
ಬೆಂಗಳೂರು: ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು ಜನರಿಗೆ ವಂಚಿಸುತ್ತಿದ್ದ ಸೈಬರ್ ಜಾಲದ ವಿರುದ್ಧ ಬಿರುಸಿನ ಕಾರ್ಯಾಚರಣೆ ಕೈಗೊಂಡಿರುವ ‘ಸೈಬರ್ ಕಮಾಂಡ್ ಘಟಕ’, ಈ ಜಾಲವು ₹100 ಕೋಟಿ ದೋಚಿರುವುದನ್ನು ಪತ್ತೆ ಮಾಡಿದೆ.
ಸಾರ್ವಜನಿಕರಿಗೆ ಹಣದ ಆಮಿಷವೊಡ್ಡಿ ಅವರ ಬ್ಯಾಂಕ್ ಖಾತೆ, ಆಧಾರ್ ಕಾರ್ಡ್, ಎಟಿಎಂ ಕಾರ್ಡ್ ಹಾಗೂ ಮೊಬೈಲ್ ಪಡೆದು, ಸೈಬರ್ ವಂಚಕರಿಗೆ ನೀಡುತ್ತಿರುವ ಜಾಲ ರಾಜ್ಯದಲ್ಲಿ ಸಕ್ರಿಯವಾಗಿದೆ. ವಂಚಕರ ಜಾಡು ಹಿಡಿದ ‘ಸೈಬರ್ ಕಮಾಂಡ್ ಘಟಕ’ದ ಅಧಿಕಾರಿಗಳು ಕಳೆದ ಮೂರು ದಿನಗಳಲ್ಲಿ 14 ‘ಮ್ಯೂಲ್ ಹೆರ್ಡರ್’ ಗಳನ್ನು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ. ಜತೆಗೆ, ರಾಜ್ಯದಲ್ಲಿ 42 ಸಾವಿರ ನಕಲಿ ಖಾತೆಗಳನ್ನೂ ಪತ್ತೆಹಚ್ಚಿದ್ದಾರೆ.
ಶನಿವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಸೈಬರ್ ಕಮಾಂಡ್ ಸೆಂಟರ್‌ನ ಡಿಜಿಪಿ ಪ್ರಣವ್ ಮೊಹಂತಿ ಅವರು ಕಾರ್ಯಾಚರಣೆಯ ವಿವರ ನೀಡಿದರು.
‘ನಕಲಿ ಖಾತೆಗಳನ್ನು(ಮ್ಯೂಲ್ ಅಕೌಂಟ್) ಒಟ್ಟುಗೂಡಿಸುತ್ತಿದ್ದ ಮ್ಯೂಲ್ ಹೆರ್ಡರ್‌ಗಳ (ಬ್ಯಾಂಕ್‌ನ ಖಾತೆಗಳ ವಿವರ ಪಡೆದು ದುರುಪಯೋಗ ಮಾಡಿಕೊಳ್ಳುವವರು) ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ. ಬಂಧಿತರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದರು.
‘ಶಿವಮೊಗ್ಗದಲ್ಲಿ ಬಂಧಿಸಿರುವ ಆರೋಪಿ ಶರತ್‌ಕುಮಾರ್ 19 ನಕಲಿ ಖಾತೆಗಳನ್ನು ಹೊಂದಿದ್ದ. ಈ ಖಾತೆಗಳಲ್ಲಿ ₹11 ಕೋಟಿ ಹಣ ವರ್ಗಾವಣೆ ಆಗಿರುವುದು ಕಂಡುಬಂದಿದೆ. ಈ ಸಂಬಂಧ ಎನ್‌ಸಿಆರ್‌ಪಿ ಪೋರ್ಟಲ್‌ನಲ್ಲೂ 96 ಪ್ರಕರಣ ಗಳು ದಾಖಲಾಗಿದ್ದವು. ಇದುವರೆಗೂ ನಡೆದ ತನಿಖೆಯಲ್ಲಿ ಈ ‘ಮ್ಯೂಲ್ ಅಕೌಂಟ್’ಗಳ ಮೂಲಕ ಅಂದಾಜು ₹100 ಕೋಟಿಗೂ ಹೆಚ್ಚು ವಂಚನೆ ನಡೆದಿರುವುದು ಗೊತ್ತಾಗಿದೆ. ಇನ್ನೂ ಒಂದುವಾರ ವಿಶೇಷ ಕಾರ್ಯಾಚರಣೆ ನಡೆಯಲಿದೆ’ ಎಂದು ಮಾಹಿತಿ ನೀಡಿದರು.
