ADVERTISEMENT

ಪ್ರಜಾವಾಣಿ ವಿಶೇಷ | ಬೆಂಗಳೂರು: ಚಿಣ್ಣರಿಗೆ ಇನ್ನೂ ತೆರೆಯದ ಬಾಲಭವನ

ಖಲೀಲಅಹ್ಮದ ಶೇಖ
Published 16 ಜೂನ್ 2022, 2:15 IST
Last Updated 16 ಜೂನ್ 2022, 2:15 IST
ನಗರದ ಕಬ್ಬನ್ ಪಾರ್ಕ್‌ನಲ್ಲಿರುವ ಬಾಲಭವನದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವುದರಿಂದ ಸಾರ್ವಜನಿಕರಿಗೆ ಪ್ರವೇಶವಿಲ್ಲ ಫಲಕವನ್ನು ನೋಡಿ ತೆರಳುತ್ತಿರುವ ಪಾಲಕರು ಮತ್ತು ಮಕ್ಕಳು –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌
ನಗರದ ಕಬ್ಬನ್ ಪಾರ್ಕ್‌ನಲ್ಲಿರುವ ಬಾಲಭವನದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವುದರಿಂದ ಸಾರ್ವಜನಿಕರಿಗೆ ಪ್ರವೇಶವಿಲ್ಲ ಫಲಕವನ್ನು ನೋಡಿ ತೆರಳುತ್ತಿರುವ ಪಾಲಕರು ಮತ್ತು ಮಕ್ಕಳು –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌   

ಬೆಂಗಳೂರು: ನಗರದಲ್ಲಿ ಮಕ್ಕಳ ಆಕರ್ಷಣೆಯ ಕೇಂದ್ರವಾಗಿರುವ ಬಾಲಭವನದಲ್ಲಿ ಸದಾ ಮಕ್ಕಳ ಚಟುವಟಿಕೆ ನಡೆಯುತ್ತಿತ್ತು. ಆದರೆ ಸ್ಮಾರ್ಟ್‌ ಸಿಟಿ ಯೋಜನೆ ಅಡಿಯಲ್ಲಿ ಪುನರ್‌ನಿರ್ಮಾಣ ಕಾಮಗಾರಿಗಳು ನಡೆಯುತ್ತಿರುವುದರಿಂದ ಬೀಗ ಹಾಕಿರುವ ಗೇಟ್‌ ನೋಡಿ ಮಕ್ಕಳು ಮತ್ತು ಪಾಲಕರು ನಿರಾಸೆಯಿಂದ ತೆರಳುತ್ತಿದ್ದಾರೆ.

ಕಬ್ಬನ್‌ ಪಾರ್ಕ್‌ನ 12 ಎಕರೆ ವಿಸ್ತೀರ್ಣದಲ್ಲಿರುವ ಜವಾಹರ್‌ ಬಾಲಭವನದಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ನವೀಕರಣ ಕಾರ್ಯ ನಡೆಯುತ್ತಿದ್ದು, ಜೂನ್‌ನಲ್ಲಿ ಸಾರ್ವಜನಿಕರಿಗೆ ಪ್ರವೇಶ ಸಾಧ್ಯವಾಗಬೇಕಿತ್ತು. ನಿಗದಿತ ಅವಧಿಯೊಳಗೆ ಕಾಮಗಾರಿ ಮುಗಿಯದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಸಾಂಕ್ರಾಮಿಕ ರೋಗದ ಮೊದಲ ಅಲೆಯಿಂದ ಬಾಲ ಭವನವನ್ನು ಮುಚ್ಚಲಾಗಿದೆ. ಕೆಲವು ಪುನರ್‌ನಿರ್ಮಾಣ ಕಾರ್ಯಗಳ ಜೊತೆಗೆ, ಈ ಪ್ರದೇಶದಲ್ಲಿ ಹೊಸದಾಗಿ ಅಂಗವಿಕಲಸ್ನೇಹಿ ಉದ್ಯಾನ ನಿರ್ಮಿಸಲಾಗುತ್ತಿದೆ. ಉದ್ಯಾನದ ಕಾಮಗಾರಿ ಪೂರ್ಣಗೊಂಡ ನಂತರ ಮತ್ತಷ್ಟು ಡಿಜಿಟಲ್ ವ್ಯವಸ್ಥೆಗಳನ್ನು ಅಳವಡಿಸುವ ಗುರಿ ಇದೆ. ಶೀಘ್ರದಲ್ಲೇ ನವೀಕೃತ ಬಾಲಭವನ ಉದ್ಘಾಟಿಸಿ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗುವುದು ಎಂದು ಬಾಲಭವನ ಸೊಸೈಟಿಯ ಅಧ್ಯಕ್ಷೆ ಚಿಕ್ಕಮ್ಮ ಬಸವರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ವಿಕಲಚೇತನರ ಉದ್ಯಾನದಲ್ಲಿ ಅಂಗವಿಕಲ ಮಕ್ಕಳು ವ್ಹೀಲ್‌ ಚೇರ್‌ ಮೂಲಕ ಆಟಿಕೆಗಳಲ್ಲಿ ಕುಳಿತುಕೊಂಡು ಆಟ ಆಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸುರಂಗ ಮಾರ್ಗ, ಟ್ರೆಕಿಂಗ್, ಜಾರುಬಂಡೆ ಮತ್ತುಆ್ಯಂಪಿ ಥಿಯೇಟರ್‌ ನಿರ್ಮಿಸಲಾಗಿದೆ. ಬಾಸ್ಕೆಟ್‌ ಬಾಲ್‌ ಮೈದಾನಕ್ಕೆ ಇಪಿಡಿಎಂ ಫ್ಲೋರಿಂಗ್ ಮಾಡಲಾಗಿದೆ. ಇದರಲ್ಲಿ ಮಕ್ಕಳು ಬಿದ್ದರೂ ನೋವಾಗುವುದಿಲ್ಲ’ ಎಂದು ಮಾಹಿತಿ ನೀಡಿದರು.

