
ಬೆಂಗಳೂರು: ನಾಯಂಡಹಳ್ಳಿ ಸಮೀಪದ ಅಂಬೇಡ್ಕರ್ ಕಾಲೊನಿಯಲ್ಲಿ ಭಾನುವಾರ ರಾತ್ರಿ ಮನೆಯ ಬಳಿ ಆಟೊ ನಿಲುಗಡೆಯ ವಿಚಾರಕ್ಕೆ ಸ್ನೇಹಿತರ ನಡುವೆ ನಡೆದ ಜಗಳದ ವೇಳೆ, ಯುವಕನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.
ಅಂಬೇಡ್ಕರ್ ಕಾಲೊನಿ ನಿವಾಸಿ ಗುಣ (26) ಕೊಲೆಯಾದ ಯುವಕ. ಪ್ರಕರಣದ ಸಂಬಂಧ ವಿನೋದ್, ಅಜಿತ್, ಕುಮಾರ್ ಮತ್ತು ದೀನ ಎಂಬುವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರದಲ್ಲಿ ಗುಣ ಅವರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.
ಗುಣ ಅವರ ಸ್ನೇಹಿತ ವೇಲು ಅವರ ಮೇಲೂ ಆರೋಪಿಗಳು ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪೊಲೀಸರು ಹೇಳಿದರು.
ಗುಣ, ವೇಲು ಹಾಗೂ ಆರೋಪಿಗಳಾದ ವಿನೋದ್, ಅಜಿತ್, ಕುಮಾರ್ ಹಾಗೂ ದೀನ ಅವರು ಹಲವು ವರ್ಷಗಳಿಂದ ಸ್ನೇಹಿತರು. ಒಂದೇ ಬಡಾವಣೆಯಲ್ಲಿ ನೆಲಸಿದ್ದರು. ಎಲ್ಲರೂ ಜಿಬಿಎಗೆ ಸೇರಿದ ಕಸ ವಿಲೇವಾರಿ ವಾಹನಗಳಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಮನೆ ಬಳಿ ಆಟೊ ನಿಲ್ಲಿಸುವ ವಿಚಾರಕ್ಕೆ ಗುಣ ಮತ್ತು ಆರೋಪಿ ವಿನೋದ್ ನಡುವೆ ಶುಕ್ರವಾರ ರಾತ್ರಿ ಗಲಾಟೆ ನಡೆದಿತ್ತು. ಈ ವೇಳೆ ವಿನೋದ್ ಹಾಗೂ ಆರೋಪಿಗಳು ಒಟ್ಟಾಗಿ ಗುಣ ಅವರ ಆಟೊವನ್ನು ಜಖಂಗೊಳಿಸಿದ್ದರು. ಬಳಿಕ, ಸ್ಥಳೀಯರು ಜಗಳ ಬಿಡಿಸಿ ಕಳುಹಿಸಿದ್ದರು ಎಂದು ಮೂಲಗಳು ಹೇಳಿವೆ.
ಜಗಳದ ಬಳಿಕ ವಿನೋದ್ ಅವರು ಗುಣ ವಿರುದ್ಧ ಕೋಪಗೊಂಡಿದ್ದರು. ಭಾನುವಾರ ರಾತ್ರಿ ಗುಣ ಮತ್ತು ವೇಲು ಬೈಕ್‍ನಲ್ಲಿ ತೆರಳುತ್ತಿದ್ದರು. ಆರೋಪಿಗಳು ಅವರನ್ನು ಅಡ್ಡಗಟ್ಟಿ ಮತ್ತೆ ಜಗಳ ಮಾಡಿದ್ದರು. ಬಳಿಕ ಜಗಳ ವಿಕೋಪಕ್ಕೆ ಹೋಗಿ ವಿನೋದ್ ಮತ್ತು ಸಹಚರರು, ಗುಣ ಹಾಗೂ ವೇಲು ಮೇಲೆ ಹಲ್ಲೆ ನಡೆಸಿ, ಚಾಕುವಿನಿಂದ ಇರಿದಿದ್ದರು. ಗುಣ ಸ್ಥಳದಲ್ಲೇ ಮೃತಪಟ್ಟಿದ್ದರೆ, ವೇಲು ಗಂಭೀರವಾಗಿ ಗಾಯಗೊಂಡಿದ್ದರು ಎಂದು ಪೊಲೀಸರು ಹೇಳಿದರು.
ಗುಣ, ವೇಲು ಹಾಗೂ ವಿನೋದ್‍ಗೆ ಅಪರಾಧ ಹಿನ್ನೆಲೆಯಿದ್ದು, ಈ ಮೂವರ ವಿರುದ್ಧ 2018ರಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದರು.
ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.