
ಬೆಂಗಳೂರು: ಬೆಂಗಳೂರು ನಗರ ವಿಶ್ವವಿದ್ಯಾಲಯವು ಅಂಗನವಾಡಿ ಶಿಕ್ಷಣಕ್ಕೆ ಪೂರಕವಾಗಿ ‘ಆರಂಭಿಕ ಬಾಲ್ಯದ ಆರೈಕೆ ಮತ್ತು ಶಾಲಾಪೂರ್ವ ಶಿಕ್ಷಣದ ಡಿಪ್ಲೊಮಾ ಕೋರ್ಸ್’ ಅನ್ನು (ಡಿಇಸಿಸಿಐಇ) ಆರಂಭಿಸಲಿದೆ.
ಈ ಸಂಬಂಧ ವಿಶ್ವವಿದ್ಯಾಲಯವು ಸಮುದಾಯ ಆಧಾರಿತ ಪುನರ್ವಸತಿ (ಸಿಬಿಆರ್) ದಕ್ಷಿಣ ಏಷಿಯಾ ನೆಟ್‌ವರ್ಕ್ ಎನ್ನುವ ಸ್ವಯಂಸೇವಾ ಸಂಸ್ಥೆ ಜತೆ ಒಪ್ಪಂದ ಮಾಡಿಕೊಂಡಿದೆ. ಈ ಕೋರ್ಸ್ ಆರಂಭಿಸುವ ಮೊದಲ ವಿಶ್ವವಿದ್ಯಾಲಯ ಎನ್ನಿಸಲಿದೆ.
ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಅಂಗನವಾಡಿಗಳಲ್ಲಿ ಮತ್ತು ಇತರೆ ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಸೂಕ್ತ ವೃತ್ತಿ ತರಬೇತಿ ಒದಗಿಸಲು ಈ ಕೋರ್ಸ್ ನೆರವಾಗಲಿದೆ.
ಒಂದು ವರ್ಷ ಅವಧಿಯ ಈ ಡಿಪ್ಲೊಮಾ ಕೋರ್ಸ್ ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ಮಾದರಿಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಲಭ್ಯವಿರಲಿದೆ. ಪಿಯುಸಿ ಪೂರೈಸಿದ ಅಭ್ಯರ್ಥಿಗಳು ಈ ಕೋರ್ಸ್ ಸೇರಲು ಅರ್ಹರು.
ಅಂಗನವಾಡಿ ಕಾರ್ಯಕರ್ತರಾಗಿ ಮೂರು ವರ್ಷಗಳ ಅನುಭವ ಹೊಂದಿದ್ದರೆ ಎಸ್ಎಸ್ಎಲ್‌ಸಿ ವಿದ್ಯಾರ್ಹತೆ ಸಾಕಾಗುತ್ತದೆ. ಇದರ ಜೊತೆಗೆ 6 ತಿಂಗಳ ಅವಧಿಯ ಸರ್ಟಿಫಿಕೇಟ್ ಕೋರ್ಸ್ ಸಹ ಲಭ್ಯವಿದೆ.
ಕುಲಪತಿ ಬಿ.ರಮೇಶ್ ಅವರ ಸಮ್ಮುಖದಲ್ಲಿ ಕುಲಸಚಿವ ಎ.ನವೀನ್ ಜೋಸೆಫ್ ಹಾಗೂ ಸಂಸ್ಥೆಯ ಪ್ರಾದೇಶಿಕ ಸಲಹೆಗಾರರಾದ ಇಂದುಮತಿ ರಾವ್ ಅವರು ಒಡಂಬಡಿಕೆಗೆ ಸಹಿ ಹಾಕಿದರು.
ಕೌಶಲ, ಉದ್ಯೋಗ ತರಬೇತಿ ಒಡಂಬಡಿಕೆ: ವಿದ್ಯಾರ್ಥಿಗಳಲ್ಲಿ ಉದ್ಯಮಕ್ಕೆ ಪೂರಕ ಕೌಶಲ, ವೃತ್ತಿಪರ ತರಬೇತಿ ಒದಗಿಸಲು ಒರಾಕಲ್ ಅಕಾಡೆಮಿಯ ಸಹಭಾಗಿತ್ವದ ರೀಚ್ ಮಚ್ ಹೈಯರ್(ಆರ್‌ಎಂಎಚ್) ಪ್ರತಿಷ್ಠಾನದೊಂದಿಗೆ ಬೆಂಗಳೂರು ನಗರ ವಿಶ್ವವಿದ್ಯಾಲಯ ಒಪ್ಪಂದ ಮಾಡಿಕೊಂಡಿದೆ. ಸಂಸ್ಥೆ ಸಿಇಓ ಓ.ಪಿ.ಗೋಯಲ್ ಅವರೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಯಿತು.
ಕಾರ್ಯಕ್ರಮದ ಮೂಲಕ ವಿಶ್ವವಿದ್ಯಾಲಯ ಹಾಗೂ ಸಂಯೋಜಿತ ಕಾಲೇಜುಗಳ ವಿದ್ಯಾರ್ಥಿಗಳಿಗೆ 90 ತಾಸುಗಳ ತರಬೇತಿ ಒದಗಿಸಲಾಗುವುದು. ಡಿಜಿಟಲ್ ಮತ್ತು ದತ್ತಾಂಶ ಕೌಶಲ್ಯ, ಕೃತಕ ಬುದ್ಧಿಮತ್ತೆ ಮತ್ತು ಭವಿಷ್ಯದ ತಂತ್ರಜ್ಞಾನ ಹಾಗೂ ವೃತ್ತಿಪರ ಸಂವಹನದ ಕುರಿತು ತರಬೇತಿ ನೀಡಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.