
ಬೆಂಗಳೂರು: ಮನೆಗೆ ನುಗ್ಗಿ ಚಿನ್ನ, ನಗದು ಕಳ್ಳತನ ಮಾಡುತ್ತಿದ್ದ ಕಳ್ಳ ಹಾಗೂ ಕಳ್ಳನನ್ನೇ ಅಡ್ಡಗಟ್ಟಿ ದೋಚಿದ್ದ ನಾಲ್ವರು ಸೇರಿದಂತೆ ಐವರನ್ನು ಆವಲಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮನೆ ಕಳ್ಳ ಇಸಾಯಿ ರಾಜ್ ಹಾಗೂ ಆತನನ್ನು ದೋಚಿದ್ದ ಮೌನೇಶ್ ರಾವ್, ದರ್ಶನ್, ಚಂದನ್, ಸುನಿಲ್ ಬಂಧಿತರು. ಆರೋಪಿಗಳಿಂದ ₹70 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ನ.22ರಂದು ರಾತ್ರಿ ಮಂಡೂರಿನಲ್ಲಿ ಇರುವ ಮನೆಯೊಂದಕ್ಕೆ ನುಗ್ಗಿದ್ದ ಇಸಾಯಿ ರಾಜ್, 90 ಗ್ರಾಂ ಚಿನ್ನಾಭರಣ ₹1.75 ಲಕ್ಷ ನಗದು ಕಳ್ಳತನ ಮಾಡಿಕೊಂಡು ಪರಾರಿ ಆಗುತ್ತಿದ್ದ. ಮಂಡೂರು ಸ್ಮಶಾನದ ಪಕ್ಕದಲ್ಲಿ ಆರೋಪಿಗಳಾದ ಮೌನೇಶ್ ರಾವ್, ದರ್ಶನ್, ಚಂದನ್, ಸುನಿಲ್ ಕುಳಿತು ಮದ್ಯ ಸೇವಿಸುತ್ತಿದ್ದರು. ಅದೇ ಮಾರ್ಗದಲ್ಲಿ ಓಡಿ ಹೋಗುತ್ತಿದ್ದ ಇಸಾಯಿರಾಜ್‌ನನ್ನು ತಡೆದು ನಿಲ್ಲಿಸಿದ್ದರು. ಬಳಿಕ ಆತನ ಬಳಿಯಿದ್ದ ಚಿನ್ನದ ಒಡವೆಗಳು ಹಾಗೂ ನಗದು ದೋಚಿದ್ದರು ಎಂದು ಪೊಲೀಸರು ಹೇಳಿದರು.
‘ತಮಿಳುನಾಡಿಗೆ ತೆರಳಬೇಕು. ಪ್ರಯಾಣದ ಖರ್ಚಿಗೆ ಹಣ ನೀಡಿ’ ಎಂದು ಇಸಾಯಿ ರಾಜ್ ಕೇಳಿಕೊಂಡಿದ್ದ. ಆತನ ಮನವಿಗೆ ಸ್ಪಂದಿಸಿದ ನಾಲ್ವರು, ₹3 ಸಾವಿರ ನೀಡಿದ್ದರು. ಅದೇ ಹಣದಲ್ಲಿ ಮದ್ಯಪಾನ ಮಾಡಿದ್ದ ಆರೋಪಿ, ಬಳಿಕ ಇನ್ನೆರಡು ಮನೆಗಳಲ್ಲಿ ಕಳ್ಳತನ ಮಾಡಿದ್ದ’ ಎಂದು ಪೊಲೀಸರು ಹೇಳಿದರು.
ಮಂಡೂರು ಗ್ರಾಮದ ನಿವಾಸಿಯೊಬ್ಬರು ನೀಡಿದ ದೂರು ಆಧರಿಸಿ ಇಸಾಯ್ ರಾಜ್‌ನನ್ನು ಮೇಡಹಳ್ಳಿಯ ಪಾರ್ವತಿನಗರದ ಬಳಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕದ್ದ ಹಣ ಹಾಗೂ ಚಿನ್ನವನ್ನು ನಾಲ್ವರು ದೋಚಿಕೊಂಡು ಹೋಗಿದ್ದ ಪ್ರಸಂಗವನ್ನು ಪೊಲೀಸರಿಗೆ ತಿಳಿಸಿದ್ದ. ಬಳಿಕ ಕಳ್ಳನಿಂದ ಹಣ ದೋಚಿದ್ದ ನಾಲ್ವರನ್ನು ವಶಕ್ಕೆ ಪಡೆದುಕೊಳ್ಳಲಾಯಿತು ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.