ಬೆಂಗಳೂರು: ‘ಸಿಲಿಕಾನ್ ಸಿಟಿ’ಯ ವಾಯುವಿಹಾರಿಗಳು ಮತ್ತು ಪ್ರೇಮಿಗಳ ಸ್ವರ್ಗ ಕಬ್ಬನ್ ಉದ್ಯಾನ ಹಾಗೂ ಲಾಲ್‌ಬಾಗ್‌ನಲ್ಲಿರುವ ಸಸ್ಯ ಪ್ರಭೇದಗಳು, ಜೀವವೈವಿಧ್ಯಗಳು ಹಾಗೂ ಐತಿಹಾಸಿಕ ಸ್ಥಳಗಳನ್ನು ಸಾರ್ವಜನಿಕರಿಗೆ ಪರಿಚಯಿಸುವ ಉದ್ದೇಶದಿಂದ ‘ಕಬ್ಬನ್ ವಾಕ್ಸ್, ಲಾಲ್‌ಬಾಗ್ ವಾಕ್ಸ್’ ಎಂಬ ಮಾರ್ಗದರ್ಶಿ ನಡಿಗೆ ಪ್ರವಾಸ ಪ್ರಾರಂಭಿಸಲು ತೋಟಗಾರಿಕೆ ಇಲಾಖೆ ಸಿದ್ಧತೆ ನಡೆಸಿದೆ.
ನಗರದ ಶ್ವಾಸಕೋಶದಂತಿರುವ ಕಬ್ಬನ್ ಉದ್ಯಾನ ಹಾಗೂ ಲಾಲ್‌ಬಾಗ್‌ನಲ್ಲಿ ನೂರಾರು ವರ್ಷಗಳಿಂದ ಬೆಳೆದು ನಿಂತಿರುವ ಸಾವಿರಾರು ಸಸ್ಯ ಪ್ರಭೇದಗಳ ಮೂಲ ಹೆಸರು, ಉಗಮ ಸ್ಥಾನ, ದೇಶ, ಬೆಳವಣಿಗೆ, ಬೆಳೆಯುವ ಹವಾಗುಣ, ಹೂ–ಹಣ್ಣು ಮತ್ತು ಎಲೆಗಳು ಬಿಡುವ ಕಾಲ, ಅದರ ವೈಜ್ಞಾನಿಕ ಹೆಸರು ಸಹಿತ ಎಲ್ಲ ಮಾಹಿತಿಗಳನ್ನು ಮಾರ್ಗದರ್ಶಿ ನಡಿಗೆ ಪ್ರವಾಸದಲ್ಲಿ ನೀಡಲಾಗುತ್ತದೆ. ಇದು ಸಸ್ಯವಿಜ್ಞಾನ ವಿದ್ಯಾರ್ಥಿಗಳಿಗೆ, ಗಿಡ–ಮರಗಳ ಬಗ್ಗೆ ಕುತೂಹಲ ಇರುವವರಿಗೆ, ಜೀವ ವೈವಿಧ್ಯ ಅಧ್ಯಯನಕಾರರು ಸೇರಿದಂತೆ ಸಾರ್ವಜನಿಕರಿಗೆ ಸಹಾಯಕವಾಗಲಿದೆ.
‘ಕಬ್ಬನ್ ಉದ್ಯಾನದಲ್ಲಿ ಇದೇ 27ರಂದು ಪ್ರವಾಸಿ ನಡಿಗೆಗೆ ಅಧಿಕೃತವಾಗಿ ಚಾಲನೆ ನೀಡಲಾಗುತ್ತದೆ. ಪ್ರತಿ ಶನಿವಾರ ಮತ್ತು ಭಾನುವಾರ ಕಬ್ಬನ್ ವಾಕ್ಸ್ ಮತ್ತು ಲಾಲ್‌ಬಾಗ್ ವಾಕ್ಸ್ ನಡೆಯಲಿದೆ. ಇದಕ್ಕಾಗಿ 10 ಮಂದಿ ಪರಿಸರ ತಜ್ಞರನ್ನು ಮಾರ್ಗದರ್ಶಕರನ್ನಾಗಿ ನೇಮಿಸಲಾಗಿದೆ. ಮಾರ್ಗದರ್ಶಕರು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಾಹಿತಿಗಳನ್ನು ಹಂಚಿಕೊಳ್ಳಲಿದ್ದಾರೆ. 30 ಜನರನ್ನು ಒಳಗೊಂಡ ಒಂದು ತಂಡಕ್ಕೆ ಒಬ್ಬ ಮಾರ್ಗದರ್ಶಕರನ್ನು ನಿಯೋಜಿಸಲಾಗುವುದು. ವಯಸ್ಕರಿಗೆ ₹200, ಮಕ್ಕಳಿಗೆ ₹50 ದರ ನಿಗದಿಪಡಿಸಲಾಗಿದೆ. ಆಸಕ್ತರು ಆನ್‌ಲೈನ್ ಮೂಲಕವೇ ನೋಂದಣಿ ಮಾಡಿಕೊಂಡು ಬರಬೇಕು’ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
