ADVERTISEMENT

ಬೆಂಗಳೂರು | ₹5.50 ಕೋಟಿ ಮೌಲ್ಯದ ಡ್ರಗ್ಸ್ ವಶ: ಆಫ್ರಿಕಾ ಮೂಲದ ಇಬ್ಬರ ಬಂಧನ

ನಗರದ ಐದು ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 14:37 IST
Last Updated 19 ಆಗಸ್ಟ್ 2025, 14:37 IST
<div class="paragraphs"><p>ಜೋಯಲ್ ಕಾಬೊಂಗ್ ಮತ್ತು&nbsp;ಜೋಯ್ ಸಂಡೆ</p></div>

ಜೋಯಲ್ ಕಾಬೊಂಗ್ ಮತ್ತು ಜೋಯ್ ಸಂಡೆ

   

ಬೆಂಗಳೂರು: ಎಲೆಕ್ಟ್ರಾನಿಕ್‌ ಸಿಟಿ, ಎಚ್‌ಎಸ್ಆರ್‌ ಲೇಔಟ್‌, ಕೋರಮಂಗಲ, ಸಂಪಿಗೆಹಳ್ಳಿ, ಯಲಹಂಕ ಠಾಣೆ ಪೊಲೀಸರು ಹಾಗೂ ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ನಗರದ ಹಲವೆಡೆ ಕಾರ್ಯಾಚರಣೆ ನಡೆಸಿ, ಅಂದಾಜು ₹5.50 ಕೋಟಿ ಮೌಲ್ಯದ ನೈಸರ್ಗಿಕ ಹಾಗೂ ಸಿಂಥೆಟಿಕ್ ಡ್ರಗ್ಸ್ ಅನ್ನು ಜಪ್ತಿ ಮಾಡಿದ್ದಾರೆ.

ಎಲೆಕ್ಟ್ರಾನಿಕ್‌ ಸಿಟಿ ಪೊಲೀಸರು ಕಾರ್ಯಾಚರಣೆ ನಡೆಸಿ, ವಿದ್ಯಾರ್ಥಿ ವೀಸಾದ ಅಡಿ ನಗರಕ್ಕೆ ಬಂದು ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ಆಫ್ರಿಕಾ ಮೂಲದ ಇಬ್ಬರನ್ನು ಬಂಧಿಸಿದ್ದಾರೆ. ಜೋಯಲ್ ಕಾಬೊಂಗ್ ಹಾಗೂ ಆತನ ಸ್ನೇಹಿತೆ ಜೋಯ್ ಸಂಡೆ ಬಂಧಿತರು.

ADVERTISEMENT

ಬಂಧಿತರಿಂದ ₹5 ಕೋಟಿ ಮೌಲ್ಯದ 2 ಕೆ.ಜಿ 150 ಗ್ರಾಂ ಎಂಡಿಎಂಎ ಕ್ರಿಸ್ಟಲ್‌ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ನೈಜೀರಿಯಾ ಮೂಲದ ಆ್ಯಂಗಲೊನಾ ತಲೆಮರೆಸಿಕೊಂಡಿದ್ದು ಹುಡುಕಾಟ ನಡೆಸಲಾಗುತ್ತಿದೆ.

‘ಜೋಯಲ್ ಕಾಬೊಂಗ್ 12 ವರ್ಷಗಳ ಹಿಂದೆ ವಿದ್ಯಾರ್ಥಿ ವೀಸಾದ ಅಡಿ ಭಾರತಕ್ಕೆ ಬಂದಿದ್ದ. ಜೋಯ್ ಸಂಡೆ ಸಹ ವಿದ್ಯಾರ್ಥಿ ವೀಸಾ ಪಡೆದು ಮೂರು ವರ್ಷಗಳ ಹಿಂದೆ ಭಾರತಕ್ಕೆ ಬಂದಿದ್ದಳು. ಇಬ್ಬರ ವೀಸಾದ ಅವಧಿ ಅಂತ್ಯವಾದ ಬಳಿಕವೂ ಬೆಂಗಳೂರಿನಲ್ಲೇ ಉಳಿದಿದ್ದರು. ಇಬ್ಬರೂ ಅಕ್ರಮವಾಗಿ ನೆಲಸಿ, ಡ್ರಗ್ಸ್ ಮಾರಾಟ ದಂಧೆಯಲ್ಲಿ ತೊಡಗಿದ್ದರು’ ಎಂದು ನಗರ ಪೊಲೀಸ್‌ ಕಮಿಷನರ್‌ ಸೀಮಂತ್‌ ಕುಮಾರ್ ಸಿಂಗ್‌ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾಹಿತಿ ನೀಡಿದರು.

ಆರೋಪಿಗಳಿಬ್ಬರು ಬೆಟ್ಟದಾಸನಪುರದಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿರುವ ಬಗ್ಗೆ ಬಾತ್ಮೀದಾರರಿಂದ ಖಚಿತ ಮಾಹಿತಿ ಬಂದಿತ್ತು. ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಮಾಹಿತಿ ನೀಡಿದರು.