ಕಬ್ಬನ್ ಪಾರ್ಕ್‌ನಲ್ಲಿರುವ ಜವಾಹರ್‌ ಬಾಲಭವನದಲ್ಲಿ ಕಾಮಗಾರಿ ನಡೆಯುತ್ತಿರುವ ಬಗ್ಗೆ ಮಾಹಿತಿ ಇಲ್ಲದ ಕಾರಣ ರಜಾ ದಿನಗಳಲ್ಲಿ ಬಹಳಷ್ಟು ಪಾಲಕರು ಮಕ್ಕಳೊಂದಿಗೆ ಭೇಟಿ ನೀಡುತ್ತಿದ್ದು, ಮುಚ್ಚಿರುವ ಗೇಟ್‌ ನೋಡಿ ವಾಪಸ್ಸಾಗುತ್ತಿದ್ದಾರೆ. ಕೆಂಗೇರಿ ನಿವಾಸಿ ಪಲ್ಲವಿ ಮತ್ತು ಅವರ ಮಗಳು ಸಾನ್ವಿ ಬಾಲಭವನ ಮುಚ್ಚಿರುವ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಬಹಳ ದಿನಗಳಿಂದ ಸ್ಥಗಿತಗೊಂಡಿರುವ ಬಾಲಭವನವನ್ನು ಸಾರ್ವಜನಿಕರಿಗೆ, ವಿಶೇಷವಾಗಿ ಮಕ್ಕಳಿಗೆ ಮುಕ್ತಗೊಳಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬೋಟಿಂಗ್‌ಗೆ ಮರುಜೀವ
ಬಾಲಭವನದ ಆವರಣದಲ್ಲಿರುವ ಸಣ್ಣ ಕೆರೆಯಲ್ಲಿ ಈ ಹಿಂದೆ ಮಕ್ಕಳಿಗಾಗಿ ಬೋಟಿಂಗ್ ವ್ಯವಸ್ಥೆ ಮಾಡಲಾಗಿತ್ತು. ಕಾರಣಾಂತರಗಳಿಂದ2008ರಲ್ಲಿ ಬೋಟಿಂಗ್‌ ಸ್ಥಗಿತಗೊಳಿಸಲಾಗಿತ್ತು. ಸ್ಮಾರ್ಟ್‌ ಸಿಟಿ ಯೋಜನೆಯಡಿ ಬಾಲಭವನದಲ್ಲೂ ವಿವಿಧ ಅಭಿವೃದ್ಧಿ ಯೋಜನೆಗಳ ಶೇ 80–90ರಷ್ಟು ಕಾಮಗಾರಿ ಮುಗಿದಿದೆ. ಕೆರೆಯ ಅಭಿವೃದ್ಧಿ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಹೊಸ ಬೋಟ್‌ಗಳ ಸೇರ್ಪಡೆಯೊಂದಿಗೆ ಬೋಟಿಂಗ್‌ಗೆ ಮರುಜೀವ ನೀಡಲಾಗುವುದು ಎಂದು ಚಿಕ್ಕಮ್ಮ ಬಸವರಾಜ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.