ಬೆಂಗಳೂರು: ಡ್ರಗ್ಸ್ ವಿರುದ್ಧದ ಕಾರ್ಯಾಚರಣೆಯನ್ನು ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲಾ ಪೊಲೀಸರು ತೀವ್ರಗೊಳಿಸಿದ್ದು, ಮಾದಕ ವಸ್ತುಗಳನ್ನು ಪೂರೈಸಲು ಪೆಡ್ಲರ್‌ಗಳು ಅನುಸರಿಸುತ್ತಿರುವ ಹೊಸ ತಂತ್ರಗಳಿಂದಾಗಿ ಆರೋಪಿಗಳ ಪತ್ತೆ, ಬಂಧನ ಸವಾಲಾಗಿದೆ.
ಡ್ರಗ್ಸ್ ಪೂರೈಸಲು ಪೆಡ್ಲರ್‌ಗಳು ‘ಡ್ರಾಪ್ ತಂತ್ರ’ ಸೇರಿ ಹಲವು ಹೊಸ ವಿಧಾನಗಳನ್ನು ಬಳಸಿಕೊಂಡು ಪೊಲೀಸರ ಕಣ್ತಪ್ಪಿಸುತ್ತಿದ್ದಾರೆ.
ಮೈಸೂರಿನಲ್ಲಿ ಕಳೆದ ತಿಂಗಳು ಮುಂಬೈ ಪೊಲೀಸರು ನಡೆಸಿದ್ದ ಕಾರ್ಯಾಚರಣೆಯಲ್ಲಿ ಡ್ರಗ್ಸ್ ತಯಾರಿಕಾ ಘಟಕವೇ ಪತ್ತೆಯಾಗಿತ್ತು. ಬಳಿಕ ಎಚ್ಚೆತ್ತಿರುವ ಪೊಲೀಸರು, ನಗರ ಹಾಗೂ ಗ್ರಾಮಾಂತರ ಪ್ರದೇಶಗಳ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ತೀವ್ರ ಮಾಡಿದ್ದಾರೆ. ಪೆಡ್ಲರ್‌ಗಳು ಅನುಸರಿಸುತ್ತಿರುವ ಹೊಸ ಮಾರ್ಗಗಳಿಂದಾಗಿ ಪೊಲೀಸರ ಕಾರ್ಯಾಚರಣೆಗೆ ನಿರೀಕ್ಷಿತ ಫಲ ದೊರೆಯುತ್ತಿಲ್ಲ.
ಮಾದಕ ವಸ್ತುಗಳನ್ನು ಸಾಗಿಸಲು ನೋಂದಣಿ ಸಂಖ್ಯೆಯಿಲ್ಲದ ಹಾಗೂ ನಕಲಿ ನಂಬರ್ ಪ್ಲೇಟ್ ಹೊಂದಿರುವ ದ್ವಿಚಕ್ರ ವಾಹನಗಳನ್ನು ಪೆಡ್ಲರ್‌ಗಳು ಬಳಕೆ ಮಾಡುತ್ತಿದ್ದಾರೆ. ಮಾರಾಟಗಾರರು ಸೂಚಿಸಿದ ಸ್ಥಳಕ್ಕೆ ಡ್ರಗ್ಸ್ ತುಂಬಿದ ಚೀಲಗಳನ್ನು ಎಸೆದು (ಡ್ರಾಪ್ ವಿಧಾನ) ಪರಾರಿ ಆಗುತ್ತಿದ್ದಾರೆ. ಸಿಸಿಟಿವಿ ಕ್ಯಾಮೆರಾಗಳು ಇಲ್ಲದ ಹಾಗೂ ಖಾಲಿ ಪ್ರದೇಶಗಳಲ್ಲೂ ಚೀಲಗಳನ್ನು ಹಾಕಿ ಹೋಗುತ್ತಿದ್ದಾರೆ. ಸ್ವಲ್ಪ ಸಮಯದ ನಂತರ ಮಾರಾಟಗಾರರು ಹಾಗೂ ಗ್ರಾಹಕರು ಆ ಸ್ಥಳಕ್ಕೆ ಬಂದು ಆ ಚೀಲವನ್ನು ಕೊಂಡೊಯ್ಯುತ್ತಾರೆ. ಇನ್ನು ಕೆಲವರು ಹಳೆ ವಸ್ತುಗಳನ್ನು ಸಂಗ್ರಹಿಸುವ ನೆಪದಲ್ಲಿ ಸೈಕಲ್‌ನಲ್ಲಿ ಮಾದಕ ವಸ್ತುಗಳನ್ನು ಪೂರೈಸುತ್ತಿರುವುದು ತನಿಖೆಯಿಂದ ಪತ್ತೆಯಾಗಿದೆ ಎಂದು ಪೊಲೀಸರು ಅಧಿಕಾರಿಯೊಬ್ಬರು ತಿಳಿಸಿದರು.