ದೆಹಲಿ ಹಾಗೂ ಆಂಧ್ರಪ್ರದೇಶದಲ್ಲಿರುವ ಮಧ್ಯವರ್ತಿಗಳಿಂದ ಕಡಿಮೆ ಬೆಲೆಗೆ ಡ್ರಗ್ಸ್ ಅನ್ನು ಖರೀದಿಸಿ, ನಗರಕ್ಕೆ ತರುತ್ತಿದ್ದರು. ನಗರದಲ್ಲಿ ನೆಲಸಿರುವ ಟೆಕಿಗಳು, ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಬಂದ ಹಣದಲ್ಲಿ ವಿಲಾಸಿ ಜೀವನ ನಡೆಸುತ್ತಿದ್ದರು ಎಂದು ತಿಳಿಸಿದರು.

ಸಿಸಿಬಿ ಕಾರ್ಯಾಚರಣೆ: ಪ್ರವಾಸಿ ವೀಸಾ ಪಡೆದು ಭಾರತಕ್ಕೆ ಬಂದು ನಗರದಲ್ಲಿ ಮಾದಕ ಪದಾರ್ಥ ಮಾರಾಟ ಮಾಡುತ್ತಿದ್ದ ಆಫ್ರಿಕಾದ ಆರೋಪಿ ಜಾನ್ ಡಿ ಕೊಸ್ಟಾ ಎಂಬಾತನನ್ನು ಸಿಸಿಬಿಯ ಮಾದಕ ಪದಾರ್ಥ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ.

2024ರಲ್ಲಿ ಪ್ರವಾಸಿ ವೀಸಾ ಪಡೆದು ಭಾರತಕ್ಕೆ ಬಂದಿದ್ದ ಆರೋಪಿ, ಆರಂಭದಲ್ಲಿ ದೆಹಲಿಯಲ್ಲಿ ಬಟ್ಟೆ ವ್ಯಾಪಾರ ಆರಂಭಿಸಿದ್ದ. ಬಳಿಕ ಬೆಂಗಳೂರಿಗೆ ಬಂದು ಆವಲಹಳ್ಳಿ ವ್ಯಾಪ್ತಿಯಲ್ಲಿ ಬಟ್ಟೆ ವ್ಯಾಪಾರದ ಜೊತೆಗೆ ಮಾದಕ ವಸ್ತುಗಳ ಮಾರಾಟ ದಂಧೆಯಲ್ಲಿ ತೊಡಗಿದ್ದ. ಆರೋಪಿಯಿಂದ ₹40 ಲಕ್ಷ ಮೌಲ್ಯದ 255 ಗ್ರಾಂ ಎಂಡಿಎಂಎ ಕ್ರಿಸ್ಟಲ್‌ ಹಾಗೂ ಒಂದು ಎಲೆಕ್ಟ್ರಾನಿಕ್ ತೂಕದ ಯಂತ್ರವನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ಎನ್‌ಡಿಪಿಎಸ್‌ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ತಲೆಮರೆಸಿಕೊಂಡಿದ್ದ ಆರೋ‍ಪಿ ಸೆರೆ

ಡ್ರಗ್ಸ್ ಮಾರಾಟ ಮಾಡಿ ಪೊಲೀಸರಿಗೆ ಸಿಕ್ಕಿ ಬೀಳುವ ಭಯದಲ್ಲಿ ಹೊರರಾಜ್ಯಕ್ಕೆ ತೆರಳಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಶಕ್ಕೆ ಪಡೆದಿರುವ ಕೋರಮಂಗಲ ಠಾಣೆಯ ಪೊಲೀಸರು ಆರೋಪಿಯಿಂದ ₹16 ಲಕ್ಷ ಮೌಲ್ಯದ ವಿವಿಧ ಕಂಪನಿಯ 48 ಮಾದರಿಯ ಮೊಬೈಲ್‌ ಫೋನ್‌ ಜಪ್ತಿ ಮಾಡಿದ್ದಾರೆ. ಹೊರ ರಾಜ್ಯದ ಆರೋಪಿಯನ್ನು ಎಚ್‌ಎಸ್ಆರ್ ಲೇಔಟ್‌ ಠಾಣೆಯ ಪೊಲೀಸರು ವಶಕ್ಕೆ ಪಡೆದುಕೊಂಡು ₹13.40 ಲಕ್ಷ ಮೌಲ್ಯದ ಗಾಂಜಾವನ್ನು ಜಪ್ತಿ ಮಾಡಿದ್ದಾರೆ. ಸಂಪಿಗೆಹಳ್ಳಿ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ₹3.40 ಲಕ್ಷ ಮೌಲ್ಯದ ಡ್ರಗ್ಸ್ ಅನ್ನು ಜಪ್ತಿ ಮಾಡಿದ್ದಾರೆ. 

ಆರೋಪಿಗಳಿಂದ ಎಚ್‌ಎಸ್‌ಆರ್ ಲೇಔಟ್ ಠಾಣೆ ಪೊಲೀಸರು ಜಪ್ತಿ ಮಾಡಿಕೊಂಡ ಡ್ರಗ್ಸ್‌ ಅನ್ನು ನಗರ ಪೊಲೀಸ್‌ ಕಮಿಷನರ್‌ ಸೀಮಂತ್‌ ಕುಮಾರ್ ಸಿಂಗ್‌ ಪರಿಶೀಲಿಸಿದರು   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.