ಬಂಧನ
(ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಕೇಂದ್ರ ಅಪರಾಧ ವಿಭಾಗದ(ಸಿಸಿಬಿ) ಪೊಲೀಸ್ ಸಿಬ್ಬಂದಿ ಎಂದು ಹೇಳಿಕೊಂಡು ಬಾಂಗ್ಲಾದೇಶದ ಪ್ರಜೆಗಳಿಂದ ಹಣ ಸುಲಿಗೆ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಪೊಲೀಸ್ ವಿಭಾಗದ ಕಾನ್‌ಸ್ಟೆಬಲ್ ಪ್ರಶಾಂತ್ ನಾವಿ ಹಾಗೂ ಅವರ ಸ್ನೇಹಿತ ನಾಸೀರ್ ಖಾನ್ ಬಂಧಿತರು.
ಜನ ಸದ್ಭಾವನಾ ಸಂಘಟನೆಯ ಸದಸ್ಯರು ನೀಡಿದ ದೂರಿನ ಮೇರೆಗೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಗೊತ್ತಾಗಿದೆ.
‘ನಗರದ ವಿವಿಧೆಡೆ ಬಾಂಗ್ಲಾ ಪ್ರಜೆಗಳು ನೆಲಸಿದ್ದು, ಅವರು ಕಸ ಸಂಗ್ರಹಿಸುವ ಕೆಲಸ ಮಾಡಿಕೊಂಡಿದ್ದಾರೆ. ಅವರನ್ನೇ ಗುರಿಯಾಗಿಸುತ್ತಿದ್ದ ಆರೋಪಿಗಳು, ಬಂಧಿಸುವ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದರು. ಕೆಲವರನ್ನು ಬಂಧನದ ನೆಪದಲ್ಲಿ ಕರೆದೊಯ್ದು, ಹಣ ವಸೂಲಿ ಮಾಡಿರುವುದು ಸಹ ತನಿಖೆ ವೇಳೆ ಕಂಡುಬಂದಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
‘ಆರೋಪಿ ಪ್ರಶಾಂತ್ ನಾವಿ ಈ ಹಿಂದೆ ರಾಜ್ಯದ ಆಂತರಿಕ ಭದ್ರತಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಅವರನ್ನು ಕರ್ತವ್ಯಲೋಪದ ಆರೋಪದಡಿ ಅಮಾನತು ಮಾಡಲಾಗಿತ್ತು. ಬಳಿಕ, ಬೆಂಗಳೂರು ಗ್ರಾಮಾಂತರ ಪೊಲೀಸ್ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು. ಗ್ರಾಮಾಂತರ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾಗ ನಾಸೀರ್ ಖಾನ್ ಎಂಬಾತ ಪ್ರಶಾಂತ್ ನಾವಿಗೆ ಪರಿಚಯವಾಗಿದ್ದ. ಇಬ್ಬರೂ ಸೇರಿಕೊಂಡು ಬಾಂಗ್ಲಾದೇಶದ ಪ್ರಜೆಗಳನ್ನು ಪತ್ತೆಹಚ್ಚಿ ಬೆದರಿಸುತ್ತಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.