ಮೈಸೂರು ಹೊರವಲಯದಲ್ಲಿ ಮುಂಬೈ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಎಂಡಿಎಂಎ ತಯಾರಿಕ ಘಟಕವೇ ಪತ್ತೆಯಾಗಿತ್ತು. ಎಂಡಿಎಂಎ ಸೇರಿದಂತೆ ವಿವಿಧ ಮಾದರಿಯ ₹100 ಕೋಟಿ ಮೌಲ್ಯದ ಸಿಂಥೆಟಿಕ್ ಡ್ರಗ್ಸ್ ಅನ್ನು ಪೊಲೀಸರು ಜಪ್ತಿ ಮಾಡಿದ್ದರು. ಬೆಂಗಳೂರು ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಅಂತಹದ್ದೇ ಘಟಕವೇನಾದರೂ ಕಾರ್ಯಾಚರಿಸುತ್ತಿದೆಯೇ ಎಂಬುದನ್ನು ಪತ್ತೆಹಚ್ಚಲು ಶೋಧ ತೀವ್ರಗೊಳಿಸಲಾಗಿದೆ. ಅಂತಹ ಯಾವುದೇ ಕುರುಹು ಪತ್ತೆಯಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಎಲೆಕ್ಟ್ರಾನಿಕ್ ಸಿಟಿ, ಎಚ್‌ಎಸ್ಆರ್ ಲೇಔಟ್, ಕೋರಮಂಗಲ, ಸಂಪಿಗೆಹಳ್ಳಿ, ಯಲಹಂಕ, ಹೊಸಕೋಟೆ, ನೆಲಮಂಗಲ, ಮಾದನಾಯಕನಹಳ್ಳಿ, ಬಾಗಲೂರು, ಸೋಲದೇವನಹಳ್ಳಿ, ಆರ್.ಟಿ. ನಗರ, ಕೆಂಗೇರಿ ಭಾಗದಲ್ಲಿ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
‘ಶೈಕ್ಷಣಿಕ ಉದ್ದೇಶಕ್ಕೆ ವೀಸಾ ಪಡೆದು ನೈಜೀರಿಯಾ ದೇಶದಿಂದ ಹಲವು ಮಂದಿ ನಗರಕ್ಕೆ ಬರುತ್ತಾರೆ. ಅವರಲ್ಲಿ ಕೆಲವರು ವೀಸಾದ ಅವಧಿ ಮುಕ್ತಾಯವಾದ ಮೇಲೂ ಅಕ್ರಮವಾಗಿ ನಗರದಲ್ಲಿ ನೆಲಸಿ ಡ್ರಗ್ಸ್ ಮಾರಾಟ ದಂಧೆಯಲ್ಲಿ ತೊಡಗುತ್ತಿದ್ದಾರೆ. ಅಂತಹ ಆರೋಪಿಗಳನ್ನು ಪತ್ತೆಹಚ್ಚಿ ವಶಕ್ಕೆ ಪಡೆದುಕೊಳ್ಳಲಾಗುತ್ತಿದೆ. ಈ ರೀತಿಯ ಕೃತ್ಯದಲ್ಲಿ ಭಾಗಿಯಾಗುತ್ತಿದ್ದ ಆರೋಪದಡಿ ಒಂದು ತಿಂಗಳಲ್ಲಿ 10 ಮಂದಿ ವಿದೇಶಿಯರನ್ನು ಬಂಧಿಸಲಾಗಿದೆ. ನಗರದಲ್ಲಿ ವಿದೇಶಿ ಪ್ರಜೆಗಳು ವಾಸಿಸುವ ಪ್ರದೇಶಗಳ ಮೇಲೆ ನಿಗಾ ವಹಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಡ್ರಗ್ಸ್ ಮಾರಾಟಗಾರರು, ಪೆಡ್ಲರ್‌ಗಳು(ಪೂರೈಕೆದಾರರು) ಹಾಗೂ ಖರೀದಿದಾರರ ವಿರುದ್ಧ ಮಾದಕ ವಸ್ತು ಮತ್ತು ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ(ಎನ್‌ಡಿಪಿಎಸ್) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದೆ. ಒಂದು ತಿಂಗಳಲ್ಲಿ 100ಕ್ಕೂ ಅಧಿಕ ಆರೋಪಿಗಳನ್ನು ಬಂಧಿಸಿ, ಕಾರಾಗೃಹಕ್ಕೆ ಕಳುಹಿಸಲಾಗಿದೆ. ಕಳೆದ ಏಳು ತಿಂಗಳಲ್ಲಿ ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳಲ್ಲಿ 326 ಡ್ರಗ್ಸ್ ಪೆಡ್ಲರ್‌ಗಳು ಹಾಗೂ ಮಾರಾಟಗಾರರನ್ನು ಬಂಧಿಸಲಾಗಿತ್ತು. ಡ್ರಗ್ಸ್ ಸೇವನೆ ಮಾಡಿದ್ದ ಆರೋಪದಡಿ 155 ಮಂದಿ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
