ್ರ ತನಿಖಾ ಸಂಸ್ಥೆಗಳು, ಅಂತರರಾಜ್ಯ ಪೊಲೀಸ್ ತಂಡಗಳು ಗಂಭೀರ ತನಿಖೆ ನಡೆಸುತ್ತಿವೆ. ಆದರೆ, ದುಷ್ಕರ್ಮಿಗಳ ಸುಳಿವು ಇದುವರೆಗೂ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ತನಿಖಾ ಸಂಸ್ಥೆಗಳ ಜತೆಗೂ ಮಾಹಿತಿ ವಿನಿಮಯ ಮಾಡಿಕೊಂಡು ದುಷ್ಕರ್ಮಿಗಳ ಪತ್ತೆಗೆ ಶ್ರಮಿಸಲಾಗುತ್ತಿದೆ’ ಎಂದು ಹೇಳಿದರು.

‘ಬೆದರಿಕೆ ಸಂದೇಶಗಳನ್ನು ಕಳುಹಿಸುತ್ತಿರುವ ಇ–ಮೇಲ್ ವಿಳಾಸಗಳು ಬದಲಾಗುತ್ತಿವೆ. ಹಾಗಾಗಿ ತಾಂತ್ರಿಕ ಆಯಾಮದಲ್ಲಿ ತನಿಖೆ ನಡೆಸಿ ಸಂದೇಶ ಕಳುಹಿಸಿರುವ ಮೇಲ್‌ಗಳ ಐಪಿ ವಿಳಾಸ ಪತ್ತೆ ಹಚ್ಚಬೇಕಿದ್ದು, ಅದಕ್ಕೆ ಸಂಬಂಧಿಸಿದ ಕಂಪನಿಗಳ ಜತೆಗೂ ಸಮಾಲೋಚನೆ ನಡೆಸಲಾಗುತ್ತಿದೆ. ಬೆದರಿಕೆ ಸಂದೇಶಗಳ ಹಿಂದಿನ ಉದ್ದೇಶವೇನು ಎಂಬುದು ದುಷ್ಕರ್ಮಿಗಳ ಪತ್ತೆ ಬಳಿಕವಷ್ಟೇ ಹೇಳಲು ಸಾಧ್ಯ’ ಎಂದು ತಿಳಿಸಿದರು.

ಕೆಲ ದಿನಗಳ ಹಿಂದೆ ರಾಜಭವನಕ್ಕೆ ಬಾಂಬ್‌ ಇರಿಸಿರುವುದಾಗಿ ಬೆದರಿಕೆ ಕರೆ ಮಾಡಿದ್ದ ಆರೋಪಿ ಭಾಸ್ಕರ್‌ ಎಂಬಾತನನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ‘ಪೊಲೀಸರು ಎಷ್ಟರ ಮಟ್ಟಿಗೆ ಅಲರ್ಟ್‌ ಆಗಿ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಪರಿಶೀಲಿಸಲು ಕರೆ ಮಾಡಿದ್ದೆ’ ಎಂಬುದಾಗಿ ಆರೋಪಿ ವಿಚಾರಣೆ ವೇಳೆ ತಿಳಿಸಿದ್ದ ಎಂದು ಪೊಲೀಸರು ಹೇಳಿದರು.

ಪ್ರತ್ಯೇಕ ತನಿಖಾ ತಂಡ ರಚನೆ

ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯವರ ನಿವಾಸಗಳಲ್ಲಿ ಬಾಂಬ್ ಸ್ಫೋಟಿಸುವ ಬೆದರಿಕೆ ಸೇರಿದಂತೆ ನಗರದಲ್ಲಿ ಸದ್ದು ಮಾಡುತ್ತಿರುವ ಹುಸಿ ಬಾಂಬ್ ಬೆದರಿಕೆ ಸಂದೇಶಗಳ ಮೂಲ ಭೇದಿಸಿ ದುಷ್ಕರ್ಮಿಗಳ ಪತ್ತೆ ಹಚ್ಚುವ ಸಲುವಾಗಿ ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಬಿ.ಎಸ್.ನೇಮಗೌಡ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ.

ಒಂದು ವರ್ಷದಿಂದ ನಿರಂತರವಾಗಿ ಬರುತ್ತಿರುವ ಬಾಂಬ್ ಬೆದರಿಕೆ ಸಂದೇಶಗಳ ಮೂಲವನ್ನು ಪತ್ತೆ ಹಚ್ಚಬೇಕಿದ್ದು, ತಾಂತ್ರಿಕ ಆಯಾಮದಲ್ಲಿ ಪ್ರತ್ಯೇಕ ತನಿಖೆ ನಡೆಯಬೇಕಿದೆ. ಈ ನಿಟ್ಟಿನಲ್ಲಿ ತನಿಖಾ ತಂಡ ರಚನೆಯಾಗಿದೆ.

‘ಪಶ್ಚಿಮ ವಲಯದಲ್ಲಿರುವ 14 ಠಾಣೆಗಳಲ್ಲಿ ಒಟ್ಟು 29 ಪ್ರಕರಣಗಳು ಇದುವರೆಗೂ ದಾಖಲಾಗಿವೆ. ಅವುಗಳನ್ನು ಉತ್ತರ ವಿಭಾಗದ ಸೈಬರ್ ಅಪರಾಧ ಠಾಣೆಗೆ ವರ್ಗಾವಣೆ ಮಾಡಲಾಗಿದ್ದು, ವಿಶೇಷ ತಂಡದ ಮೂಲಕ ತನಿಖೆ ನಡೆಸಲಾಗುತ್ತದೆ. ಉತ್ತರ ವಿಭಾಗದ ಸೈಬರ್‌ ಅಪರಾಧ ಠಾಣೆಯ ಎಸಿಪಿ, ಇನ್‌ಸ್ಪೆಕ್ಟರ್ ಹಾಗೂ ಇದುವರೆಗೂ ಪ್ರಕರಣಗಳು ದಾಖಲಾಗಿರುವ ಠಾಣೆಗಳ ಸಿಬ್ಬಂದಿಯನ್ನು ತನಿಖಾ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ದೇಶದ ಬೇರೆ ಬೇರೆ ಕಡೆಯೂ ಇದೇ ರೀತಿ ಬಾಂಬ್ ಬೆದರಿಕೆ ಬಂದಿದ್ದ ಕಾರಣ ಅನ್ಯ ರಾಜ್ಯಗಳ ತನಿಖಾ ಸಂಸ್ಥೆಗಳ ಸಹಕಾರದೊಂದಿಗೆ ತನಿಖೆ ನಡೆಯಲಿದೆ’ ಎಂದು ಡಿಸಿಪಿ ಬಿ.ಎಸ್.ನೇಮಗೌಡ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.