ADVERTISEMENT

ಒಂದೂವರೆ ವರ್ಷದಲ್ಲಿ ಬಿಬಿಸಿ ಮೊದಲ ಹಂತ ಪೂರ್ಣ: ಡಿ.ಕೆ. ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 21:01 IST
Last Updated 5 ಫೆಬ್ರುವರಿ 2026, 21:01 IST
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಟಪಾಲು ಸ್ವೀಕೃತಿ ಶಾಖೆ, ನಿಯಂತ್ರಣ ಕೊಠಡಿಯನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸಿದರು. ಎನ್‌.ಎ.ಹ್ಯಾರಿಸ್‌ ಇದ್ದಾರೆ. 
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಟಪಾಲು ಸ್ವೀಕೃತಿ ಶಾಖೆ, ನಿಯಂತ್ರಣ ಕೊಠಡಿಯನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸಿದರು. ಎನ್‌.ಎ.ಹ್ಯಾರಿಸ್‌ ಇದ್ದಾರೆ.    

ಬೆಂಗಳೂರು: ಬೆಂಗಳೂರು ಬ್ಯುಸಿನೆಸ್‌ ಕಾರಿಡಾರ್ (ಬಿಬಿಸಿ) ಯೋಜನೆಯ ಮೊದಲ ಹಂತವನ್ನು ಒಂದೂವರೆ ವರ್ಷದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧಿಕಾರಿಗಳ ಜತೆ ಬಿಬಿಸಿ ಯೋಜನೆ ಕುರಿತು ಗುರುವಾರ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಜಮೀನು ಮಾಲೀಕರಲ್ಲಿ ಕೆಲವರು ಶೇಕಡ 35ರಷ್ಟು ವಾಣಿಜ್ಯ ಭೂಮಿಯನ್ನು ಪರಿಹಾರವಾಗಿ ಪಡೆದರೆ, ಮತ್ತೆ ಕೆಲವರು ಟಿಡಿಆರ್, ಚೆಕ್ ಮೂಲಕ ಹಣ ಪಡೆದಿದ್ದಾರೆ. ಕಂದಾಯ ಭೂಮಿ ಇದ್ದ ಕಡೆ ಮಾರುಕಟ್ಟೆ ಮೌಲ್ಯದ ಮೂರು ಪಟ್ಟು ಹಣ ನೀಡಲಾಗಿದೆ. ಜಿಬಿಎ ವ್ಯಾಪ್ತಿಯಲ್ಲಿ ಎರಡು ಪಟ್ಟು ನೀಡಲಾಗಿದೆ. 650ಕ್ಕೂ ಹೆಚ್ಚು ಜನ ಒಮ್ಮತದಿಂದ ಜಮೀನು ಬಿಟ್ಟುಕೊಟ್ಟಿದ್ದಾರೆ. ಇದರಲ್ಲಿ 400 ಜನರಿಗೆ ಪರಿಹಾರ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.

ADVERTISEMENT

ಕೆಲವರಿಗೆ ಟಿಡಿಆರ್ ವಿಚಾರದಲ್ಲಿ ಗೊಂದಲ ಇತ್ತು. ಬಿಡಿಎ ವ್ಯಾಪ್ತಿಯಲ್ಲಿರುವ ಜಾಗದಲ್ಲಿ ಬಿಡಿಎ ಟಿಡಿಆರ್ ವಿತರಣೆ ಮಾಡಿದರೆ, ಜಿಬಿಎ ವ್ಯಾಪ್ತಿಯಲ್ಲಿ ನಗರ ಪಾಲಿಕೆಗಳು ಟಿಡಿಆರ್ ವಿತರಣೆ ಮಾಡಲಿವೆ. ಹತ್ತು ದಿನದಲ್ಲಿ ಈ ಟಿಡಿಆರ್ ನೀಡುವಂತೆ ನಿರ್ದೇಶನ ನೀಡಲಾಗಿದೆ ಎಂದರು

