
ಬೆಂಗಳೂರು: ವಿದೇಶದಿಂದ ದೆಹಲಿ, ಕೇರಳ ಮೂಲಕ ನಗರಕ್ಕೆ ಪೂರೈಕೆಯಾಗುತ್ತಿದ್ದ ವಿವಿಧ ಮಾದರಿಯ ₹21.50 ಕೋಟಿ ಮೌಲ್ಯದ ಮಾದಕವಸ್ತುವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳ ಹಾಗೂ ಸ್ಥಳೀಯ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ನೈಜೀರಿಯಾ ದೇಶದ ಇಬ್ರಾಹಿಂ ಬಕಾಯೋಕು (36), ಕೇರಳದ ಅಜ್ಮಲ್ ಪೀಡಿಯೆಕಲ್ಲ (29), ಮಜೀದ್‌ಅಬೂಬಕರ್ (29) ಸೇರಿ 15 ಮಂದಿಯನ್ನು ಬಂಧಿಸಿದೆ.
ದಂಧೆಕೋರರಿಂದ 9 ಕೆ.ಜಿ. 460 ಗ್ರಾಂ ಹೈಡ್ರೋ ಗಾಂಜಾ, 5 ಕೆ.ಜಿ. 677 ಗ್ರಾಂ ಎಂಡಿಎಂಎ, 34 ಕೆ.ಜಿ ಗಾಂಜಾ, 131 ಗ್ರಾಂ ಕೊಕೇನ್, //462 ಗ್ರಾಂ ಮಿಲಿ// ಹ್ಯಾಶಿಷ್ ಆಯಿಲ್, 29 ಎಲ್‌ಎಸ್‌ಡಿ ಪಿಲ್ಸ್, ₹24,400 ನಗದು, ಕಾರು, ದ್ವಿಚಕ್ರ ವಾಹನ, ನಾಲ್ಕು ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಇವುಗಳ ಒಟ್ಟು ಮೌಲ್ಯ ₹10.59 ಕೋಟಿ. ಆದರೆ, ಮಾರುಕಟ್ಟೆ ಮೌಲ್ಯ ₹21.50 ಕೋಟಿ.
ಪ್ರಕರಣದ ಎಲ್ಲಾ ಆರೋಪಿಗಳಿಗೆ ಮಾದಕವಸ್ತುಗಳನ್ನು ಪೂರೈಕೆ ಮಾಡುತ್ತಿದ್ದ ವಿದೇಶಿ ಮತ್ತು ಹೊರ ರಾಜ್ಯದ ವ್ಯಕ್ತಿಗಳ ಪತ್ತೆ ಕಾರ್ಯ ಮುಂದುವರಿದಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ಹೇಳಿದರು.
ನೈಜೀರಿಯಾ, ಉಗಾಂಡ, ದಕ್ಷಿಣ ಆಫ್ರಿಕಾ ದೇಶದ ಮೂವರು ಹಾಗೂ ಕೇರಳದ 12 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಗಳ ವಿರುದ್ಧ ಅಮೃತಹಳ್ಳಿ, ಹೆಬ್ಬಗೋಡಿ, ಜೆ.ಬಿ.ನಗರ, ಶೇಷಾದ್ರಿಪುರ, ಮಹಾಲಕ್ಷ್ಮೀ ಲೇಔಟ್, ಗೋವಿಂದಪುರ ಸೇರಿ ಹಲವು ಪೊಲೀಸ್ ಠಾಣೆಗಳಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ನಗರದ ವಿಲ್ಸನ್ ಗಾರ್ಡ್‌ನ ಬಳಿ ಸೆರೆಸಿಕ್ಕ ನೈಜೀರಿಯಾದ ಪೆಡ್ಲರ್ ಇಬ್ರಾಹಿಂ ಬಕಾಯೋಕು ಬಳಿ ₹11.40 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆಯಾಗಿದೆ. ಆರೋಪಿ ಬಿಸಿನೆಸ್ ವೀಸಾದಲ್ಲಿ 2018ರಲ್ಲಿಯೇ ಭಾರತಕ್ಕೆ ಬಂದಿದ್ದು, ನೆಲಮಂಗಲದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದುಕೊಂಡು ಡ್ರಗ್ಸ್ ದಂಧೆಯಲ್ಲಿ ತೋಡಗಿದ್ದ. ಆರೋಪಿ ವಿರುದ್ಧ ಹಿಮಾಚಲ ಪ್ರದೇಶದಲ್ಲಿ ಹಾಗೂ ನಗರದ ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ದುಬೈ ಥಾಯ್ಲೆಂಡ್ ದಕ್ಷಿಣ ಆಫ್ರಿಕಾ ನೈಜೀರಿಯಾ ದೇಶದಲ್ಲಿ ಕಡಿಮೆ ಬೆಲೆಗೆ ದೊರೆಯುವ ಮಾದಕವಸ್ತು ವಿಮಾನದ ಮೂಲಕ ದೆಹಲಿ ಕೇರಳ ತಲುಪುತ್ತಿತ್ತು. ಅಲ್ಲಿಂದ ಪೆಡ್ಲರ್‌ಗಳು ಬಸ್ ರೈಲಿನಲ್ಲಿ ನಗರಕ್ಕೆ ಸಾಗಣೆ ಮಾಡುತ್ತಿದ್ದರು. ಸ್ಥಳೀಯ ದಂಧೆಕೋರರೊಂದಿಗೆ ಶಾಮೀಲಾಗಿ ಕಾಲೇಜು ವಿದ್ಯಾರ್ಥಿಗಳು ಐ.ಟಿ ಬಿ.ಟಿ ಉದ್ಯೋಗಿಗಳು ಸಾರ್ವಜನಿಕರು ಹಾಗೂ ಹೋಟೆಲ್ ಪಬ್‌ಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದು ತನಿಖೆ ವೇಳೆ ಗೊತ್ತಾಗಿದೆ.
ನಗರದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ 15 ಮಂದಿ ಪೆಡ್ಲರ್‌ಗಳನ್ನು ಬಂಧಿಸಲಾಗಿದೆ. ಮಾದಕ ವಸ್ತು ಎಲ್ಲಿಂದ ಹೇಗೆ ಸರಬರಾಜು ಆಗುತ್ತಿತ್ತು ಎಂಬುದರ ತನಿಖೆ ನಡೆಯುತ್ತಿದೆ.-ಸೀಮಾಂತ್ ಕುಮಾರ್ ಸಿಂಗ್, ನಗರ ಪೊಲೀಸ್ ಕಮಿಷನರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.