ADVERTISEMENT

ಬೆಂಗಳೂರು: ₹91 ಲಕ್ಷ ನಗದು ಕಳ್ಳತನ ಮಾಡಿದ್ದ ಕ್ಯಾಷಿಯರ್ ಸೆರೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 15:42 IST
Last Updated 27 ಫೆಬ್ರುವರಿ 2026, 15:42 IST
ಧನಂಜಯ್
ಧನಂಜಯ್   

ಬೆಂಗಳೂರು: ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಸ್ನೇಹಿತರ ಜತೆ ಸೇರಿಕೊಂಡು ₹91.76 ಲಕ್ಷ ನಗದು ಕಳವು ಮಾಡಿದ್ದ ನಾಲ್ವರ ಪೈಕಿ ಇಬ್ಬರು ಆರೋಪಿಗಳನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಕಂಪನಿಯ ಕ್ಯಾಷಿಯರ್ ಧನಂಜಯ್ (23) ಹಾಗೂ ಆತನ ಸ್ನೇಹಿತ ಪ್ರವೀಣ್ ನಾಯ್ಕ್ ಬಂಧಿತರು. ಇನ್ನೂ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಆರೋಪಿಗಳಿಂದ ₹ 81.66 ಲಕ್ಷ ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ನಗರದ ಬಿಇಎಲ್ ರಸ್ತೆಯಲ್ಲಿರುವ ಬಿಲ್ಡರ್ಸ್‌ ಆ್ಯಂಡ್ ಮೈನಿಂಗ್ ಬಿಸಿನಸ್ ಕಂಪನಿಯ ಮುಖ್ಯ ದ್ವಾರದ ಬೀಗ ಮುರಿದು ಫೆಬ್ರುವರಿ 19ರಂದು ಹಣ ದೋಚಿಕೊಂಡು ಆರೋಪಿಗಳು ಪರಾರಿಯಾಗಿದ್ದರು. ಮರುದಿನ ಬೆಳಿಗ್ಗೆ ಕಚೇರಿ ಗಾಜು ಒಡೆದಿರುವುದನ್ನು ಗಮನಿಸಿದ ಪಕ್ಕದ ಅಂಗಡಿಯ ಸಿಬ್ಬಂದಿ, ಕಂಪನಿ ಸಿಬ್ಬಂದಿಗೆ ಮಾಹಿತಿ ನೀಡಿದರು. ಬಂದು ನೋಡಿದಾಗ ಕಚೇರಿಯಲ್ಲಿನ ಹಣ ಕಳ್ಳತನವಾಗಿರುವುದು ತಿಳಿದಿದೆ.

ADVERTISEMENT

ಪ್ರಕರಣ ದಾಖಲಿಸಿಕೊಂಡು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ ಪೊಲೀಸರು, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಕ್ಯಾಷಿಯರ್ ಆಗಿ ಕೆಲಸ ಮಾಡಿಕೊಂಡಿದ್ದ ಧನಂಜಯ್‌ಗೆ ಹಣದ ಬಗ್ಗೆ ಮಾಹಿತಿ ಇತ್ತು. ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಸ್ನೇಹಿತರ ಜತೆ ಸೇರಿ ಕಚೇರಿಯಲ್ಲಿದ್ದ ₹1.76 ಕೋಟಿ ನಗದು ಪೈಕಿ ₹91.76 ಲಕ್ಷ ಕಳ್ಳತನ ಮಾಡಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಆರೋಪಿಯ ತಂದೆಯ ಬಳಿ ಇದ್ದ ನಗದನ್ನು ಆರೋಪಿ ನೀಡಿದ ಮಾಹಿತಿ ಆಧರಿಸಿ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರವೀಣ್ ನಾಯ್ಕ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.