ಕೆಂಗೇರಿ: ವೃದ್ಧರು, ಅಂಗವಿಕಲರು, ಅಶಕ್ತರಿಗೆ ಪಾದಚಾರಿ ಮೇಲ್ಸೇತುವೆ ಹತ್ತಿಳಿಯುವುದೇ ಸವಾಲು | ಒಂದೂವರೆ ವರ್ಷದಿಂದ ಅರ್ಧಕ್ಕೆ ನಿಂತಿರುವ ಲಿಫ್ಟ್ ಕಾಮಗಾರಿ
ಬೆಂಗಳೂರು: ಇಕ್ಕಟ್ಟಾದ ಪಾದಚಾರಿ ಮೇಲ್ಸೇತುವೆ (ಸ್ಕೈವಾಕ್). ಬಳಕೆಗೆ ಸಿಗದ ಲಿಫ್ಟ್, ರಸ್ತೆಯಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಬಸ್...
ಇದು ಕೆಂಗೇರಿ ಸ್ಯಾಟಲೈಟ್ ಬಸ್ ನಿಲ್ದಾಣದ ಎದುರಿನ ನಿತ್ಯದ ದುಃಸ್ಥಿತಿ.
ಮೈಸೂರು, ಮಂಡ್ಯ, ಮದ್ದೂರು ಕಡೆಗಳಿಂದ ಬರುವ ಬಸ್‌ಗಳು ಕೆಂಗೇರಿ ಬಸ್ ನಿಲ್ದಾಣ ಪ್ರವೇಶಿಸದೇ ರಸ್ತೆ ಬದಿಯಲ್ಲೇ ಪ್ರಯಾಣಿಕರನ್ನು ಇಳಿಸಿ ಮೆಜೆಸ್ಟಿಕ್ ಕಡೆಗೆ ಸಾಗುತ್ತವೆ. ಬಸ್ ನಿಲ್ದಾಣಕ್ಕೆ ಪ್ರವೇಶಿಸಲು ಒಂದು ಕಿಲೋ ಮೀಟರ್ ಮುಂದಕ್ಕೆ ಹೋಗಿ 'ಯು" ತಿರುವು ಪಡೆದು ಬರಬೇಕಿರುವುದರಿಂದ ಚಾಲಕರು ಬಸ್ಸನ್ನು ನಿಲ್ದಾಣಕ್ಕೆ ಒಯ್ಯದೇ ಮುಂದಕ್ಕೆ ಸಾಗುತ್ತಿದ್ದಾರೆ.
ಇಳಿದ ಪ್ರಯಾಣಿಕರು ಪಾದಚಾರಿ ಮೇಲ್ಸೇತುವೆ ಹತ್ತಿ ಬಸ್ ನಿಲ್ದಾಣ ಕಡೆಗೆ ಬರಬೇಕು. ಈ ಮೇಲ್ಸೇತುವೆ ಯಾವಾಗಲೂ ಗಿಜಿಗುಟ್ಟುತ್ತಿದ್ದು, ಬೆಳಿಗ್ಗೆ ಮತ್ತು ಸಂಜೆ ಜನದಟ್ಟಣೆ ಹೆಚ್ಚಿರುವ ಸಮಯದಲ್ಲಿ ಹತ್ತಿ-ಇಳಿಯುವುದೇ ಸಾಹಸವಾಗಿದೆ. ನೂಕುನುಗ್ಗಲು ಇಲ್ಲಿ ಸಾಮಾನ್ಯವಾಗಿದೆ.
ಮೇಲ್ಸೇತುವೆಯ ಎರಡೂ ಬದಿಗಳಲ್ಲಿ ಲಿಫ್ಟ್ ನಿರ್ಮಿಸಲು ಅವಕಾಶ ಮಾಡಿಕೊಡಲಾಗಿದೆ. ಆದರೆ, ಲಿಫ್ಟ್ ಕಾಮಗಾರಿ ಅರ್ಧಕ್ಕೆ ನಿಂತು ಒಂದೂವರೆ ವರ್ಷ ಕಳೆದಿದೆ. ಮೆಟ್ಟಿಲು ಹತ್ತಲಾಗದ ವೃದ್ಧರು, ನಿಶ್ಯಕ್ತರು ರಸ್ತೆ ವಿಭಜಕಕ್ಕೆ ಹಾಕಿರುವ ಬ್ಯಾರಿಕೇಡ್‌ಗಳನ್ನು ಲೆಕ್ಕಿಸದೇ ಮಧ್ಯೆ ಆಗಾಗ ನುಸುಳುತ್ತಿದ್ದಾರೆ. ಜನದಟ್ಟಣೆ ಹೆಚ್ಚಿರುವ ಸಮಯದಲ್ಲಿ ಯುವಜನರು ಕೂಡ ಮಧ್ಯೆ ಇಲ್ಲೇ ಅಪಾಯಕಾರಿ ರೀತಿಯಲ್ಲಿ ರಸ್ತೆ ದಾಟುತ್ತಿದ್ದಾರೆ.
