ADVERTISEMENT

ಬೆಂಗಳೂರು ಜನದನಿ | ಕುಂದು ಕೊರತೆ: ಬಸ್‌ಗಳ ಸಂಖ್ಯೆ ಹೆಚ್ಚಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 0:03 IST
Last Updated 9 ಫೆಬ್ರುವರಿ 2026, 0:03 IST
ಬಸ್‌ಗಾಗಿ ಕಾಯುತ್ತಿರುವ ಜನ 
ಬಸ್‌ಗಾಗಿ ಕಾಯುತ್ತಿರುವ ಜನ    

‘ಬಸ್‌ಗಳ ಸಂಖ್ಯೆ ಹೆಚ್ಚಿಸಿ’ 

ಮೈಸೂರು ರಸ್ತೆಯಿಂದ ಕೆಂಗೇರಿ, ಕುಂಬಳಗೋಡು, ಬಿಡದಿ, ರಾಮನಗರ ಮಾರ್ಗವಾಗಿ ತೆರಳಲು ಸರಿಯಾದ ಬಸ್‌ಗಳ ವ್ಯವಸ್ಥೆ ಇಲ್ಲ. ಈ ಭಾಗದಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳಿದ್ದು, ಇಲ್ಲಿಗೆ ಬರುವ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ. ಕಾರ್ಖಾನೆಗೆ ತೆರಳುವ ನೌಕರರು ಸಮಸ್ಯೆ ಎದುರಿಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಈ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಬೇಕು. 

-ಆರ್. ಶಂಕರಮಣಿ, ಜ್ಯೋತಿಲಕ್ಷ್ಮಿ, ವರುಣ, ಪ್ರಯಾಣಿಕರು

ADVERTISEMENT

****

‘ಪಾದಚಾರಿ ಮಾರ್ಗದಲ್ಲಿ ಮಣ್ಣಿನ ರಾಶಿ’

ಕನಕಪುರ ರಸ್ತೆಗೆ ಇತ್ತೀಚೆಗೆ ಡಾಂಬರೀಕಣ ಮಾಡುವ ಸಂದರ್ಭದಲ್ಲಿ ರಸ್ತೆಯ ಮಣ್ಣನ್ನು ಪಾದಚಾರಿ ಮಾರ್ಗದಲ್ಲಿ ಹಾಕಲಾಗಿದೆ. ಇದರಿಂದ ಸಾರ್ವಜನಿಕರ ಓಡಾಟಕ್ಕೆ ಸಮಸ್ಯೆ ಆಗಿದೆ. ಈಗ ರಸ್ತೆ ಬಹಳ ಅಗಲವಾಗಿದ್ದು, ವಾಹನ ಸಂಚಾರಕ್ಕೆ ಅನುಕೂಲವಾಗಿದೆ. ಪಾದಚಾರಿ ಮಾರ್ಗದಲ್ಲಿ ಹಾಕಿದ್ದ ಮಣ್ಣಿನ ರಾಶಿಯನ್ನು ವಿಲೇವಾರಿ ಮಾಡಿಲ್ಲ. ಇದರಿಂದ ರಸ್ತೆಯಲ್ಲ ದೂಳುಮಯವಾಗಿದೆ. ಪಾಲಿಕೆಯ  ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಈ ಮಣ್ಣಿನ ರಾಶಿಯನ್ನು ಬೇರೆ ಕಡೆಗೆ ಸಾಗಿಸಬೇಕು. 

-ಮಂಜುನಾಥ್, ಪ್ರಯಾಣಿಕ 

****

‘ರಸ್ತೆಯಲ್ಲಿ ಹರಿಯುವ ತ್ಯಾಜ್ಯ ನೀರು’

ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ವಾರ್ಡ್ ಸಂಖ್ಯೆ–138ರ ಛಲವಾದಿ ಪಾಳ್ಯದ ಸಿದ್ಧಾರ್ಥ ನಗರದಲ್ಲಿ ಒಳ ಚರಂಡಿ ಕಟ್ಟಿಕೊಂಡ ಕಾರಣ ತ್ಯಾಜ್ಯ ನೀರು ರಸ್ತೆಯಲ್ಲಿಯೇ ಹರಿಯುತ್ತಿದೆ. ಇದರಿಂದ ಇಡೀ ಪ್ರದೇಶವೇ ಗಬ್ಬೆದ್ದು ನಾರುತ್ತಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಎದುರಾಗಿದೆ. ಈ ಬಗ್ಗೆ ಜಲಮಂಡಳಿಯ ಅಧಿಕಾರಿಗಳಿಗೆ ದೂರು ನೀಡಿದರೂ ಸ್ಪಂದಿಸುತ್ತಿಲ್ಲ. ತ್ಯಾಜ್ಯ ನೀರು ರಸ್ತೆಯಲ್ಲಿ ಹರಿಯುವುದರಿಂದ ಸಂಚಾರ ದಟ್ಟಣೆ ಆಗುತ್ತಿದೆ. ಕೂಡಲೇ ಈ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು. 

-ಎಸ್. ಪ್ರಭಾಕರ್, ಚಾಮರಾಜಪೇಟೆ

****

ಪಾದಚಾರಿ ಮಾರ್ಗದಲ್ಲಿ ಹಾಕಿರುವ ಮಣ್ಣು 

‘ನಿವೇಶನ ಸ್ವಚ್ಛಗೊಳಿಸಿ’

ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯ ರಾಜರಾಜೇಶ್ವರಿನಗರದಲ್ಲಿರುವ ರಾಜರಾಜೇಶ್ವರಿ ದೇವಸ್ಥಾನದಿಂದ ಪಟ್ಟಣಗೆರೆಗೆ ಹೋಗುವ ಮುಖ್ಯರಸ್ತೆಯ ಅಕ್ಕಪಕ್ಕದ ನಿವೇಶನಗಳಲ್ಲಿ ತ್ಯಾಜ್ಯ ತುಂಬಿ ತುಳುಕುತ್ತಿದೆ. ಈ ಬಗ್ಗೆ ನಗರ ಪಾಲಿಕೆಯ ಅಧಿಕಾರಿಗಳಿಗೆ ಸಾಕಷ್ಟು ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ನಿವೇಶನ ಸ್ವಚ್ಛ ಇಲ್ಲದಿದ್ದರೆ ದಂಡ ಹಾಕುವುದಾಗಿ ನಗರ ಪಾಲಿಕೆ ಆಯುಕ್ತರು ಹೇಳಿಕೆಯಲ್ಲಿ ತಿಳಿಸುತ್ತಿದ್ದಾರಷ್ಟೆ. ಆದರೆ, ಇದು ಕಾರ್ಯಗತವಾಗಿಲ್ಲ. ಆಯುಕ್ತರು ಇತ್ತ ಪರಿಶೀಲನೆಗೆ ಬರಲಿ.

-ಉಷಾ, ರಾಮಣ್ಣ, ರಾಮಚಂದ್ರ, ಪಟ್ಟಣಗೆರೆ

ರಸ್ತೆಯಲ್ಲಿ ಹರಿಯುತ್ತಿರುವ ತ್ಯಾಜ್ಯ ನೀರು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.