ಕ್ಯೂ–ಆರ್ ಕೋಡ್ ಸಹ ಜಪ್ತಿ: ‘ಇದುವರೆಗೂ ನಡೆದ ಕಾರ್ಯಾಚರಣೆಯಲ್ಲಿ ಬಂಧಿತರಿಂದ ವಿವಿಧ ಬ್ಯಾಂಕ್‌ನ 18 ಪಾಸ್‌ಬುಕ್‌ಗಳು, 25 ಎಟಿಎಂ ಕಾರ್ಡ್, ಏಳು ಚೆಕ್‌ಬುಕ್ ಹಾಗೂ ಮೊಬೈಲ್ ಜಪ್ತಿ ಮಾಡಲಾಗಿದೆ’ ಎಂದು ಪ್ರಣವ್ ಮೊಹಂತಿ ಮಾಹಿತಿ ನೀಡಿದರು.
‘ಅಮಾಯಕರನ್ನು ಗುರಿಯಾಗಿಸಿ, ಅವರಿಂದ ಆಧಾರ್ ಕಾರ್ಡ್ ಸೇರಿ ಅಗತ್ಯ ದಾಖಲೆ ಪಡೆದು ಬ್ಯಾಂಕ್ ಖಾತೆ ತೆರೆಯಲಾಗುತ್ತಿದೆ. ಆ ಖಾತೆಗಳಿಗೆ ವಂಚನೆ ಹಣವನ್ನು ವರ್ಗಾವಣೆ ಮಾಡಲಾಗುತ್ತಿದೆ. ಹಣದ ಆಸೆಗೆ ಬೇರೆ ಯಾರಿಗೂ ದಾಖಲೆ ನೀಡಬಾರದು. ದಾಖಲೆ ನೀಡಿದರೆ ದುರುಪಯೋಗ ಆಗುವ ಸಾಧ್ಯತೆಯೂ ಇರುತ್ತದೆ’ ಎಂದು ಎಚ್ಚರಿಸಿದರು.
‘2021ರಿಂದ ಈಚೆಗೆ ರಾಜ್ಯದಲ್ಲಿ ಸೈಬರ್ ಪ್ರಕರಣಗಳು ಹೆಚ್ಚಾಗಿವೆ. ಸೈಬರ್ ಅಪರಾಧ ಪ್ರಕರಣಗಳನ್ನು ಕಡಿಮೆಗೊಳಿಸುವ ಉದ್ದೇಶದಿಂದ ಬ್ಯಾಂಕ್ ಅಧಿಕಾರಿಗಳ ಸಭೆಯನ್ನೂ ನಡೆಸಲಾಗಿದೆ’ ಎಂದು ಹೇಳಿದರು.
ಬಂಧಿತರ ಅಪರಾಧ ಹಿನ್ನೆಲೆ ಪರಿಶೀಲನೆ ನಡೆಸಲಾಗುತ್ತಿದೆ. ಬ್ಯಾಂಕ್ ಅಧಿಕಾರಿಗಳ ಶಾಮೀಲು ಕಂಡುಬಂದರೆ, ಅವರ ವಿರುದ್ಧವೂ ಕ್ರಮ ಜರುಗಿಸಲಾಗುವುದು.– ಪ್ರಣವ್ ಮೊಹಂತಿ, ಡಿಜಿಪಿ, ಸೈಬರ್ ಕಮಾಂಡ್ ಘಟಕ
ರಾಜ್ಯದಲ್ಲೂ ‘ಕೆ4ಸಿ’ ಆರಂಭ
‘ಸೈಬರ್ ಅಪರಾಧ ತಡೆಗಟ್ಟಲು ಹಾಗೂ ಸೈಬರ್ ವಂಚಕರ ಪತ್ತೆಗೆ ಕೇಂದ್ರ ಸರ್ಕಾರ ಸ್ಥಾಪಿಸಿರುವ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ (ಐ4ಸಿ) ಮಾದರಿಯಲ್ಲಿಯೇ ರಾಜ್ಯದಲ್ಲೂ ‘ಕರ್ನಾಟಕ ಸೈಬರ್ ಅಪರಾಧ ಸಮನ್ವಯ ಕೇಂದ್ರ (ಕೆ4ಸಿ) ಸ್ಥಾಪಿಸಲಾಗುತ್ತಿದೆ’ ಎಂದು ಡಿಜಿಪಿ ಪ್ರಣವ್ ಮೊಹಂತಿ ಹೇಳಿದರು.
