ADVERTISEMENT

ಮಳೆ ನಿಂತ ಮೇಲೆ | ಎಲ್ಲಿ ಹೋಯಿತು ಕಾಲುವೆಗೆ ಸುರಿದ ಕೋಟಿ ಕೋಟಿ ಹಣ

ಒಂದೆರಡು ತಾಸು ಮಳೆ ಬಂದರೂ ಮನೆಗೊಳಗೆ ನುಗ್ಗುತ್ತಿದೆ ನೀರು

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2021, 20:36 IST
Last Updated 23 ನವೆಂಬರ್ 2021, 20:36 IST
ಕೋಗಿಲು ಕ್ರಾಸ್ ಬಳಿಯ ಕೇಂದ್ರಿಯ ವಿಹಾರದ ಅಪಾರ್ಟ್‌ಮೆಂಟ್‌ನಲ್ಲಿ ಮಳೆ ನೀರು ನುಗ್ಗಿರುವುದು.
ಕೋಗಿಲು ಕ್ರಾಸ್ ಬಳಿಯ ಕೇಂದ್ರಿಯ ವಿಹಾರದ ಅಪಾರ್ಟ್‌ಮೆಂಟ್‌ನಲ್ಲಿ ಮಳೆ ನೀರು ನುಗ್ಗಿರುವುದು.   

ಬೆಂಗಳೂರು: ‘ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜಿದಡೆಂತಯ್ಯಾ’ ಎಂಬ ಅಕ್ಕಮಹಾದೇವಿಯ ಸಾಲುಗಳಂತೆ ‘ರಾಜಕಾಲುವೆ, ಕೆರೆಗಳ ಒಡಲಿನಲ್ಲೇ ಮನೆಗಳನ್ನು ಕಟ್ಟಿ ಪ್ರವಾಹಕ್ಕೆ ಅಂಜಿದಡೆಂತಯ್ಯಾ’ ಎಂಬಂತಾಗಿದೆ ಬೆಂಗಳೂರಿನ ಕೆಲ ಬಡಾವಣೆಗಳ ಜನರ ಸ್ಥಿತಿ...’

ಮಳೆ ನೀರು ಸರಾಗವಾಗಿ ಹರಿದು ಹೋಗುವುದಕ್ಕೆ ರೂಪಿಸಿರುವ ನಾಲೆಗಳೇ ರಾಜಕಾಲುವೆಗಳು. ಇವುಗಳನ್ನು ಅಭಿವೃದ್ಧಿಪಡಿಸಲು ಹಾಗೂ ನಿರ್ವಹಣೆ ಮಾಡಲು ಬಿಬಿಎಂಪಿ ಪ್ರತಿವರ್ಷ ನೂರಾರು ಕೋಟಿ ಹಣವನ್ನು ವ್ಯಯಿಸುತ್ತಿದೆ. ಆದರೂ, ಮಳೆ ನೀರು ಮನೆಗಳಿಗೆ ನುಗ್ಗುವುದು ತಪ್ಪಿಲ್ಲ.

ಕಣಿವೆಗಳು ಮತ್ತು ಪರಿಸರ ಸೂಕ್ಷ್ಮ ವಲಯಗಳನ್ನು ಬಡಾವಣೆಗಳನ್ನಾಗಿ ಪರಿವರ್ತಿಸಲಾಗಿದೆ. ಪರಿಣಾಮವಾಗಿ ಪ್ರತಿವರ್ಷ ಮಳೆಯಾದಾಗಲೂ ಜನ ತೊಂದರೆ ಅನುಭವಿಸುತ್ತಿದ್ದಾರೆ ಎಂದು ವಿಶ್ಲೇಷಿಸುತ್ತಾರೆ ಜಲತಜ್ಞರು. ಮಳೆ ನೀರು ಹರಿವು ವ್ಯವಸ್ಥೆಯ ಬಗ್ಗೆ ಜಲತಜ್ಞರು ಮತ್ತು ಸಾರ್ವಜನಿಕರು ‘ಪ್ರಜಾವಾಣಿ’ ಜತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ADVERTISEMENT

‘ಜಲ ವಿಜ್ಞಾನಕ್ಕೆ ವಿರುದ್ಧವಾಗಿ ಕಾಂಕ್ರೀಟ್ ರಾಜಕಾಲುವೆ’

