ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹೊಸದಾಗಿ ಆರು ಬಡಾವಣೆಗಳನ್ನು ನಿರ್ಮಿಸಲು ಉದ್ದೇಶಿಸಿದ್ದು, ಇದಕ್ಕಾಗಿ ಉದ್ದೇಶಿತ ಪೆರಿಫೆರಲ್ ವರ್ತುಲ ರಸ್ತೆ–2ರ ಸುತ್ತಮುತ್ತ ಸುಮಾರು ಐದು ಸಾವಿರ ಎಕರೆ ಜಮೀನನ್ನು ಗುರುತಿಸಿದೆ.
ಹೊಸೂರು ರಸ್ತೆಯಿಂದ ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆ ಮೂಲಕ ಮೈಸೂರು ರಸ್ತೆವರೆಗೆ ಪೆರಿಫೆರಲ್ ವರ್ತುಲ ರಸ್ತೆ–2 (ಪಿಆರ್‌ಆರ್–2) ನಿರ್ಮಿಸಲು ಬಿಡಿಎ ಈಗಾಗಲೇ ನಿರ್ಧರಿಸಿದೆ. ಈ ರಸ್ತೆಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜಮೀನುಗಳನ್ನು ಗುರುತಿಸಲಾಗಿದೆ. ಕೆಲವು ರೈತರಿಗೆ ಆರಂಭದ ನೋಟಿಸ್‌ಗಳನ್ನೂ ಜಾರಿ ಮಾಡಲಾಗುತ್ತಿದ್ದು, ಭೂದಾಖಲೆಗಳನ್ನು ಒದಗಿಸಲು ಸೂಚಿಸಲಾಗುತ್ತಿದೆ.
ಮೈಸೂರು ರಸ್ತೆಯಿಂದ ಮಾಗಡಿ ರಸ್ತೆವರೆಗೆ ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣವಾಗಿದ್ದು, ಮೈಸೂರು ರಸ್ತೆಯಿಂದ ಹೊಸೂರು ರಸ್ತೆವರೆಗಿನ ಗ್ರಾಮಗಳಲ್ಲಿ ಹೊಸ ಬಡಾವಣೆಗಳನ್ನು ನಿರ್ಮಿಸಲು ಯೋಜಿಸಲಾಗಿದೆ.
ಕನಕಪುರ ರಸ್ತೆ ಹಾಗೂ ಬನ್ನೇರುಘಟ್ಟ ರಸ್ತೆಗಳ ಅಕ್ಕಪಕ್ಕದ ಗ್ರಾಮಗಳಿಗೆ ಸಂಪರ್ಕ ರಸ್ತೆಗಳು ಉತ್ತಮವಾಗಿರುವುದರಿಂದ, ಅತಿಹೆಚ್ಚು ಜಮೀನುಗಳನ್ನು ಅಲ್ಲಿನ ಹಳ್ಳಿಗಳಲ್ಲೇ ಗುರುತಿಸಲಾಗಿದೆ. ಪಿಆರ್‌ಆರ್–2ಕ್ಕೆ ಹೊಂದಿಕೊಂಡ ಗ್ರಾಮಗಳಿಗೇ ಆದ್ಯತೆ ನೀಡಿರುವುದರಿಂದ, ಸಂಪರ್ಕ ರಸ್ತೆಗಳು ಹಾಗೂ ವಾಣಿಜ್ಯ ಚಟುವಟಿಕೆಗಳಿಗೂ ಹೆಚ್ಚು ಪ್ರಾಮುಖ್ಯ ಸಿಗಲಿದೆ ಎನ್ನಲಾಗುತ್ತಿದೆ.
ಕನಕಪುರ ರಸ್ತೆ, ಬನ್ನೇರುಘಟ್ಟ ರಸ್ತೆ, ಹೊಸೂರು ರಸ್ತೆಗಳ ಸುತ್ತಮುತ್ತಲಿನ ಗ್ರಾಮಗಳಲ್ಲೂ ಹೆಚ್ಚಿನ ಅಭಿವೃದ್ಧಿ ಚಟುವಟಿಕೆಗಳು ನಡೆದಿವೆ. ಅವುಗಳೆಲ್ಲವನ್ನೂ ಹೊರತುಪಡಿಸಿ, ಸುಮಾರು ಐದು ಸಾವಿರ ಎಕರೆ ಜಮೀನುಗಳನ್ನು ಬಿಡಿಎ ಗುರುತಿಸಿದೆ.
ಆರು ಹೊಸ ಬಡಾವಣೆಗಳಿಗೆ 10 ಗ್ರಾಮಗಳ ಸರ್ವೆ ನಂಬರ್‌ಗಳನ್ನೂ ಗುರುತಿಸಲಾಗಿದ್ದು, ಅದಲ್ಲದೆ ಸರ್ಕಾರಿ ಜಾಗ ಹಾಗೂ ನಾಲಾ, ಕೆರೆಗಳೂ ಬಡಾವಣೆಗಳ ನಿರ್ಮಾಣಕ್ಕೆ ಗುರುತಿಸಿರುವ ಪ್ರದೇಶಗಳಲ್ಲಿ ಸೇರಿವೆ. 50 ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ಹಂಚಿಕೆ ಮಾಡಬಹುದು ಎಂದು ಅಂದಾಜಿಸಲಾಗಿದೆ.
ಉದ್ದೇಶಿತ ಪಿಆರ್‌ಆರ್–2 ರಸ್ತೆಗಾಗಿ 854 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲು ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದು, ಅಂತಿಮ ಅಧಿಸೂಚನೆ ಶೀಘ್ರ ಹೊರಬೀಳಲಿದೆ. 100 ಮೀಟರ್ ಅಗಲದ ಪಿಆರ್‌ಆರ್–2 ಅನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಅದನ್ನು ಕಡಿಮೆ ಮಾಡಿ ಬಡಾವಣೆಗಳಿಗೆ ಅಥವಾ ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳಲು ಯೋಜಿಸಲಾಗುತ್ತಿದೆ ಎನ್ನಲಾಗಿದೆ.
‘ಆರು ಬಡಾವಣೆಗಳ ನಿರ್ಮಾಣ ಯೋಜನೆಗಾಗಿ ಜಮೀನುಗಳನ್ನು ಗುರುತಿಸಲಾಗಿದೆ. ಪ್ರಕ್ರಿಯೆ ಇನ್ನೂ ಪ್ರಾರಂಭದ ಹಂತದಲ್ಲೇ ಇದ್ದು, ಪ್ರಾಥಮಿಕ ಅಧಿಸೂಚನೆಗೆ ಬೇಕಾದ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಭೂಸ್ವಾಧೀನಕ್ಕೆ ಪರಿಹಾರ ಯಾವ ರೀತಿ ನೀಡಬೇಕು ಎಂಬ ಬಗ್ಗೆ ಇನ್ನೂ ಯಾವುದೇ ನಿರ್ಧಾರವಾಗಿಲ್ಲ. ಶಿವರಾಮ ಕಾರಂತ ಬಡಾವಣೆಯಲ್ಲಿ ಅಳವಡಿಸಿಕೊಂಡಿರುವ ಶೇಕಡ 60:40ರ ಅನುಪಾತವನ್ನು ಅನುಸರಿಸುವ ಸಾಧ್ಯತೆ ಇದೆ’ ಎಂದು ಬಿಡಿಎ ಅಧಿಕಾರಿಗಳು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.