ಬಂಧನ
(ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಎಚ್‌ಆರ್‌ಬಿಆರ್ ಲೇಔಟ್‌ನ ರಸ್ತೆ ಬದಿಯಲ್ಲಿ ಗೃಹಿಣಿಯ ಮಾಂಗಲ್ಯದ ಸರ ಕಸಿದು ಪರಾರಿಯಾಗಿದ್ದ ಮೂವರನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಾರತ್‌ಹಳ್ಳಿ ನಿವಾಸಿಗಳಾದ ಅಲ್ತಾಫ್ (22), ಶ್ರೀವರ್ಧನ್ (22) ಹಾಗೂ ಹರೀಶ್‌ಕುಮಾರ್ (23) ಬಂಧಿತರು.
ಆರೋಪಿಗಳಿಂದ 57.28 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಜಪ್ತಿ ಮಾಡಲಾಗಿದೆ. ಚಿನ್ನದ ಸರದ ಮೌಲ್ಯ ₹5.70 ಲಕ್ಷವೆಂದು ಅಂದಾಜಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಎಚ್‌ಆರ್‌ಬಿಆರ್ ಲೇಔಟ್‌ನ ಎಂಟನೇ ಕ್ರಾಸ್‌ನಲ್ಲಿ ಜುಲೈ 12ರಂದು ರಾತ್ರಿ ಮಹಿಳೆಯೊಬ್ಬರು ನಡೆದು ತೆರಳುತ್ತಿದ್ದರು. ಆಗ ಬೈಕ್‌ನಲ್ಲಿ ಬಂದ ಮೂವರು ಚಿನ್ನದ ಸರವನ್ನು ಕಸಿದು ಪರಾರಿ ಆಗಿದ್ದರು. ಮಹಿಳೆ ನೀಡಿದ ದೂರು ಆಧರಿಸಿ ಮೂವರನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.
ಮಾರತ್‌ಹಳ್ಳಿ ರಾಮಾಂಜನೇಯ ಲೇಔಟ್ ಪೇಯಿಂಗ್ ಗೆಸ್ಟ್ ಎದುರು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ವಿಚಾರಣೆ ವೇಳೆ ಸರ ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದರು.
ಕದ್ದ ಚಿನ್ನದ ಸರವನ್ನು ಆರೋಪಿಗಳು ಆಂಧ್ರಪ್ರದೇಶಕ್ಕೆ ಕೊಂಡೊಯ್ದು ಮದನಪಲ್ಲಿಯಲ್ಲಿರುವ ಮುತ್ತೋಟ್ ಫೈನಾನ್ಸ್‌ನಲ್ಲಿ ಅಡಮಾನ ಇಟ್ಟಿದ್ದರು. ಅದನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬಾಡಿಗೆ ಬೈಕ್‌ನಲ್ಲಿ ಬಂದು ಕೃತ್ಯ: ಸರ ಅಪಹರಣಕ್ಕೆ ಆರೋಪಿಗಳು ಬಾಡಿಗೆಯ ಬೈಕ್ ಹಾಗೂ ಸ್ಕೂಟಿ ಬಳಸಿಕೊಳ್ಳುತ್ತಿದ್ದರು. ಸ್ಕೂಟಿ ಹಾಗೂ ಬೈಕ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.