ಆಯಾ ಪ್ರದೇಶದಲ್ಲಿ ಬೀಳುವ ಮಳೆಯಿಂದ ಎಷ್ಟು ನೀರು ಹರಿದು ಬರುತ್ತದೆ ಎಂಬುದನ್ನು ಆಧರಿಸಿ ರಾಜಕಾಲುವೆ ವಿನ್ಯಾಸ ಮಾಡಲಾಗುತ್ತದೆ. ಒಂದು ಕೆರೆಯಿಂದ ಮತ್ತೊಂದು ಕೆರೆಗೆ ನೀರನ್ನು ಸರಾಗವಾಗಿ ಹರಿಸಲು 100 ವರ್ಷಗಳ ಹಿಂದೆಯೇ ನಮ್ಮ ಹಿರಿಯರು ಈ ಕಾಲುವೆಗಳನ್ನು ವಿನ್ಯಾಸ ಮಾಡಿದ್ದಾರೆ. ಈಗ ರಾಜಕಾಲುವೆ ಪುನರ್ ನಿರ್ಮಾಣದ ಸಂದರ್ಭದಲ್ಲಿ 80 ಮೀಟರ್ ಅಗಲದ ಕಾಲುವೆಗಳನ್ನು 20 ಮೀಟರ್‌ಗೆ ಇಳಿಸಿರುವ ಉದಾಹರಣೆಗಳಿವೆ. ಜಲವಿಜ್ಞಾನದ ಪ್ರಕಾರ ಯಾವುದೇ ರಾಜಕಾಲುವೆಯಲ್ಲೂ ನೀರು ಇಳೆಗೆ ಇಂಗಲು ಅವಕಾಶ ಇರಬೇಕು. ಆದರೆ, 1 ಕಿ.ಮೀ.ಗೆ ತಲಾ ₹8 ಕೋಟಿಯಷ್ಟು ಖರ್ಚು ಮಾಡಿ ಕಾಂಕ್ರೀಟ್ ಹಾಕಲಾಗಿದೆ. ಇದರಿಂದ ಯಾವುದೇ ಪ್ರಯೋಜನ ಇಲ್ಲ. ಹಣ ಲೂಟಿ ಮಾಡುವವರಿಗೆ ದಾರಿ ಇದು ಅಷ್ಟೇ. ಈ ಬಗ್ಗೆ ಬಿಬಿಎಂಪಿಯ ಈ ಹಿಂದಿನ ಮುಖ್ಯ ಆಯುಕ್ತರಿಗೂ ಪತ್ರ ಬರೆದಿದ್ದೆ. ಮಂಜುನಾಥ ಪ್ರಸಾದ್ ಅವರು ನನ್ನ ಕಚೇರಿಗೆ ಬಂದು ಚರ್ಚಿಸಿ ಹೋಗಿದ್ದರು. ಆದರೆ, ಲೂಟಿ ತಡೆಯಲು ಯಾರಿಂದಲೂ ಆಗಿಲ್ಲ. ಹವಾಮಾನದಲ್ಲಿ ವ್ಯತ್ಯಾಸ ಆಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ತೊಂದರೆ ಆಗುವ ಸಾಧ್ಯತೆ ಇದೆ.

–ಟಿ.ವಿ. ರಾಮಚಂದ್ರ, ಐಐಎಸ್‌ಸಿ ವಿಜ್ಞಾನಿ

****

‘ಕಾನೂನು ಬಾಹಿರ ಬಡಾವಣೆಗಳೇ ಸಮಸ್ಯೆ ಮೂಲ’

