ADVERTISEMENT

ಫ್ಲೆಕ್ಸ್‌: ನಿತ್ಯವೂ ತೆರವಿಗೆ ಸೂಚನೆ

ಮೂಲದಲ್ಲೇ ಕಡಿವಾಣ ಹಾಕಲು ತಯಾರಿಸುವವರ ಮೇಲೆ ದಾಳಿ: ಬಿಬಿಎಂಪಿ

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 20:08 IST
Last Updated 5 ಜುಲೈ 2022, 20:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ನಗರದ ಸೌಂದರ್ಯಕ್ಕೆ ಧಕ್ಕೆ ಉಂಟು ಮಾಡುತ್ತಿರುವ ಹಾಗೂ ಕಾನೂನುಬಾಹಿರವಾದ ಫ್ಲೆಕ್ಸ್‌ ಮತ್ತು ಬ್ಯಾನರ್‌ಗಳನ್ನು ಬಿಬಿಎಂಪಿ ನಿತ್ಯವೂ ತೆರವು ಮಾಡಲಿದೆ.

ಫ್ಲೆಕ್ಸ್ ಹಾಗೂ ಬ್ಯಾನರ್ ತೆರವು ಕಾರ್ಯಾಚರಣೆಯನ್ನು ನಿತ್ಯವೂ ನಡೆಸುವಂತೆ ಎಲ್ಲ ವಲಯಗಳ ಜಂಟಿ ಆಯುಕ್ತರು, ಮುಖ್ಯ ಎಂಜಿನಿಯರ್‌ಗಳಿಗೆ ಹೇಳಲಾಗಿದೆ. ಈ ಬಗ್ಗೆ ಯಾವುದೇ ರೀತಿಯ ನಿರ್ಲಕ್ಷ್ಯ ಸಲ್ಲ ಎಂದೂ ಸೂಚಿಸಲಾಗಿದೆ ಎಂದು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಡಾ. ದೀಪಕ್‌ ಮಂಗಳವಾರ ತಿಳಿಸಿದರು.

ನಗರದಲ್ಲಿ ಫ್ಲೆಕ್ಸ್‌ ಅಥವಾ ಬ್ಯಾನರ್‌ ಅಳವಡಿಸಿದರೆ ಅವರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು. ಕಾಯ್ದೆ ಪ್ರಕಾರ, ಉಲ್ಲಂಘನೆಗೆ ಆರು ತಿಂಗಳು ಸಜೆಯನ್ನೂ ವಿಧಿಸಬಹುದಾಗಿದೆ. ಇನ್ನು ಮುಂದೆ ತೆರವು ಕಾರ್ಯದ ವೆಚ್ಚವನ್ನೂ ಫ್ಲೆಕ್ಸ್‌ ಅಳವಡಿಸಿದವರಿಂದ ವಸೂಲಿ ಮಾಡಲು ನಿರ್ಧರಿಸಲಾಗಿದೆ ಎಂದರು.

ADVERTISEMENT

‘ಕಳೆದ ವಾರ ನಗರದಲ್ಲಿ ಸುಮಾರು 16 ಸಾವಿರ ಫ್ಲೆಕ್ಸ್‌ ಮತ್ತು ಬ್ಯಾನರ್‌ ತೆಗೆದಿದ್ದೇವೆ. ಹಿಂದಿನ ವಾರ ಮಾಡಿದ್ದೆವು, ನಿನ್ನೆ ಮಾಡಿದ್ದೆವು ಎಂದು ಅಧಿಕಾರಿಗಳು ಸುಮ್ಮನಿರುವಂತಿಲ್ಲ. ಇದು ನಿತ್ಯದ ಕಾರ್ಯವಾಗಬೇಕು. ಒಂದು ಫ್ಲೆಕ್ಸ್‌ ಗಮನಕ್ಕೆ ಬಂದರೂ ತೆರವು ಮಾಡಲಾಗುತ್ತದೆ’ ಎಂದರು.