‘ಗುತ್ತಿಗೆದಾರರಿಗೆ ಬಿಬಿಎಂಪಿಯಿಂದ ಹಣ ಪಾವತಿ ಆಗದೇ ಇರುವುದರಿಂದ ಲಿಫ್ಟ್ ಅಳವಡಿಕೆ ಕಾಮಗಾರಿ ಅರ್ಧಕ್ಕೆ ನಿಂತಿದೆ‘ ಎಂದು ಸ್ಥಳೀಯರಾದ ಮಂಜುನಾಥ್ ಮಾಹಿತಿ ನೀಡಿದರು.
ಇದೇ ರಸ್ತೆಯ ಮತ್ತೊಂದು ಭಾಗದಲ್ಲಿ ಅಂದರೆ ಬಸ್ ನಿಲ್ದಾಣದ ಪ್ರವೇಶದಲ್ಲಿ ಮೈಸೂರು, ಮಂಡ್ಯ, ಮದ್ದೂರು ಕಡೆಗೆ ಸಾಗುವ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ರಸ್ತೆಯಲ್ಲೇ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿರುತ್ತಾರೆ. ಬಸ್ ನಿಲ್ದಾಣದಿಂದ ಹೊರಬರುವ ಬಿಎಂಟಿಸಿ ಬಸ್‌ಗಳು ಅದೇ ಸಮಯಕ್ಕೆ ಬರುತ್ತಿರುತ್ತವೆ. ಮೊದಲೇ ವಾಹನ ದಟ್ಟಣೆ ಹೆಚ್ಚಿರುವ ಈ ರಸ್ತೆಯಲ್ಲಿ ಬಸ್‌ಗಳನ್ನು ಹೀಗೆ ನಿಲ್ಲಿಸುತ್ತಿರುವುದರಿಂದ ಸರಾಗ ಪ್ರಯಾಣಕ್ಕೆ ಅಡ್ಡಿಯಾಗಿ ಕಿಲೋಮೀಟರ್‌ವರೆಗೂ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿವೆ. ಈ ವಾಹನ ದಟ್ಟಣೆಯ ಮಧ್ಯೆ ಸಿಲುಕಿಕೊಂಡ ಆಂಬುಲೆನ್ಸ್ ಹೊರ ಬರಲು ಸುಮಾರು 10 ನಿಮಿಷದಷ್ಟು ಕಾದಿರುವುದು ಗುರುವಾರ ಕಂಡು ಬಂತು.
ಸ್ಕೈವಾಕ್‌ನಿಂದ ಇಳಿಯುವಲ್ಲಿ ಹೊಂಡಗಳು ಬಿದ್ದಿವೆ. ಅಲ್ಲೇ ಸಿಮೆಂಟ್, ಜಲ್ಲಿಗಳನ್ನು ರಾಶಿ ಹಾಕಿದ್ದು, ಮಳೆ ಬಂದರೆ ರಾಡಿ ಏಳುವಂತಿದೆ. ಅಲ್ಲದೇ ರಸ್ತೆಯಲ್ಲಿಯೂ ಬೃಹದಾಕಾರದ ಹೊಂಡಗಳು ಬಿದ್ದು, ದ್ವಿಚಕ್ರ ವಾಹನಗಳ ಸಂಚಾರಕ್ಕೆ ಸವಾಲಾಗಿವೆ ಎಂದು ಆಟೊ ಚಾಲಕ ಮಂಜುನಾಥ್ ಸಮಸ್ಯೆ ಬಿಚ್ಚಿಟ್ಟರು.