ಬಿಬಿಸಿ ಯೋಜನೆಗೆ ಹುಡ್ಕೊ ಮೂಲಕ ₹26 ಸಾವಿರ ಕೋಟಿ ಸಾಲ ಪಡೆಯಲಾಗಿದೆ. ಯೋಜನೆ ಮುಗಿದ ಮೇಲೆ ಹಣ ಉಳಿಯುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಎರಡು ದಿನದಲ್ಲಿ ಇ– ಖಾತಾ: ಇ– ಖಾತಾ ವಿಚಾರದಲ್ಲಿ ತೊಂದರೆ ಎದುರಾಗುತ್ತಿದೆ ಎಂಬ ದೂರು ಬಂದ ಕಾರಣ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಹಾಗೂ ಇ ಖಾತಾ ಅಧಿಕಾರಿಗಳ ಜೊತೆ ಸಭೆ ನಡೆಸಲಾಗಿದೆ. ಯಾರೇ ಅರ್ಜಿ ಹಾಕಿದರೂ ಎರಡು ದಿನಗಳಲ್ಲಿ ತೀರ್ಮಾನ ಮಾಡಬೇಕು. ಏನಾದರೂ ಸಮಸ್ಯೆ ಇದ್ದರೆ ನೂರು ಜನರ ಪರಿಶೀಲನಾ ತಂಡವನ್ನು ರಚಿಸಲಾಗಿದ್ದು, ಅವರು ಪರಿಶೀಲನೆ ಮಾಡಲಿದ್ದಾರೆ. 24 ಗಂಟೆಯೊಳಗೆ ಶೇಕಡ 60ರಷ್ಟು ಇ– ಖಾತಾ ವಿತರಣೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. 9.34 ಲಕ್ಷ ಅರ್ಜಿಗಳ ಪೈಕಿ 9.31 ಲಕ್ಷ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ವಿವರಿಸಿದರು.

‘ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆಯಾಗಲು ಏಳು ಸಾವಿರ ಅರ್ಜಿ ಬಂದಿದ್ದು, ಅವರು ನಕ್ಷೆ ನಿಡಬೇಕಿತ್ತು. ಈಗ ಅಧಿಕಾರಿಗಳೇ ಸ್ಥಳಕ್ಕೆ ಹೋಗಿ ನಕ್ಷೆ ರೂಪಿಸುವ ಕೆಲಸ ಮಾಡುವಂತೆ ಸೂಚಿಸಿದ್ದೇನೆ. ಜಿಬಿಎ ಹಾಗೂ ಪಾಲಿಕೆಗಳು 15 ದಿನಗಳಲ್ಲಿ ಬಿ ಖಾತಾಯಿಂದ ಎ ಖಾತಾಗೆ ಅನುಮೋದನೆ ಮಾಡಲಿದ್ದಾರೆ’ ಎಂದು ತಿಳಿಸಿದರು.

‘300 ಅರ್ಜಿಗಳನ್ನು ನಕ್ಷೆ ಹೊರತಾಗಿಯೂ ಅನುಮೋದನೆ ಮಾಡಲಾಗಿದೆ. ನಕ್ಷೆ ಒದಗಿಸಲು ಆಗದವರಿಗೆ 15 ದಿನಗಳಲ್ಲಿ ಆನ್‌ಲೈನ್ ಮೂಲಕ ಶುಲ್ಕ ಕಟ್ಟಿಸಿಕೊಂಡು ಖಾತಾ ಬದಲಾವಣೆ ಮಾಡಲು ನಿರ್ಧರಿಸಲಾಗಿದೆ. ಖಾತಾ ಬದಲಾವಣೆಗೆ 1.20 ಲಕ್ಷ ಅರ್ಜಿಗಳು ಬಂದಿದ್ದು, ಅದರಲ್ಲಿ 46 ಸಾವಿರ ಅರ್ಜಿಗಳು ವಜಾಗೊಂಡಿವೆ. ಇವುಗಳನ್ನು ಮತ್ತೆ ಪರಿಶೀಲಿಸಿ ಕಾರಣ ಪತ್ತೆ ಮಾಡಲಾಗುವುದು’ ಎಂದು ವಿವರಿಸಿದರು.

‘ಕೇಂದ್ರ ಬಜೆಟ್‌ನಲ್ಲಿ ಸುರಂಗ ರಸ್ತೆಗೆ ಅನುದಾನ ಕೊಟ್ಟಿಲ್ಲ. ಸುರಂಗ ರಸ್ತೆ ವಿಚಾರದಲ್ಲಿ ಬಿಲ್ಡ್ ಆಪರೇಟ್ ಮಾದರಿ ಇದ್ದು, ಸರ್ಕಾರ ಕೇವಲ ಶೇಕಡ 40ರಷ್ಟು ಹಣ ನೀಡಲಿದೆ. ಇಲ್ಲಿ ಯೋಜನೆ ಮಾಡುವವರೇ ಜವಾಬ್ದಾರಿ  ತೆಗೆದುಕೊಳ್ಳಬೇಕು’ ಎಂದರು.

ಸಭೆಯಲ್ಲಿ ಬಿಡಿಎ ಅಧ್ಯಕ್ಷ ಎನ್‌.ಎ.ಹ್ಯಾರೀಸ್, ಆಯುಕ್ತ ಪಿ.ಮಣಿವಣ್ಣನ್, ಬಿಬಿಸಿ ವಿಶೇಷ ಉದ್ದೇಶದ ಘಟಕ (ಎಸ್‌ಪಿವಿ) ಅಧ್ಯಕ್ಷ ಎಲ್.ಕೆ.ಅತೀಕ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.