‘ಸೈಬರ್ ಅಪರಾಧಿಗಳನ್ನು ಪತ್ತೆ ಹಚ್ಚುವಿಕೆಯಲ್ಲಿ ನೈಪುಣ್ಯ ಇರುವ ಅಧಿಕಾರಿಗಳನ್ನು ಈ ಕೇಂದ್ರಕ್ಕೆ ನೇಮಿಸಲಾಗುವುದು. ಜತೆಗೆ, ಅಗತ್ಯ ತರಬೇತಿ ಸಹ ನೀಡಲಾಗುವುದು’ ಎಂದು ಹೇಳಿದರು.
‘ಸೈಬರ್ ವಂಚನೆಗಳಿಗೆ ಸಂಬಂಧಿಸಿದ ಪ್ರಕರಣಗಳು ಸೆನ್ ಹಾಗೂ ಸಿಐಡಿಯ ಸೈಬರ್ ಅಪರಾಧ ಠಾಣೆಯಲ್ಲಿ ಪ್ರಕರಣಗಳು ದಾಖಲಾಗುತ್ತಿವೆ. ಸೈಬರ್ ಅಪರಾಧವನ್ನು ಸಂಘಟಿತ ಮತ್ತು ಸಮಗ್ರ ರೀತಿಯಲ್ಲಿ ನಿಭಾಯಿಸಲು ಕರ್ನಾಟಕ ಸೈಬರ್ ಅಪರಾಧ ಸಮನ್ವಯ ಕೇಂದ್ರ ಸ್ಥಾಪನೆ ಅವಶ್ಯವಾಗಿದೆ. ದೊಡ್ಡ ಮೊತ್ತದ ವಂಚನೆ ನಡೆದಾಗ, ಸರ್ಕಾರಿ ಇಲಾಖೆಗಳ ವೆಬ್‌ಸೈಟ್ ಹ್ಯಾಕ್ ಸೇರಿದಂತೆ ಇತರೆ ಗಂಭೀರ ಪ್ರಕರಣಗಳ ತನಿಖೆಯನ್ನು ‘ಕೆ4ಸಿ’ ಮೂಲಕವೇ ನಡೆಸಲು ಚಿಂತನೆ ನಡೆಸಲಾಗಿದೆ’ ಎಂದು ಹೇಳಿದರು.
ಬಂಧಿತರು ಯಾರ್‍ಯಾರು?
ಬೆಂಗಳೂರಿನ ಎಚ್.ಜಿ.ಧರ್ಮಪಾಲ್, ಸುಹೇಲ್ ಪಾಷಾ, ಅಕೀಲ್ ಪಾಷಾ, ಮೊಹಮ್ಮದ್ ಮುಜಾಮಿಲ್, ಪಟೇಲ್ ಜಿತೇಂದ್ರ ಕುಮಾರ್, ಮೋಹನ್ ಕುಮಾರ್
ಕೋಲಾರದ ಜುನೇದ್ ಪಾಷಾ, ಮುಜೀದ್ ಮದೀನಿ, ಶಹೀದ್ ಆಲಂ ಖಾನ್
ತುಮಕೂರಿನ ಚಂದ್ರಶೇಖರ್, ರಾಮಕಿರಣ್
ಶಿವಮೊಗ್ಗದ ಶರತ್‌ಕುಮಾರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.