ADVERTISEMENT

ಶೇ 50 ಹಾಸಿಗೆ ಮೀಸಲು: ಇಂದಿನಿಂದ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2021, 21:36 IST
Last Updated 7 ಏಪ್ರಿಲ್ 2021, 21:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೋವಿಡ್‌ ರೋಗಿಗಳಿಗೆ ಶೇ 50 ಹಾಸಿಗೆ ಮೀಸಲಿಡಬೇಕು ಎಂಬ ರಾಜ್ಯ ಸರ್ಕಾರದ ಆದೇಶದಿಂದ ನಗರದ ಖಾಸಗಿ ಆಸ್ಪತ್ರೆಗಳು ಸಂದಿಗ್ಧದಲ್ಲಿವೆ. ಇತರೆ ರೋಗಿಗಳ ಸಂಖ್ಯೆಯೂ ಹೆಚ್ಚಿರುವುದರಿಂದ ಹಾಸಿಗೆಗಳ ಕೊರತೆ ಕಾಡಬಹುದು ಎಂಬ ಆತಂಕದಲ್ಲಿ ಆಸ್ಪತ್ರೆಗಳಿವೆ.

‘ಕೋವಿಡ್‌ ಅಲ್ಲದೆ, ಇತರೆ ರೋಗಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಒಂದು ವರ್ಷದಿಂದ ಬಹಳಷ್ಟು ಜನರಿಗೆ ಸರಿಯಾದ ಚಿಕಿತ್ಸೆ ಸಿಕ್ಕಿಲ್ಲ. ಅಲ್ಲದೆ, ದೀರ್ಘಕಾಲದ ಚಿಕಿತ್ಸೆ ಅಗತ್ಯ ಇರುವ ಅನೇಕರು ಇದ್ದಾರೆ. ಅವರನ್ನು ನಾವು ನಿರ್ಲಕ್ಷಿಸಲು ಸಾಧ್ಯವಾಗುವುದಿಲ್ಲ. ಈಗಾಗಲೇ ಆಸ್ಪತ್ರೆಗೆ ದಾಖಲಾದವರನ್ನು ಹಾಸಿಗೆ ಇಲ್ಲ ಎಂದು ವಾಪಸ್‌ ಕಳುಹಿಸಲೂ ಆಗುವುದಿಲ್ಲ’ ಎಂದು ಮಣಿಪಾಲ್‌ ಆಸ್ಪತ್ರೆ ಸಮೂಹದ ವೈದ್ಯಕೀಯ ಸಲಹಾ ಮಂಡಳಿಯ ಅಧ್ಯಕ್ಷ ಡಾ. ಸುದರ್ಶನ್‌ ಬಳ್ಳಾಲ್‌ ಹೇಳಿದರು.

ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆ ಮೀಸಲಿಡುವ ವಿಭಾಗದ ಉಸ್ತುವಾರಿಯಾಗಿರುವ ಐಎಎಸ್‌ ಅಧಿಕಾರಿ ಎನ್. ಜಯರಾಮ್, ‘ಸರ್ಕಾರದ ಮೂಲಕ ಖಾಸಗಿ ಆಸ್ಪತ್ರೆಗೆ ದಾಖಲಾಗುವ ಕೋವಿಡ್‌ ರೋಗಿಗಳಿಗೆ ಶೇ 50ರಷ್ಟು ಹಾಸಿಗೆಯನ್ನು ಮೀಸಲಿಡಬೇಕು. ಅಧಿಕಾರಿಗಳು ಗುರುವಾರದಿಂದಲೇ ಈ ನಿಟ್ಟಿನಲ್ಲಿ ಪರಿಶೀಲನೆ ನಡೆಸಲಿದ್ದಾರೆ’ ಎಂದು ಹೇಳಿದರು.

ADVERTISEMENT

‘ಈ ನಿಯಮ ಪಾಲನೆಯಾದರೆ, ನಗರದ ಖಾಸಗಿ ಆಸ್ಪತ್ರೆಗಳಲ್ಲಿ 5000 ಹಾಸಿಗೆಗಳು ಕೋವಿಡ್‌ ರೋಗಿಗಳಿಗೆ ಲಭ್ಯ ಆಗಲಿವೆ. ಸದ್ಯಕ್ಕೆ ನಮ್ಮ ಬೇಡಿಕೆಯೂ ಇಷ್ಟೇ ಇದೆ. ಆದರೆ, ಈಗ ನಗರದಲ್ಲಿ ದಿನಕ್ಕೆ 5 ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗುತ್ತಿದ್ದು, ಹಾಸಿಗೆಯ ಕೊರತೆ ಉದ್ಭವಿಸುವ ಸಾಧ್ಯತೆ ಇದೆ’ ಎಂದರು.

‘ಸರ್ಕಾರ ಶೇ 50ರಷ್ಟು ಹಾಸಿಗೆ ಮೀಸಲು ಕೇಳುತ್ತಿದೆ ಎಂದ ಮಾತ್ರಕ್ಕೆ, ಇರುವ ರೋಗಿಗಳನ್ನು ಹೊರಗೆ ಕಳಿಸಿ ಎಂದರ್ಥವಲ್ಲ. ಇರುವ ರೋಗಿಗಳು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ತಕ್ಷಣ ಆ ಹಾಸಿಗೆಯನ್ನು ಮೀಸಲು ಇಡಬೇಕು. ಹಾಸಿಗೆಗಳ ಸಂಖ್ಯೆ ಶೇ 50ಕ್ಕೆ ತಲುಪುವವರೆಗೆ ಈ ನಿಯಮ ಪಾಲಿಸಬೇಕು’ ಎಂದು ಅವರು ಹೇಳಿದರು.

ಬಿಬಿಎಂಪಿ ಅಂಕಿ–ಅಂಶದ ಪ್ರಕಾರ, ಬುಧವಾರ ಸಂಜೆಯ ವೇಳೆಗೆ, ಖಾಸಗಿ ಆಸ್ಪತ್ರೆಗಳಲ್ಲಿ 90, ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ 445 ಸೇರಿದಂತೆ ಒಟ್ಟು 2,300 ಹಾಸಿಗೆಗಳು ಕೋವಿಡ್‌ ರೋಗಿಗಳಿಗೆ ಮೀಸಲಾಗಿದ್ದವು. ಈ ಪೈಕಿ, 556 ಹಾಸಿಗೆಗಳು ಮಾತ್ರ ಖಾಲಿ ಉಳಿದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.