‘‘ಆಗಸ್ಟ್ 18ರಂದು ಒಂದೇ ದಿನ 10ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿ ₹5.50 ಕೋಟಿ ಮೌಲ್ಯದ ವಿವಿಧ ಮಾದರಿಯ ಡ್ರಗ್ಸ್ ಜಪ್ತಿ ಮಾಡಲಾಗಿದೆ. ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ‘‘
–ಸೀಮಂತ್ ಕುಮಾರ್ ಸಿಂಗ್ ನಗರ ಪೊಲೀಸ್ ಕಮಿಷನರ್
ನಿಯಂತ್ರಣಕ್ಕೆ ಕ್ರಮಗಳು
* ರೂಢಿಗತ ಡ್ರಗ್ಸ್ ಪೆಡ್ಲರ್‌ಗಳ ಸ್ಥಿರಾಸ್ತಿ ಚರಾಸ್ತಿ ಮುಟ್ಟುಗೋಲು
* ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪದಡಿ ಬಂಧಿತರಾದ ವಿದೇಶಿಯರನ್ನು ವಿದೇಶಿ ಪ್ರಜೆಗಳ ಕಾಯ್ದೆ ಅಡಿ ಗಡಿಪಾರು
* ಮಾದಕ ವಸ್ತುಗಳ ನಾಶ ವ್ಯಸನಿಗಳ ಪತ್ತೆ ಹಾಗೂ ನಿರ್ಮೂಲನೆಗೆ ನಗರ ಪೊಲೀಸ್ ಸಿಬ್ಬಂದಿಗೆ ಎನ್‌ಸಿಬಿಯಿಂದ ಆನ್‌ಲೈನ್ ತರಬೇತಿ
ರಾಜಧಾನಿಗೆ ಎಲ್ಲಿಂದ ಪೂರೈಕೆ?
ರಾಜಧಾನಿಗೆ ವಿವಿಧೆಡೆಯಿಂದ ನಿರಂತರವಾಗಿ ಮಾದಕ ವಸ್ತುಗಳು ಪೂರೈಕೆ ಆಗುತ್ತಿವೆ. ನೈಸರ್ಗಿಕವಾಗಿ ಬೆಳೆಯುವ ಗಾಂಜಾವನ್ನು ಸ್ಥಳೀಯ ಪೆಡ್ಲರ್‌ಗಳೇ ಪೂರೈಸುತ್ತಿದ್ದಾರೆ. ಆಂಧ್ರಪ್ರದೇಶ ತೆಲಂಗಾಣ ಹಾಗೂ ಒಡಿಶಾದಿಂದ ‘ಸಿಂಥೆಟಿಕ್’ ಡ್ರಗ್ಸ್ ಅನ್ನು ಬಸ್ ಹಾಗೂ ರೈಲುಗಳ ಮೂಲಕ ನಗರಕ್ಕೆ ಪೂರೈಸಲಾಗುತ್ತಿದೆ ಎಂದು ತನಿಖಾಧಿಕಾರಿಯೊಬ್ಬರು ಹೇಳಿದರು. ‘ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವ ಮಾದಕ ವಸ್ತುಗಳ ನಿಯಂತ್ರಣಕ್ಕಾಗಿ ಗಡಿ ಜಿಲ್ಲೆಗಳಾದ ಬೀದರ್ ರಾಯಚೂರು ಬೆಂಗಳೂರು ಗ್ರಾಮಾಂತರ ಹಾಗೂ ಕೋಲಾರ ಜಿಲ್ಲೆಯ ಪೊಲೀಸರಿಗೆ ವಿಶೇಷ ಸೂಚನೆ ನೀಡಲಾಗಿದೆ. ಒಡಿಶಾದ ಪೆಡ್ಲರ್‌ಗಳು ಆಂಧ್ರಪ್ರದೇಶದ ಮೂಲಕ ಬೆಂಗಳೂರಿಗೆ ಕಳ್ಳ ಸಾಗಣೆ ಮೂಲಕ ಡ್ರಗ್ಸ್ ಪೂರೈಸುತ್ತಿದ್ದಾರೆ ಎಂಬುದು ತನಿಖೆಯಿಂದ ಪತ್ತೆಯಾಗಿದೆ. ಒಡಿಶಾ ಹಾಗೂ ಆಂಧ್ರಪ್ರದೇಶದ ಪೊಲೀಸರಿಗೂ ಮಾಹಿತಿ ನೀಡಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.