ಜನರು ಏನಂತಾರೆ?
ಲಿಫ್ಟ್ ಅಳವಡಿಸಲು ಜಾಗ ಬಿಟ್ಟಿದ್ದಾರೆ. ಆದರೆ ಲಿಫ್ಟ್ ಅಳವಡಿಸುತ್ತಿಲ್ಲ. ನಮ್ಮಂಥ ವಯಸ್ಸಾದವರು ಮೆಟ್ಟಿಲು ಹತ್ತಿಕೊಂಡು ಹೋಗುವುದು ಕಷ್ಟ. ಬಿಬಿಎಂಪಿಯವರು ಲಿಫ್ಟ್ ಅಳವಡಿಕೆ ಕಾಮಗಾರಿ ಪೂರ್ಣಗೊಳಿಸಿದರೆ ಹಿರಿಯ ನಾಗರಿಕರ ಮಂಡಿ ನೋವು ಹೆಚ್ಚಾಗುವುದನ್ನು ತಪ್ಪಿಸಬಹುದು.ರಾಜೇಂದ್ರ ಕೇಂದ್ರೀಯ ಅಬಕಾರಿ ನಿವೃತ್ತ ಅಧಿಕಾರಿ
ಲಿಫ್ಟ್ ಅಳವಡಿಕೆ ಕಾಮಗಾರಿ ಮತ್ತೆ ಶುರುವಾಗುತ್ತದೆ ಎಂದು ಹೇಳುತ್ತಾರೆ. ಬೇಗ ಆದರೆ ಜನರಿಗೆ ಉಪಯೋಗವಾಗುತ್ತದೆ. ಎಕ್ಸ್‌ಪ್ರೆಸ್ ಬಸ್‌ಗಳಲ್ಲದೇ ದೊಡ್ಡಾಲದಮರ ರಾಮೋಹಳ್ಳಿ ಕೆಂಗೇರಿ ಉಪನಗರ ಸಹಿತ ಹಳ್ಳಿ ಕಡೆಯಿಂದ ಬರುವ ಬಸ್‌ಗಳೆಲ್ಲ ನಿಲ್ದಾಣಕ್ಕೆ ಹೋಗದೇ ಇಲ್ಲೇ ಪ್ರಯಾಣಿಕರನ್ನು ಇಳಿಸಿ ಹೋಗುವುದರಿಂದ ಸ್ಕೈವಾಕ್‌ನಲ್ಲಿ ನೂಕುನುಗ್ಗಲು ಉಂಟಾಗುತ್ತದೆ. ನಿರ್ಮಾಣ ಮಾಡುವಾಗಲೇ ಸರಿಯಾಗಿ ಯೋಜನೆ ರೂಪಿಸಿ ಹತ್ತಿ ಇಳಿಯುವ ಮೆಟ್ಟಿಲುಗಳು ಹೆಚ್ಚು ಅಗಲವಾಗಿ ಇರುವಂತೆ ಮಾಡಿದ್ದರೆ ಇಷ್ಟು ಸಮಸ್ಯೆ ಆಗುತ್ತಿರಲಿಲ್ಲ.ರೂಪಾ ವ್ಯಾಪಾರಿ ಕೆಂಗೇರಿ
ಆಕಾಶದೆತ್ತರಕ್ಕೆ ಸೇತುವೆ ಕಟ್ಟಿಟ್ಟಿದ್ದಾರೆ. ಹಳ್ಳಿಯಿಂದ ಬರುವ ನಾವು ಚೀಲ ಹೊತ್ತುಕೊಂಡು ಹತ್ತುವುದೇ ಕಷ್ಟ. ಅಪರೂಪಕ್ಕೆ ಬರುವ ನಾವು ಅರ್ಧ ಮೆಟ್ಟಿಲು ಹತ್ತಿ ಕುಳಿತುಕೊಳ್ಳಬೇಕಿದೆ. ಲಿಫ್ಟ್ ಅಳವಡಿಸುತ್ತಾರಂತೆ. ಅದರ ಜೊತೆಗೆ ಎಸ್ಕಲೇಟರ್ ಕೂಡ ಅಳವಡಿಸಿದರೆ ಅನುಕೂಲವಾಗಬಹುದು.ಕವಿತಾ ಜಿಗಣಿ ಪ್ರಯಾಣಿಕರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.