‘ಕಬ್ಬನ್ ಉದ್ಯಾನ ಹಾಗೂ ಲಾಲ್‌ಬಾಗ್‌ನ ಸಸ್ಯ ಮತ್ತು ಜೀವ ವೈವಿಧ್ಯವನ್ನು ಒಂದು ಪ್ರವಾಸಿ ನಡಿಗೆಯಲ್ಲಿ ತಿಳಿದುಕೊಳ್ಳುವುದು ಕಷ್ಟ. ಆದ್ದರಿಂದ ಇದನ್ನು 7–8 ವಿಭಾಗಗಳಲ್ಲಿ ವಿಂಗಡಿಸುವ ಕುರಿತು ಚಿಂತನೆ ನಡೆಯುತ್ತಿದೆ. ಇಲ್ಲಿರುವ ಗಿಡ ಮರಗಳು, ಪ್ರಾಣಿ–ಪಕ್ಷಿಗಳು ಹಾಗೂ ಸಂದರ್ಶಕರು ಕೇಳುವ ಪ್ರಶ್ನೆಗೆ ಮಾರ್ಗದರ್ಶಕರು ಉತ್ತರ ನೀಡಲಿದ್ದಾರೆ. ಇದರಿಂದ ಬರುವ ಆದಾಯದಲ್ಲಿ ಮಾರ್ಗದರ್ಶಕರಿಗೆ ಗೌರವಧನ ನೀಡಲಾಗುತ್ತದೆ. ಉಳಿದ ಮೊತ್ತ ಇಲಾಖೆಗೆ ಸೇರಲಿದೆ. ಮೊದಲ ಹಂತದಲ್ಲಿ ಕಬ್ಬನ್ ಉದ್ಯಾನದಲ್ಲಿ ಪ್ರವಾಸಿ ನಡಿಗೆಗೆ ಚಾಲನೆ ನೀಡಲಾಗುತ್ತದೆ. ಫಲಪುಷ್ಪ ಪ್ರದರ್ಶನ ಮುಗಿದ ನಂತರ ಲಾಲ್‌ಬಾಗ್‌ನಲ್ಲಿ ಪ್ರಾರಂಭಿಸಲಾಗುತ್ತದೆ’ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎಂ. ಜಗದೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಪ್ರವಾಸಿ ನಡಿಗೆಯ ಪ್ರತ್ಯೇಕ ವೆಬ್‌ಸೈಟ್ ರಚಿಸುವುದು ಸೇರಿದಂತೆ ಪೂರಕ ವೆಚ್ಚಗಳಿಗೆ ಒಟ್ಟು ₹1.20 ಲಕ್ಷ ವಿನಿಯೋಗಿಸಲಾಗಿದೆ’ ಎಂದು ಮಾಹಿತಿ ನೀಡಿದರು.
ಈ ಪ್ರವಾಸಿ ನಡಿಗೆಯಿಂದ ಆದಾಯ ಗಳಿಸುವುದು ಇಲಾಖೆಯ ಉದ್ದೇಶವಲ್ಲ. ಸಾರ್ವಜನಿಕರಿಗೆ ಗಿಡ–ಮರಗಳು ಜೀವವೈವಿಧ್ಯಗಳನ್ನು ಸಂರಕ್ಷಿಸುವುದರ ಜೊತೆಗೆ ಯುವಸಮೂಹದಲ್ಲಿ ಪರಿಸರದ ಕುರಿತು ಜಾಗೃತಿ ಮೂಡಿಸುವುದಾಗಿದೆಎಂ. ಜಗದೀಶ್ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ
ಕಬ್ಬನ್ ಉದ್ಯಾನದಲ್ಲಿ ಖಾಸಗಿಯವರು ಪ್ರವಾಸಿ ನಡಿಗೆಗಳನ್ನು ಆಯೋಜಿಸುತ್ತಿದ್ದರು. ಈಗ ತೋಟಗಾರಿಕೆ ಇಲಾಖೆಯಿಂದ ಅಧಿಕೃತವಾಗಿ ಪ್ರವಾಸಿ ನಡಿಗೆಗೆ ಚಾಲನೆ ನೀಡಲಾಗುತ್ತಿದೆ. ಸಂದರ್ಶಕರಿಗೆ ಖಚಿತ ಮಾಹಿತಿ ಒದಗಿಸಲು ಇದು ಸಹಾಯಕವಾಗಲಿದೆಜಿ. ಕುಸುಮಾ ತೋಟಗಾರಿಕೆ ಇಲಾಖೆ ನಿರ್ದೇಶಕಿ (ಕಬ್ಬನ್ ಉದ್ಯಾನ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.