ಹಲವೆಡೆ ಪರಿಸರ ಸೂಕ್ಷ್ಮ ವಲಯ ಮತ್ತು ಕಣಿವೆ ಪ್ರದೇಶಗಳನ್ನು ವಸತಿ ಪ್ರದೇಶವಾಗಿ ಪರಿವರ್ತಿಸಲಾಗಿದೆ. ಯಲಹಂಕ ವಲಯದಲ್ಲೇ ನೂರಾರು ಕಾನೂನು ಬಾಹಿರ ಬಡಾವಣೆಗಳಿವೆ. ಬಡಾವಣೆ ನಿರ್ಮಿಸುವಾಗ ರಾಜಕಾಲುವೆ ಮತ್ತು ಅದಕ್ಕೆ ಸಂಬಂಧಿಸಿದ ಚಿಕ್ಕ ಕಾಲುವೆಗಳ ಬಗ್ಗೆ ಗಮನವನ್ನೇ ಹರಿಸಿಲ್ಲ. ಬಡಾವಣೆ ನಿರ್ಮಾಣಕ್ಕೆ ಅನುಮತಿ ನೀಡಿದವರೇ ಈ ಅನಾಹುತಗಳಿಗೆ ಹೊಣೆಗಾರರು. ಹೆಬ್ಬಾಳ, ವೃಷಭಾವತಿ ಮತ್ತು ಕೋರಮಂಗಲ– ಚಲ್ಲಘಟ್ಟ ಕಣಿವೆಗಳಲ್ಲೇ ಈ ಸಮಸ್ಯೆ ಎದುರಾಗುತ್ತಿದೆ. ಕಣಿವೆ ಪ್ರದೇಶದಲ್ಲಿ ಬೆಟ್ಟದ ತುದಿಯಲ್ಲಿ ಯಾವತ್ತೂ ಪ್ರವಾಹ ಬರುವುದಿಲ್ಲ. ಆದರೆ, ಯಲಹಂಕದಂತಹ ಎತ್ತರದ ಪ್ರದೇಶದಲ್ಲೂ ಪ್ರವಾಹ ಉಂಟಾಗಿದೆ ಎಂದರೆ ಹೆಬ್ಬಾಳ ಕಣಿವೆಯನ್ನು ಎಷ್ಟು ಹಾಳು ಮಾಡಿದ್ದೇವೆ ಎಂಬುದು ಅರ್ಥವಾಗುತ್ತದೆ. ಕೆರೆಗಳ ನಿರ್ವಹಣೆಯೂ ಅವೈಜ್ಞಾನಿಕವಾಗಿದೆ. ನೀರಾವರಿಗಷ್ಟೇ ಅಲ್ಲ, ಪ್ರವಾಹ ಪರಿಸ್ಥಿತಿ ನಿಯಂತ್ರಿಸಲು ತೂಬುಗಳು ನೆರವಾಗುತ್ತಿದ್ದವು ಎಂಬ ಅರಿವೇ ಎಂಜಿನಿಯರ್‌ಗಳಿಗೆ ಇಲ್ಲ. ಕೆರೆಯಲ್ಲಿ ನೀರು ಸಂಗ್ರಹ ಸಾಮರ್ಥ್ಯವನ್ನೂ ದಿನದಿಂದ ದಿನಕ್ಕೆ ಕಡಿಮೆ ಮಾಡಲಾಗಿದೆ. ಸಾಮರ್ಥ್ಯ ಹೆಚ್ಚಿಸುವ ಬದಲು ಅಂದಗೊಳಿಸುವ ಕಾರ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ.

–ರಾಮ್‌ಪ್ರಸಾದ್, ಫ್ರೆಂಡ್ಸ್‌ ಆಫ್ ಲೇಕ್‌ ಸಂಘಟನೆಯ ಸಹ ಸಂಸ್ಥಾಪಕ

****

ಪ್ರತಿವರ್ಷವೂ ಪ್ರವಾಹ

ಹೆಣ್ಣೂರು–ಬಾಗಲೂರು ರಸ್ತೆಯಲ್ಲಿರುವ ರಾಜಕಾಲುವೆ ವಿಶಾಲವಾಗಿದೆ. ಮುಂದಕ್ಕೆ ಹೋದಂತೆ ರೈಲ್ವೆ ಸೇತುವೆ ಬಳಿ ಕಿರಿದಾಗಿದೆ. 8 ಅಡಿ ಅಗಲದ ಸೇತುವೆಯಲ್ಲಿ ಅಷ್ಟೂ ನೀರು ಹರಿದು ಹೋಗಲು ಸಾಧ್ಯವಾಗುವುದಿಲ್ಲ. ಪಕ್ಕದಲ್ಲೇ ಇರುವ ಹೊರಮಾವು– ವಡ್ಡರಪಾಳ್ಯಕ್ಕೆ ಪ್ರತಿವರ್ಷ ಪ್ರವಾಹ ಎದುರಾಗುತ್ತಿದೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ರಾಜಕಾಲುವೆ ನಿರ್ಮಿಸಿದರೂ ಸಮಸ್ಯೆ ನಿವಾರಣೆಯಾಗಿಲ್ಲ. ಜೋರು ಮಳೆ ಬಂದಾಗಲೆಲ್ಲಾ ತೊಂದರೆ ಅನುಭವಿಸುವುದು ತಪ್ಪಿಲ್ಲ.

– ಜಾನ್‌, ವಡ್ಡರಪಾಳ್ಯ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.