ಮೂಲದಲ್ಲಿ ಕಡಿವಾಣ: ‘ಫ್ಲೆಕ್ಸ್‌ ಮತ್ತು ಬ್ಯಾನರ್‌ಗಳಿಗೆ ಮೂಲದಲ್ಲೇ ಕಡಿವಾಣ ಹಾಕಲು ನಿರ್ಧರಿಸಲಾಗಿದೆ. ಹೀಗಾಗಿ ಇವುಗಳನ್ನು ತಯಾರಿಸುವವರ ಮೇಲೆ ದಾಳಿ ನಡೆಸಲಾಗುತ್ತದೆ. ಚುನಾವಣೆ, ರಾಜಕೀಯ ಕಾರ್ಯಕ್ರಮಗಳಲ್ಲಿ ಯಾರು ಫ್ಲೆಕ್ಸ್‌ ಹಾಗೂ ಬ್ಯಾನರ್ ತಯಾರಿಸುತ್ತಾರೆ ಎಂಬ ಬಗ್ಗೆ ನಮ್ಮಲ್ಲಿ ಮಾಹಿತಿ ಇದೆ. ಅವುಗಳನ್ನು ಆಧರಿಸಿ ತಪಾಸಣೆ ನಡೆಸಿ, ಪ್ರಕರಣ ದಾಖಲಿಸಲಾಗುತ್ತದೆ’ ಎಂದು ದೀಪಕ್‌ ಹೇಳಿದರು.

ಪ್ರಮುಖ ರಸ್ತೆಗಳ ಗುಣಮಟ್ಟದ ಪರಿಶೀಲನೆ ನಡೆಸಿದ ಬಗ್ಗೆ ವರದಿ ಇನ್ನೂ ಬಂದಿಲ್ಲ. ಹಲವು ಮಾದರಿಗಳನ್ನು ಕಳುಹಿಸಲಾಗಿದೆ. ಈ ಬಗ್ಗೆ ವರದಿ ಬಂದಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಬಿಬಿಎಂಪಿ ಅಭಿವೃದ್ಧಿಪಡಿಸಿರುವ, ಡಾಂಬರು ಹಾಕಿರುವ ಪ್ರಮುಖ ರಸ್ತೆಗಳನ್ನು ಮೂರು ತಿಂಗಳು ಯಾವುದೇ ಕಾರಣಕ್ಕೆ ಅಗೆಯಬಾರದು ಎಂದು ಎಲ್ಲ ಇಲಾಖೆಗಳಿಗೆ ತಿಳಿಸಲಾಗಿದೆ ಎಂದರು.

ಗಾಂಧಿನಗರದಲ್ಲಿ ಬಹುಅಂತಸ್ತಿನ ವಾಹನ ನಿಲುಗಡೆ ಕಲ್ಪಿಸಲು ಟೆಂಡರ್‌ ಕರೆಯಲಾಗಿದೆ ಎಂದು ತಿಳಿಸಿದರು.

‘ಓಕಳಿಪುರಂ ಬಳಿ ರೈಲ್ವೆ ಇಲಾಖೆ ಹಾಗೂ ಬಿಬಿಎಂಪಿ ವತಿಯಿಂದ ಕಾಮಗಾರಿ ನಡೆಯುತ್ತಿದೆ. ಜಿಲೆಟಿನ್‌ ಬಳಸಿ ಬಂಡೆ ಸಿಡಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನಮ್ಮ ಯೋಜನೆ ವಿಭಾಗದ ಮುಖ್ಯ ಎಂಜಿನಿಯರ್‌ ಮಾಹಿತಿ ನೀಡಿದ್ದು, ಬಿಬಿಎಂಪಿ ಜಿಲೆಟಿನ್‌ ಬಳಸಿಲ್ಲ’ ಎಂದು ಸ್ಪಷ್ಟಪಡಿಸಿದರು.

ನಿಯಮ ರಚನೆ: ಮಂತ್ರಿ ಮಾಲ್‌ ಆಸ್ತಿ ತೆರಿಗೆ ವಸೂಲಿಗೆ ಸಂಬಂಧಿಸಿದಂತೆ ಬಿಬಿಎಂಪಿ ನಿಧಾನಗತಿ ಅನುಸರಿಸುತ್ತಿಲ್ಲ. ನೋಟಿಸ್‌ಗಳನ್ನು ನೀಡಲಾಗಿದೆ. ಯಾವುದೇ ರೀತಿಯಲ್ಲಿ ಬ್ಯಾಂಕ್‌ ಖಾತೆ
ಗಳನ್ನು ಜಪ್ತಿ ಮಾಡಿಕೊಳ್ಳಲು ಹಾಗೂ ಇತರೆ ಮಾರ್ಗದಿಂದ ವಸೂಲಿಗೆ ಕಾಯ್ದೆ ಪ್ರಕಾರ ನಿಯಮಗಳನ್ನು ರೂಪಿಸಬೇಕಿದೆ. ಇನ್ನು ಎರಡು ವಾರದಲ್ಲಿ ಆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.